Thursday, November 6, 2014

ಅಂಕಣ ೩೭ : ಸಾಫ್ಟ್ ಲೋಕದಲ್ಲಿ ಕನ್ನಡ

ಹೌದು ನೀವು ನೀರಿಕ್ಷಿಸಿದಂತೆಯೇ, ನವೆಂಬರ್ ತಿಂಗಳಲ್ಲಿನ ಅಂಕಣಗಳು “ ಕನ್ನಡ” ದ ಕುರಿತಾಗಿ ಇರುತ್ತವೆ. ವಿಶೇಷವಾಗಿ “ಸಾಫ್ಟ್ ಲೋಕ ಮತ್ತು ಕನ್ನಡ” ದ ನಡುವಿನ ವಿಷಯದ ಬಗ್ಗೆ. ಭಾಷೆ ಎನ್ನುವುದು ಹುಟ್ಟಿದ್ದು ನಮ್ಮ ಭಾವನೆಗಳನ್ನ ವ್ಯಕ್ತ ಪಡಿಸಲು. ಆದರೆ ಇತ್ತೀಚಿನ ದಿನಗಳಲ್ಲಿ ಭಾಷೆ ಎನ್ನುವುದು ಒಂದು ಜನಾಂಗದ ಅಸ್ತಿತ್ವದ ಪ್ರಶ್ನೆ ಆಗಿರುವುದು ಮಾತ್ರ ಸುಳ್ಳಲ್ಲ. ಜಾಗತೀಕರಣದ ಸಂದರ್ಭದಲ್ಲಿ ಪ್ರಬಲವಾದ ಭಾಷೆಯಿಂದ ದುರ್ಬಲವಾದ ಭಾಷೆ ಮೇಲೆ ದಾಳಿ ನಡೆಯುತ್ತಲೇ ಇದೆ. ಆದರೆ ಒಂದು ಭಾಷೆ ಪ್ರಬಲ ಅಥವಾ ದುರ್ಬಲ ಆಗುವುದಾದರೂ ಹೇಗೆ? ತೀರ ಸರಳವಾಗಿ ಹೇಳಬೇಕೆಂದರೆ : ಯಾವುದು ಹೆಚ್ಚು ಹೆಚ್ಚು ಬಳಕೆಯಲ್ಲಿ ಇರುತ್ತದೆಯೋ ಅದು ದಿನೇ  ದಿನೇ  ಬೆಳೆಯುತ್ತಾ ಹೊಗುತ್ತದೆ. ಯಾವುದು ಬಳಕೆಯಲ್ಲಿ ಇಲ್ಲದೆ ಮೂಲೆಯಲ್ಲಿ ಬಿದ್ದಿರುತ್ತದೋ ಅದು ದಿನೇ  ದಿನೇ  ಕೊಳೆಯುತ್ತಾ ಹೋಗುತ್ತದೆ.


ಇನ್ನು ಕನ್ನಡ ದ ವಿಷಯಕ್ಕೆ ಬರುವುದಾದರೆ:
“ ನಮ್ಮದು ಅಷ್ಟು ವರ್ಷಗಳ ಭಾಷೆ, ಒಂದು ಕಾಲದಲ್ಲಿ ಹೀಗಿತ್ತು, ಒಂದು ಕಾಲದಲ್ಲಿ ಹಾಗಿತ್ತು, ನಮ್ಮ ಭಾಷೆಗೆ ಅಷ್ಟು ಪ್ರಶಸ್ತಿ ಗಳು ಬಂದಿವೆ, ಹಾಗಾಯ್ತು, ಹೀಗಾಯ್ತು” ಅಂತ ಬರೀ ಮಾತಾಡುತ್ತ ಹೋಗುವ ಬದಲು ಇವತ್ತು ನನ್ನ ಭಾಷೆಯ ಉಳಿವಿಗೆ, ಬೆಳೆಸುವಿಕೆಗೆ ನಾನೇನು ಮಾಡ್ತಾ ಇದ್ದೀನಿ? ಅಥವಾ ಮಾಡಬೇಕು ಎನ್ನುವುದು ತುಂಬಾ ಮುಖ್ಯ. ಯಾರೋ ಬಂದು ಏನೋ ಮಾಡುತ್ತಾರೆ ಎನ್ನುವುದಕ್ಕಿಂತ, ಪ್ರತಿಯೊಬ್ಬರೂ ಸಹ ಭಾಷೆಯ ಏಳ್ಗೆಗೆ ಏನು “ ನಾನೇನು ಮಾಡಬಹುದು?” ಅಂತ ಯೋಚಿಸುವುದು ತುಂಬಾ ಸೂಕ್ತ. ನಿಜ ನಮ್ಮ ಪೂರ್ವಿಕರೆಲ್ಲರೂ ಕನ್ನಡಕ್ಕೆ ಅಗಾಧವಾದ ಸಾಧನೆ, ಹೋರಾಟ  ಗಳನ್ನ ಮಾಡಿ ನಮಗೆ ಆ ಕೀರ್ತಿಯನ್ನ ಬಿಟ್ಟುಹೋಗಿದ್ದಾರೆ. ಆದರೆ ನಾವು ಬರೀ ಅದೇ ಜಪ ಮಾಡುವ ಬದಲು ನಮ್ಮಿಂದ ಏನಾಗುತ್ತದೋ ಅದನ್ನ ಮಾಡುವುದು ಚೊಲೊ.

ಹೀಗಂದ ತಕ್ಷಣ ನಮ್ಮ ಇರುವ ಕೆಲಸವನ್ನ ಬಿಟ್ಟು ಬರೀ ಭಾಷೆ ಕೆಲಸಕ್ಕೆ ನಿಂತುಬಿಡಬೇಕು ಅಂತ ಅಲ್ಲ. ಅದು ವಾಸ್ತವತೆಯೂ ಅಲ್ಲ. ಆದರೆ ನಮ್ಮ ದಿನ ನಿತ್ಯದ ಕೆಲಸಗಳ ಮಧ್ಯೆಯೇ ನಾವು ಹೇಗೆ ನಮ್ಮ ಕೈಲಾದ ಪ್ರಯತ್ನವನ್ನ ಮಾಡಬಹುದು ಅನ್ನೋದು ತುಂಬಾ ಮುಖ್ಯ. ಅಷ್ಟಕ್ಕೂ ಹನಿ ಹನಿ ಕೂಡಿದರೆ ಹಳ್ಳ ಎನ್ನುವ ಮಾತನ್ನ ನಮ್ಮ ಹಿರಿಯರಿಂದ ಕೇಳಿದ್ದೇವೆ. ಈಗೇನಿದ್ದರೂ ಅದನ್ನ ಕಾರ್ಯ ರೂಪಕ್ಕೆ ತರುವ ಪ್ರಯತ್ನ ಮಾಡಬೇಕು .
ಇವತ್ತು ನಮ್ಮ ಮುಂದಿರುವ ಅತೀ ಮುಖ್ಯವಾದ ಪ್ರಶ್ನೆ: ಭಾಷೆಯಿಂದ “ಅನ್ನ”  ಹುಟ್ಟು ಹಾಕುವ ಬಗೆ ಹೇಗೆ?
ಈ ಪ್ರಶ್ನೆ ಯಾಕೆ ಮುಖ್ಯ ಆಗುತ್ತದೆ ಅಂದರೆ ಒಂದು ಸಲ ಭಾಷೆಗೆ “ಅನ್ನ”  ಹುಟ್ಟು ಹಾಕೋ ಶಕ್ತಿ ಬಂದರೆ ಉಳಿದೆಲ್ಲ ವಿಷಯಗಳು ತನ್ನ ಪಾಡಿಗೆ ತಾನೇ ದಾರಿಗೆ ಬರಲು ಶುರು ಆಗುತ್ತವೆ. ನಮ್ಮ ನಮ್ಮ ಭಾವನೆಗಳು ಏನೇ ಇರಲಿ, ಭಾವನೆಗಳಿಗಿಂತ “ಬದುಕು” ಎಷ್ಟೋ ಸಲ  ಮುಖ್ಯವಾಗುತ್ತದೆ. “ಬದುಕು” ಅಂದ ಕೂಡಲೇ “ ಅನ್ನ” ದ ಪ್ರಶ್ನೆ ಬರುತ್ತದೆ. ಅದಕ್ಕೆ ಮೊದಲು ನಾವು ಕನ್ನಡ ದಿಂದ “ಅನ್ನ” ಹುಟ್ಟು ಹಾಕುವ ಬಗೆ ಹೇಗೆ ಎನ್ನುವ ವಿಷಯದ ಮೇಲೆ ಆಲೋಚನೆ, ಚರ್ಚೆಗಳು ನಡೆಯಬೇಕಾಗಿದೆ.

ಭಾಷೆಯಿಂದ ಅನ್ನ ಹುಟ್ಟು ಹಾಕಬೇಕಾದರೆ, ಮೊದಲು ಭಾಷೆ ಆರ್ಥಿಕವಾಗಿ ಬಲಿಷ್ಠ ಗೊಳ್ಳಬೇಕು. ಭಾಷೆ ಆರ್ಥಿಕವಾಗಿ ಬಲಗೊಳ್ಳಬೆಕಾದರೆ “ ಆರ್ಥಿಕವಾಗಿ ಭಾಷೆ ಹೆಚ್ಚು ಹೆಚ್ಚು ಬಳಕೆಯಲ್ಲಿರಬೇಕು” . ಹಾಗಾಗಬೇಕೆಂದರೆ ನಾವೆಲ್ಲಾ ಬೆಟ್ಟ ಕಡಿದು ಪುಡಿ ಮಾಡಬೇಕಾಗಿಲ್ಲ, ಬದಲಿಗೆ ನಮ್ಮ ದಿನ ನಿತ್ಯದ ಜೀವನದಲ್ಲಿ “ ಅರ್ಥಿಕ ವಾಗಿ ಕನ್ನಡಕ್ಕೆ ಮೊದಲ ಸ್ಥಾನ ಕೊಟ್ಟರೆ ಸಾಕು”
ಈ ನಿಟ್ಟಿನಲ್ಲಿ ಸಾಫ್ಟ್ ಲೋಕದ ಜನ ಸ್ವಲ್ಪ ಗಮನ ಹರಿಸಬೇಕಾಗಿದೆ. ಇನ್ನು ಸಾಫ್ಟ್ ಲೋಕದ ವಿಷಯಕ್ಕೆ ಬಂದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಸ್ವಲ್ಪ ಮೈ ಜಾಡಿಸಿಕೊಂಡು ಮೇಲೆಳುತ್ತಿದೆ ಅನ್ನೋದು ಸಂತೋಷದ ವಿಷಯ ವಾದರೂ ಇದು ಇನ್ನು ಹೆಚ್ಚಾಗಬೇಕು. . ಕನ್ನಡ ದ ಕಡೆಗೆ ಯುವ ಪೀಳಿಗೆ ನಿಧಾನವಾಗಿ ವಾಲುತ್ತಿದ್ದಾರೆ. ಎಲ್ಲ ಕಡೆಗೂ ಕನ್ನಡದ ಗಾಳಿ ಬೀಸಲು ಶುರು ಆಗಿದೆ. ಆದರೆ ಇಷ್ಟಕ್ಕೆ ಖುಷಿ ಪಟ್ಟು ಸುಮ್ಮನೆ ಕೂಡುವ ಹಾಗಿಲ್ಲ. ಯಾಕಂದರೆ ಇದೊಂದು ನಿರಂತರ ಪ್ರಯತ್ನ. ಸಾಗುತ್ತಲೇ ಇರಬೇಕು.


ವಾರದ ಬಿಲ್ಡ್ ಲೇಬಲ್ :
ನಿಮ್ಮ ಪ್ರಶ್ನೆ : ಇದೆಲ್ಲ ಸರಿ, ಅಂಕಣ ವೇನೋ ಚೆನ್ನಾಗಿದೆ ಅನಿಸುತ್ತೆ. ಆದರೆ ನಾವು ನಾವಿದ್ದಲ್ಲಿಯೇ, ನಮ್ಮ ದಿನನಿತ್ಯದ ಜೀವನದಲ್ಲಿ , ನಮ್ಮ ಕೈಲಾದಷ್ಟು ಕನ್ನಡಕ್ಕಾಗಿ ಏನು ಮಾಡಬಹುದು?
ಉತ್ತರ : ಈ ಪ್ರಶ್ನೆ ನಿಮ್ಮ ಮನದಲ್ಲಿ ಈಗಾಗಲೇ ಬಂದಿದ್ದಾರೆ ಮೊದಲು ನಿಮಗೆ ಅಭಿನಂದಿಸುತ್ತೇನೆ. ಹೌದು  ನಾವೆಲ್ಲರೂ ಒಂದಿಷ್ಟು ಕೆಲಸಗಳನ್ನು ಮಾಡಬುಹುದು. ಅತ್ಯಂತ ಚಿಕ್ಕ ಚಿಕ್ಕ ಕೆಲಸಗಳನ್ನು  ಕಡಿಮೆ ಸಮಯದಲ್ಲಿ ಮಾಡ ಬಹುದು. ಇದರ ಬಗ್ಗೆ ಮುಂದಿನ ವಾರ ನೋಡೋಣ.

No comments:

Post a Comment