Thursday, January 16, 2014

ಅಂಕಣ ೩ : ಸಾಫ್ಟ್ ಕುಟುಂಬ

ಯಾವುದಾದರು ಒಂದು ಗೌರ್ಮೆಂಟ್  ಆಫೀಸ್ ತಗೊಳ್ಳಿ, ಅಲ್ಲಿ ಕೆಲಸಕ್ಕೆ ಸೇರಿದ ಒಂದೆರಡು ವರ್ಷದಲ್ಲಿ ಎಲ್ಲರು ಎಲ್ಲರಿಗೆ ಪರಿಚಯವಾಗಿ ಬಿಟ್ಟಿರುತ್ತಾರೆ. ಇನ್ನು ಒಂದೆರಡು ವರ್ಷ ಕಳೆದರಂತು ಮುಗಿದೇ ಹೋಯ್ತು, ಎಲ್ಲರ ಕುಟುಂಬಗಳು ಎಲ್ಲರಿಗು ಪರಿಚಯ ವಾಗಿ ಹೋಗಿರುತ್ತವೆ.  ಅಲ್ಲಿ ಎಲ್ಲರ ವಿಷಯ ( ಒಳ್ಳೆಯದಿರಲಿ, ಕೆಟ್ಟದಿರಲಿ ) ಎಲ್ಲರಿಗು ಗೊತ್ತಿರುತ್ತೆ. ಅಷ್ಟೊಂದು ಆತ್ಮೀಯತೆ ಅಲ್ಲಿರುತ್ತದೆ. ಒಬ್ಬರ ಕಷ್ಟದಲ್ಲಿ  ಮತ್ತೊಬ್ಬರು ಭಾಗಿಯಾಗುತ್ತಾರೆ. ಇವತ್ತಿಗೂ ಸಹ ಗೌರ್ಮೆಂಟ್ ನೌಕರಿದಾರರ  ಮನೆಯಲ್ಲಿ ಒಂದು ಕಾರ್ಯಕ್ರಮ ನಡೆದರೆ ಸಾಕು, ಸಂಪೂರ್ಣ ಡಿಪಾರ್ಟ್ ಮೆಂಟ್ ಅಲ್ಲಿಗೆ ಬಂದು ಶುಭಕೋರಿ ಹೋಗುತ್ತಾರೆ.



ಯಾಕೋ ಈ ವಿಷಯದಲ್ಲಿ ನಮ್ಮ ಸಾಫ್ಟ್ ಕುಟುಂಬ ಯೆಡವುತ್ತಿದೆ ಅನಿಸುತ್ತದೆ. ನಮ್ಮ ಕೆಲಸದ ಮಧ್ಯೆ ಅದೆಷ್ಟು ಮುಳುಗಿಬಿಟ್ಟಿರುತ್ತಿವಿ ಅಂದರೆ ನಮ್ಮ ಕ್ಯುಬಿಕ್  ನಿಂದ  ಒಂದೆರಡು ಕ್ಯುಬಿಕ್ ಆಚೆಗೆ - ಈಚೆಗೆ ಯಾರಿದ್ದಾರೆ ಅನ್ನೋದನ್ನೇ ಎಷ್ಟೋ ಸಲ ಮರೆತುಬಿಟ್ಟಿರುತ್ತೇವೆ.
ಯಾರಾದರು ಪುಣ್ಯಾತ್ಮ  :
“sweets at my desk
Occasion : Got engaged! “
ಅಂತ ಮೇಲ್ ಹಾಕಿದಾಗಲೇ ನಮಗೆ ಅವನ ನಿಶ್ಚಿತಾರ್ಥ ಆಗಿದೆ ಅಂತ ಗೊತ್ತಗುತ್ತದೆ. ಇಲ್ಲಾಂದ್ರೆ ಅವನ್ಯಾರೋ, ನಾವ್ಯಾರೊ.  ಎಷ್ಟೊಂದು ಸಲ   ಈ ತರಹದ ಮೇಲ್ ಗಳು ಬಂದಾಗ (ಉದಾಹರಣೆಗೆ : ಗೋಪಾಲ್ ಎನ್ನುವವನಿಂದ ಮೇಲ್ ಬಂತು ಅಂದು ಕೊಳ್ಳೋಣ) ತಕ್ಷಣ ನಮ್ಮ ಪಕ್ಕದಲ್ಲಿರೋರನ್ನ ಪಿಸು ಮಾತಿನಲ್ಲಿ ನಾವು ಕೇಳೋ ಪ್ರಶ್ನೆ :
“ ಹೇಯ್, ಈ ಗೋಪಾಲ್ ಅಂದ್ರೆ ಯಾರು? “.
 ಅವರು ಹೇಳಿದ ಮೇಲೆ .....
“ ಒಹ್.. ಅವರ… “ ಅಂತ ಭಾರಿ ಗೊತ್ತಿರೋರ ಹಾಗೆ ಬಿಲ್ಡ್ ಅಪ್ ಕೊಟ್ಟು ಸ್ವೀಟ್ಸ್ ತಿಂದು ಅವರಿಗೊಂದು ವಿಶ್ ಮಾಡಿ ತಿರುಗಾ ನಮ್ಮ  ಕ್ಯುಬಿಕ್ ನಲ್ಲಿರುವ ಸಿಸ್ಟಮ್ ನಲ್ಲಿ ತಲೆ ತುರುಕಿ ಕೂಡುವುದು ನಮ್ಮ ವಾಡಿಕೆ ಯಾಗಿಹೋಗಿದೆ.
ತಿರುಗಾ ನಮಗೆ ಗೋಪಾಲನ ಬಗ್ಗೆ ನೆನಪಾಗುವುದು, ಅವನ ಇನ್ನೊಂದು ಮೇಲ್:
“ Blessed with baby boy. Both Mother and Baby doing fine..  “  ಬಂದಾಗಲೇ !!
“ ಎಲಾ ಇವನ! ಇನ್ನು ಮೊನ್ನೆ ತಾನೇ ಎಂಗೇಜ್ಮೆಂಟ್  ಆಗಿತ್ತು; ಅದಾಗಲೇ ಮದುವೇನೂ ಆಗಿ ಮಕ್ಕಳೂ ಆಗಿ ಹೋಯ್ತಾ?” ಅನ್ನೋ ಮಾತು ನಮಗೆ ಗೊತ್ತಿಲ್ಲದಂತೆಯೇ ನಮ್ಮ ಬಾಯಿ ತುದಿಗೆ ಬಂದಿರುತ್ತದೆ.
ಆದರೆ ಯಾವುದಾದರೂ ಸ್ಕೂಲು, ಕಾಲೇಜು, ಬ್ಯಾಂಕು … ತಗೊಳ್ಳಿ ಹೀಗಾಗಲು ಚಾನ್ಸೇ  ಇಲ್ಲ!. ಒಂದು ಕಾಲೇಜಿನಲ್ಲಿ  ಗುಮಾಸ್ತನ ಮಗನ ಮದುವೆಯಾದರೂ ಕಾಲೇಜು ಪ್ರಿನ್ಸಿಪಾಲರಿಗೂ ವಿಷಯ ಗೊತ್ತಿರುತ್ತದೆ. ಆದರೆ ನಮ್ಮ ಸಾಫ್ಟ್ ಲೋಕದಲ್ಲಿ ಹಾಗಲ್ಲ. “ಇಲ್ಲಿ ಎಲ್ಲರು ಎಲ್ಲರಿಗೂ ಗೊತ್ತು ಮತ್ತು ಯಾರು ಯಾರಿಗೂ ಗೊತ್ತಿಲ್ಲ”  ಅಂದರೆ ತುಂಬಾ ಸೂಕ್ತ.  ಇನ್ನು ಬಿಡಿಸಿ ಹೇಳಬೇಕಂದರೆ, ಸಾಫ್ಟ್ ಲೋಕದಲ್ಲಿ ಯಾರಾದರು ಎದುರಿಗೆ ಬಂದಾಗ ತುಟಿ ಅಗಲ  ಮಾಡಿ ನಗುವಷ್ಟು ಎಲ್ಲರು ಎಲ್ಲರಿಗೂ ಗೊತ್ತು. ಆಮೇಲೆ ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ. ಅಪರೂಪಕ್ಕೊಮ್ಮೆ ಸಿಕ್ಕಾಗಲೂ ಸಹ ಒಂದೆರಡು ಮಾತಿನ ನಂತರ ಏನು ಮಾತಾಡಬೇಕು ಅಂತ ತಿಳಿಯದೆ:
“ Lets catch up some time and talk“ ಅಂತ ಒಬ್ಬ ಅಂದರೆ
“Sure .. Sure .. carry on .. see .. u … bye “ ಅಂತ ಇನ್ನೊಬ್ಬ ಅನ್ನುತ್ತಾನೆ.
ಎದುರು - ಬಿದುರು ಸಿಕ್ಕಾಗಲೆ ಐದು ನಿಮಿಷ ಮಾತಾಡದವರು ಮತ್ತೆ ಯಾವಾಗ  “catch up” ಆಗುತ್ತಾರೆ ಅನ್ನುವುದು ಆ ಭಗವಂತನೇ ಬಲ್ಲ !
ನಿಜವಾಗಲು ಸಾಫ್ಟ್ ಲೋಕದಲ್ಲಿ ಜನರು ಅಷ್ಟೊಂದು ಬ್ಯುಸಿ ನಾ? ಅಥವಾ ನಾವು ಅಷ್ಟೊಂದು ಬ್ಯುಸಿ ಅಂತ ತೊರಿಸಿಕೊಳ್ಳುತ್ತೇವಾ? ಅಥವಾ ಜನರೇ ಬೇಡವೆಂದು ನಿಧಾನವಾಗಿ ಒಬ್ಬಂಟಿ ತನಕ್ಕೆ ನಾವು ಒಗ್ಗಿಕೊಂಡು ಬಿಡುತ್ತಿದ್ದೆವಾ ?
ಉತ್ತರ ನಿಜವಾಗಲು ನನಗೆ ಗೊತ್ತಿಲ್ಲ .....


ಈ ವಾರದ ಬಿಲ್ಡ್ ಲೇಬಲ್ : ಎಲ್ಲರು ಒಟ್ಟಿಗೆ ಇರುವುದಕ್ಕೆ ಕುಟುಂಬ ಅನ್ನುವುದಕ್ಕಿಂತಲೂ, ಒಬ್ಬರ ಬಗ್ಗೆ ಇನ್ನೊಬ್ಬರು ಕಾಳಜಿ ತೋರಿಸುವುದೇ ನಿಜವಾದ ಕುಟುಂಬ ಎನ್ನಬಹುದು.

No comments:

Post a Comment