Thursday, January 9, 2014

ಅಂಕಣ ೨ : ಪೇಪರ್ ಹಾಕ್ತೀನಿ


ಸಾಫ್ಟ್ ಲೋಕದಲ್ಲಿ “ ಪೇಪರ್ ಹಾಕಿದೀನಿ” ಅಂದ್ರೆ ರಿಸೈನ್ ಮಾಡಿದೀನಿ  ಅಂತ ಅರ್ಥ. ಅಂದ್ರೆ ಕೆಲಸಕ್ಕೆ ರಾಜಿನಾಮೆ ಕೊಟ್ಟಿದೀನಿ ಅಂತ ಅರ್ಥ. ಇದನ್ನೇ ಇಂಗ್ಲಿಷ್ ನಲ್ಲಿ ಸ್ವಲ್ಪ ಸ್ಟೈಲ್ ಆಗಿ "I have put my papers” ಅಂತ ಹೇಳ್ತಾರೆ. ಈ ಪೇಪರ್ ಹಾಕ್ತೀನಿ, ಹಾಕಿದೀನಿ ಅನ್ನೋರ ಬಗ್ಗೆ ಸ್ವಲ್ಪ ತಿಳ್ಕೊಳ್ಳೋಣ ಬನ್ನಿ.


“ಕೆಲವೊಂದು ಸಲ ಆಗುವುದೇ ಹೀಗೆ. ಏನು ಮಾಡಿದರೂ, ಎಷ್ಟೇ ಹುಡುಕಾಡಿದರೂ ಹುಡುಕುತ್ತಿರುವ ಬಗ್ ಮಾತ್ರ ಕಣ್ಣಿಗೆ ಬೀಳುವುದಿಲ್ಲ. ನಮ್ಮ ಕಂಪೋನೆಂಟ್ ನ ಇಡೀ ಕೋಡ್ ನೆಲ್ಲ ತಡಕಾಡಿದರೂ, ಎಲ್ಲಿ ಉಲ್ಟಾ ಹೊಡಿತಾ ಇದೆ ಅಂತ ಗೊತ್ತಾಗುವುದಿಲ್ಲ.

ಸರಿ ಹೋಯ್ತಾ ? ಸರಿ ಹೋಯ್ತಾ ? ಅಂತ ಬೆನ್ನ ಹಿಂದೆ ಲೀಡ್ ನಿಂತಿದ್ದರೆ , still how many labels are pending for the new build? ಅಂತ ಮ್ಯಾನೇಜರ್  indirect ಆಗಿ ನನಗೆ "ಬೇಗ ಕೆಲಸ ಮುಗಿಸು, ಲೇಬಲ್ ಸಬ್ಮಿಟ್ ಮಾಡು" ಅನ್ನೋ ರೀತಿಯಲ್ಲಿ ಹೇಳುತ್ತಿರುತ್ತಾನೆ. ನನ್ನ ಕಡೆಗೆ ಬೇರೆ ನೋಡುತ್ತಿರುತ್ತಾನೆ. ಹೊಸತಾಗಿ ಆಗಬೇಕಿದ್ದ ಬಿಲ್ಡ್ ಗೆ ಬೇರೆ ಎಲ್ಲರೂ  ತಮ್ಮ ತಮ್ಮ  ಲೇಬಲ್ ಗಳನ್ನ ಕೊಟ್ಟು ಆರಾಮಾಗಿ ಕೂತಿರುತ್ತಾರೆ. ನನ್ನ ಒಂದು ಲೇಬಲ್ ನಿಂದ ಬಿಲ್ಡ್ ಗೆ ತಡವಾಗುತ್ತಿರುತ್ತದೆ. ಪ್ರಾಜೆಕ್ಟ್ ಟೀಂ ನ ಎಲ್ಲರ ದೃಷ್ಟಿ ನನ್ನ ಮೇಲೆ ಇರುತ್ತದೆ. ಪ್ರೆಷರ್ ನಿಂದ ತಲೆ ಕಾದು  ಕಾದು  ಒಳ್ಳೆ ಕುಕ್ಕರ್ ಥರ ಸೀಟಿ ಹೊಡಿತಾ ಇರುತ್ತೆ. ಅವಾಗ್ಲೇ ಅನಿಸೋದು : “ಥುತ್ ತೆರಿ, ನಂದು ಒಂದು ಜನ್ಮಾನಾ ? ಮೊದ್ಲು ಪೇಪರ್ ಹಾಕಿ ಬೇರೆ ಏನಾದ್ರು ನೋಡ್ಕೋಬೇಕು ಅಂತ! “ ಇದು ಒಂದು ಥರದ  ಪೇಪರ್ ಹಾಕ್ತೀನಿ ಅನ್ನೋ ಕೆಟಗರಿ.
“ಅವರು ಇರುವುದೇ ಹಾಗೆ, ಎಂದು ಬಿಡದವರು ಮತ್ತು ಬಿಟ್ಟು ಹೋಗುತ್ತೇನೆ ಅಂತ ಯಾವಾಗಲು ಹೇಳುತ್ತಿರುವವರು. ನೀವು ಅವರ ಜೊತೆ ಒಂದು ಸಲ ಮಾತನಾಡಿಸಿ ನೋಡಿ, “ ಛೆ, ಯಾವನಿಗ್ರಿ ಬೇಕು ಈ ಕೆಲಸ, ಏಳು ವರ್ಷದಿಂದ ಮಾಡಿದ್ದೆ ಮಾಡಿ ಸಾಕಾಯ್ತು. ಹೊರಗಡೆ ಹೋಗಿ ಅತ್ಲಾಗಿ ಏನಾದ್ರೂ ಬೇರೆ ಮಾಡೋಣ ಅನಿಸಿ ಬಿಟ್ಟಿದೆ. ಪ್ರತಿ ವರ್ಷ ಬಕೆಟ್ (ಬಕೆಟ್ ಹಿಡಿಯುವುದು ಅಂದರೆ ಮ್ಯಾನೇಜರ್ ಅನ್ನು ಖುಷಿ ಪಡಿಸುವುದು ಅಂತ ಅರ್ಥ) ಹಿಡಿಲೇ ಬೇಕು. ನಿಜವಾದ ಕೆಲಸಕ್ಕೆ ಬೆಲೆನೆ ಇಲ್ಲ. ಥೋ ತ್ತೆರಿ..... ” ಹೀಗೆ ಮುಂದು ವರಿಯುತ್ತಲೇ ಇರುತ್ತದೆ ಇವರ ಭಾಷಣ. ವೀಪರ್ಯಾಸ ಅಂದರೆ ಕಳೆದು ಏಳೆಂಟು  ವರ್ಷ ದಿಂದಲೂ ಇವರು ಹೀಗೆ ಅಂದುಕೊಂಡು ಬಂದಿರುತ್ತಾರೆ. ಒಂದು ದಿನವೂ ಸಹ ಆಡಿದ ಮಾತನ್ನು ಮಾಡಿ ತೋರಿಸಿರುವುದಿಲ್ಲ.
ಅವರ ತಲೆ ಕೆಟ್ಟಾಗ, ಮೂಡ ಸರಿ ಇಲ್ಲ ದಿರುವಾಗ, ಮ್ಯಾನೇಜರ್ ಕೈಲಿ ಚೆನ್ನಾಗಿ ಸಪರೆಟ್ ಆಗಿ ಮೀಟಿಂಗ್ ರೂಂ ನಲ್ಲಿ ಬೈಸಿಕೊಂಡಾಗ, ಕೊಟ್ಟಿರೋ ಲೇಬಲ್ ಸರಿಯಾಗಿ ಇಲ್ಲದಿರುವಾಗ, ಫಿಕ್ಸ್ ಮಾಡಿದ ಬಗ್ ಯಡವಟ್ಟಾಗಿ ವಾಪಾಸು ಬಂದು ಅವರಿಗೇನೆ ಅಮರಿಕೊಂಡಾಗ,  ಅವರು ಆಡುವುದು ಹೀಗೆಯೇ. ಒಂದು ಹತ್ತು ನಿಮಿಷ ಅಷ್ಟೇ! ಆಮೇಲೆ ತಾವು ಏನು ಮಾತಾಡಿಯೇ ಇಲ್ಲವೇನು ಅನ್ನೋವಂತೆ ಮತ್ತೆ ತಮ್ಮ ಕ್ಯೂಬಿಕ್ ಗೆ ಬಂದು  ಸಿಸ್ಟಮ್ ಅನ್ ಲಾಕ್ ಮಾಡಿ  ಕೋಡ್ ನ ಓಪನ್ ಮಾಡಿಕೊಂಡು ಡಿಬಗ್ ಮಾಡ್ತಾ ಕೂತು ಬಿಟ್ಟಿರುತ್ತಾರೆ. ಅದೇ ಸಮಯಕ್ಕೆ ನೀವು ಅವರ ಹತ್ತಿರ ಹೋಗಿ:
“ಏನ್ರಿ, ಏನೋ ಫುಲ್ ಸೀರಿಯಸ್ ಆಗಿ ಕೆಲಸ ಮಾಡ್ತಾ ಇದೀರಾ, ಬನ್ನಿ ಕಾಫಿ ಕುಡಕೊಂಡು ಬರೋಣ” ಅನ್ನಿ. 
ಪಾಪ ಅವರ ಧ್ವನಿಯೆಲ್ಲ ಇಳಿದು ಹೋಗಿ, ಅಳಿದುಳಿದ ಶಕ್ತಿಯಲ್ಲಿ: 
“ಇವತ್ತೇ ಬಿಲ್ಡ್ ಗೆ ಲೇಬಲ್  ಸಬ್ಮಿಟ್ ಮಾಡಬೇಕಂತೆ, ಅದು ಅಲ್ದೆ ಮ್ಯಾನೇಜರ್ ಬೇರೆ ತಮ್ಮ ರೂಮಿಗೆ ಕರ್ಕೊಂಡು ಹೋಗಿ ಉಗ್ದಿದಾರೆ. ಅದಕ್ಕೆ ಸ್ವಲ್ಪ ಕೋಡ್  ನೋಡ್ತಾ ಕೂತಿದೀನಿ. ಕಾಫಿ ಗೆ ಬರೋಕೆ ಆಗಲ್ಲ ರೀ, ನೀವು ಹೋಗ ಬನ್ನಿ. ನಾನು ಆಮೇಲೆ ಹೋಗ್ತೀನಿ”  ಅಂತ ಉತ್ತರ ಬರುತ್ತದೆ. ಇಂತವರು ಬಹಳ ಬೇಗ ಹರ್ಟ್ ಆಗುತ್ತಾರೆ ಮತ್ತು ಅಷ್ಟೇ ಬೇಗ ಅದನ್ನ ಮರೆತು ತಮ್ಮ ಕೆಲಸದಲ್ಲಿ ತೊಡಗಿ ಕೊಂಡು ಬಿಡುತ್ತಾರೆ.” ಇದು ಇನ್ನೊಂದು ಥರ ಪೇಪರ್ ಹಾಕ್ತೀನಿ ಅನ್ನೋ ಕೆಟಗರಿ.
ಇನ್ನು ಮೂರನೆಯ ಥರದೋರು : ಸಾಫ್ಟ್  ಜಗತ್ತನ್ನೇ ಇನ್ನು ಸರಿಯಾಗಿ ನೋಡದ  ಉತ್ಸಾಹಿಗಳು. ಇವರು  ಪದೇ ಪದೇ  ಆಡುವ ಮಾತು : “ ಪೇಪರ್ ಹಾಕ್ತೀನಿ” . ಹಿಂದೂ ಮುಂದು ನೋಡದೆ ಈ ಮಾತು ಆಡಿದಾಗ ಕೇಳುವವರಿಗೆ ತಲೆ ಕೆಡದೆ ಇರುವುದಿಲ್ಲ. “ ಪೇಪರ್ ಹಾಕ್ತೀನಿ” ಅನ್ನೋ ಮಾತು ಪ್ರತಿಷ್ಠೆ ಗೋ, ಪೌರುಶಕ್ಕೋ ಆಡುವ ಮಾತು ಅಂತ ನಮ್ಮ ಉತ್ಸಾಹಿಗಳು ತಿಳಿದು ಕೊಂಡಿರುತ್ತಾರೆ. ಸಾಫ್ಟ್ ಲೋಕದಲ್ಲಿ ಮಾತೆತ್ತಿದರೆ “ ಈ ಸಲ ಗ್ಯಾರಂಟಿ ಕಣೋ, ಪೇಪರ್ ಹಾಕೇ  ಬಿಡ್ತೀನಿ” ಅನ್ನುವ ಭೂಪರು ಬಹಳಷ್ಟು ಜನ ಸಿಗ್ತಾರೆ. ಮೊನ್ನೆ ಯಾರೋ ಒಬ್ಬರು ಅವರು ಪ್ರತಿ ಸಲದ ರೂಢಿಯಂತೆ, “ ಈ ಸಲ ನೋಡ್ತಾ ಇರು, ಪೇಪರ್ ಹಾಕೇ ಬಿಡ್ತೀನಿ” ಅಂದಾಗ, ಇದೇ ಮಾತು ಕೇಳಿ ಕೇಳಿ ರೋಸಿ ಹೋಗಿದ್ದ ಎದುರಿಗಿದ್ದವನು ಕೇಳಿದ, “ಹೊರಗಡೆ ಜಾಬ್ ಹುಡುಕ್ಕೊಂಡಿದೀಯಾ?” “ಇನ್ನು ಇಲ್ಲ”. “ ಹಾಗಾದ್ರೆ, ಪೇಪರ್ ಹಾಕ್ತೀನಿ, ಪೇಪರ್ ಹಾಕ್ತೀನಿ ಅನ್ನೋದು ಬಿಟ್ಟು, ಸುಮ್ನೆ ತೆಪ್ಪಗೆ ಇಲ್ಲೇ ಕೆಲಸ ಮಾಡು. ಇರೋ ಕೆಲಸಾನು ಕಳಕೊಂಡ್ರೆ ಹೊರಗಡೆ “ದಿನಾ ಪೇಪರ್ ಹಾಕೋ” ಕೆಲಸಾನೂ ಸಿಗಲ್ಲ!” ಅಂದಾಗ
“ಪೇಪರ್ ಹಾಕ್ತೀನಿ ಅಂದವನ ಮುಖ ಪೆಚ್ಚು - ಪೆಚ್ಚಾಗಿತ್ತು”.   ಈ ವಾರದ ಬಿಲ್ಡ್ ಲೇಬಲ್: ಪೇಪರ್ ಹಾಕೊಕಿಂತ ಮುಂಚೆ ಅಟ್ ಲೀಸ್ಟ್ “ಪೆಪ್ಪರಮೆಂಟಾಯಿ”  ತಿನ್ನೋವಷ್ಟು  ಕಾಸು ಜೇಬಲ್ಲಿದೆಯಾ? ಅಂತ ನೋಡ್ಕೊಳ್ಳೊದು ಒಳ್ಳೇದು!

No comments:

Post a Comment