Thursday, December 4, 2014

ಅಂಕಣ ೪೦ : ಸಾಫ್ಟ್ ಲೋಕದಲ್ಲಿ ಒಂದು ದಿನ!

ಬೆಳಿಗ್ಗೆ ಎದ್ದು,
ಒಂದೆರಡು ರೌಂಡ್ ಓಡಿ/
ಜಿಮ್ ಗೆ ಹೋಗಿ / 
ಯೋಗ –ಗೀಗ ಮಾಡಿ / 
ಇದ್ಯಾವುದು ಮಾಡದೆ  ಫ್ರೆಶ್ ಆಗಿ  ಅವರವರ  ಕಂಪನಿ ಬಸ್ ಬರೋ ಕಡೆ ಹೆಗಲಿಗೊಂದು ಬ್ಯಾಗ್ ಹಾಕಿ ಕೊಂಡು ನಿಂತುಬಿಡುವುದು. ಹಾಗೆ ಹೋಗ್ತಾ, ದಾರೀಲಿ ಬರುವ  ಯಾವುದಾದರು ಒಂದು ಹೋಟೆಲಿನಲ್ಲಿ 
ಇಡ್ಲಿ ನೊ, 
ದೋಸೆ ನೊ ತಿಂದು,
ಒಂದು ಕಪ್ ಕಾಫಿ ಕುಡಿದು,
ಅದರ ಜೊತೆಗೆ ಒಂದು ದಂ ಎಳೆದು, 
ಹ್ಯಾಂಡ್ ಫ್ರೀ ನ ಕಿವಿಗೆ ಸಿಗಿಸಿಕೊಂಡು,
ಕಂಪನಿಯ ಬಸ್ಸು ಬರುವ ಹಾದಿಯನ್ನೇ ನೋಡುತ್ತಾ  ನಿಂತುಬಿಡುವುದು. ನನ್ನ  ಥರ, ನಮ್ಮ ಕಂಪನಿಯಲ್ಲಿ ಕೆಲಸ ಮಾಡುವವರು ಸಹ ಅದೇ ಬಸ್ಸಿಗಾಗಿ ಕಾಯುತ್ತಾ  ನಿಂತಿರುತ್ತಾರೆ.  ಅವರೆಲ್ಲರಿಗೊಂದಿಷ್ಟು  ಹಾಯ್, ಮಾಡುವಷ್ಟರಲ್ಲಿ ನಮ್ಮ ಬಸ್ ಬಂದು ಬಿಟ್ಟಿರುತ್ತದೆ.



ಬಸ್ ಏರಿದ ತಕ್ಷಣ ಕಿಟಕಿಯ ಪಕ್ಕದ ಸೀಟ್ ನ್ನ ಹುಡುಕಿಕೊಂಡು ಕೂತು, ಆಗ ತಾನೇ  ತಗೊಂಡಿರುವ “Times“ ಪೇಪರ್ ಮೇಲೆ ಒಂದು ಸಲ ಕಣ್ಣಾಡಿಸುತ್ತಾ ಕೂತೆವೆಂದರೆ ಸಾಕು ನಮ್ಮ ಕಣ್ಣುಗಳು ನಮಗೆ ಗೊತ್ತಿಲ್ಲದ ಹಾಗೆ ಮುಚ್ಚಿಕೊಂಡು ಬಿಟ್ಟಿರುತ್ತವೆ. ನಿದ್ದೆಗೆ ಜಾರಿಕೊಂಡು ಬಿಟ್ಟಿರುತ್ತವೆ. ಈ ಸಾಫ್ಟ್ ಕಂಪನಿಗಳ “Transport“ ಗಳನ್ನು ನೀವೊಂದು ಸಲ ನೋಡಬೇಕು. ಬನಶಂಕರಿಯಿಂದ ಬಿ.ಟಿ. ಎಮ್ ತನಕ ಎಲ್ಲ ಕಂಪನಿಗಳ ಬಸ್ ಗಳು , ಕ್ಯಾಬ್ ಗಳು ಬೆಳಗಿನ ಹೊತ್ತು ಆರ್ಭಟಿಸುತ್ತಾ ಬರುತ್ತವೆ. ಆದರೆ ಒಂದು ಸಲ “BTM“ ಕ್ರಾಸ್ ಆಯಿತೆಂದರೆ ಸಾಕು, ಈ ಎಲ್ಲ ವೆಹಿಕಲ್ ಗಳ ಘರ್ಜನೆ ತನ್ನಷ್ಟಕ್ಕೆ ತಾನೇ ಕಡಿಮೆಯಾಗಿ, ಒಂದರ ಹಿಂದೆ ಮತ್ತೊಂದು ಅನ್ನೋ ರೀತಿಯಲ್ಲಿ ಬಾಯಿ ಮುಚ್ಚಿಕೊಂಡು ನಿಧಾನಗತಿಯಲ್ಲಿ ತವೆಳುತ್ತಾ ಸಾಗುತ್ತವೆ – ಅದೂ ಸಿಲ್ಕ್ ಬೋರ್ಡ್ ಕ್ರಾಸ್ ಮಾಡುವ ವರೆಗೆ ಮಾತ್ರ! ತದ ನಂತರ ಯಥಾ ಪ್ರಕಾರ ಅವುಗಳ ಘರ್ಜನೆ ಮತ್ತೆ ಶುರು ಆಗುತ್ತದೆ.


ಒಂದು ಸಲ ಈ ಬಸ್ ಗಳು ಅವರವರ ಕಂಪನಿ ಗಳಿಗೆ ತಲುಪಿದಾಗ, ಒಳಗಡೆ ಕಣ್ಮುಚ್ಚಿ ಮಲಗಿರುವ ಸಾಫ್ಟ್ ಲೋಕದ ಜನರು ನಿಧಾನವಾಗಿ ಕಣ್ ತೆಗೆದು ತಮ್ಮ ಕಂಪನಿಯ ಐ ಡಿ ಕಾರ್ಡ್ ಗಳನ್ನ ತಮ್ಮ ಕೊರಳಿಗೆ ಹಾಕಿಕೊಂಡು ಒಂದು ಕೈಯಲ್ಲಿ ಬ್ಯಾಗ್ ಮತ್ತೊಂದು ಕೈಯಲ್ಲಿ ಲಂಚ್ ಬಾಕ್ಸ್ ಹಿಡಿದುಕೊಂಡು ಕಂಪನಿಯ ಒಳಗೆ "ಬಲಗಾಲಿಟ್ಟು" ಪ್ರವೇಶ ಮಾಡುತ್ತಾರೆ. 
ಅಲ್ಲಿಗೆ ಸೀನ್ ಒಂದು ಮುಗಿಯಿತು.

ಕ್ಯೂಬಿಕ್ ಗೆ ಹೋಗಿ ಮಷೀನ್ ಅನ್ಲಾಕ್ ಮಾಡಿ, ಮೊದಲಿಗೆ ಡಬಲ್ ಕ್ಲಿಕ್ ಮಾಡುವುದೇ “Out Look“ ಮೇಲೆ. ಇಲ್ಲಿ ಒಂಥರಾ ತಮಾಷೆ ಇದೆ.
೧. ನೀವು ಮ್ಯಾನೇಜರ್ ಆಗಿದ್ದರೆ “Outlook“ ನಲ್ಲಿ ಮೊದಲು ನೋಡುವುದು ಆ ದಿನದ ಕ್ಯಾಲೆಂಡರ್ ನ್ನ ಹಾಗೆ ಮೀಟಿಂಗ್ ರಿಕ್ವೆಸ್ಟ್ ಗಳನ್ನ.

೨. ನೀವು ಡೆವೆಲಪರ್ ಆಗಿದ್ದರೆ, “ ಹಿಂದಿನ ದಿನ ಮನೆಗೆ ಹೊರಡುವಾಗ  ಹಾಗೆ ಬಿಟ್ಟು ಹೋಗಿರುವ ಡಿಬಗ್ ಮೋಡ್ ನಲ್ಲಿರುವ ಕೋಡನ್ನ !”

೩.  ನೀವು ಟೆಸ್ಟರ್ ಗಳು ಆಗಿದ್ದರೆ ಒಂದು ಸಲ ಅವತ್ತಿನ ದಿನ ಪತ್ರಿಕೆಗಳ ಮೇಲೆ ಕಣ್ಣಾಡಿಸಿ ( ಆನ್ ಲೈನ್ ನಲ್ಲಿ ) ತದ ನಂತರ ಔಟ್ ಲುಕ್ ಓಪನ್ ಮಾಡಿ ಮೇಲ್ ನೋಡುತ್ತಾರೆ.

೪. ನೀವು ಆಫೀಸ್ ಗೆ ಬಂದ ತಕ್ಷಣವೇ ನಿಮ್ಮನ್ನ ಯಾರಾದರೂ ಮೀಟಿಂಗ್ ರೂಂ ಗೆ ಕರೆದರೆ, ಕ್ಲೈಂಟ್ ಲೋಕೇಶನ್ ನಲ್ಲಿ ಏನೋ ಭರ್ಜರಿ ಯಡವಟ್ಟು ಆಗಿದೆ ಅಂತ ಅರ್ಥ.

ನಮ್ಮ ಸಾಫ್ಟ್ ಲೋಕದ ಆಫೀಸ್ ದಿನಚರಿ  ಮೊದಲಿಗೆ ಶುರು ಆಗುವುದು “Stand up“ ಮೀಟಿಂಗ್ ಗಳಿಂದ. ನೀವು ನಿಮ್ಮ “Stand up” ಮುಗಿಸಿ ಕುಳಿತು ಕೊಳ್ಳುವಷ್ಟರಲ್ಲಿಯೇ ಕನಿಷ್ಠ ಪಕ್ಷ ಅರ್ಧ ಗಂಟೆ ಆಗಿ ಹೋಗಿರುತ್ತದೆ. ಆಮೇಲೆ ನೀವು ನಿಮ್ಮ ಪ್ರಾಜೆಕ್ಟ್ ಕೆಲಸ ದಲ್ಲಿ ಬ್ಯುಸಿ ಆಗಿರುತ್ತೀರಿ. ಸ್ವಲ್ಪ ಹೊತ್ತಿನ ನಂತರ ಪ್ರಾಜೆಕ್ಟ್ ರಿಲೇಟೆಡ್ ಸಂದೇಹಗಳನ್ನ ನೀವಾರಿಸಿಕೊಳ್ಳಲು ನಿಮ್ಮನ್ನು ಹುಡುಕಿಕೊಂಡು ಯಾರಾದರೊಬ್ಬರು ಬರುತ್ತಾರೆ.  ಬಂದವರಿಗೆ ಎಲ್ಲವನ್ನು explain ಮಾಡುವಷ್ಟರಲ್ಲಿ ಮಧ್ಯಾನದ ಊಟದ ಸಮಯ ಆಗಿ ಹೋಗಿ, ನಿಮ್ಮ ಗೆಳೆಯರು ನಿಮ್ಮ communicator ಗೆ lunch? ಅಂತ ಪಿಂಗ್ ಮಾಡಲು ಶುರು ಮಾಡಿರುತ್ತಾರೆ.


ಮಧ್ಯಾನದ ಊಟ ಮುಗಿಸಿಕೊಂಡು ನಿಮ್ಮ ಕ್ಯೂಬಿಕ್ ಗೆ ಬಂದು ಕೂಡು ವಷ್ಟರಲ್ಲಿ ಸಮಯ ಕೂಡ ಮಧ್ಯಾನ ೨ ಗಂಟೆ ಆಗಿರುತ್ತದೆ.
ಅದೇಕೋ ಗೊತ್ತಿಲ್ಲ ಬೆಳಿಗ್ಗೆ ಹೊತ್ತು ಅಷ್ಟೊಂದು ಚಟುವಟಿಕೆಯಲ್ಲಿರುವ ನಮ್ಮ ಮೈಂಡ್ ಮಧ್ಯಾನ ಮಾತ್ರ slow motion ನಲ್ಲಿ ಕೆಲಸ ಮಾಡಲು ಶುರು ಮಾಡಿಬಿಡುತ್ತದೆ. ನಿದ್ದೆ ಯಿಂದ ಆಚೆ ಬರಲು ಒಂದಿಷ್ಟು ಜನ ೩ ಗಂಟೆಯ ಹೊತ್ತಿಗೆ ಕಾಫಿ ಅಥವಾ ಟೀ ಅಥವಾ ಸ್ಮೋಕ್ ಗೆ ಶರಣು ಹೋಗುತ್ತಾರೆ.  ಇದೆಲ್ಲವೂ ಒಬ್ಬ ಸಾಮಾನ್ಯ ಸಾಫ್ಟ್ ಲೋಕದವನ ಕಥೆ ಆದರೆ, ನಮ್ಮ ಮ್ಯಾನೇಜರ್ ಹುದ್ದೆಯಲ್ಲಿರುವವರು ಮಾತ್ರ ತಮ್ಮ ಲ್ಯಾಪ್ಟಾಪ್ ಹಿಡಿದುಕೊಂಡು ಬೆಳಿಗ್ಗೆ ಯಿಂದ ಸಂಜೆಯವರಗೆ ಒಂದು ಮೀಟಿಂಗ್ ರೂಂ ನಿಂದ ಇನ್ನೊಂದು ಮೀಟಿಂಗ್ ಗೆ ಹೋಗುತ್ತಲೇ ಇರುತ್ತಾರೆ.


ಸಂಜೆ ನಾಲ್ಕು ಗಂಟೆ ಆದಮೇಲೆ ತಥ ಪ್ರಕಾರ ನಮ್ಮ ಮೈಂಡ್ ಮೊದಲಿನ ಹಾಗೆ ಚಟುವಟಿಕೆಗೆ ಬರುತ್ತದೆ. ಸಾಧಾರಣ ವಾಗಿ ಕ್ಲೈಂಟ್ ಗಳ ಜೊತೆಗಿನ ಮೀಟಿಂಗ್ ಗಳು ಅವರ ಸಮಯಕ್ಕೆ ಹೊಂದಿಕೊಂಡು ಇರುವುದರಿಂದ, ನಮ್ಮ ಭಾರತೀಯ ಕಾಲಮಾನದ ಪ್ರಕಾರ ಹೆಚ್ಚು ಕಡಿಮೆ ಎಲ್ಲ ಕ್ಲೈಂಟ್ ಮೀಟಿಂಗ್ ಸಂಜೆ ೫ ಅಥವಾ ಆರು ಗಂಟೆಯ ಮೇಲೆ ಇರುತ್ತವೆ.
ಕ್ಲೈಂಟ್ ಮೀಟಿಂಗ್ ಗಳನ್ನೂ ಮುಗಿಸಿಕೊಂಡು ಟೈಮ್ ನೋಡಿಕೊಂಡರೆ ೭ ರ ಸುಮಾರು ಆಗಿರುತ್ತದೆ. ಯಥಾ ಪ್ರಕಾರ ನಮ್ಮ ಬಸ್ ಗಳು ಸಹ ನಮ್ಮನ್ನ ಪುನಃ ಮನೆಗೆ ತಲುಪಿಸಲು ರೆಡಿ ಆಗಿ ನಿಂತಿರುತ್ತವೆ . ಬಸ್ ನಲ್ಲಿ ಹತ್ತಿ ದ ತಕ್ಷಣವೇ, “ಬೆಳಿಗ್ಗೆ ಯಿಂದ ಕಂಪ್ಯೂಟರ್ ನ್ನು ನೋಡಿದ ಕಣ್ಣುಗಳು ತಮ್ಮಷ್ಟಕ್ಕೆ ತಾವೇ ಮುಚ್ಚಿ ಕೊಂಡು ಬಿಡುತ್ತವೆ. ಒಂಬತ್ತು ಗಂಟೆಯ ಸುಮಾರಿಗೆ ಮನೆ ತಲುಪಿದ ನಂತರ ಊಟ ಮಾಡಿ,  ಹೆಂಡತಿಯ ಜೊತೆ ಒಂದಿಷ್ಟು ಹರಟೆ ಹೊಡೆದು, ಮಕ್ಕಳ ಜೊತೆ ಒಂದ್ನಾಕು ಮಾತಾಡಿ ದಿಂಬಿಗೆ ತಲೆ ಕೊಡುವುದೊಂದೇ ಬಾಕಿ.

ವಾರದ ಬಿಲ್ಡ್ ಲೇಬಲ್ : ಪುನಃ ಮರುದಿನ ಹೇಗಿರುತ್ತದೆ ಅನ್ನೋದಕ್ಕೆ ಇದೇ ಅಂಕಣವನ್ನ ಮತ್ತೆ ಮೊದಲಿನಿಂದಲೂ ಓದಿ.

Wednesday, November 26, 2014

ಅಂಕಣ ೩೯ : ಸಾಫ್ಟ್ ಲೋಕ ಮತ್ತು ಬೆಂಗಳೂರು

ಕಳೆದೆರಡು ವಾರದ ಅಂಕಣಗಳಲ್ಲಿ ಕನ್ನಡಕ್ಕೆ ಸಂಭಂದಿಸಿದ ವಿಷಯಗಳನ್ನ ನೋಡಿದೆವು. ಈಗ  ಪುನಃ ನಮ್ಮ ಸಾಫ್ಟ್ ಲೋಕ ಕ್ಕೆ ಹೊರಡೋಣ.   ಬೆಂಗಳೂರಿಗೂ ಸಾಫ್ಟ್ ಲೋಕಕ್ಕೂ ಇರುವ ನಂಟು ಹೇಗಿದೆ ಅಂದ್ರೆ........

ಮೊದಲಿಗೆ ನೀವೊಬ್ಬರೇ ಬರುತ್ತೀರಿ.
ನಿಮ್ಮ ಥರಾನೇ ಸಾಫ್ಟ್ ಲೋಕದ ಕೆಲಸವನ್ನು ಅರಸಿಕೊಂಡು ಹಲವಾರು ಜನ ಬಂದಿರುತ್ತಾರೆ. ಕೆಲವರಿಗೆ ಕೆಲಸ ಸಿಕ್ಕಿರುತ್ತದೆ, ಇನ್ನು ಕೆಲವರು ಕೆಲಸದ ಹುಡುಕಾಟದಲ್ಲಿ ಇರುತ್ತಾರೆ.
ಕೆಲಸ ಸಿಕ್ಕವರು, ಕೆಲಸ ಸಿಗದವರು, ಸಿಕ್ಕವರು ಮತ್ತು ಸಿಗದವರು ಒಂದು ನಾಲ್ಕೈದು ಜನ ಸೇರಿಕೊಂಡು ಒಂದು ಕಡೆ ಇರುತ್ತೀರಿ. ದಿನ ಕಳೆದಂತೆ ಎಲ್ಲರಿಗೂ ಒಂದೊಂದು ಕಂಪನಿಯಲ್ಲಿ ಕೆಲಸ ಸಿಗುತ್ತದೆ.
ಕೆಲಸ, ರೂಂ, ವೀಕ್ ಡೇ ಮತ್ತು ವೀಕ್ ಎಂಡ್ ಹೀಗೆಯೇ ಸಾಗುತ್ತಿರುತ್ತದೆ ಜೀವನ.
Phase 1 : ಒಂದು ಮನೆ, ನಾಲ್ಕು ಜನ.


ನಿಧಾನವಾಗಿ ದಿನ, ವರುಷ ಉರುಳಿದಂತೆ ಆ ನಾಲ್ಕೈದು ಜನರಲ್ಲಿ ಒಬ್ಬನಿಗೆ ಮದುವೆ ಫಿಕ್ಸ್ ಆಗುವ ಕಾಲ ಹತ್ತಿರ ಬರುತ್ತದೆ." ಮದುವೆ ಆದ ಮೇಲೆ ನಾನು ಬೇರೆ ಕಡೆಗೆ ಶಿಫ್ಟ್ ಆಗುತ್ತೀನಿ" ಅಂತ ಅವನು ಉಳಿದವರಿಗೆ ಒಂದು ಸಣ್ಣ hint ಕೊಡುತ್ತಾನೆ. ಅವನ ಮದುವೆ ಆಗುತ್ತದೆ. 2BHK ಇರುವ ಮನೆಗೆ ಅವನ ಸಂಸಾರ ದ ಸ್ಥಾನ ಪಲ್ಲಟ ಆಗುತ್ತದೆ. ಅಷ್ಟು ಹೊತ್ತಿಗಾಗಲೇ ಒಂದು Two wheeler ಸಹ ಅವನ ಮನೆಯ ಮುಂದೆ ಬಂದು ನಿಂತಿರುತ್ತದೆ.
Phase 2:  ಒಂದು 2 BHK ಮನೆ, ಒಂದು two wheeler, ಇಬ್ಬರು ಜನ ( ಹೊಸತಾಗಿ ಮದುವೆಯಾದ ಗಂಡ - ಹೆಂಡತಿ )
ಸ್ವಲ್ಪ ದಿನ ಗಳ ಮತ್ತಿ ಹಾಗೆಯೇ ಸಾಗುತ್ತದೆ ನವ ಜೋಡಿಗಳ ಸಂಸಾರ. ವೀಕೆಂಡ್ ನಲ್ಲಿ ಆಫೀಸಿನ ಕೆಲಸ ಮತ್ತು ವೀಕೆಂಡ್ ನಲ್ಲಿ ಟ್ರಿಪ್ ಅಥವಾ ಮೂವಿ ಅಥವಾ ನೆಂಟರ ಮನೆ ಗೆ ಭೇಟಿ ಹೀಗೆ ಸಾಗುತ್ತಿರುತ್ತದೆ... ಒಂದೆರಡು ವರ್ಷಗಳ ಬಳಿಕ ಮನೆಯ ಮುಂದೆ Two wheeler ನ ಜೊತೆಗೆ ಒಂದು Four wheeler ಸಹ ಬಂದು ನಿಂತಿರುತ್ತದೆ.
Phase 3: ಒಂದು ಮನೆ, ಇಬ್ಬರು ಜನ, ಒಂದು Two wheeler , ಒಂದು Four wheeler
ಒಂದೆರಡು ವರ್ಷಗಳ ಬಳಿಕ ಮಕ್ಕಳಾಗುತ್ತೆ , ಅಲ್ಲಿಂದ ನಿಜವಾದ ಸಮಸ್ಯೆ ಶುರು ಆಗುತ್ತೆ. ತಂದೆ ತಾಯಿ ಇಬ್ಬರು ಕೆಲಸಕ್ಕೆ ಹೋದರೆ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳೋರು ಯಾರು? ಅದರಲ್ಲೂ ಬೆಂಗಳೂರಿನಂತ ನಗರದಲ್ಲಿ ಒಬ್ಬರೇ ದುಡಿದರೆ ಬದುಕು ಸಾಗಿಸುವುದು ಕಷ್ಟ, ಅದೂ ಸಾಫ್ಟ್ ಲೈಫ್ ಗೆ ಹೊಂದಿ ಕೊಂಡ ಮೇಲೆ! ಅವಾಗ ಶುರು ಆಗುತ್ತೆ ಹಗ್ಗ ಜಗ್ಗಾಟ .  ಊರಿನಲ್ಲಿರುವ ಅಪ್ಪ - ಅಮ್ಮ ನನ್ನು ಬೆಂಗಳೂರಿಗೆ ಕರೆತರುವುದು.
ಅವರಿಗೆ ಬೆಂಗಳೂರಿನ ವಾತಾವರಣ ಇಷ್ಟ ಇಲ್ಲ ದಿದ್ದರೂ ಮಕ್ಕಳು ಮತ್ತು ಮೊಮ್ಮಕ್ಕಳ ಸಲುವಾಗಿ ಆದರೂ ಬರುತ್ತಾರೆ.
Phase 4: ಒಂದು ಮನೆ, ಒಂದು Two wheeler , ಒಂದು Four wheeler , ಆರು ಜನ ( ಗಂಡ - ಹೆಂಡತಿ, ಅಪ್ಪ - ಅಮ್ಮ , ಇಬ್ಬರು ಮಕ್ಕಳು ).
ಈಗ ಸ್ವಲ್ಪ ಮೊದಲನೇ ಪ್ಯಾರ ಓದಿ. ಇದೆ ಥರ ಪ್ರತಿಯೊಬ್ಬರೂ ಸಹ ಒಂದರಿಂದ ಆರು ಜನರಾಗುತ್ತಾರೆ. ಇನ್ನು ಒಂದು ಸಲ ಮಕ್ಕಳ ಓದು ಶುರು ಆಯಿತು ಅಂದ್ರೆ ಯಾರು ಬೆಂಗಳೂರಿನಿಂದ ಕಾಲು ಕಿತ್ತುವುದಿಲ್ಲ. ಅಲ್ಲಿಗೆ ಅವರೆಲ್ಲರೂ ಸಹ ಬೆಂಗಳೂರಿನವರಾಗಿ ಬಿಡುತ್ತಾರೆ. ಇದೆ ರೀತಿ ಪ್ರತಿ ವರ್ಷವೂ ಸಾವಿರಾರು ಜನರ ಆಗಮನ ಬೆಂಗಳೂರಿನ ಕಡೆಗೆ ನಡೆಯುತ್ತದೆ. ಬೆಂಗಳೂರಿನಲ್ಲಿ ಮೂಲ ಬೆಂಗಳೂರಿ ನವರಿಗಿಂತ ವಲಸೆ ಬಂದವರೇ ಹೆಚ್ಚು .
ಇದೆ ಕೇವಲ ಬೆಂಗಳೂರಿನ ಕಥೆ ಮಾತ್ರ ಅಲ್ಲ , ದೇಶದಲ್ಲಿ ತುಂಬಾ ಸ್ಪೀಡ್ ಆಗಿ ಬೆಳೆಯುತ್ತಿರುವ ಎಲ್ಲ ನಗರ ಗಳ ಕಥೆ ಸಹ ಇದೆ.
ಈ ವಾರದ ಬಿಲ್ಡ್ ಲೇಬಲ್ : ನಾವು ಈ ಥರ ಬಂದು ಬಂದೆ ಬೆಂಗಳೂರಿನ ಜನಸಂಖ್ಯೆ ಇವತ್ತು ೧ ಕೋಟಿ ಮುಟ್ಟಿದೆ.

Thursday, November 13, 2014

ಅಂಕಣ ೩೮ : ಕನ್ನಡ ಕಟ್ಟುವ ಸಣ್ಣ - ಪುಟ್ಟ ಕೆಲಸ

ಭಾಷೆ ಬಲಗೊಳ್ಳಬೆಕಾದರೆ, ಭಾಷೆ ಆರ್ಥಿಕ ಸದೃಡ ವಾಗಬೇಕು ಅನ್ನೋದನ್ನ ಕಳೆದ ವಾರದ ಅಂಕಣದಲ್ಲಿ ನೋಡಿದೆವು. ಆದರೆ ಹಾಗಾಗಬೇಕಂದರೆ ನಾವೇನು ಬೆಟ್ಟ ಕುಟ್ಟಿ ಪುಡಿ ಮಾಡಬೇಕಾಗಿಲ್ಲ. ನಮ್ಮ ದಿನ ಜೀವನದಲ್ಲಿ ಒಂದಿಷ್ಟು ಬದಲಾವಣೆ ತಂದರೆ ಸಾಕು. ಅಂತಹ ಬದಲಾವಣೆಗಳು ಯಾವವು ಅನ್ನೋದನ್ನ ಈ ಅಂಕಣದಲ್ಲಿ ನೋಡೋಣ:

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೧ : ಭಾಷೆ ಬಲಗೊಳ್ಳಬೆಕಾದರೆ ಅದರಿಂದ “ಅನ್ನ” ಹುಟ್ಟಬೇಕು.“ಅನ್ನ” ಹುಟ್ಟಬೇಕಾದರೆ ಭಾಷೆ ಆರ್ಥಿಕವಾಗಿ ಬಳಕೆಯಲ್ಲಿರಬೇಕು.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೨ :ನೀವು ಬೆಂಗಳೂರಿನಲ್ಲಿದೀರಿ ಅಂದರೆ ದಿನಕ್ಕೆ ಕನಿಷ್ಠ ಪಕ್ಷ ಎರಡಾದರೂ " ಜಾಹಿರಾತಿನ ಕರೆಗಳು" ನಿಮ್ಮ ಮೊಬೈಲ್ ಗೆ ಬರುತ್ತವೆ. ಅವುಗಳಿಗೆ ಉತ್ತರಿಸಿ. " ನನಗೆ ಇಂಗ್ಲಿಷ್ ಬರುವುದಿಲ್ಲ, ದಯವಿಟ್ಟು ನನ್ನ ಜೊತೆ ಕನ್ನಡ ದಲ್ಲಿ ಮಾತಾಡ್ತೀರ ಅಂತ ಕೇಳಿ". ನಿಮ್ಮ ಈ ಮಾತಿನಿಂದ ಆ ಕಂಪನಿಯ ಕಾಲ್ ಸೆಂಟರ್ ನಲ್ಲಿ ಒಬ್ಬ ಕನ್ನಡಿಗ ನಿಗೆ ಕೆಲಸ ದೊರೆಯುತ್ತದೆ.



ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೩ : ನೀವು ಓದುತ್ತೀರೋ - ಬಿಡುತ್ತೀರೋ, ನೀವು ಪ್ರಯಾಣ ಮಾಡುವಾಗ ಕನ್ನಡ ಒಂದು ಪುಸ್ತಕ ( ಕಥೆ - ಕಾದಂಬರಿ) , ಅಥವಾ ಕನಿಷ್ಠ ಪಕ್ಷ ಕನ್ನಡ ದಿನಪತ್ರಿಕೆ ನಿಮ್ಮ ಕೈಯಲ್ಲಿರಲಿ. ನಾಚಿಕೆ ಬೇಡ. ಒಂದು ಹೊಸ ಟ್ರೆಂಡ್ ಸೃಷ್ಟಿ ಮಾಡೋಕೆ ಯಾರ ದಾರಿಯು ಕಾಯಬೇಕಾಗಿಲ್ಲ. ನಾವೇ ಶುರು ಮಾಡಬಹುದು.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೪:  ಕನ್ನಡ ಭಾಷೆ ಗೊತ್ತಿಲ್ಲ ದಿರುವವರು, ಕನ್ನಡ ದಲ್ಲಿ ಮಾತಾನಾಡಲು ಪ್ರಯತ್ನ ಪಟ್ಟಾಗ ಅವರನ್ನ ನೋಡಿ ನಗುವುದು ಬೇಡ. ಅವರನ್ನ ಪ್ರೋತ್ಸಾಹಿಸಿ. ಚಿಕ್ಕ ಮಗುವಾಗಿದ್ದಾಗ ನೀವು ಸಹ ಮೊದಲನೆಯ ಸಲವೇ ಎಲ್ಲವನ್ನು ಸರಿಯಾಗಿ ಮಾತಾಡಿರಲಿಲ್ಲ. ನೆನಪಿರಲಿ.


ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೫: ಕನ್ನಡ ಕಟ್ಟುವ ಕೆಲಸದಲ್ಲಿ ನಮ್ಮ ಅನೇಕ ಹಿರಿಯರ ಕೊಡುಗೆ ಅವಿಸ್ಮರಣೀಯ ಆದರೆ ಇವತ್ತು ನಾವು ಕೇಳಿಕೊಳ್ಳಬೇಕಾದ ಬಹು ಮುಖ್ಯ ಪ್ರಶ್ನೆ : ನಾವು ಬರೀ ನಮ್ಮ ಹಿರಿಯರ ನ್ನು ಸ್ಮರಿಸುತ್ತ ಕುಳಿತು ಬಿಟ್ಟಿದ್ದೆವಾ ಅಥವಾ ಇವತ್ತು ಕನ್ನಡ ಕಟ್ಟುವ ಕೆಲಸ ದಲ್ಲಿ ನಾವೂ ನಮ್ಮ ಪಾಲಿನ ಕೆಲಸ ಮಾಡ್ತಾ ಇದ್ದೀವಾ? ಅನ್ನೋದು.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೬: "ಅಭಿಮಾನ"ಕ್ಕಿಂತ "ಅನ್ನ" ದೊಡ್ಡದು. ಅಭಿಮಾನ ಮನಸ್ಸಿನಲ್ಲಿರಲಿ, ಆದರೆ ಕನ್ನಡ ದಿಂದ "ಅನ್ನ" ಹುಟ್ಟು ಹಾಕುವುದು ಹೇಗೆ? ಅನ್ನುವ ಪ್ರಶ್ನೆಗೆ ಉತ್ತರ ನಮ್ಮ ತಲೆ ಸದಾ ಆಲೋಚಿಸುತ್ತಿರಲಿ.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೭ : ಬೆಂಗಳೂರಿನಲ್ಲಿ ಆದಷ್ಟು ನಿಮ್ಮ ಮಾತು "ಕನ್ನಡ ದಲ್ಲಿರಲಿ" ( ಬೇರೆ ಭಾಷೆ ಬರುತ್ತಿದ್ದರೂ) ಇದರಿಂದ ವಲಸಿಗರೂ ಕನ್ನಡ ಕಲಿಯುತ್ತಾರೆ.ನಾವು ಕನ್ನಡ ದಲ್ಲಿ ಮಾತಾಡದೆ ಹೋದರೆ, ಕನ್ನಡ ಭಾಷೆ ಕಲಿಯಲು ಇಷ್ಟ ಪಡುವವರಿಗೆ  ನೀವು ವಂಚಿಸಿ ದಂತಾಗುತ್ತದೆ . ಭಾಷೆಯನ್ನೇ ನಮ್ಮಲ್ಲೇ ಹಿಡಿದಿಟ್ಟು ಸ್ವಾರ್ಥಿಗಳಾಗೊದು ಬೇಡ. ಬೇರೆಯವರೂ  ಕಲಿಯಲಿ. ನಾಲ್ಕಾರು ಜನ ಕಲಿಯಲಿ. ಹರಿಯಲು ಬಿಡಿ.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೮ : ಮಾಲ್ ಇರಲಿ,ಏರ್ಪೋರ್ಟ್ ಇರಲಿ, ಬಸ್ ಸ್ಟಾಂಡ್ ಇರಲಿ, ಮಲ್ಟಿಪ್ಲೆಕ್ಸ್ ಥೇಟರ್ ಇರಲಿ... ಕನ್ನಡ ದಲ್ಲಿ ಮಾತಾಡ್ತಾ ಹೋಗಿ, ಮಾತಾಡೋದಕ್ಕೆ ಹಿಂಜರಿಕೆ ಅಥವಾ ಕೀಳರಿಮೆ ಬೇಡ.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೯:
"ನನ್ನೊಬ್ಬನಿಂದ ಮಾತ್ರ ಕನ್ನಡ ಕಟ್ಟುವ ಕೆಲಸ ಹೇಗೆ ಸಾಧ್ಯ?" ಅನ್ನೋ ಮಾತು ಬೇಡ. ಒಂದು ಸಲ ಕೆಳಗಿನ ಪುಸ್ತಕ ಗಳನ್ನು ಓದಿ, ಒಬ್ಬರೇ ಕನ್ನಡ ಕಟ್ಟುವ ಕೆಲಸವನ್ನು ಹೇಗೆ ಮಾಡಿದ್ದಾರೆ ಅಂತ ಗೊತ್ತಾಗುತ್ತೆ.  
೦೧. ಸರ್. ಎಂ. ವಿಶ್ವೇಶ್ವರಯ್ಯ ನವರ " ನನ್ನ ವೃತ್ತಿ ಜೀವನದ ನೆನಪುಗಳು ( ಅನುವಾದಿತ ಕೃತಿ )"
೦೨. ಚಿತ್ರ ನಟ ಅನಂತನಾಗ್ ಅವರು ಬರೆದ "ನನ್ನ ತಮ್ಮ ಶಂಕರ "
೦೩. ಶಿವರಾಮ ಕಾರಂತಜ್ಜರ " ಹುಚ್ಚು ಮನಸಿನ ಹತ್ತು ಮುಖಗಳು "
೦೪. ಎಲ್ಲದಕ್ಕಿಂತ ಹೆಚ್ಚಾಗಿ ಆಲೂರು ವೆಂಕಟರಾಯರ " ನನ್ನ ಜೀವನದ ಸ್ಮೃತಿಗಳು" . ಮೊದಲು ನಿಮ್ಮೆರಡು ಕೈಗಳು ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗಲಿ, ನಂತರ ಹಲವಾರು ಕೈಗಳು ನಿಮ್ಮ ಜೊತೆ ಸೇರುತ್ತವೆ.
ಅಂದಹಾಗೆ " ಮಾಲ್ಗುಡಿಯ ಮಹಾನ್ ನಿರ್ದೇಶಕ : ಶಂಕ್ರಣ್ಣ ನಿಗೆ ಹುಟ್ಟು ಹಬ್ಬದ ಶುಭಾಶಯಗಳು".

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೦: ಕನ್ನಡ "ಅನ್ನ" ದ ಭಾಷೆ ಯಾಗಬೇಕಾದರೆ ಪ್ರತಿ ವರ್ಷ " ಸಾಹಿತ್ಯ ಸಮ್ಮೇಳನಗಳು" ನಡೆದಂತೆ, " ಉದ್ಯೋಗ ಸಮ್ಮೇಳನ" ಗಳು ನಡೆಯಬೇಕು. ಇದರಲ್ಲಿ ಜಗತ್ತಿನ ಎಲ್ಲ ಕಡೆಗಿರುವ " ಕನ್ನಡ ಉದ್ಯಮಿಗಳನ್ನು" ಆಹ್ವಾನಿಸಬೇಕು. ಭಾಷೆಯಿಂದ "ಅನ್ನ" ಹುಟ್ಟು ಹಾಕುವ ಬಗ್ಗೆ ಚರ್ಚೆಗಳಾಗಬೇಕು. 
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೧: ನೀವು ಪಕ್ಕದ ರಾಜ್ಯಕ್ಕೆ ಹೋದಾಗ, ಬಸ್ ಸ್ಟಾಂಡ್ ನಲ್ಲಿ , ರೈಲ್ವೆ ಸ್ಟೇಷನ್ ನಲ್ಲಿ ಕನ್ನಡ ಪತ್ರಿಕೆ ಸಿಗುತ್ತವೆಯೋ ಅಂತ ಕೇಳಿ ನೋಡಿ. ಇವತ್ತು ಸಿಗದೇ ಇರಬಹುದು, ಹತ್ತು ಜನ ಪ್ರತಿ ಸಲ ಕೇಳಲು  ಶುರು ಮಾಡಿದಾಗ, ಬೇಡಿಕೆ ಹೆಚ್ಚಾದಂತೆ ಅಲ್ಲಿಯೂ ಕನ್ನಡ ಪತ್ರಿಕೆ ಗಳು ಸಿಗುವಂತಾಗುತ್ತವೆ.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೨: ಒಂದು ಕನ್ನಡ ಸಿನಿಮಾ ನೋಡಿದೀರಾ? ಇಷ್ಟವಾಯಿತಾ ?. ನಾಲ್ಕು ಜನಕ್ಕೆ ತಿಳಿಸಿ. ಫೇಸ್ ಬುಕ್ ನಲ್ಲಿ ಬರೆಯಿರಿ. ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ. ಇಷ್ಟವಾಗಲಿಲ್ಲವಾ? ಸುಮ್ಮನಿದ್ದುಬಿಡಿ.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೩: ಪ್ರವಾಸಕ್ಕೆ ಬೇರೆ ಊರುಗಳಿಗೆ ಹೋಗುವುದಕ್ಕಿಂತ ನಮ್ಮ ರಾಜ್ಯ ಮೊದಲು ನಮಗೆಷ್ಟು ಗೊತ್ತು ಅಂತ ಪ್ರಶ್ನೆ ಹಾಕಿ ಕೊಳ್ಳುವುದು ಉಚಿತ.
ನಮ್ಮಲ್ಲಿ ಎಷ್ಟು ಜನ, ಮೈಸೂರಿನವರು ಬಾಗಲಕೋಟೆಗೆ, ಚಾಮರಾಜ ನಗರದವರು ಗುಲ್ಬರ್ಗಾಕ್ಕೆ, ಬೀದರಿನವರು ಕೊಡಗಿಗೆ, ಬೆಂಗಳೂರಿನವರು ರಾಯಚೂರಿಗೆ, ಕೊಪ್ಪಳ ದವರು ಮಂಗಳೂರಿಗೆ ಹೋಗಿದ್ದೇವೆ?. ಮೊದಲು ನಮ್ಮ ಮನೆ ಯನ್ನ  ನಾವು ಸರಿಯಾಗಿ ತಿಳಿದು ಕೊಳ್ಳುವುದು ಉಚಿತ ಅನಿಸುತ್ತೆ.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೪:ನೀವು ಕರ್ನಾಟಕದಿಂದ ಆಚೆ ಇದ್ದೀರಾ ಅಂದರೆ ನಿಮ್ಮ ಮನೆಯ ಭಾಷೆ ಕನ್ನಡ ವಾಗಿರಲಿ.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೫:ನೀವು ಬೇರೆ ರಾಜ್ಯದಲ್ಲಿ ಇರುತ್ತಿದ್ದೀರಿ ಅಂದರೆ ನಿಮ್ಮ ಮಕ್ಕಳಿಗೆ ಕನ್ನಡ ಓದು ಮತ್ತು ಬರಹ ಹೇಳಿ ಕೊಡಬಹುದು.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೬: ಕನ್ನಡ ಪರ ಹೋರಾಟ ಗಾರರನ್ನು ಗೌರವಿಸಿ. ಅವರಿಗೂ ಮನೆ ಮಟ ಎಲ್ಲ ಇರುತ್ತದೆ. ಅವರ ಪ್ರತಿಭಟನೆಗಳನ್ನ ಮನೆಯಲ್ಲಿ ಆರಾಮಾಗಿ  ಟಿ ವಿ  ಮುಂದೆ ಕುಳಿತು ನೋಡಿ, ಹೀಯಾಳಿಸುವುದು ಬೇಡ.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೭: ನಾಲ್ಕು ಜನ ಸ್ನೇಹಿತರೊಟ್ಟಿಗೆ ಬೆರೆತಾಗ " ಇವತ್ತಿನ ದಿನದಲ್ಲಿ ಕನ್ನಡ ಕ್ಕೆ ಮಾರ್ಕೆಟ್ ವ್ಯಾಲ್ಯೂ" ತರುವುದು ಹೇಗೆ ಎನುವುದನ್ನು ಚರ್ಚಿಸಿ.ಕನ್ನಡ - ಭಾಷೆ - ನೆಲ - ಜಲ ಅನ್ನೋದನ್ನ ಬಹಳಷ್ಟು ಕೇಳಿದ್ದೇವೆ . ಆದರೀಗ ಕನ್ನಡ ದಿಂದ "ಅನ್ನ" ಹುಟ್ಟು ಹಾಕುವ ಬಗೆ ಹೇಗೆ ಅನ್ನುವುದನ್ನ ಚಿಂತನೆ ಮಾಡವುದು ಬಹಳ ಮುಖ್ಯ.

ವಾರದ ಬಿಲ್ಡ್ ಲೇಬಲ್ : ಮೇಲೆ ಹೇಳಿದುದರಲ್ಲಿ ಕನಿಷ್ಠ ಒಂದನ್ನಾದರೂ ನಾವು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಅದಕ್ಕಿಂತ ದೊಡ್ಡ ಕನ್ನಡದ ಕೆಲಸ ಬೇರೊಂದಿಲ್ಲ.

Thursday, November 6, 2014

ಅಂಕಣ ೩೭ : ಸಾಫ್ಟ್ ಲೋಕದಲ್ಲಿ ಕನ್ನಡ

ಹೌದು ನೀವು ನೀರಿಕ್ಷಿಸಿದಂತೆಯೇ, ನವೆಂಬರ್ ತಿಂಗಳಲ್ಲಿನ ಅಂಕಣಗಳು “ ಕನ್ನಡ” ದ ಕುರಿತಾಗಿ ಇರುತ್ತವೆ. ವಿಶೇಷವಾಗಿ “ಸಾಫ್ಟ್ ಲೋಕ ಮತ್ತು ಕನ್ನಡ” ದ ನಡುವಿನ ವಿಷಯದ ಬಗ್ಗೆ. ಭಾಷೆ ಎನ್ನುವುದು ಹುಟ್ಟಿದ್ದು ನಮ್ಮ ಭಾವನೆಗಳನ್ನ ವ್ಯಕ್ತ ಪಡಿಸಲು. ಆದರೆ ಇತ್ತೀಚಿನ ದಿನಗಳಲ್ಲಿ ಭಾಷೆ ಎನ್ನುವುದು ಒಂದು ಜನಾಂಗದ ಅಸ್ತಿತ್ವದ ಪ್ರಶ್ನೆ ಆಗಿರುವುದು ಮಾತ್ರ ಸುಳ್ಳಲ್ಲ. ಜಾಗತೀಕರಣದ ಸಂದರ್ಭದಲ್ಲಿ ಪ್ರಬಲವಾದ ಭಾಷೆಯಿಂದ ದುರ್ಬಲವಾದ ಭಾಷೆ ಮೇಲೆ ದಾಳಿ ನಡೆಯುತ್ತಲೇ ಇದೆ. ಆದರೆ ಒಂದು ಭಾಷೆ ಪ್ರಬಲ ಅಥವಾ ದುರ್ಬಲ ಆಗುವುದಾದರೂ ಹೇಗೆ? ತೀರ ಸರಳವಾಗಿ ಹೇಳಬೇಕೆಂದರೆ : ಯಾವುದು ಹೆಚ್ಚು ಹೆಚ್ಚು ಬಳಕೆಯಲ್ಲಿ ಇರುತ್ತದೆಯೋ ಅದು ದಿನೇ  ದಿನೇ  ಬೆಳೆಯುತ್ತಾ ಹೊಗುತ್ತದೆ. ಯಾವುದು ಬಳಕೆಯಲ್ಲಿ ಇಲ್ಲದೆ ಮೂಲೆಯಲ್ಲಿ ಬಿದ್ದಿರುತ್ತದೋ ಅದು ದಿನೇ  ದಿನೇ  ಕೊಳೆಯುತ್ತಾ ಹೋಗುತ್ತದೆ.


ಇನ್ನು ಕನ್ನಡ ದ ವಿಷಯಕ್ಕೆ ಬರುವುದಾದರೆ:
“ ನಮ್ಮದು ಅಷ್ಟು ವರ್ಷಗಳ ಭಾಷೆ, ಒಂದು ಕಾಲದಲ್ಲಿ ಹೀಗಿತ್ತು, ಒಂದು ಕಾಲದಲ್ಲಿ ಹಾಗಿತ್ತು, ನಮ್ಮ ಭಾಷೆಗೆ ಅಷ್ಟು ಪ್ರಶಸ್ತಿ ಗಳು ಬಂದಿವೆ, ಹಾಗಾಯ್ತು, ಹೀಗಾಯ್ತು” ಅಂತ ಬರೀ ಮಾತಾಡುತ್ತ ಹೋಗುವ ಬದಲು ಇವತ್ತು ನನ್ನ ಭಾಷೆಯ ಉಳಿವಿಗೆ, ಬೆಳೆಸುವಿಕೆಗೆ ನಾನೇನು ಮಾಡ್ತಾ ಇದ್ದೀನಿ? ಅಥವಾ ಮಾಡಬೇಕು ಎನ್ನುವುದು ತುಂಬಾ ಮುಖ್ಯ. ಯಾರೋ ಬಂದು ಏನೋ ಮಾಡುತ್ತಾರೆ ಎನ್ನುವುದಕ್ಕಿಂತ, ಪ್ರತಿಯೊಬ್ಬರೂ ಸಹ ಭಾಷೆಯ ಏಳ್ಗೆಗೆ ಏನು “ ನಾನೇನು ಮಾಡಬಹುದು?” ಅಂತ ಯೋಚಿಸುವುದು ತುಂಬಾ ಸೂಕ್ತ. ನಿಜ ನಮ್ಮ ಪೂರ್ವಿಕರೆಲ್ಲರೂ ಕನ್ನಡಕ್ಕೆ ಅಗಾಧವಾದ ಸಾಧನೆ, ಹೋರಾಟ  ಗಳನ್ನ ಮಾಡಿ ನಮಗೆ ಆ ಕೀರ್ತಿಯನ್ನ ಬಿಟ್ಟುಹೋಗಿದ್ದಾರೆ. ಆದರೆ ನಾವು ಬರೀ ಅದೇ ಜಪ ಮಾಡುವ ಬದಲು ನಮ್ಮಿಂದ ಏನಾಗುತ್ತದೋ ಅದನ್ನ ಮಾಡುವುದು ಚೊಲೊ.

ಹೀಗಂದ ತಕ್ಷಣ ನಮ್ಮ ಇರುವ ಕೆಲಸವನ್ನ ಬಿಟ್ಟು ಬರೀ ಭಾಷೆ ಕೆಲಸಕ್ಕೆ ನಿಂತುಬಿಡಬೇಕು ಅಂತ ಅಲ್ಲ. ಅದು ವಾಸ್ತವತೆಯೂ ಅಲ್ಲ. ಆದರೆ ನಮ್ಮ ದಿನ ನಿತ್ಯದ ಕೆಲಸಗಳ ಮಧ್ಯೆಯೇ ನಾವು ಹೇಗೆ ನಮ್ಮ ಕೈಲಾದ ಪ್ರಯತ್ನವನ್ನ ಮಾಡಬಹುದು ಅನ್ನೋದು ತುಂಬಾ ಮುಖ್ಯ. ಅಷ್ಟಕ್ಕೂ ಹನಿ ಹನಿ ಕೂಡಿದರೆ ಹಳ್ಳ ಎನ್ನುವ ಮಾತನ್ನ ನಮ್ಮ ಹಿರಿಯರಿಂದ ಕೇಳಿದ್ದೇವೆ. ಈಗೇನಿದ್ದರೂ ಅದನ್ನ ಕಾರ್ಯ ರೂಪಕ್ಕೆ ತರುವ ಪ್ರಯತ್ನ ಮಾಡಬೇಕು .
ಇವತ್ತು ನಮ್ಮ ಮುಂದಿರುವ ಅತೀ ಮುಖ್ಯವಾದ ಪ್ರಶ್ನೆ: ಭಾಷೆಯಿಂದ “ಅನ್ನ”  ಹುಟ್ಟು ಹಾಕುವ ಬಗೆ ಹೇಗೆ?
ಈ ಪ್ರಶ್ನೆ ಯಾಕೆ ಮುಖ್ಯ ಆಗುತ್ತದೆ ಅಂದರೆ ಒಂದು ಸಲ ಭಾಷೆಗೆ “ಅನ್ನ”  ಹುಟ್ಟು ಹಾಕೋ ಶಕ್ತಿ ಬಂದರೆ ಉಳಿದೆಲ್ಲ ವಿಷಯಗಳು ತನ್ನ ಪಾಡಿಗೆ ತಾನೇ ದಾರಿಗೆ ಬರಲು ಶುರು ಆಗುತ್ತವೆ. ನಮ್ಮ ನಮ್ಮ ಭಾವನೆಗಳು ಏನೇ ಇರಲಿ, ಭಾವನೆಗಳಿಗಿಂತ “ಬದುಕು” ಎಷ್ಟೋ ಸಲ  ಮುಖ್ಯವಾಗುತ್ತದೆ. “ಬದುಕು” ಅಂದ ಕೂಡಲೇ “ ಅನ್ನ” ದ ಪ್ರಶ್ನೆ ಬರುತ್ತದೆ. ಅದಕ್ಕೆ ಮೊದಲು ನಾವು ಕನ್ನಡ ದಿಂದ “ಅನ್ನ” ಹುಟ್ಟು ಹಾಕುವ ಬಗೆ ಹೇಗೆ ಎನ್ನುವ ವಿಷಯದ ಮೇಲೆ ಆಲೋಚನೆ, ಚರ್ಚೆಗಳು ನಡೆಯಬೇಕಾಗಿದೆ.

ಭಾಷೆಯಿಂದ ಅನ್ನ ಹುಟ್ಟು ಹಾಕಬೇಕಾದರೆ, ಮೊದಲು ಭಾಷೆ ಆರ್ಥಿಕವಾಗಿ ಬಲಿಷ್ಠ ಗೊಳ್ಳಬೇಕು. ಭಾಷೆ ಆರ್ಥಿಕವಾಗಿ ಬಲಗೊಳ್ಳಬೆಕಾದರೆ “ ಆರ್ಥಿಕವಾಗಿ ಭಾಷೆ ಹೆಚ್ಚು ಹೆಚ್ಚು ಬಳಕೆಯಲ್ಲಿರಬೇಕು” . ಹಾಗಾಗಬೇಕೆಂದರೆ ನಾವೆಲ್ಲಾ ಬೆಟ್ಟ ಕಡಿದು ಪುಡಿ ಮಾಡಬೇಕಾಗಿಲ್ಲ, ಬದಲಿಗೆ ನಮ್ಮ ದಿನ ನಿತ್ಯದ ಜೀವನದಲ್ಲಿ “ ಅರ್ಥಿಕ ವಾಗಿ ಕನ್ನಡಕ್ಕೆ ಮೊದಲ ಸ್ಥಾನ ಕೊಟ್ಟರೆ ಸಾಕು”
ಈ ನಿಟ್ಟಿನಲ್ಲಿ ಸಾಫ್ಟ್ ಲೋಕದ ಜನ ಸ್ವಲ್ಪ ಗಮನ ಹರಿಸಬೇಕಾಗಿದೆ. ಇನ್ನು ಸಾಫ್ಟ್ ಲೋಕದ ವಿಷಯಕ್ಕೆ ಬಂದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಸ್ವಲ್ಪ ಮೈ ಜಾಡಿಸಿಕೊಂಡು ಮೇಲೆಳುತ್ತಿದೆ ಅನ್ನೋದು ಸಂತೋಷದ ವಿಷಯ ವಾದರೂ ಇದು ಇನ್ನು ಹೆಚ್ಚಾಗಬೇಕು. . ಕನ್ನಡ ದ ಕಡೆಗೆ ಯುವ ಪೀಳಿಗೆ ನಿಧಾನವಾಗಿ ವಾಲುತ್ತಿದ್ದಾರೆ. ಎಲ್ಲ ಕಡೆಗೂ ಕನ್ನಡದ ಗಾಳಿ ಬೀಸಲು ಶುರು ಆಗಿದೆ. ಆದರೆ ಇಷ್ಟಕ್ಕೆ ಖುಷಿ ಪಟ್ಟು ಸುಮ್ಮನೆ ಕೂಡುವ ಹಾಗಿಲ್ಲ. ಯಾಕಂದರೆ ಇದೊಂದು ನಿರಂತರ ಪ್ರಯತ್ನ. ಸಾಗುತ್ತಲೇ ಇರಬೇಕು.


ವಾರದ ಬಿಲ್ಡ್ ಲೇಬಲ್ :
ನಿಮ್ಮ ಪ್ರಶ್ನೆ : ಇದೆಲ್ಲ ಸರಿ, ಅಂಕಣ ವೇನೋ ಚೆನ್ನಾಗಿದೆ ಅನಿಸುತ್ತೆ. ಆದರೆ ನಾವು ನಾವಿದ್ದಲ್ಲಿಯೇ, ನಮ್ಮ ದಿನನಿತ್ಯದ ಜೀವನದಲ್ಲಿ , ನಮ್ಮ ಕೈಲಾದಷ್ಟು ಕನ್ನಡಕ್ಕಾಗಿ ಏನು ಮಾಡಬಹುದು?
ಉತ್ತರ : ಈ ಪ್ರಶ್ನೆ ನಿಮ್ಮ ಮನದಲ್ಲಿ ಈಗಾಗಲೇ ಬಂದಿದ್ದಾರೆ ಮೊದಲು ನಿಮಗೆ ಅಭಿನಂದಿಸುತ್ತೇನೆ. ಹೌದು  ನಾವೆಲ್ಲರೂ ಒಂದಿಷ್ಟು ಕೆಲಸಗಳನ್ನು ಮಾಡಬುಹುದು. ಅತ್ಯಂತ ಚಿಕ್ಕ ಚಿಕ್ಕ ಕೆಲಸಗಳನ್ನು  ಕಡಿಮೆ ಸಮಯದಲ್ಲಿ ಮಾಡ ಬಹುದು. ಇದರ ಬಗ್ಗೆ ಮುಂದಿನ ವಾರ ನೋಡೋಣ.

Friday, October 24, 2014

ಅಂಕಣ ೩೬ : Soft Manager

ನೀವು ಈ ಅಂಕಣವನ್ನು ಬಹಳ ಕಣ್ಣರಳಿಸಿ ಕೊಂಡು ಓದುತ್ತಿರಿ ಅಂತ ನನಗೆ ಗೊತ್ತು. ಸಾಫ್ಟ್ ಡೈರಿ ಅಂಕಣ ದಲ್ಲಿ ಪ್ರತಿ ವಾರ ಒಂದೊಂದು ವಿಷಯದ ಬಗ್ಗೆ ಸ್ವಲ್ಪ ತಮಾಷೆಯಾಗಿ ಬರೆಯಲು ಶುರು ಮಾಡಿದಾಗ, ಬಹಳಷ್ಟು ಜನ ಪ್ರತಿ ವಾರ ಕೇಳಿದ ಮತ್ತು ಕೇಳುತ್ತಿರುವ ಪ್ರಶ್ನೆ ಅಂದ್ರೆ  : “ ಆರ್.ಪಿ, ಮ್ಯಾನೇಜರ್ ಬಗ್ಗೆ ಆರ್ಟಿಕಲ್ ಯಾವಾಗ ಬರುತ್ತೆ ಅಂತ!”.
ಅವರು ಕೇಳೋ ಧಾಟಿಯಲ್ಲಿ ಗೊತ್ತಾಗುತ್ತಿತ್ತು ಅವರು ಆರ್ಟಿಕಲ್ ನಲ್ಲಿ ಏನು expect ಮಾಡುತ್ತಿದ್ದಾರೆ ಅಂತ. ಅದೇನೇ ಇರಲಿ, ಸಾಫ್ಟ್ ಲೋಕದಲ್ಲಿ ಅಷ್ಟೇ ಅಲ್ಲ ಬೇರೆ ಲೋಕದಲ್ಲೂ ಸಹ  ಮ್ಯಾನೇಜರ್ ಅಥವಾ ಬಾಸ್ ಅನ್ನೋ ಹುದ್ದೆಗೆ ಒಂದು ವಿಶೇಷತೆ ಇದ್ದೆ ಇರುತ್ತದೆ. ಆದ್ದರಿಂದಲೇ ಆ  ಸೀಟಿನಮೇಲೆ ಎಲ್ಲರ ಕಣ್ಣು!


ಮ್ಯಾನೇಜರ್ ಅಥವಾ ಬಾಸ್ ಗಳ ಬಗ್ಗೆ ಒಂದಿಷ್ಟು ತಮಾಷೆಯ ಮತ್ತು ಸಾಫ್ಟ್ ಲೋಕದಲ್ಲಿ ಚಾಲ್ತಿಯಲ್ಲಿರುವ ಮಾತುಗಳನ್ನ ನೋಡೋಣ ಬನ್ನಿ :
೦೧. ನೀವು ಆಫಿಸ್ ಗೆ ಬೇಗ ಬಂದಾಗ ಗಮನಿಸದವರನ್ನು ಮತ್ತು ನೀವು ಲೇಟ್ ಆಗಿ ಬಂದಾಗ ನಿಮಗಿಂತ ಮುಚೆ ಬಂದವರನ್ನು  “ಮ್ಯಾನೇಜರ್” ಅಂತ ಕರೆಯುತ್ತಾರೆ.
೦೨. ಹೆಂಡತಿ ಮತ್ತು ಮ್ಯಾನೇಜರ್ ಗಳನ್ನೂ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸ.
೦೩.  ನೀವೆಷ್ಟೇ ಸಿಟ್ಟಾಗಿ ಅವರ ಮುಂದೆ ಹೋದರು ಅಷ್ಟೇ ಕೂಲಾಗಿ ಕೊನೆಗೆ ತಮಗೇನು ಬೇಕು ಅದರಂತೆ ನೀವು ಕೇಳುವಂತೆ ಮಾಡುವವರನ್ನು ಮ್ಯಾನೇಜರ್ ಎನ್ನುತ್ತಾರೆ.
೦೩. ಮ್ಯಾನೇಜರ್ ಗಳಿಗೆ ಇರಿಟೇಟ್ ಆಗುವುದು ಯಾವಾಗ ಗೊತ್ತಾ ? ಒಂದು ಅವರ ಕೆಲಸ ಮಾಡುತ್ತಿರುವ  excel sheet crash ಆದಾಗ, ಇನ್ನೊಂದು ಟೀಂ ಮೀಟಿಂಗ್ ನಲ್ಲಿ ಕ್ಲೈಂಟ್ ಎದುರಿಗೆ ಪ್ರಾಜೆಕ್ಟ್ ಸ್ಟೇಟಸ್ ಬಗ್ಗೆ ಯಾರಾದರೂ ಟೀಂ ಮೆಂಬರ್ ಸತ್ಯವನ್ನು ನುಡಿದಾಗ !
ಸಾಫ್ಟ್ ಲೋಕದಲ್ಲಿ ಮ್ಯಾನೇಜರ್ ಗಳು ಏನಾದರೂ ಹೇಳಿದಾಗ ಅದನ್ನ ನಾವು ಹೇಗೆ ಅರ್ಥೈಸಿಕೊಳ್ಳಬೇಕು ಅನ್ನೋದರ ಬಗ್ಗೆ ಒಂದಿಷ್ಟು ಮಾತುಗಳು ಇವೆ ನೋಡೋಣ ಬನ್ನಿ :
೦೧. “It’s a great work done by all of you “ ಅಂದ್ರೆ : “ ಇಲ್ಲಿಗೆ ಕೆಲಸ ಮುಗಿದಿಲ್ಲ, ಇದಕ್ಕಿಂತ ಎರಡರಷ್ಟು ಕೆಲಸ ಮುಂದೆ ಇದೆ ಅಂತ ಅರ್ಥ’
೦೨. “It’s in pretty good shape (client ಗೆ update ಮಾಡ್ತಾ ಇರಬೇಕಾದರೆ )” ಅಂದ್ರೆ : “ ಕೆಲಸ ಇನ್ನು ಶುರುನೆ ಮಾಡಿಲ್ಲ ಅಂತ ಅರ್ಥ.
೦೩. “Take your time but I appreciate if you can complete it ASAP” ಅಂದ್ರೆ :  ಮುಚ್ಕೊಂಡು ಇವತ್ತೇ ಕೆಲಸ ಮುಗಿಸಿ ಕೊಡು  ಅಂತ ಅರ್ಥ.
೦೪. “There are so many opportunities are waiting for you” ಅಂದ್ರೆ : ಸದ್ಯಕ್ಕೆ ಖಾಲಿ ಹೊಡಿತಾ ಇದೆ ಅಂತ ಅರ್ಥ
೦೫. “We would like to work with you in future” ಅಂದ್ರೆ : ಇವಾಗ ಹೆಚ್ಚಿಗೆ ಮಾತಾಡದೆ ಹೋಯ್ತಾ ಇರು ಅಂತ ಅರ್ಥ.
೦೬. “It’s a good question (ಯಾರಾದರೂ ಮೀಟಿಂಗ್ ನಲ್ಲಿ question ಕೇಳಿದಾಗ)” ಅಂದ್ರೆ : ಸದ್ಯಕ್ಕೆ ಉತ್ತರ ನನಗೂ ಗೊತ್ತಿಲ್ಲ ಅಂತ ಅರ್ಥ.
೦೭. "What you said is correct. Let us  work out in that way" ಅಂದ್ರೆ : “ ಮುಂದೆ ಏನಾರು ಹೆಚ್ಚು ಕಡಿಮೆ ಆದರೆ ನೀನೆ ಜವಾಬ್ದಾರಿ ಹೊತ್ಕೊಬೇಕು ಅಂತ ಅರ್ಥ.
೦೮. "you are on leave one week right? am i right?"  ಅಂದ್ರೆ : ಲೀವ್ ಸ್ವಲ್ಪ ಕಡಿಮೆ ಮಾಡ್ಕೋ ಅಂತ ಅರ್ಥ
೦೯. "It’s a team work, we will do it together" ಅಂದ್ರೆ : ಅವರನ್ನ ಹೊರತು ಪಡಿಸಿ ಅಂತ ಅರ್ಥ
೧೦. "hope you understood the situation and project deadline" ಅಂದ್ರೆ : ಜಾಸ್ತಿ ಏನು ಕ್ವೆಶ್ಚನ್ ಕೇಳದೆ ಕೆಲಸ ಶುರು ಮಾಡು ಅಂತ ಅರ್ಥ.
ತಮಾಷೆ ಸಾಕು, ಸ್ವಲ್ಪ ಮ್ಯಾನೇಜರ್ ಗಳಿಗೆ ಇರುವ ಕಷ್ಟನೂ ನೋಡೋಣ....
ಸಾಫ್ಟ್ ಲೋಕದಲ್ಲಿ ಮ್ಯಾನೇಜರ್ ಅಂದ್ರೆ ಎಕ್ಸೆಲ್ ಶೀಟ್ ಕೆಲಸ ಅಂತ ಬಹಳ ಮಂದಿಯ ವಾದ. ಆದರೆ ಅವರ ಪೋಸಿಶನ್ ನಲ್ಲಿ ಒಂದು ಸಲ ನಾವು ಕೂತು ನೋಡಿದಾಗ ನಮಗೆ ಅವರ ತ್ರಾಸ ಅರ್ಥ ಆಗುತ್ತದೆ. ಅವರದು ಬರೀ ಎಕ್ಸೆಲ್ ಶೀಟ್ ಕೆಲಸ ಅಲ್ಲ, ಒಂದೀಡಿ ಪ್ರಾಜೆಕ್ಟ್ ನ ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ ಅವರ ಮೇಲೆ ಇರುತ್ತದೆ. ತಮ್ಮ ಪಾಡಿಗೆ ತಾವು ಕೆಲಸ ಮಾಡಿ ದಿನದ ಕೊನೆಗೆ ರಿಪೋರ್ಟ್ ಒಪ್ಪಿಸಿ ಹೋಗುವ ಕೆಲಸಕ್ಕಿಂತಲೂ ಜಾಸ್ತಿ.
ಎಲ್ಲರ ಕೆಲಸದ ಬಗ್ಗೆಯೂ update ತಗೋಬೇಕು, ಪ್ರಾಜೆಕ್ಟ್ ನ ಪ್ರತಿ ಹಂತವೂ ಯಾವ ರೀತಿ ಸಾಗ್ತಾ ಇದೆ ಅಂತ ಒಂದು ಟ್ರ್ಯಾಕ್ ಇಟ್ಟುಕೊಂಡಿರಬೇಕು , ಮತ್ತು ಅದು ಲೈನ್ ತಪ್ಪಿ ಹೋಗುತ್ತಿದ್ದರೆ ಅದನ್ನ ತಿರುಗಾ ಮತ್ತೆ ಲೈನ್ ಗೆ ತಂದು ನಿಲ್ಲಿಸಬೇಕು. ಪ್ರತಿಯೊಬ್ಬ ಟೀಂ ಮೆಂಬರ್ ನ ನಾಡಿ ಮಿಡಿತ ತಿಳಿದುಕೊಂಡಿರಬೇಕು, ಅವರ ಮುನಿಸುಗಳನ್ನು ತಣ್ಣಗೆ ಮಾಡಬೇಕು. ಅವರ ಸಿಟ್ಟನ್ನು ಶಮನ ಗೊಳಿಸಬೇಕು.  ಕ್ಲೈಂಟ್ ಗಳಿಗೆ ಪ್ರಾಜೆಕ್ಟ್ ಬಗ್ಗೆ ಪ್ರತಿ ಹಂತ ದಲ್ಲೂ ಮಾಹಿತಿ ಕೊಡಬೇಕು, ಪ್ರಾಜೆಕ್ಟ್ ನ ಪ್ರತಿಯೊಂದು ಹಂತವನ್ನು ಕರೆಕ್ಟ್ ಆಗಿ ಪ್ಲಾನ್ ಮಾಡಬೇಕು, ಈ ಹಂತದಲ್ಲಿ ಪ್ರತಿಯೊಬ್ಬ ಟೀಂ ಮೆಂಬರ್ ಗಳನ್ನೂ ಮಾತಾಡಿಸಿ ಅವರ ಅಭಿಪ್ರಾಯ ಗಳನ್ನೂ ತಿಳಿದುಕೊಳ್ಳಬೇಕು . ಇದೆಲ್ಲದರ ಜೊತೆಗೆ ಅವರೂ ಸಹ ಇನ್ನೊಬ್ಬರಿಗೆ ರಿಪೋರ್ಟ್ ಮಾಡುತ್ತಿರುವುದರಿಂದ ಅವರ ಮ್ಯಾನೇಜರ್ ಗೆ ತಕ್ಕಂತೆ ನಡೆದುಕೊಳ್ಳಬೇಕು.
ಎಷ್ಟೊಂದು ಮ್ಯಾನೇಜರ್ ಗಳೇ ಹೇಳುವ ಪ್ರಕಾರ “ people management“ ತುಂಬಾ “complicated“.
ಏನಾದರೂ ಮಾಡಬಹುದು ರಿ, ಆದರೆ ಈ ಜನರನ್ನ ಹಿಡಿದಿಟ್ಟುಕೊಳ್ಳುವುದು ಇದೆಯಲ್ಲ ಅದೊಂಥರ ಕಪ್ಪೆ ತೂಕ ಮಾಡಿದ ಹಾಗೆ . 
ಇದು ಸಾಫ್ಟ್ ಮ್ಯಾನೇಜರ್ ಕಥೆ.

ಈ ವಾರದ ಬಿಲ್ಡ್ ಲೇಬಲ್ :
ನಿಮ್ಮ ಪ್ರೊಮೋಷನ್ ಬಗ್ಗೆ / ಆನ್ – ಸೈಟ್  ನೀವು ಏನಾದರೂ ಮ್ಯಾನೇಜರ್ ನ ಕೇಳಿದಾಗ ಅದಕ್ಕೆ ಅವರು ಉತ್ತರವಾಗಿ,
“I will get back to you"  ಅಂತ ಹೇಳಿದಾರೆ ಅಂದ್ರೆ ಸತ್ರು ಅದರ ಬಗ್ಗೆ ಮತ್ತೆ ಮಾತಾಡೋದಿಲ್ಲ ಅಂತ ಅರ್ಥ .

Thursday, October 16, 2014

ಅಂಕಣ ೩೫: Soft Tester

ಇಬ್ಬರು ಹೊಸತಾಗಿ ಕೆಲಸಕ್ಕೆ ಸೇರಿರುವ ಸಾಫ್ಟ್ ಲೋಕದ ಹುಡುಗರ ಮಾತನ್ನ ಒಂದು ಸಲ ಕೇಳಿ ನೋಡಿ :
ಹೇಗಿದೆ ಕೆಲಸ?
ಚೆನ್ನಾಗಿದೆ..
ಟೆಸ್ಟಿಂಗಾ? ಡೆವಲಪ್ಮೆಂಟ್?
ಟೆಸ್ಟಿಂಗ್.
ಒಹ್.. ಟೆಸ್ಟಿಂಗಾ?
ಹೌದು ಇಂತಹದೊಂದು ಸನ್ನಿವೇಶ ಕೆಲಸಕ್ಕೆ ಸೇರಿದ, ವಿಶೇಷವಾಗಿ ಟೆಸ್ಟಿಂಗ್ ಕೆಲಸಕ್ಕೆ ಸೇರಿದವರು ಅನುಭವಿಸಿರುತ್ತಾರೆ.
ಅದೇನೋ ಗೊತ್ತಿಲ್ಲ ಇವತ್ತಿಗೂ ಸಹ ಸಾಫ್ಟ್ ಲೋಕದಲ್ಲಿ ಒಂದಿಷ್ಟು ಜನ ಟೆಸ್ಟಿಂಗ್ ಅಂದ್ರೆ ಮೂಗು ಮುರಿಯುತ್ತಾರೆ. ಆದರೆ, ಈಗೀಗ ಸ್ವಲ್ಪ ಮೂಗು ಮುರಿಯುವವರ ಸಂಖ್ಯೆ ಸ್ವಲ್ಪ ಕಡಿಮೆ ಆಗಿದೆ ಅನ್ನಬಹುದು. ಸಾಫ್ಟ್ ಲೋಕದ ದಲ್ಲಿ ಡೆವಲಪ್ಮೆಂಟ್ ಅಂದ್ರೇನೆ ಎಲ್ಲ ಅನ್ನೋ ಭಾವನೆ ಕೆಲವರಿಗೆ ಇದೆ. ಅದೇನೇ ಇರಲಿ, ನಾವು ಇಲ್ಲಿ ಟೆಸ್ಟಿಂಗ್ ಗಿಂತ ಡೆವಲಪ್ಮೆಂಟ್, ಅಥವಾ ಡೆವಲಪ್ಮೆಂಟ್ ಗಿಂತ ಕ್ವಾಲಿಟಿ  ಅಂತ ಕಂಪೇರ್ ಮಾಡೋದಕ್ಕಿಂತ ಟೆಸ್ಟಿಂಗ್ ಸಹ ಹೇಗೆ ಉತ್ತಮಾವಾದದ್ದು ಅನ್ನೋದನ್ನ ಸ್ವಲ್ಪ ನೋಡೋಣ.




ಟೆಸ್ಟರ್ ಹುದ್ದೆಯಲ್ಲಿರುವವನಿಗೆ ನಿಜವಾದ ಚಾಲೆಂಜ್ ಅಂದರೆ ಅವನು ಪರಕಾಯ ಪ್ರವೇಶ ಮಾಡಬೇಕು.ಇದರ ಅರ್ಥ, ಒಂದು ವಸ್ತುವನ್ನು (Product) ಅವನು ತಾನು ತಾನಾಗಿ ನೋಡದೆ ಒಬ್ಬ ಗಿರಾಕಿ (customer / client)ಯಾಗಿ ನೋಡಬೇಕು ಮತ್ತು ಗಿರಾಕಿಯಾಗಿಯೇ ಆಲೋಚನೆ ಮಾಡಬೇಕು. ಈ ಪ್ರಾಡಕ್ಟ್ ನಲ್ಲಿ ಒಬ್ಬ ಕ್ಲೈಂಟ್ ಆಗಿ ನಾನು ಕೆಲಸ ಮಾಡಿದರೆ ನನಗೆ ಏನು ಹಿಡಿಸುವುದಿಲ್ಲ ಮತ್ತು ಈ ಪ್ರಾಡಕ್ಟ್ ನಲ್ಲಿ ಏನೇನಿದ್ದರೆ ಚೆಂದ  ಅವನಿಗೆ ಗೊತ್ತಿರಬೇಕು. ಅವಾಗಲೇ ಅವನಿಗೆ ಪ್ರಾಜೆಕ್ಟ್ ಟೀಂ ನಲ್ಲಿ ಒಂದು ಐಡೆಂಟಿಟಿ ಬರುವುದು.
ಟೆಸ್ಟರ್ ಐಡೆಂಟಿಟಿ ಇರುವುದು ಅವನು ಎಷ್ಟು ಬಗ್ ಗಳನ್ನೂ ಕಂಡು ಹಿಡಿಯುತ್ತಾನೆ ಅನ್ನೋದಕ್ಕಿಂತ, ಕಸ್ಟಮರ್ ಗೆ ಅದರಿಂದ ಆಗುವ “value addition “ ಏನು ಮತ್ತು ಎಷ್ಟು ಅನ್ನೋದು ಮುಖ್ಯ ಆಗುತ್ತದೆ.

ಡೆವೆಲಪರ್ ಪಾಸಿಟಿವ್ ಆಗಿ ಆಲೋಚನೆ ಮಾಡುವುದು  ಅವನ ಪಾಸಿಟಿವ್ ಅಂಶ ಆದರೆ, ಕೈಯಲ್ಲಿರುವ “Product “ ಬಗ್ಗೆ  ನೆಗೆಟಿವ್ ಆಗಿ ಆಲೋಚನೆ ಮಾಡುವುದು ಟೆಸ್ಟರ್ ನ ಪಾಸಿಟಿವ್ ಅಂಶ ಆಗಿರುತ್ತೆ. ಅದಕ್ಕೆ ಸಾಫ್ಟ್ ಲೋಕದ  ಯಾವುದೇ ಕಂಪನಿ ತೆಗೆದುಕೊಳ್ಳಿ  ಟೆಸ್ಟರ್ ಗಳು ಸ್ವಲ್ಪ ಕ್ರಿಯೇಟಿವ್ ಆಗಿರುತ್ತಾರೆ. ವಕ್ರ ವಕ್ರ ವಾಗಿ ಆಲೋಚನೆ ಮಾಡೋದನ್ನ ಕರತಲಾಮಲಕ ಮಾಡಿಕೊಂಡಿರುತ್ತಾರೆ. ಮಾಡಿಕೊಳ್ಳಲೇ ಬೇಕು ಸಹ!, ಇದು ಹೀಗಾದ್ರೆ ಚೆನ್ನಾಗಿರುತ್ತೆ ಅಂತ “Requirement“ ಹೇಳಿದ ಹಾಗೆ ಡೆವೆಲಪರ್ “ Product“ ನ ಡೆವೆಲೊಪ್ ಮಾಡಿದರೆ, ಇದು ಹೀಗೂ ಆಗಬಹುದಲ್ಲ ಅಥವಾ ಇದು ಹೀಗಾಗದಿದ್ರೆ “ Product“ ನ ಕಥೆ ಏನಾಗುತ್ತೆ ಅನ್ನೋದನ್ನ ಹುಡುಕುವುದೇ ಟೆಸ್ಟರ್ ನ ಕೆಲಸ. ಹಾಗಂತ ಇದು ಅಷ್ಟು ಸುಲಭದ ಕೆಲಸವಲ್ಲ.

ನಾವು ಕೆಲಸ ಮಾಡುವಾಗ ನಮ್ಮ ಕಣ್ಣಿಗೆ ಕಾಣುವ ಬಗ್ ಗಳು, ಡೆವೆಲಪರ್ ಅಥವಾ ಮ್ಯಾನೇಜರ್ ಮುಂದೆ ತೋರಿಸುವಾಗ ಎಲ್ಲೋ ಅಡಗಿ ಕುಳಿತು ಬಿಟ್ಟಿರುತ್ತವೆ.  ಆಗ ಪೆಚ್ಚು ಮೊರೆ ಹಾಕಿಕೊಳ್ಳುವ ಸರದಿ ಟೆಸ್ಟರ್ ನದು.  ಅಷ್ಟೇ ಅಲ್ಲ, ಒಂದು component  ಸರಿಯಾಗಿ ಕೆಲಸ ಮಾಡ್ತಾ ಇಲ್ಲ ಅಂದ್ರೆ ಅದು ಸರಿಯಾಗಿಲ್ಲ ಅಂತ ಆ component ನ ಕೋಡ್ ಬರೆದವನ ಹತ್ತಿರ ಹೇಳೋಕೆ ಒಂದು ರೀತಿಯ ನಯ ನಾಜೂಕು ಟೆಸ್ಟರ್ ನ ಹತ್ತಿರ ಇರಬೇಕಾಗುತ್ತದೆ.  ಇಲ್ಲದಿದ್ರೆ ನೇರವಾಗಿ, “ ನೀನು ಬರೆದಿರೋ Code ಸರಿಯಾಗಿ  ಕೆಲಸ ಮಾಡ್ತಾ ಇಲ್ಲ” ಅಂತ ಡೆವೆಲಪರ್ ನ ಮುಂದೆ ಹೇಳಿದರೆ ಅವರಿಗೆ ಹೆಗನ್ನಿಸಬೇಡ?
ಸಾಫ್ಟ್ ಲೋಕದಲ್ಲಿ ಟೆಸ್ಟರ್ ದೇ ಒಂದು, ಡೆವಲಪ್ಮೆಂಟ್ ದೇ ಇನ್ನೊಂದು ಗುಂಪು ಅನ್ನೋ ಥರ ಏನು ಇರುವುದಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡ್ತಾ ಇರ್ತಾರೆ. ಎಷ್ಟೊಂದು ಸಲ ಇಂತಿಷ್ಟು ವರ್ಷ ಡೆವಲಪ್ಮೆಂಟ್ ನಲ್ಲಿ ಕೆಲಸ ಮಾಡಿದವರು ಟೆಸ್ಟಿಂಗ್ ಗೆ ಬಂದು ಸೇರೋದುಂಟು. ಅದೇ ತರಹ ಟೆಸ್ಟಿಂಗ್ ನಲ್ಲಿ ಒಂದಿಷ್ಟು ವರ್ಷ ಪಳಗಿದ ನಂತರ ಡೆವಲಪ್ಮೆಂಟ್ ಹೋಗಿ ಕೆಲಸ ಮಾಡೋದು ಉಂಟು. ಇನ್ನು ಆಶ್ಚರ್ಯ ಅಂದರೆ ಕೆಲವೊಂದು ಕಂಪನಿ ಗಳಲ್ಲಿ ಎಲ್ಲವನ್ನು (ಡೆವಲಪ್ಮೆಂಟ್ ಮತ್ತು ಟೆಸ್ಟಿಂಗ್ ) ಒಬ್ಬರೇ  ಮಾಡೋದುಂಟು!
ಸಾಫ್ಟ್ ಲೋಕದಲ್ಲಿ ಟೆಸ್ಟರ್ ಕುರಿತಾಗಿ  ಒಂದು ಮಾತಿದೆ : “ಟೆಸ್ಟರ್  “ Product“ ನಲ್ಲಿ ಹೊಸ ತಪ್ಪುಗಳನ್ನ ಹುಟ್ಟು ಹಾಕುವುದಿಲ್ಲ, ಬದಲಿಗೆ ಇರುವ ತಪ್ಪುಗಳನ್ನೇ ತೋರಿಸುತ್ತಾನೆ”. ಪ್ರಾಡಕ್ಟ್ ನಲ್ಲಿರುವ ತುಂಬಾ “Critical bugs“ ನ ಕಂಡು ಹಿಡುಯುವುದೆಂದರೆ, ಇದೊಂಥರ ಪೊಲೀಸರು ಪ್ರೊಫೆಷನಲ್ ಕಳ್ಳನನ್ನು ಹಿಡಿದ ಹಾಗೆ.
ವಾರದ ಬಿಲ್ಡ್ ಲೇಬಲ್ : ಟೆಸ್ಟಿಂಗ್ ನಲ್ಲಿ ಕೆಲಸ ಮಾಡಿ ಸಾಕಾದರೆ ಅಂತವರು ಪೋಲಿಸ್ ಡಿಪಾರ್ಟ್ಮೆಂಟ್ ಗೆ ಹೋಗಿ ಸೇರ್ಕೊಬಹುದು. ಯಾಕಂದ್ರೆ, ಟೆಸ್ಟರ್ ಆಲೋಚನೆ ಮಾಡೋದು ವಕ್ರ ವಕ್ರ ವಾಗಿ, ಇದರಿಂದ ಪೋಲಿಸ್ ಡಿಪಾರ್ಟ್ಮೆಂಟ್ ಗು ಸಹಾಯವಾಗಬಹುದುJ

Thursday, October 9, 2014

ಅಂಕಣ ೩೪ : Soft Developer


ನೀವು ಬೆಂಗಳೂರಿನ ಯಾವುದಾದರೂ ರಸ್ತೆಯಲ್ಲಿ ನೋಡಿ, FLEX ಗಳಲ್ಲಿ villa  ಮತ್ತು apartment  ಗಳ ಜಾಹಿರಾತು ರಾರಾಜಿಸುತ್ತಿರುತ್ತವೆ. ಅದರ ಕೆಳಗೆ ದೊಡ್ಡ ದೊಡ್ಡ builders / developers ಹೆಸರುಗಳನ್ನೂ ಸಹ ಹಾಕಿರುತ್ತಾರೆ. ರಿಯಲ್ ಎಸ್ಟೇಟ್ developers ಮತ್ತು ನಮ್ಮ ಸಾಫ್ಟ್ ವೇರ್ developers ಮಧ್ಯೆ ಏನು ಸಂಭಂದ ಅನ್ಕೋಬೇಡಿ. ಒಂದು ಕಡೆ ಇಬ್ಬರಿಗೂ ಸಾಮ್ಯತೆ ಇದೆ, ಅವರು ದೊಡ್ಡ ದೊಡ್ಡ ಬಿಲ್ಡಿಂಗ್ ಗಳನ್ನ ಡೆವೆಲಪ್ ಮಾಡಿದರೆ ನಮ್ಮವರು ದೊಡ್ಡ ದೊಡ್ಡ ಸಾಫ್ಟ್ ವೇರ್ ಗಳಿಗೆ ಬೇಕಾದ ಕೋಡ್ ಗಳನ್ನ ಡೆವೆಲಪ್ ಮಾಡುತ್ತಾರೆ.
ಒಬ್ಬ ಸಾಫ್ಟ್ ವೇರ್ ಡೆವೆಲಪರ್ ಗೆ ಕೋಡ್  ಅಂದ್ರೆ ಸಾಕು ಪಂಚ ಪ್ರಾಣ. ತಮ್ಮ ತಮ್ಮ component ಅಥವಾ module ಗಳ ಬಗ್ಗೆ ಪ್ರತಿಯೊಬ್ಬ developer ಗೂ ಒಂದು ರೀತಿಯ ಅಭಿಮಾನ ವಿರುತ್ತದೆ. ಅದರ ಜೊತೆಗೆ "ಈ ಥರ ಯಾರಾದರೂ ಕೋಡ್ ಮಾಡುತ್ತಾರಾ? " ಅಂತ ಒಂದು ಸಣ್ಣ ದಾದ ಹಮ್ಮು ಬಿಮ್ಮು ಸಹ ಇರುತ್ತದೆ. ಇದಷ್ಟೇ ಅಲ್ಲ ಸಾಫ್ಟ್ ಲೋಕದಲ್ಲಿ ಡೆವೆಲಪರ್ ಅನ್ನುವ ಶಬ್ದಕ್ಕೆ  ಒಂದು ರೀತಿಯ ಸ್ಥಾನ ಮಾನವಿದೆ. ಡೆವೆಲಪರ್ ಗಳ ಕೆಲಸ ಅಷ್ಟು ಸುಲಭ ವಾದದ್ದು ಏನಲ್ಲ. ಸಾವಿರಾರು ಲೈನ್ ಗಳ ಕೋಡ್ ಗಳ ಮಧ್ಯೆ ತಮ್ಮನ್ನ  ತಾವು ತೊಡಗಿಸಿಕೊಂಡು ಕೆಲಸ ಮಾಡುವುದು ತುಂಬಾ ಗ್ರೇಟ್. ಅವರು ಸಹ ಕೋಡಿಂಗ್ ಎನ್ನುವ  ಪ್ರಪಂಚದಲ್ಲಿ ಮುಳುಗಿ ಹೋಗಿ ಬಿಟ್ಟಿರುತ್ತಾರೆ. ಅವರು ಬರೆದ code line ನಲ್ಲಿ ಏನಾದರೂ ಎಡವಟ್ಟಾದರೆ  ಅದಕ್ಕೆ ಅವರೇ ಜವಾಬ್ದಾರರು ಸಹ. ಕೆಲವೊಂದು ಸಮಯದಲ್ಲಿ  ಕೋಡ್ ನ behavior  ಹೆಚ್ಚು ಕಡಿಮೆ ಆದರೂ ಅದಕ್ಕಾಗಿ ಅವರು ಭಾರಿ ಬೆಲೆಯನ್ನೇ ಕಟ್ಟಬೇಕಾಗುತ್ತದೆ.





ಇನ್ನು ಇವರ ಕೆಲಸದ ವಿಷಯಕ್ಕೆ ಬಂದರೆ, ಎರಡು ರೀತಿ ಇರುತ್ತೆ. ಒಂದು ಮೊದಲಿಂದ ಶುರು ಮಾಡಿ ಕೋಡ್ ನ್ನು ಬರೆಯಬೇಕು, ಎರಡು ಯಾರೋ ಬರೆದು ಬಿಟ್ಟು ಹೋಗಿರುವ ಕೋಡನ್ನು ಪುನಃ ಹೊಸತನಕ್ಕೆ ತಕ್ಕಂತೆ ಬದಲಾಯಿಸಬೇಕು. ಮೊದಲನೆಯದು ಬಹಳಷ್ಟು ಜನ ಇಷ್ಟ ಪಡುತ್ತಾರೆ. ಆದರೆ ಎರಡನೆಯದು ಸ್ವಲ್ಪ ಕಷ್ಟದ ಕೆಲಸ. ಬೇರೊಬ್ಬ ವ್ಯಕ್ತಿ ಬರೆದ ಕೋಡನ್ನು  ಅರ್ಥ ಮಾಡಿಕೊಂಡು ಅದನ್ನು ಪುನಃ ಬದಲಿಸಬೇಕಂದರೆ, ಇದೊಂಥರ; " ಹೋಟೆಲಿನಲ್ಲಿ ಒಬ್ಬ ವ್ಯಕ್ತಿ ವೊಲೆಯ ಮೇಲೆ ಅನ್ನಕ್ಕಿಟ್ಟು  ತನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟು ಹೊರಟು ಬಿಡುತ್ತಾನೆ. ಹೊಸತಾಗಿ ಬಂದವನಿಗೆ ಹೋಟೆಲ್ ಓನರ್ ಹೇಳುತ್ತಾನೆ, " ಒಲೆಯ ಮೇಲೆ ಅನ್ನಕ್ಕಿ ಟ್ಟಾಗಿದೆ , ಅದನ್ನೇ ಪಲಾವ್ ಮಾಡಿಬಿಡು" ಅಂತ . ಅನ್ನಕ್ಕಿಟ್ಟು ಎಷ್ಟು ಹೊತ್ತಾಯ್ತು? ಅದೇನು ಹೊತ್ತಿದೆಯೊ? ನೀರಾಗಿದೆಯೋ? ಒಂದು ಗೊತ್ತಿರುವುದಿಲ್ಲ. ಪಲಾವ್ ಮಾಡಿ ಬಿಡು ಎಂದರೆ ಹೊಸತಾಗಿ ಬಂದಿರುವವನ ಪರಿಸ್ತಿತಿ ಹೇಗಿರಬೇಡ?
ಇನ್ನು defect ಗಳನ್ನ fix ಮಾಡಬೇಕಾದರೆ ಡೆವೆಲಪರ್ ಗಳು ಕಣ್ಣಲ್ಲಿ ಕಣ್ಣಿಟ್ಟು ಕೊಂಡು ಕೋಡನ್ನ debug ಮಾಡುತ್ತಾ ಕೂಡಬೇಕು. ಸಾವಿರಾರು ಲೈನ್ ಗಳ component ನಲ್ಲಿ defect ನ ಪತ್ತೆ ಹಚ್ಚುವುದು ಅಂದರೆ, 
" ಬೆಂಗಳೂರಿನ BMTC- 201 ಬಸ್ಸಿನಲ್ಲಿ ಕಳೆದು ಕೊಂಡ ಒಂದು ರುಪಾಯಿ ರುಪಾಯಿ coin ಹುಡುಕಿದಷ್ಟೇ ಸುಲಭ :)". 
ಇಷ್ಟಲ್ಲದೇ  ಹುಚ್ಚು ಹುಚ್ಚಾಗಿ ಆಡುವ component ಗಳನ್ನ ಸರಿಯಾದ ದಾರಿಯಲ್ಲಿ ತಂದು ನಿಲ್ಲಿಸಬೇಕು. ಕೊಟ್ಟಿರುವ functionality ಚೆನ್ನಾಗಿ ಕೆಲಸ ಮಾಡುತ್ತದೆಯೋ ಇಲ್ಲವೋ ಅನ್ನೋದನ್ನ ಪ್ರತಿ ಬಿಲ್ಡ್ ಗೂ ಚೆಕ್ ಮಾಡಬೇಕು. ಅಲ್ಲಲ್ಲಿ ಕೈ ಬಿಟ್ಟು ಹೋಗಿರುವ ಮತ್ತು ಹೋಗುತ್ತಿರುವ variable ಗಳನ್ನೂ ಲಗಾಮು ಹಾಕಿ ಒಂದು ಕಡೆಗೆ ಕೂಡಿಸಬೇಕು. ಇಷ್ಟೆಲ್ಲಾ ಆದಮೇಲೆ ಆ ಕೋಡ್ ತನಗೆ ಕೊಟ್ಟಿರುವ ಸಮಯದಲ್ಲೇ ತನ್ನ ಕೆಲಸ ಮುಗಿಸಬೇಕು. ಅದಕ್ಕಿಂತ ಹೆಚ್ಚಿಗೆ  ಟೈಮ್ ತಗೊಂಡ್ರೆ performance issue ಅಂತ ಹೇಳುತ್ತಾರೆ. ಅದಕ್ಕೆ ಪುನಃ ಸೋರಿ ಹೋಗುತ್ತಿರುವ memory leak ಎನ್ನುವ ಪೈಪ್ ಗಳಿಗೆ FIX IT ಹಚ್ಚಬೇಕು. ಕೆಲವೊಬ್ಬ ಡೆವೆಲಪರ್ಸ್ ಗಳಂತೂ ತಮ್ಮ component ಗಳನ್ನ ಅದೆಷ್ಟು ಹಚ್ಚಿಕೊಂಡು ಬಿಟ್ಟಿರುತ್ತಾರೆ ಅಂದರೆ, ತಮ್ಮ ಹೆಂಡತಿಗಿಂತಲೂ ಅವರು ತಮ್ಮ component ಗಳನ್ನೇ ಜಾಸ್ತಿ ಪ್ರಿತಿಸುತ್ತಿರುತ್ತಾರೆ. ಈಗ ಹೇಳಿ ಕೋಡಿಂಗ್ ಅಂದರೆ ಯಾವ ಬಿಲ್ಡಿಂಗ್ ಕಟ್ಟೋ ದಕ್ಕಿಂತಲೂ ಕಡಿಮೆ ಇಲ್ಲ ಅಲ್ಲವಾ ?
ಈಗ ನಿಮ್ಮದೊಂದು ಪ್ರಶ್ನೆ ಇರುತ್ತದೆ:
"ಇಷ್ಟೆಲ್ಲಾ ಕಾಳಜಿ ವಹಿಸಿ ಕೋಡ್ ಮಾಡಿದರೂ ಸಹ ಕೆಲವೊಂದು ಸಲ ತಪ್ಪಾದರೆ? ಆ ತಪ್ಪುಗಳನ್ನು  ಯಾರು ಪತ್ತೆ ಹಚ್ಚುತ್ತಾರೆ?" ಖಂಡಿತ ಇಂತಹ ತಪ್ಪುಗಳ ನ್ನೇ ಪತ್ತೆ ಹಚ್ಚಲು ಸಾಫ್ಟ್  ಲೋಕದಲ್ಲಿ ಒಂದು "Team" ಇರುತ್ತದೆ. ಅವರ  ಬಗ್ಗೆ ಮುಂದಿನ ವಾರ ನೋಡೋಣ!
ಈ ವಾರದ ಬಿಲ್ಡ್  ಲೇಬಲ್ :  ಮೊದಲ ಸಲ ಕೋಡ್ ಬರೆದು ಅದು ನಾವು ಹೇಳಿದ ರೀತಿಯಲ್ಲಿ ಕೆಲಸ ಮಾಡಿದಾಗ ಆಗುವ ಖುಷಿಯನ್ನು ಯಾವ ಡೆವೆಲಪರ್ ಕೂಡ ಅದನ್ನ ಮರೆಯಲು ಸಾಧ್ಯವಿಲ್ಲ!