Monday, May 27, 2013

"ಶಿವ"ನ ಯುಗಾವತಾರ

ಅಷ್ಟಕ್ಕೂ ಆತ  ತೊಡೆ ತಟ್ಟಿ ಸಮರ ಸಾರಿದ್ದು ಯಾರ ಮೇಲೆ?
ಲೆಕ್ಕವಿರದಷ್ಟು  ಆನೆ, ಒಂಟೆ, ಕುದುರೆಗಳ ಜೊತೆಗೆ ಲಕ್ಷೋಪ - ಲಕ್ಷ ಸೈನ್ಯದೊಂದಿಗೆ ದಿಲ್ಲಿ ದರಬಾರಿನಲ್ಲಿ ಆಡಳಿತ ನಡೆಸುತ್ತಿದ್ದ ಮೊಘಲರ ಮೇಲೆ ಮತ್ತು ಅದರ ಜೊತೆಗೆ ದಕ್ಷಿಣದಲ್ಲಿ ಪ್ರಬಲರಾಗಿದ್ದ  ಬಿಜಾಪುರದ ಸುಲ್ತಾನರ ಮೇಲೆ.
ಸಮರ ಸಾರಲು ಆತನ ಉದ್ದೇಶವಾದರೂ ಏನಿತ್ತು?
"ಒಗ್ಗಟ್ಟು" ಎಂಬ ಪದದ ಅರ್ಥವನ್ನು ಇಂದಿಗೂ ಸಹ ತಿಳಿಯದ  ಹಿಂದೂಗಳ ಮೇಲೆ ನಂಬಿಕೆಯಿಟ್ಟು , ಅವರ ಮೇಲಿನ ದೌರ್ಜನ್ಯ ನಿಲ್ಲಿಸಲು "ಹಿಂದವಿ  ಸ್ವರಾಜ್ಯ" ವನ್ನು ಕಟ್ಟಲು.
ಸರಿ, ಮೊಘಲರು ಮತ್ತು ಬಿಜಾಪುರದ ಸುಲ್ತಾನರ ಮೇಲೆ ಕಾಲು ಕೆರೆದುಕೊಂಡು ಯುದ್ಧ ಸಾರಬೇಕೆಂದರೆ ಈತನ ಸೈನ್ಯದ ಪ್ರಮಾಣ ಎಷ್ಟಿತ್ತು ?
ಕೇಳಿದರೆ ನಗು ಬರುವುದು ಮಾತ್ರ ಖಂಡಿತ, ಕಾಡು ಮೇಡಲ್ಲಿ ಲಂಗೋಟಿ ಯನ್ನು ಉಟ್ಟುಕೊಂಡು ಅಲೆಯುತ್ತಿರುವ ಹುಡುಗರ ಗುಂಪೇ ಈತನ ಸೈನ್ಯ.
ಸುಮ್ಮನೆ, ಬೇರೆ ಹಿಂದೂ ರಾಜರ ತರಹ ಈತನು ಮೊಘಲರಿಗೆ, ಸುಲ್ತಾನರಿಗೆ ವಿಧೇಯನಾಗಿ ಇದ್ದುಬಿಡಬಾರದಾಗಿತ್ತೆ ?
ಖಂಡಿತ, ಈತನ ತಂದೆಯು ಸಹ ಬಿಜಾಪುರದ ಸುಲ್ತಾನರ ಅಡಿಯಲ್ಲಿ ಬರುತ್ತಿದ್ದ  ಬೆಂಗಳೂರು ಪ್ರದೇಶವನ್ನು ಸಾಮಂತ ಅರಸರ ತರಹ ನಿರ್ವಹಿಸುತ್ತಿದ್ದರು.
ಹಾಗಿದ್ದರೆ, ಈತನಿಗೆಕೆ ಇಲ್ಲದ ಉಸಾಬರಿ? ಮೊಘಲರ ಸೈನ್ಯವನ್ನು ಎದುರು ಹಾಕಿಕೊಂಡು ಬದುಕಿ ಉಳಿದವರು ಉಂಟೆ?
ನಿಜ,ಬೇರೆ ಯಾರಾದರೂ ಆಗಿದ್ದರೆ ಹಾಗೆ ಮಾಡುತ್ತಿದ್ದರೇನೋ ....  ಆದರೆ ಏನು ಮಾಡುವುದು? ತಲೆ ಬಗ್ಗಿಸುವುದು ಈತನ ಜಾಯಮಾನವಲ್ಲ. ಸ್ವತಂತ್ರವಾಗಿ ಬದುಕಬೇಕೆಂಬ ಹಂಬಲ ಈತನದು. ಯಾಕೆಂದರೆ  ಈತ ಬೇರೆ ಯಾರೋ ಅಲ್ಲ, "ಸ್ವರಾಜ್ಯದ ಸ್ಥಾಪಕ -ಶಿವಾಜಿ"

ಈ ಸಲದ ಪುಸ್ತಕ ಶ್ರೀ ಹೊ.ವೆ. ಶೇಷಾದ್ರಿ ಅವರು ಬರೆದ "ಯುಗಾವತಾರ". ಇದೊಂದು ಕಾಲ್ಪನಿಕ ಕಥೆಯಲ್ಲವಾದ್ದರಿಂದ, ಪುಸ್ತಕದೊಳಗಿನ ವಿಷಯದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ .....

ಅದು ಇಡೀ ಭಾರತಕ್ಕೆ ಗರ ಬಡಿದ ಕಾಲ. ಅತ್ತ ಪುಲಿ - ಇತ್ತ ದಾರಿ ಎಂಬಂತೆ ಆಗಿತ್ತು ಒಂದು ಸಮಾಜದ ಸ್ಥಿತಿ. ಬಹುಶ: ಕರ್ನಾಟಕದ  ವಿಜಯನಗರ ಸಮ್ರಾಜ್ಯದ ಕಾಲದ ನಂತರ ಆ ಒಂದು ಸಮಾಜ ಜೋರಾಗಿ ಉಸಿರಾಡುವು ದಕ್ಕೂ ಹೆದರುವಂತಹ ಸ್ಥಿತಿ. ಕಾಲ್ಪನಿಕ ವೆನಿಸಿದರೂ " ಯಾರಾದರೂ ಒಬ್ಬ ಅವತಾರ ಪುರುಷ ಬರಬಾರದೇ" ಎನ್ನುವಷ್ಟರ ಮಟ್ಟಿಗೆ ಹತಾಶೆ ಜನರ ಮನದಲ್ಲಿತ್ತು.  ಉತ್ತರ ಭಾರತವೆಂಬ ಭಾಗ ಮಾನವೀಯತೆಯ ಎಂಬುದನ್ನೇ ಮರೆತಿದ್ದ, ಅಧಿಕಾರಕ್ಕಾಗಿ ತನ್ನ ತಂದೆ ಹಾಗು ಸಹೋದರರನ್ನೇ ಬಲಿ ತೆಗೆದು ಕೊಂಡ " ಔರಂಗಜೇಬ್" ಎನ್ನುವ ದೊರೆ ಆಳುತ್ತಿದ್ದ . ಅವನ ಕಪಿಮುಷ್ಟಿಯಲ್ಲಿ  ಭಾರತದ ಬಹು ಭಾಗ ನಲುಗಿ ಹೋಗಿತ್ತು. ಇನ್ನುಳಿದ ದಕ್ಷಿಣದ ಭಾಗ - ಬಿಜಾಪುರ ಸುಲ್ತಾನರ ಕೈಯಲ್ಲಿ. ಇವರಿಬ್ಬರ ಮಧ್ಯದಲ್ಲಿ ಪ್ರತಿ ದಿನವೂ ಸತ್ತು ಸತ್ತು ಬದುಕುತ್ತಿದ್ದ ಜನರ ಜೀವನ ಯಾತನೆ. 

ಜನರ ಮನಸ್ಸಿನಲ್ಲಿದ್ದಂತೆಯೇ  ಒಂದು  ದಿನ ನಿಜ ಆಯಿತು.  ಸತ್ತು ಸತ್ತು ಬದುಕುವ, ಸ್ವತಂತ್ರವಾಗಿ ಆಲೋಚನೆ ಮಾಡುವುದನ್ನೇ ಮರೆತಿದ್ದ, ಜನರ ಮಧ್ಯೆ ಸಾಕ್ಷಾತ್ "ಶಿವ" ನ ಅವತಾರ ಬಂದಾಗಿತ್ತು. ಪುರಂದರ ಗಡ ದಿಂದ  ಶುರುವಾದ ಶಿವನ ವಿಜಯ ಯಾತ್ರೆ ದಿಲ್ಲಿಯಲ್ಲಿ ಕುಳಿತಿದ್ದ ದೊರೆ ಯ ಸಿಂಹಾಸನವೂ ಗಡ ಗಡ ನೆ ನಡುಗುವಂತೆ ಮಾಡಿತ್ತು . ಇತ್ತ ಬಿಜಾಪುರದ ಸುಲ್ತಾನನ ಕನಸಲ್ಲೂ ಪ್ರತಿರಾತ್ರಿ  "ಶಿವ" ನ ಪ್ರತ್ಯಕ್ಷವಾಗುತ್ತಿತ್ತು. ಆ ಧೀರ ವ್ಯಕ್ತಿಗೆ ದಿಲ್ಲಿಯ ದೊರೆಗಳು ಇಟ್ಟಿದ ಹೆಸರು "ಬೆಟ್ಟದ ಇಲಿ". ಹೌದು ಮತ್ತೆ, ಯಾರ ಕೈಗೂ ಸಿಗದೇ, ಎಲ್ಲರಿಗ್ಗೋ ಚಳ್ಳೆ ಹಣ್ಣು  ತಿನಿಸುತ್ತಿದ್ದ "ಶಿವ" ಬೆಟ್ಟದ ಇಲಿ ರೂಪದಲ್ಲಿ  ದಿಲ್ಲಿ ಮತ್ತು ಬಿಜಾಪುರ ದ ಸುಲ್ತಾನರನ್ನು ಕೊನೆಯವರೆಗೂ ಕಾಡಿದ್ದು ಮಾತ್ರ ಇಲಿಯಾಣೆಗೂ ಸತ್ಯ!

ಅಫ್ಜಲ್ ಖಾನ್, ಆಯೆಸ್ತಾ ಖಾನ್, ದಿಲೆರ ಖಾನ್, ಸಿದ್ದಿಕಿ ಮುಂತಾದ ಮಹಾನ್ ವೀರರೂ ಸಹ ಶಿವಾಜಿ ಮಹಾರಾಜರ ಖಡ್ಗ "ಭವಾನಿ" ಗೆ ಸಿಕ್ಕು ತುಂಡರಿಸಿ ಹೋದರು....
ಹಾಗಂತ ಶಿವಾಜಿ ಬರೀ  ಖಡ್ಗ ಹಿಡಿದು ಯುದ್ದಮಾಡುವ ಯೋಧರಷ್ಟೇ ಆಗಿರಲಿಲ್ಲ. ಬದಲಿಗೆ ರಾಜ್ಯವನ್ನು ನಡೆಸಿಕೊಂಡು ಹೋಗುವ ಚಾಣಾಕ್ಷತೆ, ಆಡಳಿತದ ನಡೆಸುವ ನಾಯಕತ್ವ ಗುಣ  ಇದರ ಜೊತೆಗೆ ಶತ್ರುವಿಗೆ ಚಳ್ಳೆ ಹಣ್ಣು ತಿನಿಸುವ ಮನೋಭಾವ ಎಲ್ಲವೂ ಜೊತೆ ಗೂಡಿದ್ದವು. 

ಒಂದು ಉದಾಹರಣೆ ಎಂದರೆ:
ಮೊಘಲರ ಸಾಮ್ರಾಜ್ಯವೆಂದು ಗೊತ್ತಿದ್ದೂ ಸಹ, ಅವರ  ವ್ಯಾಪಾರ ಕೇಂದ್ರಕ್ಕೆ ಲಗ್ಗೆ ಇಟ್ಟು ಅಲ್ಲಿರುವ ಎಲ್ಲ ಸರಕುಗಳನ್ನು ಲೂಟಿ ಹೊಡೆಯುತ್ತದೆ ಶಿವಾಜಿಯ ಸೈನ್ಯ. ಇದನ್ನು ಕೇಳಿ ಕೆಂಡಾ ಮಂಡಲವಾದ ಔರಂಗಜೆಬ್ ಇನ್ನೇನು ಶಿವಾಜಿಯ ಚಿಕ್ಕ ಗಾತ್ರದ ಸೈನ್ಯ ವನ್ನು ನುಂಗಿ ನೀರು ಕುಡಿಯಬೇಕು ಅನ್ನುವಷ್ಟರಲ್ಲಿ  ಶಿವಾಜಿಯ ಪತ್ರ ಔರಂಗಜೆಬನ ಕೈ ಸೇರಿರುತ್ತದೆ, ಅದರಲ್ಲಿ ಸ್ವತಃ ಶಿವಾಜಿ ಹೀಗೆ ಬರೆದಿರುತ್ತಾರೆ:
" ನಾವು ಲಗ್ಗೆ ಇಟ್ಟ ಸಾಮ್ರಾಜ್ಯ ತಮ್ಮದೆಂದು ನಮಗೆ ಗೊತ್ತಿರಲಿಲ್ಲ, ತಮ್ಮ ಸೈನ್ಯವನ್ನು ಎದುರು ಹಾಕಿ ಕೊಳ್ಳುವ ಶಕ್ತಿ ನಮಗಿಲ್ಲ, ಬಾದಷ ಅವರು ನಮ್ಮನ್ನು ಮನ್ನಿಸಬೇಕು". ಆದರೆ ಪತ್ರದಲ್ಲಿ ಎಲ್ಲೂ  ದೋಚಿದ ಸರಕುಗಳನ್ನು ವಾಪಾಸು ಕೊಡುತ್ತೇವೆ ಎಂದು ಸೌಜನ್ಯಕ್ಕಾದರೂ ಬರೆದಿರುವುದಿಲ್ಲ. ಇದಲ್ಲವೇ ಚಾಣಾಕ್ಷತೆ!!
ಔರಂಗಜೆಬನಿಗೆ ಪತ್ರ ಓದಿದ ಮೇಲೆ ಏನು ಮಾಡಬೇಕೋ ತಿಳಿಯುವುದಿಲ್ಲ, ಯಾಕಂದರೆ ಸ್ವತಃ ಲೂಟಿ ಮಾಡಿದವನೇ ಕ್ಷಮೆ ಕೇಳಿದ್ದಾನೆ...

ಇನ್ನು ಶಿವಾಜಿ ಮಹಾರಾಜರು ಮತಾಂಧರೆ?
ಖಂಡಿತ ಅಲ್ಲ !! ಅಫ್ಜಲ್ ಖಾನ್ ನನ್ನು  ವಧೆ ಮಾಡಲು ಹೋಗುವಾಗ ಶಿವಾಜಿ ಮಹಾರಾಜರು ಆಯ್ಕೆ ಮಾಡಿಕೊಂಡ ಆಪ್ತ ಸೈನಿಕರಲ್ಲಿ ಬೇರೆ ಧರ್ಮದವರು ಇದ್ದರು.ಯುದ್ಧದಲ್ಲಿ ವಿಜಯಿಯಾದಾಗ, ಅನ್ಯ ಧರ್ಮದ ಹೆಂಗಸರನ್ನು ಸ್ವಂತ ಸಹೋದರಿಯರಂತೆ ಕಂಡು ಅವರನ್ನು ಸಕ್ತರಿಸುತ್ತಿದ್ದವರು.
ಅಂಕಣ ಮುಗಿಸುವ ಮುನ್ನ:
ಅತ್ತ ಮೊಘಲರು, ಇತ್ತ ಬಿಜಾಪುರದ ಸುಲ್ತಾನರು  ಇವರಿಬ್ಬರ ಮಧ್ಯೆ ಆಗತಾನೆ ಬಂದಿದ್ದ ಬ್ರಿಟಿಷರು ಎಲ್ಲರನ್ನು ಸದೆ  ಬಡಿದು, ಅಖಂಡ ಭಾರತದಲ್ಲಿ "ಹಿಂದವಿ ಸ್ವರಾಜ್ಯವನ್ನು" ಸ್ಥಾಪಿಸಬೇಕು ಎನ್ನುವ ಉದಾತ್ತ ಯೋಚನೆ ಹೊತ್ತ ಶಿವಾಜಿ ಮಹಾರಾಜರು ಎಲ್ಲಿ? ಕೇವಲ ರಾಜಕೀಯ ಲಾಭಕ್ಕಾಗಿ ಎಲ್ಲರಿಗೂ ಸಲ್ಲಬೇಕಾಗಿದ್ದ "ಶಿವಾಜಿ ಮಹಾರಾಜರನ್ನು"  ಒಂದು ರಾಜ್ಯ ಕ್ಕಷ್ಟೇ ಸೀಮಿತ ಗೊಳಿಸಿದ ಇಂದಿನ ರಾಜಕೀಯ ಪಕ್ಷದ ಧುರೀಣರ "ಸಣ್ಣ" ಯೋಚನೆ ಎಲ್ಲಿ?