Thursday, January 30, 2014

ಅಂಕಣ ೫ : ಸಾಫ್ಟ್ ಲಂಚ್ ಬಾಕ್ಸ್

ಸಾಫ್ಟ್ ಲೋಕದಲ್ಲಿ ಬಹಳಷ್ಟು ಜನರ ಊಟದ ಡಬ್ಬಿ “ಟಪ್ಪರ್ ವೇರ್” ಆಗಿರುತ್ತದೆ ಎನ್ನುವುದು ಎರಡನೇ ಮಾತಿಲ್ಲ. ಕಂಪನಿಯ ಕ್ಯಾಂಟೀನ್ ಊಟದ ಮಹಿಮೆಯೋ, ಅಥವಾ ಪ್ರತಿದಿನವೂ ಹೊರಗಡೆ ತಿಂದು ಆರೋಗ್ಯ ಹಾಳು  ಮಾಡಿಕೊಳ್ಳುವುದು ಬೇಡ ಎಂತಲೋ, ಇತ್ತೀಚಿಗೆ ಮನೆಯಿಂದ  ಊಟ ತರುವವರ ಸಂಖ್ಯೆ ಜಾಸ್ತಿನೆ ಆಗಿದೆ ಅಂತ ಅನ್ನಬಹುದು.

ಒಂದಿಷ್ಟು ಜನ (ವಿಶೇಷವಾಗಿ ಮದುವೆಯಾದವರು) ಪ್ರತಿ ದಿನವೂ ಊಟದ ಡಬ್ಬಿ ಯನ್ನ ತರುವುದು ವಾಡಿಕೆ. ಮಧ್ಯಾನದ ಊಟದ ಸಮಯದಲ್ಲಿ ಕ್ಯಾಂಟೀನ್ ನಲ್ಲಿ ರುವ ಮೈಕ್ರೋ ವೇವ್ ಓವನ್ ಮುಂದೆ  ಡಬ್ಬಿ ತಂದವರ ಒಂದು ದೊಡ್ಡ ಕ್ಯೂ ನಿಂತೇ ಇರುತ್ತದೆ. ತಮ್ಮ ಸಹೋದ್ಯೋಗಿ ಗಳ ಜೊತೆ ಕ್ಯಾಂಟೀನ್ ನಲ್ಲಿ ತಮ್ಮ ಊಟದ ಡಬ್ಬಿ ಯನ್ನು ಬಿಚ್ಚಿ ಲೋಕಾ ರೂಡಿ ಮಾತನಾಡುತ್ತಾ  ಊಟ ಮಾಡಿ ,  ಊಟವಾದ ನಂತರ ಒಂದಿಷ್ಟು ವಾಕ್ ಮಾಡುವುದು ಸಾಫ್ಟ್ ಲೋಕದಲ್ಲಿ ನ ಸಂಪ್ರದಾಯ.



ಕೆಲವೊಬ್ಬರು ಈ ಊಟದ ಡಬ್ಬಿ ಗೆ ಎಷ್ಟು ಅಂಟಿಕೊಂಡು ಬಿಟ್ಟಿರುತ್ತಾರೆ ಎಂದರೆ, ಅಪರೂಪಕ್ಕೊಮ್ಮೆ ಇದ್ದಕ್ಕಿದ್ದಂತೆಯೇ ಟೀಂ ನಲ್ಲಿರುವ ಎಲ್ಲರು “ಇವತ್ತು ಮಧ್ಯಾನದ ಊಟ ಹೊರಗಡೆ ಹೋಟೆಲ್ ನಲ್ಲಿ ಮಾಡೋಣ” ಅಂತ ತೀರ್ಮಾನಿಸಿದರೆ, ಇವರು ಮಾತ್ರ ಜಪ್ಪಯ್ಯ ಅಂದರೂ ಹೊರಗಡೆ ಊಟಕ್ಕೆ ಬರುವುದಿಲ್ಲ.

“ ಮನೆಯಿಂದ ಡಬ್ಬಿ ತಂದಿದೀನಿ, ಡಬ್ಬಿ ಖಾಲಿ ಮಾಡದೆ ಮನೆಗೆ ತಗೊಂಡು ಹೋದರೆ, ನಾಳೆಯಿಂದ ದಿನಾನೂ ಹೊರಗಡೆ ಊಟ ಮಾಡೋ ಪರಿಸ್ಥಿತಿ ಬರ್ತದ” ಅಂತ ಅಷ್ಟೇ ನಿಧಾನವಾಗಿ ಸಮಝಾಯಿಸಿ ಕೊಡ್ತಾರೆ. ಆದರೂ ಒಂದೊಂದು ಸಲ ತಮ್ಮ ಊಟದ ಡಬ್ಬಿಯನ್ನ ಯಾರಿಗಾದರು ಕೊಟ್ಟು, ಇವರು ಊಟಕ್ಕೆ ಎಲ್ಲರ ಜೊತೆ ಬರುತ್ತಾರೆ. ಆದರೆ ಪ್ರತಿಸಲವೂ ಹೀಗೆ ಮಾಡುವುದಿಲ್ಲ. “ ಹೊರಗಡೆ ಊಟಕ್ಕೆ ಹೋಗುವುದಾದರೆ, ನನಗೆ ಒಂದು ದಿನ ಮುಂಚೆ ಹೇಳಿಬಿಡಿ, ನಾನು ಆ ದಿನ ಡಬ್ಬಿ ತರೋದಿಲ್ಲ!” ಅಂತಾನು ಇವರು ಉಳಿದ ಟೀಂ ಮೆಂಬರ್ಸ್ ಗೆ ಹೇಳಿರುತ್ತಾರೆ.

ಊಟದ  ಡಬ್ಬಿಗೂ ಬೇರೆ ಬೇರೆ ಕಚೇರಿಗಳಿಗೂ ಇರುವ ಸಂಭಂದ ಹೇಗೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ನಮ್ಮ ಸಾಫ್ಟ್ ಲೋಕದಲ್ಲಿ ಊಟದ ಡಬ್ಬಿ ಎಲ್ಲವನ್ನು ಹೇಳಿಬಿಡುತ್ತದೆ. ಈ ಊಟದ ಡಬ್ಬಿಯ ಕರಾಮತ್ತೆ ಹಾಗೆ.....ನಮ್ಮಲ್ಲಿ Freshers (ಹೊಸತಾಗಿ ಕೆಲಸಕ್ಕೆ ಸೇರಿದವರು)  ಕಂಪನಿಗೆ ಬರುವಾಗ ಊಟದ ಡಬ್ಬಿಯ ಜೊತೆಗೆ ಬರುವುದು ತುಂಬಾ ಕಡಿಮೆ. ಊಟದ ಡಬ್ಬಿ ಏನಿದ್ದರು ಸಂಸಾರಸ್ಥರ ಸ್ವತ್ತು ಎನ್ನುವಷ್ಟರ ಮಟ್ಟಿಗೆ ಮಾತು ಚಾಲ್ತಿಯಲ್ಲಿದೆ. ಅದಿರಲಿ, ಈಗ ಊಟದ ಡಬ್ಬಿ ಏನೇನು ಕಥೆ ಹೇಳುತ್ತದೆ ಅನ್ನೋದನ್ನ ನೋಡೋಣ.

೧. ಯಾರಾದರು ಕ್ಯಾಂಟೀನ್ ಗೆ ಊಟದ ಡಬ್ಬಿ ಯನ್ನ ಹಿಡಿದು ಕೊಂಡು ಸ್ವಲ್ಪ ನಾಚುತ್ತ, ಎಲ್ಲ ಕಡೆಗೂ ನೋಡುತ್ತಾ ಬರುತ್ತಿದ್ದಾರೆಂದರೆ, ಅವರು ಇತ್ತೀಚಿಗೆಷ್ಟೇ ಮದುವೆಯಾಗಿದ್ದಾರೆ  ಅಂತ ಅರ್ಥ.

೨. ಕೆಲಸಕ್ಕೆ ಸೇರಿ ಇನ್ನು ಒಂದು ವರ್ಷವೂ ಆಗಿರದೆ ಕೈಯಲ್ಲಿ ಊಟದ ಡಬ್ಬಿ ಹಿಡಿದುಕೊಂಡು ಕ್ಯಾಂಟೀನ್ ಗೆ ರಾಜಾರೋಷವಾಗಿ ಎಂಟ್ರಿ ಹೊಡೆಯುತ್ತಾರೆ ಅಂದ್ರೆ, ಆ ಊಟದ ಡಬ್ಬಿ ನಿಜವಾಗಿಯೂ ಅವರದಲ್ಲ! ಅವರ ಪ್ರಾಜೆಕ್ಟ್ ಟೀಂ ನಲ್ಲಿ ಡಬ್ಬಿ ತಂದಿರೋರು ಹೊರಗಡೆ ಊಟಕ್ಕೆ ಹೋಗಿದ್ದರಿಂದ, ಇವರಿಗೆ ತಾವು ತಂದ ಊಟದ ಡಬ್ಬಿಯನ್ನ ಕೊಟ್ಟಿದ್ದಾರೆ ಅಂತ ಅರ್ಥ.

೩. ಪ್ರತಿ ದಿನವೂ ಮನೆಯಿಂದ ಊಟ ದ ಡಬ್ಬಿ ತರುವವರು,ಒಂದು ದಿನ ಊಟದ ಡಬ್ಬಿ ತರದೇ, ತಮ್ಮ ಪ್ರಾಜೆಕ್ಟ್ ಟೀಂ ನಲ್ಲಿ ಇರೋರಿಗೆಲ್ಲ “Lets go out for lunch today “ ಅಂತ ಮೇಲ್ ಹಾಕಿದರೆ, ಅವರು ಆ ದಿನ ಮನೆಯಲ್ಲಿ ಜಗಳ ವಾಡಿಕೊಂಡು  ಬಂದಿದ್ದಾರೆ ಅಂಥ ಅರ್ಥ.

೪. ಪ್ರತಿ ದಿನವೂ ಊಟದ ಡಬ್ಬಿ ತರೋರು, ಒಂದು ಹದಿನೈದು ದಿನವಾದರೂ ಸತತ ಡಬ್ಬಿ ತಂದಿಲ್ಲ ವೆಂದರೆ ಅವರ ಮನೆಯವರು ತವರು ಮನೆಗೆ ಹೋಗಿದ್ದಾರೆ ಅಂತ ಅರ್ಥ.

೫. ಪ್ರತಿ ದಿನವೂ ಊಟದ ಡಬ್ಬಿ ತರುವವವರು ಆ ದಿನ ಊಟದ ಡಬ್ಬಿ ಯನ್ನ ವಿಶೇಷವಾಗಿ ಎಲ್ಲರಿಗೂ ತೋರಿಸಿ, ಊಟ ಮಾಡುತ್ತಾರೆ ಎಂದರೆ ಆ ದಿನ ಅಡುಗೆ ಅವರ ಹೆಂಡತಿ ಮಾಡಿದ್ದಲ್ಲ, ಅವರ ತಾಯಿ ಮಾಡಿದ್ದು ಅಂತ ಅರ್ಥ!

೬. ಪ್ರತಿ ದಿನವೂ ಕ್ಯಾಂಟೀನ್ ಗೆ ಬಂದು ಊಟ ಮಾಡುವ “ ಅವರು”, ಈ ದಿನ ಊಟಕ್ಕೆ ಕ್ಯಾಂಟೀನ್ ಗೆ ಬರದೆ ತಮ್ಮ ಕ್ಯೂಬಿಕ್ ನಲ್ಲೆ ಊಟದ ಡಬ್ಬಿ ತೆಗೆದು ಊಟ ಮಾಡುತ್ತಿದ್ದಾರೆಂದರೆ, ಒಂದು ಅವರು ಕಾನ್ಫರೆನ್ಸ್ ಕಾಲ್ ನಲ್ಲಿ ಇದ್ದಾರೆಂದು ಅರ್ಥ, ಇಲ್ಲಾ ತರಾತುರಿಯಲ್ಲಿ ಊಟವಾದ  ಮೇಲೆ ಯಾವುದೋ ಒಂದು ವಿಶೇಷ ಮೀಟಿಂಗ್ ಗೆ ತಯಾರಿ ಮಾಡಿಕೊಳ್ಳುತ್ತಾರೆ ಅಂತ ಅರ್ಥ.

ಊಟ ಮತ್ತು ಊಟದ ಡಬ್ಬಿ ಯ ಬಗ್ಗೆ  ಇಷ್ಟು ಸಾಕು!


ಈ ವಾರದ  ಬಿಲ್ಡ್ ಲೇಬಲ್: ಅಪ್ಪಿ ತಪ್ಪಿ ಮ್ಯಾನೇಜರ್ ಆಗಿರೋರು ತಮ್ಮ ಸ್ನೇಹಿತರ ಜೊತೆ ಹೊರಗಡೆ ಊಟಕ್ಕೆ ಹೋಗುವ ಮುನ್ನ ತಮ್ಮ ಊಟದ ಡಬ್ಬಿ ಯನ್ನ ಆಗ ತಾನೇ ಕೆಲಸಕ್ಕೆ ಸೇರಿದ Fresher ಗೆ ಕೊಟ್ಟರೆ, ಆ ಈಡೀ ದಿನ Fresher ಆಕಾಶದಲ್ಲಿ ತೇಲಾಡು ತ್ತಿರುತ್ತಾನೆ. ಯಾಕಂದ್ರೆ ಊಟ ಡಬ್ಬಿಯನ್ನ ಅವನಿಗೆ ಕೊಟ್ಟಿರೋದು ಅವನ ಪಾಲಿಗೆ ಸಾಕ್ಷಾತ್ ಭಗವಂತನ ಸ್ವರೂಪರಾದ “ಮ್ಯಾನೇಜರ್”. ಅದು ಸ್ವತಃ ಅವರ ಊಟದ ಡಬ್ಬಿಯನ್ನು! ಈ ವಿಷಯ ಟೀಂ ನಲ್ಲಿರುವ ಉಳಿದ Fresher ಗಳಿಗೆ ಜೀರ್ಣಿಸಿ ಕೊಳ್ಳದ ವಿಷಯ ಅಂತ ಬಾಯ್ಬಿಟ್ಟು ಬೇರೆ ಹೇಳಬೇಕಾಗಿಲ್ಲ!

No comments:

Post a Comment