Thursday, September 25, 2014

ಅಂಕಣ ೩೩: On Bench

ಇದೊಂದು ತರಹದ ಯಾತನೆ ಮಾತ್ರ ಸಾಫ್ಟ್ ಲೋಕದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಸಲ ಅನುಭವಿಸಿರುತ್ತೇವೆ. ಈ ಅಂಕಣದಲ್ಲಿನ ಪೋಸ್ಟರ್ ನಲ್ಲಿ ತೋರಿಸಿದ ಹಾಗೆ "ಆನ್ ಬೆಂಚ್" ಅಂದ್ರೆ ಸಾಫ್ಟ್ ಲೋಕದ ಸಾಫ್ಟ್ ಜನರು " ಬೆಂಚ್" ಮೇಲೆ ಕೂತಿರುವುದಿಲ್ಲ ಆದರೆ, ಮಾನಸಿಕವಾಗಿ ಒಂಥರಾ ಹಾಗೆ ಇರುತ್ತದೆ. "ಆನ್ ಬೆಂಚ್" ಅಂದ್ರೆ ಸಾಫ್ಟ್ ಲೋಕದಲ್ಲಿ ಸದ್ಯಕ್ಕೆ ಕೆಲಸ ಇಲ್ಲ, ಸ್ವಲ್ಪ ಹಾಗೆ ಕುತ್ಕೊಂಡಿರು ಕೆಲಸ ಬಂದಾಗ ಮತ್ತೆ ಕರಿತೀವಿ  ಅಂತ ಅರ್ಥ. ಇದು ಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲ, ಇದನ್ನ ಅನುಭವಿಸಿದವರಿಗೆ ಗೊತ್ತು " ಬೆಂಚ್ ಮೇಲೆ ಕೂಡೋದು ಎಷ್ಟು ಕಷ್ಟದ ಕೆಲಸ ಅಂತ". ಯಾಕಂದರೆ ಸ್ಕೂಲ್ ನಲ್ಲಿ ಬೆಂಚ್ ಮೇಲೆ ನಿಲ್ಲೋದು ಮತ್ತು ಸಾಫ್ಟ್ ಲೋಕದಲ್ಲಿ ಬೆಂಚ್ ಮೇಲೆ ಕೂಡೋದು ಎರಡು ಒಂದೇ. ಕನಿಷ್ಠ ಪಕ್ಷ ಸ್ಕೂಲ್ ನಲ್ಲಿ ಬೆಂಚ್ ಮೇಲೆ ನಿಲ್ಲೋದು ಒಂದು ಪಿರಿಯಡ್ ಗೆ ಮಾತ್ರ. ಆದ್ರೆ ಇಲ್ಲಿ? ಯಾವನಿಗ್ಗೊತ್ತು?



ಪ್ರಶ್ನೆ ಬೆಂಚ್ ಮೇಲೆ ಕೂಡೋದು ಅಲ್ಲ, ಪ್ರಶ್ನೆ ಅಲ್ಲಿ ಕೂತು ಏನು ಮಾಡಬೇಕು? . ಮನುಷ್ಯನಿಗೆ ಯಾವುದಾದರು ಒಂದು ಕೆಲಸ ವಿರಲೇಬೇಕು. ಇಲ್ಲಾಂದ್ರೆ ತಲೆ ಅನ್ನೋದು ನೂರಾರು ಡೈರೆಕ್ಷನ್ ಕಡೆ ಆಲೋಚನೆ ಮಾಡಲು ಶುರು ಮಾಡುತ್ತೆ.  ಆನ್ ಬೆಂಚ್ ಮೊದಲೆರಡು ದಿನ ಸರಿ ಅನಿಸಬಹುದು. ಆದರೆ ಬರು ಬರುತ್ತಾ ಬೋರು ಹೊಡೆಯೋಕೆ ಶುರು ಆಗಿ ಬಿಡುತ್ತೆ. ಏನು ಕೆಲಸವಿಲ್ಲದೇ ಸುಮ್ಮನೆ ಕಂಪ್ಯೂಟರ್ ಮುಂದೆ ಕೂಡಬೇಕು ಅಂದ್ರೆ ಹೇಗೆ ಆಗುತ್ತೆ ನೀವೇ ಹೇಳಿ?


“ಅಲ್ಲಿವರೆಗೆ ನಿಮಗೆ ತಿರುಗಿ ನೋಡದಷ್ಟು ಟೈಮ್ ಇಲ್ಲದ ಹಾಗೆ ರಾಶಿ  ಕೆಲಸ ಇರುತ್ತೆ ಅಂತ ತಿಳ್ಕೋಳ್ಳಿ. ಒಂದು ದಿನ ನೀವು  ಮಾಡ್ತಾ ಇರೋ ಪ್ರಾಜೆಕ್ಟ್ ಕೊನೆಯ ಹಂತಕ್ಕೆ ಬಂದು ತಲುಪುತ್ತೆ. ಅದಾದ ಮೇಲೆ ನಿಮಗೆ ಒಂದು ವಾರವೋ, ಹದಿನೈದು ದಿವಸವೋ ಒಂದೊಂದು ಸಲ ಒಂದು ತಿಂಗಳು ಪೂರ್ತಿ ಕೈಯಲ್ಲಿ ಕೆಲಸವೇ ಇರುವುದಿಲ್ಲ ಅಂತಾದರೆ  ಅಲ್ಲಿವರೆಗೂ ಬ್ಯುಸಿ ಆಗಿದ್ದ ಮೈಂಡ್ ತಕ್ಷಣಕ್ಕೆ ಬ್ಲಾಂಕ್ ಅದಾಗ ಹೇಗಾಗ ಬೇಡ? . ಒಂದೆರಡು ದಿನ ಸರಿ ಇರ್ತೀವಿ, ತದ  ನಂತರ ನಿಧಾನವಾಗಿ irritation ಶುರು ಆಗುತ್ತೆ. ಏನು ಮಾಡಬೇಕು ಅಂತ ಗೊತ್ತಾಗದೆ ಕಾಫಿ / ಟೀ ಯ ನೆಪ ಹೇಳಿ ದಿನಕ್ಕೆ ಒಂದೈದು ಸಲ ಪ್ಯಾಂಟ್ರಿ ದರ್ಶನ ಮಾಡುತ್ತೇವೆ. ಇಂಟರ್ನೆಟ್ ಆಯ್ತು, ಬ್ರೌಸಿಂಗ್ ಆಯ್ತು, ಚಾಟಿಂಗ್ ಆಯ್ತು , ನ್ಯೂಸ್ ಪೇಪರ್ ಓದಿದ್ದು ಆಯ್ತು, ಒಂದಿಷ್ಟು ಜನರ ಜೊತೆ ಫೋನ್ ನಲ್ಲಿ ಮಾತಾಡಿದ್ದು ಆಯ್ತು, ಇಂಟರ್ನೆಟ್ ನಲ್ಲಿ How to become best father, mother, husband ಅನ್ನುವ ಎಲ್ಲ series ಗಳನ್ನು  ಓದಿದ್ದೂ  ಆಯ್ತು, windows ನಲ್ಲಿ ರನ್ ಗೆ ಹೋಗಿ calc ಓಪನ್ ಮಾಡಿ ನಮ್ಮ ಸಂಬಳ  ಮತ್ತು ಎಲ್ಲ ಸಾಲ ಸೋಲಗಳ ಲೆಕ್ಕ ಹಾಕಿದ್ದು ಆಯ್ತು, ಪಿ ಎಫ್ ನಿಂದ ಹಿಡಿದು ಗ್ರಾಚುಟಿ ವರೆಗಿನ ಎಲ್ಲ ಲೆಕ್ಕಾಚಾರಗಳು ಮುಗಿಯೀತು".

ಮುಂದೆ ? ಎಷ್ಟು ದಿನ ಅಂತ ಹೀಗೆ ಮಾಡೋದು?

ಅವಾಗಲೇ ಅನಿಸುತ್ತೆ, " ಛೆ ಒಂದಿಷ್ಟು ಕೆಲಸ ವಿರಬಾರದಾ ಅಂತ". ಅದಕ್ಕೆ ಸಾಫ್ಟ್ ಲೋಕದಲ್ಲಿ ಇಂತಹ ಟೈಮ್ ಪಿರಿಯಡ್ ಗಳಲ್ಲಿ ಟ್ರೇನಿಂಗ ಗಳನ್ನ ಅಟೆಂಡ್ ಮಾಡು ಅಂತ ಕಳಿಸುತ್ತಾರೆ ಅಥವಾ ಮೊದಲಿಗೆ ಪ್ಲಾನ್ ಮಾಡಿ ಬಿಟ್ಟಿರುತ್ತಾರೆ.


ನನ್ನ ಸ್ನೇಹಿತನೊಬ್ಬ " ಸಾಫ್ಟ್ ಲೋಕದಲ್ಲಿದಲ್ಲಿ ಖಾಲಿ" ಎನ್ನುವ ಹೆಡ್ಡಿಂಗ್ ನಡಿ, ಕೆಲಸವಿಲ್ಲದಿರುವಾಗ ನಾವು ಏನೇನು ಮಾಡಬಹುದು ಅಂತ ಒಂದೈದು ಪಾಯಿಂಟ್ ಗಳನ್ನ ಲಿಸ್ಟ್ ಮಾಡಿದ್ದಾನೆ. ಮತ್ತು ಅದನ್ನ ನನಗೆ ಕಳಿಸಿ ಕೊಟ್ಟಿದ್ದಾನೆ. ನಾನು ಯಥಾವತ್ತಾಗಿ ನಿಮಗೆ ಅದನ್ನ ತಲುಪಿಸುತ್ತಿದ್ದೇನೆ. ಓದಿ, ಎಂಜಾಯ್ ಮಾಡಿ.
01. If you dont have much work, walk fast and look worried.
02. Save your project application as wall paper.
03. Create one detective agency in office and find out who is leaving the organization.
04. Visit all the floors of the company.
05. Prepare coffee in pantry and give it to all your friends.
06. Read all philosophical books.
07. Spread some rumor.

ವಾರದ ಬಿಲ್ಡ್ ಲೇಬಲ್ : ಈ ಮೇಲಿನ ಪಾಯಿಂಟ್ ಗಳನ್ನ ಕೆಲಸವಿಲ್ಲದಿರುವಾಗ ನೀವು ಮಾಡುತ್ತೀರೋ ಬಿಡುತ್ತೀರೋ ಅನ್ನೋದು ಮಾತ್ರ ನಿಮ್ಮ ವಿವೇಚನೆಗೆ ಬಿಟ್ಟದ್ದು!

Thursday, September 18, 2014

ಅಂಕಣ ೩೨ : Soft Frustrations

ಸಾಫ್ಟ್ ಲೋಕದಲ್ಲಿನ ಒಂದಿಷ್ಟು ಇರಿಟೆಶನ್ ಗಳನ್ನ ನೋಡೋಣ. ಆಫ್ ಕೋರ್ಸ್, ಪ್ರತಿಯೊಬ್ಬರೂ ಈ ಕೆಳಗೆ ಹೇಳಿದುದರಲ್ಲಿ  ಒಂದಲ್ಲ ಒಂದನ್ನ  ಫೆಸ್ ಮಾಡಿಯೇ ಇರುತ್ತೇವೆ.



೦೧. ಮೊದಲ ಸಲದ ಬೋನಸ್ ಅಮೌಂಟ್ ಕೇಳಿದಾಗ ಆಗುವ ಖುಷಿ ಮತ್ತು ಆ ಬೋನಸ್ ಟ್ಯಾಕ್ಸ್ ಕಟ್ ಆಗಿ ನಮ್ಮ ಕೈಗೆ ಸೇರಿದಾಗ ಆಗುವ ಹಾರ್ಟ್ ಅಟ್ಯಾಕ್.

೦೨. ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ನಿಮ್ಮ ಪ್ರೀತಿಯ ಮ್ಯಾನೇಜರ್ ನಿಂದ ನಿಮಗೊಂದು ಮನವಿ;
“ ಸ್ವಲ್ಪ ಆ ಕೆಲಸಾನೂ ಮುಗಿಸಿ ಬಿಡ್ತೀರಾ? “

೦೩.ನೀವು ಅಷ್ಟು ದಿನ  ಕಂಪನಿಯ ಔಟಿಂಗ್ ಸಲುವಾಗಿ ಕಾಯುತ್ತ ಇರುತ್ತೀರಿ. ಆದರೆ ನಿಮ್ಮ ದುರ್ದೈವಕ್ಕೆ ಕಂಪನಿಯ ಔಟಿಂಗ್ ಹಿಂದಿನ ದಿನ  ನಿಮ್ಮ ಆರೋಗ್ಯ ಕೈ ಕೊಟ್ಟಾಗ!

೦೪. ನೀವು "ಅಷ್ಟೂ  ದೇವರ"  ಕೈ ಮುಗಿದರೂ ನಿಮ್ಮ ವೀಸಾ ರಿಜೆಕ್ಟ್  ಆದಾಗ.

೦೫. ವೀಕೆಂಡ್ ನಲ್ಲಿ ಆರಾಮಾಗಿ ಮನೇಲಿ ಇದ್ದಾಗ ನಿಮ್ಮ ಮೊಬೈಲಿಗೆ ಒಂದು ಫೋನ್ ಬರುತ್ತೆ :  "ನಿಮ್ಮ ಪ್ರೀತಿಯ ಮ್ಯಾನೇಜರ್" ನಿಂದ ಪುನಃ ನಿಮಗೊಂದು ಮನವಿ;
“ ನಿಮ್ಮ ಮನೆ ಹತ್ತಿರಾನೆ ಇದೆ, ಸ್ವಲ್ಪ ಆಫಿಸ್ ಗೆ ಬಂದು ಆ ಕೆಲಸ ಮುಗಿಸೋಕೆ ಆಗುತ್ತಾ? “

೦೬. ಇವತ್ತು ಎಷ್ಟೊತ್ತಾದರೂ ಆಗಲಿ ಕೆಲಸ complete ಮಾಡಿಯೇ ಬಿಡೋಣ ಅಂತ ಶಪಥ ಮಾಡಿ office ಬಂದಾಗ, ಆ ದಿನವೇ ನಿಮ್ಮ ಮಷೀನ್ ಕ್ರಾಶ್ ಆದಾಗ... 

೦೭. ಮುಂದೆ ಏನು ಮಾಡ ಬೇಕು ಅಂತ ಗೊತ್ತಾಗದೆ ಫ್ರೆಶರ್ ನೊಬ್ಬ  ತನ್ನ Team Lead  ನ instruction ಗಾಗಿ  ಕಾಯುತ್ತಾ  ಕೂಡಬೇಕಾಗಿ ಬಂದಾಗ .... 

೦೮. ಮದುವೆ ಆದ ಮೇಲೆ ಹೆಂಡತಿಗೆ ನಿಮ್ಮ ನಿಜವಾದ ಸ್ಯಾಲರಿ ಗೊತ್ತಾದಾಗ!

೦೯. Planned SICK ಲೀವ್ ನಲ್ಲಿ ನಿಜವಾಗಲೂ ಜ್ವರ ಬಂದಾಗ!

೧೦. ಮೂವತ್ತು ನಿಮಿಷದ STAND UP ಮೀಟಿಂಗ ಗಳು , ಎರಡು ಗಂಟೆಯಾದರೂ ಮುಗಿಯದೆ ಇದ್ದಾಗ!

೧೧. Weekend ಮುಗಿಸಿಕೊಂಡು ಸೋಮವಾರ ಬೆಳಿಗ್ಗೆ ನೀವು 'ನಿಮ್ಮ ಊರಿನಿಂದ' ಬೆಂಗಳೂರಿಗೆ ಬಂದಾಗ ಮತ್ತು ಅವತ್ತೇ ಬೆಂಗಳೂರಿನಲ್ಲಿ ಒಂದು ಸ್ಟ್ರೈಕ್ ನಿಂದಾಗಿ   “ ಆಫಿಸ್ ಗೆ ರಜ” ಅಂತ ಗೊತ್ತಾದಾಗ.

೧೨. ನಿಮ್ಮ ಮದುವೆ ಸಂಧರ್ಭದಲ್ಲೇ ಆಫಿಸ್ ನಲ್ಲಿ  ಪ್ರಾಜೆಕ್ಟ್  ರಿಲೀಸ್ ಡೇಟ್ ಹತ್ತಿರ ಬಂದಾಗ!

೧೩.  ಐದು ನಿಮಿಷ ಲೇಟಾಗಿ ನಿಮಗೆ ನಿಮ್ಮ ಆಫಿಸ್ ಬಸ್ ತಪ್ಪಿದಾಗ!


ವಾರದ ಬಿಲ್ಡ್ ಲೇಬಲ್ : ಇದ್ಯಾವುದು ಇನ್ನೂ  ನಿಮ್ಮ ಅನುಭವಕ್ಕೆ ಬಾರದೆ ಇದ್ದರೆ ನೀವೇ ಧನ್ಯರು!

Tuesday, September 2, 2014

ಅಂಕಣ ೩೧: ಸಾಫ್ಟ್ ಲೋಕದಲ್ಲಿ ಫಿಲಂ ಕ್ರೇಜ್

ಸಾಫ್ಟ್ ಲೋಕ ಆದರೇನು, ಯಾವ ಲೋಕ ಆದರೇನು ? ಭಾರತದಲ್ಲಿ ಫಿಲಂ ಕ್ರೇಜ್ ಇಲ್ಲದೆ ಇರುತ್ತಾ? ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದವರಿಗೆ! ಇದಕ್ಕೆ ಸಾಫ್ಟ್ ಲೋಕ ಕೂಡ ಹೊರತಲ್ಲ. ಆದರೆ ನಾವು ವಿಭಿನ್ನ ಅಂತ ಮಾತ್ರ ಹೇಳಬಹುದು.ಬೇರೆ ಲೋಕದಲ್ಲಿ ಇರುವಂತೆ ನಮ್ಮ ಲೋಕದಲ್ಲಿಯೂ ಸಹ ನಟ ನಟಿಯರಿಗೆ ಅಭಿಮಾನಿಗಳು ಇದ್ದೆ ಇರುತ್ತಾರೆ.  ಅನಾಲಿಸಿಸ್ ಅನ್ನೋದು ನಮ್ಮ ವೃತ್ತಿಪರತೆಯ ಒಂದು ಭಾಗವಾಗಿದ್ದರಿಂದ, ಯಾವುದೇ ಸಾಫ್ಟ್ ಲೋಕದ ಮನುಷ್ಯ ತಾನು ಮೆಚ್ಚು ನಟ ಅಥವಾ ನಟಿಯ ಸಿನಿಮಾ ರಂಗ ಹೊರತು ಪಡಿಸಿ ಅವರ ಬೇರೆ ವಿಷಯಗಳನ್ನು ಸಹ ಅಳೆದು ತೂಗಿರುತ್ತಾನೆ. ತನ್ನ ನೆಚ್ಚಿನ ನಟ ಅಥವಾ ನಟಿಯ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಿರುತ್ತಾನೆ. ತನ್ನ ನೆಚ್ಚಿನ ನಟ ಅಥವಾ ನಟಿ ಸಿನಿಮಾ ರಂಗ ಹೊರತು ಪಡಿಸಿ ಬೇರೆ ಯಾವ ವಿಷಯಗಳಲ್ಲಿ ಭಾಗಿಯಾಗಿದ್ದಾರೆ, ಸಮಾಜ ಮುಖ ಕಾರ್ಯಗಳಿಗೆ ಅವರ ಕೊಡುಗೆ ಏನು, ಅವರ ಸಿದ್ದಾಂತ ಅಥವಾ ತತ್ವ ಏನು ಅನ್ನೋದರ ಕೂಡಾನೂ ಸ್ವಲ್ಪ ಗಮನ ಹರಿಸಿರುತ್ತಾನೆ.


ಇನ್ನು ದಕ್ಷಿಣ ಭಾರತದ ವಿಷಯಕ್ಕೆ ಬಂದರೆ, ನಮ್ಮ ಜನ ಸ್ವಲ್ಪ ಭಾವನಾತ್ಮಕ ಜೀವೆಗಳು ಅನ್ನೋದು ಎಲ್ಲರಿಗೂ ಗೊತ್ತು . ವಿಶೇಷವಾಗಿ ಆಂಧ್ರ ಪ್ರದೇಶ ಹಾಗು ತಮಿಳುನಾಡು ಜನರಿಗೆ ನಟ ನಟಿಯರು ಅಂದರೆ  ಜೀವಾಳ ಹಾಗು ಅವರ ಮೇಲೆ ತುಂಬಾ ಅಭಿಮಾನ ಇಟ್ಟುಕೊಂಡಿರುತ್ತಾರೆ. ಕನ್ನಡಿಗರೂ ಸಹ ವೀಪರಿತ ಅಲ್ಲದಿದ್ದರೂ ಅಭಿಮಾನದ ವಿಷಯ ದಲ್ಲಿ ಹಿಂದೆ ಬಿದ್ದರವರಲ್ಲ  ಕೆಲವೊಂದು ಸಲ ನಟ ನಟಿಯರ ಪರ ವಿರೋಧ ಚರ್ಚೆಗಳು ಸ್ವಲ್ಪ ತಾರಕಕ್ಕೂ ಹೋಗುವುದುಂಟು.  ಕನ್ನಡದವರ ಮಟ್ಟಿಗೆ ಹೇಳುವುದಾದರೆ ನಮ್ಮ ಹೊಸ ತಲೆಮಾರಿನ ಎಲ್ಲ ಬಹುಪಾಲು ಸಾಫ್ಟ್ ಲೋಕದವರಿಗೆ “ಶಂಕ್ರಣ್ಣ” ಅಂದ್ರೆ ಎಲ್ಲಿಲ್ಲದ ಅಭಿಮಾನ .
ಬಹುಶ ಸಾಫ್ಟ್ ಲೋಕದ ಹೊಸ ತಲೆಮಾರಿನವರಿಗೆ ಹೊಸತನಗಳು ತುಂಬಾ ಇಷ್ಟ. ಶಂಕ್ರಣ್ಣ ಕೂಡ ೮೦ – ೯೦ ರ ದಶಕದಲ್ಲೇ ಎಲ್ಲ ರೀತಿಯ ಹೊಸತನಗಳಿಗೆ ಕೈ ಹಾಕಿ ಸೈ  ಎನಿಸಿಕೊಂಡವರು. ಅದಕ್ಕೆ ಸಾಫ್ಟ್ ಲೋಕದ ಕನ್ನಡಿಗರಿಗೆ ಇಷ್ಟ ಆಗೋದು.
ಅಲ್ಲಿಗೆ ನಮ್ಮ ಶಂಕ್ರಣ್ಣ  “ ಆಟೋ ರಾಜ ನಿಂದ ಸಾಫ್ಟ್ ಲೋಕದ ರಾಜ ನಾಗಿಯೂ” ಪಟ್ಟವೇರಿದ್ದಾರೆ ಅಂದರೆ  ಅತೀಶಯೋಕ್ತಿವೇನಲ್ಲ .
ಶಂಕರನಾಗ್ ಅವರ ಕುರಿತಾಗಿ ಬೇರೆ ರಾಜ್ಯದವರು ಸಹ; “ Hey, he is the director of “MALGUDI DAYS” right? i love those ಸೀರಿಯಲ್ series. Often i see his photo in almost all auto in bangalore ಅಂತ ಹೇಳಿದಾಗ ನಮ್ಮವರು ಮನಸ್ಸಿನಲ್ಲೇ ಹಿರಿ ಹಿರಿ ಹಿಗ್ಗಿರುತ್ತಾರೆ.
ಇದಕ್ಕೆಲ್ಲ ಹೊರತಾಗಿ ಸಾಫ್ಟ್ ಲೋಕದಲ್ಲಿ ಇನ್ನೊಂದು ಗುಂಪು ಇದೆ. ಅವರು ಭಾರತೀಯ ಚಿತ್ರಗಳನ್ನ ನೋಡುವುದೇ ಕಡಿಮೆ. ಅವರದೇನಿದ್ದರೂ ಹಾಲಿವುಡ್ ಚಿತ್ರಗಳು. ಭಾಷೆ ಬದಲಾದರೆನಂತೆ? ಅವರೂ ಸಹ ನಮ್ಮ ಹಾಗೆಯೇ ತಮ್ಮ ತಮ್ಮ ನೆಚ್ಚಿನ ನಟ ನಟಿಯರ ಬಗೆಗಿನ ಮಾಹಿತಿಯನ್ನ ಕಲೆ ಹಾಕಿಕೊಂಡಿರುತ್ತಾರೆ . ಅವರ ಕುರಿತಾಗಿ ಅನೇಕ ವಿಷಯಗಳನ್ನು ತಿಳಿದುಕೊಂಡಿರುತ್ತಾರೆ.
ಈ ಮೇಲಿನ ಮೂರು ಗುಂಪನ್ನು ಹೊರತು ಪಡಿಸಿ ಸಾಫ್ಟ್ ಲೋಕದಲ್ಲಿ ಇನ್ನೊಂದು ಗುಂಪು ಇದೆ. ಅವರು ನಟ ನಟಿಯರನ್ನು ಹೆಚ್ಚು ಇಷ್ಟ ಪಡುವುದಕ್ಕಿಂತ, ಅವರು ಸಿನಿಮಾ ರಂಗದ “ನಿರ್ದೇಶಕರ’ ಮೇಲೆ ಎಲ್ಲಿಲ್ಲದ ಒಲವು. ಹೀಗಾಗಿ ಅವರು ಯಾವುದೇ ಚಿತ್ರಕ್ಕೆ ಹೋಗಬೇಕಾದರೂ ನಿರ್ದೇಶಕ ಯಾರು? ಅನ್ನೋದು ಅವರ ಮೊದಲ ಪ್ರಶ್ನೆ ಸಹ.
ಸಾಫ್ಟ್ ಲೋಕದಲ್ಲಿ ಬರೀ ಮೂವಿ ಗಳನ್ನೂ ನೋಡುವವರು ಅಷ್ಟೇ ಅಲ್ಲ, ತಮ್ಮ ಬಿಡುವಿನ ವೇಳೆಯಲ್ಲಿ ಕ್ಯಾಮೆರಾ ವನ್ನು ಹೆಗಲಿಗೆ ಸಿಗಿಸಿಕೊಂಡು short movie ಗಳನ್ನ ಮಾಡಲು ಹೊರಟು  ಬಿಡುತ್ತಾರೆ. ಸಿನಿಮಾ ಹೊರತಾಗಿ ನಾಟಕಗಳನ್ನು ನೋಡುವ ಮತ್ತು ಪ್ರೀತಿಸುವ ಜನರು ಸಹ ಸಾಫ್ಟ್ ಲೋಕದಲ್ಲಿದ್ದಾರೆ.  ವೀಕೆಂಡ್ ನ ಯಾವುದಾದರೂ ಒಂದು ದಿನ ನೀವು “ರಂಗ ಶಂಕರ” ಕ್ಕೆ ಹೋಗಿ ನೋಡಿ, ಅಲ್ಲಿರುವ ಪ್ರೇಕ್ಷಕರ ಪೈಕಿ ಕನಿಷ್ಠ ಅರ್ಧದಷ್ಟು ಜನ ಸಾಫ್ಟ್ ಲೋಕದಿಂದ ಬಂದವರಿರುತ್ತಾರೆ.


ಈ ವಾರದ ಬಿಲ್ಡ್ ಲೇಬಲ್ : ಸಾಫ್ಟ್ ಲೋಕದ ಜನರ ಮನೆಯಲ್ಲಿ ಇರುವ ‘hard disk ‘ ನಲ್ಲಿ ೯೦% occupy ಆಗಿರುವುದು ಒಂದು ಮೂವಿಸ್ ಇನ್ನೊಂದು ಸಾಫ್ಟ್ ವೇರ್ಸ್.

Tuesday, August 26, 2014

ಅಂಕಣ ೩೦ : ONSITE ನಿಂದ ಬಂದ ಮೇಲೆ

ಸಾಫ್ಟ್ ಲೋಕದಲ್ಲಿನ ಆನ್ ಸೈಟ್ ಬಗ್ಗೆ ಮತ್ತು ಆನ್ ಸೈಟ್ ಗೆ ಹೋದ ಮೇಲೆ ಹೇಗಿರುತ್ತೆ ಅಂತ ಕಳೆದ ಎರಡು ವಾರದ ಅಂಕಣದಲ್ಲಿ ನೋಡಿದ್ದಾಗಿದೆ. ಈಗ ಅಲ್ಲಿಂದ ವಾಪಾಸು ಬಂಡ ಮೇಲೆ ಹೇಗಿರುತ್ತೆ ಅನ್ನೋದನ್ನ ಸ್ವಲ್ಪ ನೋಡೋಣ…
ಒಂದು ವಾರವೋ, ಒಂದು ತಿಂಗಳೋ ಆನ್ ಸೈಟ್ ಗೆ ಹೋಗಿ ಬಂದಿದ್ದರೆ ವೀಪರಿತ ಬದಲಾವಣೆ ಗಳು ಏನೂ ಆಗಲ್ಲ ಬಿಡಿ. ಅದೇ ರೀತಿ ಸಾಫ್ಟ್ ಲೋಕದಲ್ಲಿ ಉನ್ನತ ಹುದ್ದೆಯಲ್ಲಿ ರುವವರು ಸಹ ವರ್ಷಕ್ಕೆ ಒಂದೆರಡು ಸಲ ವಾದರೂ ಆನ್ ಸೈಟ್ ಗೆ ಹೋಗಿ ಬರುವುದು ಸಾಮಾನ್ಯ ವಿರುತ್ತೆ. ಇಲ್ಲೂ ಸಹ ಅಂತಹ ಭಾರಿ ಬದಲಾವಣೆಗಳು ಏನೂ ಇರುವುದಿಲ್ಲ . ಆದರೆ ವರ್ಷಗಟ್ಟಲೆ ಆನ್ ಸೈಟ್ ಗೆ ಹೋಗಿ ಅವಧಿ ಮುಗಿಸಿ ವಾಪಿಸು ಬರಬೇಕಾದರೆ ಮಾತ್ರ ಒಂದಿಷ್ಟು ತೊಳಲಾಟ ಗಳು ಇದ್ದೆ ಇರುತ್ತವೆ.


ಮೊದಲೇ ಹೇಳಿದಂತೆ ಒಬ್ಬರೇ ಆನ್ ಸೈಟ್ ಗೆ ಹೋದರೆ ಸ್ವಲ್ಪ ಒಂಟಿ ತನವಂತು ಕಾಡುವುದು ನಿಜ. ಅಲ್ಲಿಂದ ಬಂದ ಮೇಲೆ ತಿರುಗಾ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಸಹ ಸ್ವಲ್ಪ ಸಮಯ ತೆಗೆದು ಕೊಳ್ಳುತ್ತದೆ.  ಬ್ಯಾಚುಲರ್ ಗಳು ಆನ್ ಸೈಟ್ ಗೆ ಹೋಗಿ ಬಂದ ಮೇಲೆ ಕಾಡುವ ಮೊದಲ ಪ್ರಶ್ನೆ : “ ಅಲ್ಲಿ ಕೂಡಿಟ್ಟ ದುಡ್ಡನ್ನೆಲ್ಲ ಎಲ್ಲಿ ಇನ್ವೆಸ್ಟ್ ಮಾಡೋದು? ಬೆಂಗಳೂರಿನಲ್ಲಿ ಒಂದು ಮನೆ ತಗೊಳ್ಲಾ? ಅಥವಾ ಸ್ವಂತ ಊರಿನಲ್ಲಿ ಒಂದಿಷ್ಟು ಹೊಲ ತಗೊಳ್ಲಾ? ಹೀಗೆ ಒಂದಿಷ್ಟು ತೋಳಲಾಟ ಇದ್ದೆ ಇರುತ್ತವೆ .
ಇನ್ನು ಸಂಸಾರಸ್ಥರು ಆನ್ ಸೈಟ್  ಮುಗಿಸಿಕೊಂಡು ವಾಪಿಸು ಬರುವುದು ಅಂದರೆ ಸ್ವಲ್ಪ ಕಷ್ಟದ ಕೆಲಸವೇ ಸರಿ. ಅಲ್ಲಿಂದ ಬಂದ ತಕ್ಷಣ ಅಥವಾ ಬರುವುದಕ್ಕಿಂತಲೂ ಮುಂಚೆ ಕಾಡುವ ಮೊದಲ ಪ್ರಶ್ನೆ ; ಬೆಂಗಳೂರಿನಲ್ಲಿ ಯಾವ ಏರಿಯಾಗೆ ಶಿಫ್ಟ್ ಆಗಬೇಕು, ಮಕ್ಕಳ ಸ್ಕೂಲ್ ಎಲ್ಲಿ, ಇಲ್ಲಿಗೆ ಬಂದ ಮೇಲೆ ಇಬ್ಬರೂ ಕೆಲಸಕ್ಕೆ ಹೋಗಬೇಕಾ ? ಅಥವಾ ಒಬ್ಬರು ಮನೇಲಿ ಇದ್ದು ಒಬ್ಬರಷ್ಟೇ ಹೋದರೆ ಸಾಕಾ ?. ಹೀಗೆ ಹಲವಾರು ಪ್ರಶ್ನೆಗಳು ಇದ್ದೆ ಇರುತ್ತವೆ.
ಇಲ್ಲೊಂದು ತಮಾಷೆ ವಿಷಯ ಅಂದರೆ ವಿದೇಶದಿಂದ ವಾಪಾಸು ಬರುವಾಗ ಮಾಡುವ ಲಗೇಜು ಪ್ಯಾಕಿಂಗ್ ಮಾತ್ರ ಭಾರಿ ತಲೆನೋವಿನ ಕೆಲಸ. ಲಗೇಜು ಇಷ್ಟೇ ಕೆ.ಜಿ ಇರಬೇಕು, ಅದಕ್ಕಿಂತ ಹೆಚ್ಚು ಇರಬಾರದು. ಅಲ್ಲಿ ಚೆನ್ನಾಗಿ ಕಂಡದ್ದನ್ನೆಲ್ಲ ತುರುಕಿಕೊಂಡು ನಮ್ಮ ಊರಿಗೆ ಒಯ್ಯುವಂತಿಲ್ಲ. ಆನ್ ಸೈಟ್ ನಲ್ಲಿ ಇರಬೇಕಾದಾಗ ತಗೊಂಡಿರುವ ಸಾಮಾನುಗಳ ಪೈಕಿ ಅತೀ ಮುಖ್ಯವಾದುವುಗಳಷ್ಟೇ ನಮ್ಮ ಲಗೇಜಿಗೆ ಸೇರಿಕೊಳ್ಳುಬೇಕು. ಆದರೆ ಯಾವ್ಯಾವದನ್ನು ತರಬೇಕು ಯಾವುದನ್ನು ಬಿಡಬೇಕು ಅನ್ನೋದು ಕೂಡ ಒಂದು ತಲೆನೋವು.
ಇದೆಲ್ಲದಕ್ಕಿಂತ ಅಲ್ಲಿಂದ ಬರುವಾಗ: ” ಹೇಯ್ ನನಗೆ ಅಲ್ಲಿಂದ ಇದನ್ನ ತಗೊಂಡು ಬಾ, ಅದನ್ನ ತಗೊಂಡು ಬಾ” ಅಂತ ನಮ್ಮ ಸ್ನೇಹಿತರ ಒಂದು ದೊಡ್ಡ ಲಿಸ್ಟ್ ರೆಡಿ ಇರುತ್ತೆ. ಇದರ ಜೊತೆಗೆ ನಮ್ಮ ಮನೆಯವರಿಗೆ ಒಂದಿಷ್ಟು ಚಾಕೊಲೇಟು ತರೋದು ಬೇಡವಾ ?
ಆನ್ ಸೈಟ್ ಮುಗಿಸಿಕೊಂಡು ಬಂದ ಮೇಲೆ ಸ್ವಲ್ಪ ದಿನ ಅಲ್ಲಿನ ದೇಶದ ಬಗ್ಗೆ ಭಾಷಣ ಬಿಗಿಯುವ ಚಟ ಎಲ್ಲರಿಗೂ ಇದ್ದೆ ಇರುತ್ತದೆ . ಭಾಷಣ ಬಿಗಿಯದೆ ಇದ್ದರೂ ನಮ್ಮ ಮನಸು ಮಾತ್ರ ಸ್ವಲ್ಪ ದಿನಗಳ ಕಾಲ ಅಲ್ಲಿನ ಮತ್ತು ಇಲ್ಲಿನ ವಾತಾವರಣಗಳನ್ನ ಬಗ್ಗೆ ಕಂಪೇರ್ ಮಾಡುತ್ತಲೇ ಇರುತ್ತದೆ.
ಈ ವಾರದ ಬಿಲ್ಡ್ ಲೇಬಲ್ : ನೀವು ಇನ್ನು ಆನ್ ಸೈಟ್ ಗೆ ಹೋಗಿಲ್ಲ ಅಂದ್ರೆ , ಆನ್ ಸೈಟ್ ಹೋಗಿ ಬಂದಿರುವ ನಿಮ್ಮ ಸ್ನೇಹಿತರ ಹತ್ತಿರ ಹೋಗಿ, “ ಹೇಗಿತ್ತು ಅಲ್ಲೆಲ್ಲ!” ಅಂತ ಕೇಳಿ ನೋಡಿ.

ಮುಂದಿನ ಅರ್ಧ ಗಂಟೆ ವರೆಗೂ ನೀವು ಕೇಳುತ್ತಲೇ ಇರುತ್ತೀರಿ.

Wednesday, August 20, 2014

ಅಂಕಣ ೨೯ : ONSITE ಗೆ ಹೋದ ಮೇಲೆ!

ಕಳೆದ ಅಂಕಣದಲ್ಲಿ ಆನ್ ಸೈಟ್ ಬಗ್ಗೆ ನೋಡಿದೆವು ಅಂಕಣದಲ್ಲಿ ಅದರ ಮುಂದಿನ ಭಾಗವನ್ನ ಒಂಚೂರು ನೋಡೋಣ.
ಆ ದಿನ ಬಂದೆ ಬಿಟ್ಟಿರುತ್ತದೆ. ತನ್ನ ದೇಶದಿಂದ ಬೇರೊಂದು ದೇಶಕ್ಕೆ ಹೋಗುವ ದಿನ. ಅದೊಂತರ ಪುಳಕ ಮೈಯಲ್ಲಿ.
ಆ ದೇಶಕ್ಕೆ ಮುಟ್ಟಿ ಏರ್ಪೋರ್ಟ್ ನಿಂದ ಹೊರಗಡೆ ಬಂದು ಆ ದೇಶದ ನೆಲಕ್ಕೆ ಕಾಲಿಡುತ್ತಿದ್ದಂತೆಯೇ ಪ್ರತಿಯೊಬ್ಬ ಸಾಫ್ಟಿ ಮಾಡುವ ಮೊದಲ ಕೆಲಸವೆಂದರೆ , “ ತನ್ನ ಮೊಬೈಲ್ ನಲ್ಲಿರುವ ಕ್ಯಾಮೆರಾ ವನ್ನು ತನ್ನ ಮುಖದ ಕಡೆಗೆ ತಿರುಗಿಸಿ ಒಂದು ಫೋಟೋ ಕ್ಲಿಕ್ಕಿಸಿ ಫೇಸ್ –ಬುಕ್ ಗೆ ಅಪ್ ಲೋಡ್ ಮಾಡುವುದು . ತದ ನಂತರ ಆ ದೇಶದಲ್ಲಿ ಅವನ ಪ್ರಯಾಣ ಮುಂದು ವರಿಯುತ್ತದೆ .


ಆನ್ –ಸೈಟ್ ಗೆ ಹೋದ ಮೇಲೆ ನಮಗೆ ಎರಡು ವಿಷಯ ಗಳು ತುಂಬಾ ಪ್ರಮುಖ ವಾಗುತ್ತವೆ : ಒಂದು ಅಲ್ಲಿನ ವಾತಾವರಣಕ್ಕೆ, ಆಹಾರ ಪದ್ದತಿಗೆ ನಮ್ಮನ್ನ ನಾವು ಒಗ್ಗಿಸಿಕೊಳ್ಳಬೇಕು. ಎರಡು, ನಾವು ಕೆಲಸ ಮಾಡುವ ಸಂಸ್ಥೆ ಒಂದೇ ಆಗಿದ್ದರೂ ನಮ್ಮ ದೇಶದಲ್ಲಿನ working environment ಮತ್ತು ನಾವು ಹೋಗಿರುವ ದೇಶದಲ್ಲಿನ working environment ಬೇರೆ ಬೇರೆ ಆಗಿರುತ್ತವೆ. ಯಾಕಂದರೆ ಸಂಸ್ಥೆ ಒಂದೇ ಆಗಿದ್ದರೂ ದೇಶಗಳ ಸಂಸ್ಕೃತಿ  ಗಳು ಬೇರೆ ಬೇರೆ ಆಗಿರುವುದರಿಂದ ವಾತಾವರಣ ಬೇರೆ ಬೇರೆ ಆಗಿರುತ್ತದೆ . ಅಲ್ಲಿನ ಕೆಲಸದ ವಾತಾವರಣಕ್ಕೆ ತಕ್ಕಂತೆ ನಾವು ಅಡ್ಜಸ್ಟ್ ಆಗಬೇಕು.
ಇನ್ನು ಆನ್-ಸೈಟ್ ಹೋದವರಲ್ಲಿ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಇರುತ್ತವೆ :
೧. ಒಬ್ಬರೇ ಹೋದರೆ ತುಂಬಾ ಬೇಜಾರು ರಿ. ಅದರಲ್ಲೂ ವರ್ಷಗಟ್ಟಲೆ ಒಬ್ಬರೇ ಹೋಗಿಬಿಟ್ಟರೆ, ಒಂದಿಷ್ಟು ತಿಂಗಳ ನಂತರ  ಸಾಕು ಅನಿಸಿಬಿಡುತ್ತೆ . ಜೊತೆಗೆ ಯಾರಾದ್ರು ಒಬ್ರು ಇರ್ಬೇಕು. ನಮ್ಮ ದೇಶದವರೇ ಆದರೆ ಇನ್ನು ಒಳ್ಳೇದು. ನಮ್ಮ ರಾಜ್ಯದವರು ಆದರಂತೂ ಕೇಳೋದೇ ಬೇಡ . ಇಲ್ಲಾಂದ್ರೆ ಸ್ವಲ್ಪ ಕಷ್ಟ !
೨. ಹಾಗೇನೂ ಇಲ್ಲಾ ರಿ . ಒಬ್ಬರೇ ಇದ್ರೂನೂ ಎಂಜಾಯ್ ಮಾಡಬಹುದು .
೩. ಆನ್-ಸೈಟ್ ಒಳ್ಳೇದು . ಆದರೆ ಕೆಲವೊಂದು ದೇಶಗಳಲ್ಲಿ ನಮಗೆ “ ಊಟದ ವಿಷಯದಲ್ಲಿ “ ತುಂಬಾ ಪ್ರಾಬ್ಲೆಮ್ ಆಗುತ್ತೆ . ನಾನ್ ವೆಜ್ ನವರಿಗೆ ಅಷ್ಟೊಂದು ಸಮಸ್ಯೆ ಇಲ್ಲ. ಆದರೆ ವೆಜ್ ನವರಿಗೆ ಸಮಸ್ಯೆ ಕೇಳೋದೇ ಬೇಡ
ಹೀಗೆ ನಾನಾ ನಮೂನೆಯ ಮಾತುಗಳು ಕೇಳಿ ಬರುತ್ತವೆ. ಆದರೆ ಇವೆಲ್ಲವನ್ನೂ ಮೀರಿದ್ದು ಒಂದು ಹೊಸ ದೇಶವನ್ನು ನೋಡುವ ಅವಕಾಶ . ಅಲ್ಲಿನ ಹಲವಾರು ವಿಷಯಗಳನ್ನು ಕಲಿತುಕೊಳ್ಳುವ ಅನುಭವ . ಇದೆಲ್ಲದರ ಮುಂದೆ ಬೇರೆಲ್ಲ ವಿಷಯಗಳು ತಮ್ಮಷ್ಟಕ್ಕೆ ತಾವೇ ಸೈಡ್ ಗೆ ಸರಿದು ಬಿಡುತ್ತವೆ. ಆದರೂ ಎಲ್ಲೊ ಒಂದು ಕಡೆ ತುಂಬಾ ದಿನ ಆದ ನಂತರ ನಮ್ಮ ಊರ ಕಡೆಗೆ ಮನಸು ಎಳೆಯುವುದು ಮಾತ್ರ ಸುಳ್ಳಲ್ಲ !
ಇನ್ನು ಒಂದು ಗುಂಪು ಇದೆ. ಅವರು ಹೇಳುವ ಪ್ರಕಾರ, ಒಂದು ಸಲ ಬೇರೆ ದೇಶಕ್ಕೆ ಹೋಗಿಬಿಟ್ಟರೆ ವಾಪಾಸು ಬರುವವರ ಸಂಖ್ಯೆ ಕಡಿಮೆ ರಿ ಅಂತ. ಈ ಮಾತನ್ನ ಒಂದೈದು ವರ್ಷಗಳ ಮುಂಚೆ ಒಪ್ಪಿಕೊಳ್ಳ ಬಹುದಿತ್ತೇನೋ , ಆದರೆ ಈಗ ಇದನ್ನ ಒಪ್ಪುವುದು ಕಷ್ಟ. ಇದಕ್ಕೆ ಕಾರಣ ನಮ್ಮ ದೇಶದಲ್ಲಾಗುತ್ತಿರುವ ಒಂದಿಷ್ಟು ಬದಲಾವಣೆ. “ ಭಾರತ ಅಭಿವೃದ್ದಿ ಆಗುತ್ತಿದೆ “ ಅನ್ನೋದು ಮಾತ್ರ ಈ ದೇಶದ ಹಲವಾರು  ಸಮಸ್ಯೆಗಳ ಮಧ್ಯೆಯೂ ಸಹ ಒಪ್ಪಿಕೊಳ್ಳಲೇ ಬೇಕು.
ಈ ವಾರದ ಬಿಲ್ಡ್ ಲೇಬಲ್ :
ಒಂದಿಷ್ಟು ವರ್ಷಗಳ ಹಿಂದೆ, ಬೇರೆ ದೇಶಕ್ಕೆ ಹೋಗಿದ್ದ  ನನ್ನ ಪರಿಚಿತರೊಬ್ಬರು ಅಲ್ಲಿನ ಜೆರಾಕ್ಸ್  ನಲ್ಲಿ  ಕೆಲಸಮಾಡು ತ್ತಿದ್ದರು.ಒಂದು ಸಲ ಅವರು ತಮ್ಮ ಹಳ್ಳಿಗೆ  ಬಂದಾಗ, ಯಾರೋ ಕೇಳಿದರಂತೆ : “ ಎಲ್ಲಪ್ಪ ಕೆಲಸ ಮಾಡೋದು ?”
ಇವರು ಹೇಳಿದರು ; ಜೆರಾಕ್ಸ್ ನಲ್ಲಿ . ಅದಕ್ಕೆ ಅವರು ಹೇಳಿದ್ದು ; “ಜೆರಾಕ್ಸ್  ಅಂಗಡಿನಲ್ಲಿ ಕೆಲಸ ಮಾಡೋಕೆ ಅಷ್ಟು ದೂರ ಹೋಗಬೇಕಾ ? ನಮ್ಮ ಹುಡುಗ ಇದೆ ಊರ್ನಲ್ಲೇ ಒಂದು ಜೆರಾಕ್ಸ್  ಅಂಗಡಿ ಹಾಕಿದಾನೆ. ನೀನು ಬೇಕಿದ್ರೆ ಇಲ್ಲೇ ಕೆಲಸಕ್ಕೆ ಬಾ.

Thursday, August 7, 2014

ಅಂಕಣ ೨೮ : ಸಾಫ್ಟ್ ಲೋಕ ಮತ್ತು ONSITE

ಸಾಫ್ಟ್ ಲೋಕದಲ್ಲಿರುವ ಪ್ರತಿಯೊಂದು ಬಡಜೀವವೂ ತಲ್ಲಣಿಸುವ, ತವಕಿಸುವ, ತಡಕಾಡುವ ಏಕೈಕ ಶಬ್ದ ಇದು.
ಬರೀ ಶಬ್ದ ಅಲ್ಲ, ಇದೊಂದು ಪ್ರತಿಷ್ಠೆ ಸಹ. ಬರೀ ಪ್ರತಿಷ್ಠೆ ಅಲ್ಲ, ಪ್ರತಿಯೊಬ್ಬರ ಕೆರಿಯರ್ ನಲ್ಲೂ ಇದೊಂದು ಛಾಪು.  ಚಾಪಿನ ಜೊತೆ ಜೊತೆಗೆ ಆನ್ ಸೈಟ್ ಗೆ ಹೋಗಿ ಬಂದ ಪ್ರತಿಯೊಬ್ಬ ಹುಡುಗ / ಹುಡುಗಿ ತಲೆಯಲ್ಲಿ ಒಂದು ಗರಿ. ಅವರಿಗಷ್ಟೇ ಅಲ್ಲ, ಅವರ ತಂದೆ- ತಾಯಿಗೂ ಸಹ “ ನಮ್ಮ ಹುಡುಗ ಇಂತಹ ಕಂಪನಿ ಯಲ್ಲಿ ಕೆಲಸ ಮಾಡ್ತಾ ಇದಾನೆ. ಮೊನ್ನೆ ತಾನೇ ನಮ್ಮ ಹುಡುಗಾನೂ  ಅಮೆರಿಕಾ ಕ್ಕೆ  ಹೋಗಿ ಬಂದ” ಎನ್ನುವ ಮಾತಿಗೆ ಒಂದು ಸಾಕ್ಷಿ ಅದು.  ಒಂದು ಐಡಿಯಾ ನಿಮ್ಮ ಜಗತ್ತನ್ನೇ ಬದಲಾಯಿಸಬಹುದು ಆದರೆ ಒಂದು ಆನ್ ಸೈಟ್ ನಿಮ್ಮ ಜೀವನವನ್ನೇ ಬದಲಾಯಿಸಬಹುದು!!


“ onsite“ ನಲ್ಲಿ ಕೆಲಸ ಮಾಡಲು ಯಾರನ್ನ ಸೆಲೆಕ್ಟ್ ಮಾಡಬೇಕು ಅನ್ನುವ ನಿರ್ಧಾರವನ್ನ  “ Project Team“ ನಲ್ಲಿ ಮಾಡಿದ ತಕ್ಷಣವೇ ಸೆಲೆಕ್ಟ್  ಮಾಡಿದ ಹುಡುಗ/ ಹುಡುಗಿ ಯ ಆನ್ ಸೈಟ್ ಪ್ರೆಪರಶನ್ ಶುರು ಆಗುತ್ತದೆ. ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಿಂದ ಹಿಡಿದು ಗಾಂಧೀ ಬಜಾರ್ ವರೆಗೂ ಅವರ ಶಾಪಿಂಗ್ ನಡೆಯುತ್ತದೆ. ಒಂದು ಥರದ Excitement. ಜೊತೆಗೆ ಸಹೋದ್ಯೋಗಿಗಳ , “ ಒಳ್ಳೆ ಅವಕಾಶ. ಅದು ನಿನಗೆ ಈ ಚಿಕ್ಕ ವಯಸ್ಸಿಗೆ ನೆ ಸಿಕ್ಕಿದೆ. “ “.  ಅಂತ ಹೇಳಿದಾಗ ಕೇಳಬೇಕೆ?  ( ಆದರೆ ನಿಜ ಸ್ಥಿತಿಯಲ್ಲಿ ಟೀಂ ನಲ್ಲಿ ಒಬ್ಬರು ಆನ್-ಸೈಟ್ ಗೆ ಹೋದರೆ, ಉಳಿದವರಿಗೆ ಸ್ವಲ್ಪ ಹೊಟ್ಟೆಯಲ್ಲಿ ಬೆಂಕಿ ಬೀಳುತ್ತದೆ ಅನ್ನುವ ಮಾತು ಬೇರೆ )
ನನ್ನ ಸ್ನೇಹಿತನೊಬ್ಬ ಪಕ್ಕ ಫಿಲ್ಮಿ ಶೈಲಿಯಲ್ಲಿ ಹೇಳುತ್ತಿದ್ದ. “ಈ ಆನ್ ಸೈಟ್ ಅನ್ನೋದು ಪಕ್ಕ ೪೨೦. ನೀವು ಅದರ ಬಗ್ಗೆ ಆಸೆ ಇಟ್ಟುಕೊಂಡು ಕಾದು  ಕೂತಷ್ಟು, ಅದು ನಿಮ್ಮನ್ನ ಕಾಯಿಸುತ್ತಲೇ ಇರುತ್ತದೆ. ಅದರ ಕಡೆಗೆ ಲಕ್ಷ್ಯ ಕೊಡದೆ, ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತಾ ಹೋದಂತೆ ಅದು ತಾನಾಗಿಯೇ ನಮ್ಮ ಹತ್ತಿರಕ್ಕೆ ಬಂದು ಬಿದ್ದಿರುತ್ತದೆ”. ಅವನ ಮಾತು ನಿಜ ಸಹ.
ಆದರೆ ಆನ್ ಸೈಟ್ ಅನ್ನುವ ಅವಕಾಶ ಪ್ರತಿಯೊಬ್ಬರಿಗೂ ಸಿಗುತ್ತದೆ ಅಂತ ಹೇಳುವುದು ಕಷ್ಟ. ಅದು ನಾವು ಮಾಡುವ ಪ್ರಾಜೆಕ್ಟ್ ಮೇಲೆ depend ಆಗಿರುತ್ತದೆ. ಸಾಫ್ಟ್ ಲೋಕಕ್ಕೆ ಸೇರಿದವರೆಲ್ಲ ಆನ್ ಸೈಟ್ ಗೆ ಹೋಗುತ್ತಾರೆ ಅಂತ ಹೇಳಿದರೆ ನಂಬಲು ತುಸು ಅಸಾಧ್ಯವೇ.
ಆನ್-ಸೈಟ್ ಹೊರಡುವ ಮುನ್ನ ತಯಾರಿಗಳು ಬಲು ಜೋರು. ಹಾ ಇಲ್ಲಿ ಇನ್ನೊಂದು ವಿಷಯ, ಆನ್ ಸೈಟ್ ಅಂದ್ರೆ ವರ್ಷಾನು ಗಟ್ಟಳೆ  ಬೇರೆ ದೇಶಕ್ಕೆ ಹೋಗಬೇಕು ಅಂತ ರೂಲೇನು ಇಲ್ಲ. ಕೇವಲ ಒಂದು ತಿಂಗಳಿಗೆ, ಅಷ್ಟೇ ಏಕೆ ಒಂದು ವಾರಕ್ಕೂ ಸಹ ಹೋಗಿ ಬಂದವರಿದ್ದಾರೆ. ಮೊಟ್ಟ ಮೊದಲನೆಯದಾಗಿ ನಮ್ಮ ಸಾಫ್ಟ್ ಕೆರಿಯರ್  ಆರಂಭದಲ್ಲೇ ಆನ್ –ಸೈಟ್ ಹೋಗಿ ಬಂದರೆ ಒಂದು ಒಳ್ಳೆ reputation ಇರುತ್ತದೆ. ಯಾಕಂದರೆ ನಿಮ್ಮ ಪ್ರಾಜೆಕ್ಟ್ ಅನ್ನು ನೀವು ಕ್ಲೈಂಟ್ ಲೊಕೇಶನ್ ನಲ್ಲಿ ರೆಪ್ರೆಸೆಂಟ್ ಮಾಡುತ್ತಿರುತ್ತಿರಿ. ಇನ್ನೊಂದು ವಿಷಯವೆಂದರೆ ಇಲ್ಲಿಗಿಂತಲೂ ಕ್ಲೈಂಟ್ ಲೊಕೇಶನ್ ನಲ್ಲಿ ಸ್ವಲ್ಪ ಜಾಸ್ತಿ ದುಡಿಬಹುದು . ಒಂದಿಷ್ಟು ರೊಕ್ಕ – ಗಿಕ್ಕ ಕೂಡಿಡಬಹುದು. ಇದರ ಜೊತೆಗೆ ಮದುವೆಗೆ ಮುಂಚೆಯೇ ನೀವು ಆನ್ ಸೈಟ್ ಗೆ ಹೋಗಿ ಬಂದು ಬಿಟ್ಟರೆ  ನಿಮ್ಮ ಭಾವಿ ಹೆಂಡತಿ / ಗಂಡ ನ ಮುಂದೆ ಮಾತಾಡುವಾಗ ಒಂದು ರೀತಿಯ ಗರಿ ನಿಮ್ಮ ತಲೆಯ ಮೇಲೆ ಇರುತ್ತದೆ.  ಈ ಎಲ್ಲ ಕಾರಣಗಳಿಂದ  ಆನ್ ಸೈಟ್ ಅನ್ನೋದು ತುಂಬಾ ಮುಖ್ಯ ಆಗುತ್ತದೆ.
ಹಾಗಂತ ಸಾಫ್ಟ್ ಲೋಕದಲ್ಲಿ ಎಲ್ಲರೂ ಆನ್-ಸೈಟ್ ಗೆ ಬಾಯಿ ಬಿಟ್ಟು ಕೊಂಡು  ಕೂತಿರುತ್ತಾರೆ ಅಂತ ಅನ್ಕೊಳ್ಳೋದು ಶುದ್ದ ತಪ್ಪು . ಕೆಲವರು ಪ್ರಸ್ತುತ ತಮಗಿರುವ ಕಮಿಟ್ಮೆಂಟ್ ಗಳಿಂದಾಗಿ ಬಂದಿರುವ ಅವಕಾಶವನ್ನೇ ತಿರಸ್ಕರಿಸಿರುತ್ತಾರೆ. ಒಂದಿಷ್ಟು ಜನಕ್ಕೆ ಕಾರಣವಿರದಿದ್ದರೂ ಆನ್ – ಸೈಟ್ ಗೋ ಹೋಗಲು ಬಿಲ್ ಕುಲ್ ಇಷ್ಟ ವಿರುವುದಿಲ್ಲ . ಸುಮ್ನೆ ಏನೋ ಒಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತ್ತಿರುತ್ತಾರೆ. ಕೆಲವೊಬ್ಬರಿಗೆ ಕ್ಲೈಂಟ್ ಲೊಕೇಶನ್ ನಲ್ಲಿ ಕೆಲಸ ಮಾಡುವುದು slave ತರಹ ಅನ್ನೋದು ಅವರ ವಾದ. ಅದೇನೇ ಇರಲಿ, ಪ್ರತಿಯೋಬ್ಬರಿಗೆ ಅವರವರದೇ ಆದ ವಯಕ್ತಿಕ ಅಭಿಪ್ರಾಯ, ಸಿದ್ಧಾಂತ,ನಂಬಿಕೆ ಇರುವುದರಿಂದ ಇದು ಸರಿ, ಇದು ತಪ್ಪು ಅಂತ ನಿರ್ಧರಿಸಿ ಬಿಡುವುದು ಸಹ ತಪ್ಪಾಗುತ್ತದೆ.
ಇದಿಷ್ಟು ಆನ್-ಸೈಟ್ ಬಗ್ಗೆ ಆಯಿತು . ಇನ್ನು ಅಲ್ಲಿಗೆ ಹೋದ ಮೇಲೆ ಹೇಗಿರುತ್ತೆ ? ಅನ್ನೋದನ್ನ ಮುಂದಿನ ವಾರದ ಅಂಕಣ ದಲ್ಲಿ ನೋಡೋಣ .
ಈ ವಾರದ ಬಿಲ್ಡ್ ಲೇಬಲ್ : ಆನ್-ಸೈಟ್ ಅಂದ್ರೆ  ಕ್ಲೈಂಟ್ ಲೋಕೇಶನ್ ಅಂತ ಅರ್ಥ. ಆನ್-ಸೈಟ್ ಅಂದ ತಕ್ಷಣ ಬರೀ ಅಮೆರಿಕಾದ ಕನಸು ಕಾಣುವ ಅಗತ್ಯ ಇಲ್ಲ. ಸಾಫ್ಟ್ ಲೋಕದಲ್ಲಿ ಕೆಲಸದ ನಿಮ್ಮಿತ್ತವಾಗಿ ನೀವು “ ಪಾಕಿಸ್ತಾನ ಕ್ಕೆ” ಹೋದರೂ ಅದನ್ನೂ ಆನ್-ಸೈಟ್ ಅನ್ನುತ್ತಾರೆ. ಹುಷಾರು!