Thursday, February 6, 2014

ಅಂಕಣ ೬ : ಸಾಫ್ಟ್ ಪರಪಂಚ

ಇನ್ನೇನು ಆಕಾಶಕ್ಕೆ ಮುತ್ತು ಕೊಟ್ಟವೇನು ಅನ್ನುವಷ್ಟು ಎತ್ತರದ ಕಟ್ಟಡಗಳ ಒಳಗೆ ಇರುವ ವಾತಾವರಣವೇ ಒಂದು ರೀತಿ.  ಹೊರಗಿನ ಜಗತ್ತಲ್ಲಿ  ಚಳಿ ಇದ್ದರೂ, ಬಿಸಿಲು ಇದ್ದರೂ, ಮಳೆ ಬಂದರೂ, ಗಾಳಿ ಬೀಸಿದರೂ  ಏನು ಗೊತ್ತಾಗದ ಹಾಗೆ ಒಳಗಡೆ ಒಂದೇ ರೀತಿಯ ವಾತಾವರಣ ವಿರುತ್ತದೆ. ಬೆಳಿಗ್ಗೆ ಸಾಮಾನ್ಯವಾಗಿ ೯ ಗಂಟೆಯ ಆಸುಪಾಸಿಗೆ ಇಂತಹ ಕಟ್ಟಡಗಳ ಒಳಕ್ಕೆ ಹೋಗುವ ನೂರಾರು ವಾಹನಗಳು, ಇದೆ ಕಚೇರಿಯ  ಸಾವಿರಾರು ಜನರನ್ನ ಪ್ರತಿದಿನವೂ ಹೊತ್ತೊಯ್ಯುವ ಹಲವಾರು ವಾಹನಗಳು- ಕಣ್ಣಿಗೆ ಕಾಣುವ ದೃಶ್ಯ ಸರ್ವೇ ಸಾಮಾನ್ಯ. ಇದು ನಮ್ಮ ಬೆಂಗಳೂರು!.
ಇಲ್ಲಿ ಗಗನ ಚುಂಬಿಸುವ ಕಟ್ಟಡಗಳು ಬಹುತೇಕ ಸಾಫ್ಟ್ ವೇರ್ ಕಂಪನಿಗಳು!.




ಕಂಪನಿಯ ಒಳಗಡೆ ಹೋದ ಉದ್ಯೋಗಿಗಳು ಮೊದಲು ಒಂದಿಷ್ಟು ಉಪಹಾರ ಜ್ಯೂಸು, ಕಾಫಿ, ಟೀ.. ಹೀಗೆ  ಮುಗಿಸಿಕೊಂಡು ತಮ್ಮ ತಮ್ಮ ಕ್ಯೂಬಿಕ್ ಗಳಲ್ಲಿ ಕುಳಿತರೆಂದರೆ  ಸಾಕು, ಸೂರ್ಯ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಬಂದ  ಪರಿವೆ ಬಹಳಷ್ಟು ಜನರಿಗೆ ಇರುವುದಿಲ್ಲ. ಕೆಲಸ ದಲ್ಲಿ ಮುಳುಗಿ ಹೋಗುವ ಪರಿಯೇ ಅಂಥದ್ದು. ಸಾಫ್ಟ್ ಲೋಕದ ಬಹಳಷ್ಟು ಜನರಿಗೆ ಸೂರ್ಯನ ಬಿಸಿಲೆ ಮೈಗೆ ತಾಕುವುದಿಲ್ಲ, ಸಂಜೆಯ ತುಂತುರು ಮಳೆ ಅವರ ಮುಖಕ್ಕೆ ಸಿಡಿಯುವುದಿಲ್ಲ, ಒಂದಿಷ್ಟು ಜೋರಾದ ಗಾಳಿಯು ಅವರ ಹತ್ತಿರ ಬರದ ಹಾಗೆ ಕಟ್ಟಡದ ಎಲ್ಲ ಕಡೆಗೂ ಬಂದೋ ಬಸ್ತು ಮಾಡಲಾಗಿರುತ್ತದೆ.


ಹಾಗಂತ ಸಾಫ್ಟ್ ಲೋಕದ ಒಳಗಡೆ ಎಲ್ಲವೂ ಸಾಫ್ಟ್ ಆಗಿಯೇ ಇರುತ್ತದೆ ಅಂದುಕೊಂಡರೆ ಅದು ಶುದ್ದ ತಪ್ಪು. ಇಲ್ಲಿಯೂ ಒಂದಿಷ್ಟು ಗುದ್ದಾಟಗಲಿರುತ್ತವೆ, ಪರಸ್ಪರ ತಿಕ್ಕಾಟ ಗಳಿರುತ್ತವೆ, ಇಲ್ಲಿ ಕೆಲಸ ಮಾಡುವವರು ಮನುಷ್ಯರೇ ಆಗಿರುವುದರಿಂದ ಅವರಿಗೂ ತಮ್ಮದೇ ಆದ ಕಷ್ಟ - ಸುಖಗಳು ಇರುತ್ತವೆ. ಹೊರಗಿನ ಜಗತ್ತಿಗೆ ಕಾಣಿಸುವುದು ಕೇವಲ ನಮ್ಮ  ಎ. ಸಿ. ರೂಂ, ಮತ್ತು ತಿಂಗಳ ಕೊನೆಯಲ್ಲಿ ನಾವು ಎಣಿಸುವ ಸಂಬಳ. ಒಳಗಡೆ ಇರುವ ನಮಗೆ ಮಾತ್ರ ಗೊತ್ತು ಎ. ಸಿ. ರೂಂ ನಲ್ಲಿರುವ ಬಿಸಿ ಎಂತದ್ದು ಎಂದು.


ಮೊನ್ನೆ ನನ್ನ ಸ್ನೇಹಿತನ ಮನೆಗೆ ಭೇಟಿ ಕೊಟ್ಟಾಗ ಅವರ ತಂದೆ ಜೊತೆ ಒಂದಿಷ್ಟು ಮಾತಾನಾಡಿದೆ.
ನಮ್ಮಿಬ್ಬರ ಮಾತುಕತೆ ಹೀಗಿತ್ತು:
” ಏನಪ್ಪಾ ಹೇಗಿದೀಯಾ ?”
"ಚೆನ್ನಾಗಿದೀನಿ ಅಂಕಲ್”
“ಹೇಗೆ ನಡೀತಾ ಇದೆ ಕೆಲಸ?”
“ಚೆನ್ನಾಗಿ ನಡೀತಾ ಇದೆ ಅಂಕಲ್”
ಅದಕ್ಕೆ ಅವರು ಕೊಟ್ಟ ಉತ್ತರ ಹೇಗಿತ್ತು : “ ನಿಮ ಸಾಫ್ಟವೇರ್ ನೌರದು ಏನು ಕೆಲಸಾನೊ ಏನೋ, ಒಂದು ಗೊತ್ತಾಗೊಲ್ಲ. ನೀವು ಇಪ್ಪತ್ತು ನಾಲಕ್ಕು ಗಂಟೇನೂ computer ಮುಂದೆ ಕೂತಿರ್ತೀರಾ, AC Room ನಲ್ಲಿ ಇರ್ತೀರಾ.  ಒಂಥರಾ ರೆಫ್ರಿಜಿ ರೆಟರ್  ಒಳಗಿರುವ ಹಣ್ಣಿನ ಥರ ನೀವು. ಒಳಗೆ ಇರೋವರ್ಗೂ ಮಾತ್ರ ಆರಾಮಾಗಿ ಇರ್ತೀರಾ, ಹೊರಗಡೆ ಬಂದ ತಕ್ಷಣ ನಿಮ್ಮ ಒದ್ದಾಟ ನೋಡೋಕೆ ಆಗಲ್ಲ”

ಅವರು ಏನು ಆಲೋಚಿಸಿ ಈ ಮಾತು ಹೇಳಿದರೋ ನನಗೆ ಗೊತ್ತಾಗಲಿಲ್ಲ. ಆದರೆ ಅದರಲ್ಲಿ ಏನೋ ಒಂದು ಅರ್ಥ ಇದೆಯಂತ ಅನಿಸ್ತು. ಅದಕ್ಕೆ ನೀವೂ  ಓದ್ಕೊಳ್ಳಿ  ಅಂತ ಹಾಕಿದೆ.

ಇದು ಒಂದು ತರಹ “rat-race“ ಇದ್ದ ಹಾಗೆ. requirements ಅರ್ಥಮಾಡಿಕೊಳ್ಳಲು developer ಹೆಣಗಾಡುತ್ತಿದ್ದರೆ, developer ಬರೆದ ಕೋಡ್ ಹಿಂದೆ tester ಬಿದ್ದಿರುತ್ತಾನೆ, ಇವರಿಬ್ಬರ ಹಿಂದೆ ಪ್ರೋಸೆಸ್ ಎನ್ನುವ ಅಸ್ತ್ರ ಹಿಡಿದು Quality ಎನ್ನುವ ಮನುಷ್ಯ  ಕಾವಲು ಇರುತ್ತಾನೆ. ಇವರೆಲ್ಲರ ಮೇಲೆ ಮ್ಯಾನೇಜರ್ ಕುಳಿತಿದ್ದರೆ, ಮ್ಯಾನೇಜರ್ ತಲೆಯ ಮೇಲೆ ಯಾವಾಗಲು ಒಬ್ಬ ಕ್ಲೈಂಟ್ ಕುಳಿತಿರುತ್ತಾನೆ.

ಒಟ್ನಲ್ಲಿ, ಕಾರ್ಡ್ ಸ್ವೈಪ್  ಮಾಡುವ ಮೂಲಕ ಶುರುವಾಗುವ ನಮ್ಮ ದಿನಚರಿ, ಮತ್ತೆ ಮುಗಿಯುವುದು ಕಾರ್ಡ್ ಸ್ವೈಪ್ ಮಾಡುವ ಮೂಲಕವೇ. ಇದರ ನಡುವೆ ಇರುವ ನಮ್ಮ ಕೆಲಸ, ಒಂದಿಷ್ಟು ಮಾತು ಕಥೆ, ತಲೆ ಕೆಟ್ಟಾಗ ಕುಡಿಯುವ ಒಂದೆರಡು ಸಲದ ಕಾಫಿ-ಟೀ, ಹೆಣಗಾಟ- ಹಾರಾಟ.. ಹೀಗೆ .. ಇರುತ್ತದೆ ನಮ್ಮ ಬದುಕು. ಸಾಫ್ಟ್ ಲೋಕದ ಇನ್ನೊಂದು ವಿಶೇಷ ಎಂದರೆ ಇಲ್ಲಿ ನಮ್ಮ ದೇಹದ ಎಲ್ಲ ಅಂಗಾಂಗ ಗಳಿಗಿಂತ ಜಾಸ್ತಿ ಕೆಲಸ ವಿರುವುದು ತಲೆ ಮತ್ತು ಕಣ್ಣುಗಳಿಗೆ. ಸದಾ ಮುಂದೆಯಿರುವ ಕಂಪ್ಯೂಟರ್ ನೋಡಿ ನೋಡಿ ಕಣ್ಣುಗಳು ಉರಿ ಉರಿ ಯಾಗಿದ್ದಾರೂ ಕೆಲಸ ಮುಂದು ವರಿಯಲೇ ಬೇಕು. ಇನ್ನು ತಲೆಯ ವಿಷಯವಂತೂ  -  ಅದು ಕೆಲಸ ಮಾಡುವುದರಿಂದ  ಹಿಡಿದು, ಹೊರಗಿನಿಂದ ಬರುವ ಎಲ್ಲ ರೀತಿಯ ಒತ್ತಡಗಳನ್ನು ನಿಭಾಯಿಸುವ ವರೆಗೂ ಎಲ್ಲ ಕೆಲಸವೂ ತಲೆಯ ಮೇಲೆಯೇ ಇರುತ್ತದೆ. ಹೆಚ್ಚು - ಕಡೆಮೆ ಟೈಪ್ ಮಾಡುತ್ತೇವೆ ಎನ್ನುವ ಕಾರಣ ದಿಂದ ಕೈ ಬೆರಳುಗಳನ್ನ ಬಿಟ್ಟರೆ ಉಳಿದೆಲ್ಲ ಅಂಗಾಂಗ ಗಳಿಗೂ ಇಲ್ಲಿ ಕಂಪ್ಲೀಟ್ ರೆಸ್ಟ್ !


ಈ ವಾರದ ಬಿಲ್ಡ್ ಲೇಬಲ್ : ಸಾಫ್ಟ್ ವೇರ್ ನಲ್ಲಿ ಕೆಲಸ ಮಾಡೋರ ಮೈ ಕೈ ಎಲ್ಲ ತಣ್ಣಗೆ, ತಲೆ ಮಾತ್ರ ಸದಾ ಬಿಸಿ.

No comments:

Post a Comment