Thursday, January 23, 2014

ಅಂಕಣ ೪ : ಸಾಫ್ಟ್ ಪಡ್ಡೆಗಳು

ಏನಪ್ಪಾ ಇದು ಸಾಫ್ಟ್ ವೇರ್ ರಿಲೇಟೆಡ್ ಟಾಪಿಕ್ಕೋ  ಅಥವಾ ಬೇರೆ ಯಾವುದೋ ಟಾಪಿಕ್ಕೋ ? ಅಂತ ಅನ್ಕೋಬೇಡಿ. ಖಂಡಿತ ಇದು “ಸಾಫ್ಟ್ “ ಟಾಪಿಕ್. ಸಾಫ್ಟ್ ಇಂಜಿನಿಯರ್ ಗಳು ಮನುಷ್ಯರೇ. ನಮ್ಮಲ್ಲಿಯೂ “ ಪಡ್ಡೆಗಳು” ಇರ್ತಾರೆ ಕಣ್ರೀ.
ಬರೀ ನಮ್ಮಲ್ಲಿ ಏನು ಬಂತು ಬೇರೆ ಯಾವುದೇ ಫಿಲ್ಡ್ ತಗೊಂಡರೂ ಅಲ್ಲೊಂದಿಷ್ಟು  ಜನ ಪಡ್ಡೆ ಗಳು ಇದ್ದೆ ಇರ್ತಾರೆ ಅನ್ನೋದು ನನ್ನ ವಾದ. ಅಷ್ಟಕ್ಕೂ “ಪಡ್ಡೆ” ಅನ್ನೋ ಶಬ್ದ ಕೇವಲ  ಅರ್ಧಂಬರ್ಧ ಡಿಗ್ರಿ ಮುಗಿಸಿದ, ಅಥವಾ ಕೆಲ್ಸಾ ಇಲ್ದೆ ಖಾಲಿ ಹರಟೆ ಹೊಡೆಯೋರ ‘ ಕಾಪಿ ರೈಟ್ “ ಏನು ಅಲ್ಲವಲ್ಲ ?


ಸಾಫ್ಟ್ ವೇರ್ ನಲ್ಲಿ ಈ ಪಡ್ದೆಗಳದ್ದೆ  ಒಂದು ಗುಂಪು ಇರುತ್ತೆ. ಅದೇನೋ ಗೊತ್ತಿಲ್ಲ, ಸಾವಿರಾರು ಜನರ ಮಧ್ಯೆಯೂ ಈ ಥರದೊರೆಲ್ಲ ಅದೇಗೋ ಹತ್ತಿರವಾಗಿ ಒಂದು ಗುಂಪು ಕಟ್ಟಿ ಕೊಂಡು ಬಿಟ್ಟಿರುತ್ತಾರೆ. ಇಂತವರು ಯಾವುದೇ ಕಂಪನಿ ಗೆ  ಸೇರಿದರೂ ಸಹ ಅತ್ಯಂತ ಕಡಿಮೆ ಸಮಯದಲ್ಲಿ ಹೊಸ ಕಂಪನಿ ಯಲ್ಲಿ ತಮ್ಮ ಗುಂಪನ್ನ ಪತ್ತೆ ಹಚ್ಚಿ ಅದರಲ್ಲಿ ಒಂದು  ಪ್ಲೇಸು ಫಿಕ್ಸ್ ಮಾಡಿಕೊಂಡು ಬಿಟ್ಟಿರುತ್ತಾರೆ.  ಇವರು ಒಂದು ರೀತಿಯ ವಿಚಿತ್ರ ಜನ. ಇವರ ಗುಂಪೇ ಇವರಿಗೆ ಮುಖ್ಯ!  ಟೀ ಕುಡಿಯೋದ್ರಿಂದ  ಹಿಡಿದು, ಬತ್ತಿ ಹೊಡೆಯೋದ್ರಿಂದ  ಹಿಡಿದು, ವೀಕೆಂಡ್ “ಎಣ್ಣೆ’ ಪಾರ್ಟಿ ಯಿಂದ ಹಿಡಿದು…. ಟ್ರೆಕಿಂಗ್, ಮೂವಿ, ಟ್ರಿಪ್ ಹೀಗೆ ಎಲ್ಲೇ ಹೋಗಲಿ ಇವರ ಗುಂಪು ಜೊತೆಯಾಗಿ ಇರುತ್ತದೆ.

ಹಾಗಂತ ಇವರು ಪ್ರೊಫೆಶನಲ್ ಅಲ್ಲ ಅಂತ ಅನ್ಕೋಬೇಡಿ. ಇವರು ಕೆಲಸವನ್ನು ಸಹ ಅಷ್ಟೇ ಬೇಗ ಮುಗಿಸಿ ಆದಷ್ಟು ಬೇಗ ತಮ್ಮ ಗುಂಪನ್ನು ಸೇರಿಕೊಳ್ಳುತ್ತಾರೆ.  ಈ ಗುಂಪಿಗೆ ಕಂಪನಿಯಲ್ಲಿನ  ವಿಷಯಗಳು, ಆಗು ಹೋಗುಗಳು ಅದೆಗೂ ಗಾಸಿಪ್ ರೂಪದಲ್ಲಿ ಗೊತ್ತಿರುತ್ತವೆ. ಇವರು ಒಟ್ಟಿಗೆ ಸೇರಿದಾಗಲೂ ಸಹ ಮಾತಾನಾಡುವುದು ಇಂತಹ ಗಾಸಿಪ್ ಗಳ ಬಗ್ಗೆ ಯೇ . ವಿಪರ್ಯಾಸ ಅಂದರೆ ಇವರಾಡುವ ಬಹಳಷ್ಟು ಗಾಸಿಪ್ ಗಳು ರಿಯಾಲಿಟಿ ಆಗುತ್ತವೆ !

ಇವರ ಇನ್ನೊಂದು ವಿಶೇಷವೆಂದರೆ ಆಫಿಸಿನಲ್ಲಿರುವ ಎಲ್ಲ ಹುಡುಗಿಯರಿಗೂ ಒಂದೊಂದು ಅಡ್ಡ ಹೆಸರು ಕೊಟ್ಟಿರುತ್ತಾರೆ. ಬರೀ ಹುಡುಗಿಯರಿಗೆ ಮಾತ್ರವಲ್ಲ ಮ್ಯಾನೇಜರ್ ಗಳಿಗೂ ಸಹ ಒಂದೊಂದು ಕೋಡ್ ವರ್ಡ್ ಕೊಟ್ಟಿರುತ್ತಾರೆ. ತುಂಬಾ ಸಮಯದಲ್ಲಿ ಇವರ ಮಾತು ಕಥೆ ಈ ಕೋಡ್ ವರ್ಡ್ ಗಳನ್ನೇ ಒಳಗೊಂಡಿರುತ್ತದೆ.

ಸದಾ ಕಂಪ್ಯೂಟರ್ ನಲ್ಲಿ ತಲೆಯಿಟ್ಟು ಕೆಲಸ ಮಾಡುವ ಜಾಯಮಾನದವರು ಇವರಲ್ಲ. ಕೊಟ್ಟಿರುವ ಕೆಲಸವನ್ನು ಕೊಟ್ಟಿರುವ ಸಮಯದಲ್ಲೇ ಮುಗಿಸಿ (ಒಂದು ವೇಳೆ ಅದು ಬೇಗ ಮುಗಿದರೂ ಸಹ, ಕೆಲಸ ಮುಗಿದಿದೆ ಅಂತ ಮ್ಯಾನೇಜರ್ ಗೆ ಹೇಳುವುದಿಲ್ಲ!) ಬಿಡುವ ಫಟಿಂಗ ರಿವರು.  ಇವರ ಚರ್ಚೆಯಲ್ಲಿ ಹೊಸ ಮಾಡೆಲ್ ಕಾರ್, ಬೈಕ್, ಕಂಪನಿಗೆ ಹೊಸತಾಗಿ ಸೇರಿದ ಹೆಚ್. ಆರ್ (ಹುಡುಗಿಯಾಗಿದ್ದರೆ), ಹೊಸತಾಗಿ ಜೋಯಿನ್ ಆದ ಡಿಪಾರ್ಟ್ಮೆಂಟ್  ಹೆಡ್, ಇತ್ತೆಚಿಗೆ ರಿಲೀಸ್ ಆದ ಮೂವಿ, ಬೆಂಗಳೂರಿನ ಆಸು ಪಾಸು ಖಾಲಿ ಇರುವ ಬಿ. ಡಿ . ಎ  ಅಪ್ರೂವ್ ಸೈಟ್ … ಹೀಗೆ ಎಲ್ಲ ವಿಷಯಗಳ ಬಗ್ಗೆ ಮಾತು ನಡೆಯುತ್ತಲೇ ಇರುತ್ತವೆ. ಇವರು ಕೇವಲ ತಮ್ಮ ಕಂಪನಿ ಯ ಪಡ್ಡೆಗಳ ಜೊತೆ ಮಾತ್ರವಲ್ಲ ಬೇರೆ ಕಂಪನಿ ಯ ಪಡ್ಡೆಗಳ ಜೊತೆಗೋ ಸಂಪರ್ಕವಿಟ್ಟು ಕೊಂಡಿರುತ್ತಾರೆ. ಇವರ ನೆಟ್ವರ್ಕ್ ಭಾರಿ ಸ್ಟ್ರಾಂಗ್ ಇರುತ್ತದೆ.

ಪಡ್ಡೆ ಗಳು ಅಂದರೆ ಬರೀ ಹುಡುಗಿಯರ ಬಗ್ಗೆ ಹರಟೆ ಹೊಡೆಯುವವರಲ್ಲ!  ಇವರು ಚರ್ಚಿಸುವ ವಿಷಯಗಳಲ್ಲಿ ಹುಡುಗಿಯರ ಟಾಪಿಕ್ಕು  ಸಹ ಒಂದು ಅಷ್ಟೇ ! ಇವರ ಗುಂಪಿನಲ್ಲಿ ಆದಷ್ಟು ಬ್ಯಾಚುಲರ್ ಗಳೇ ಜಾಸ್ತಿ ಇರುವುದು ವಾಡಿಕೆ. ಆದರೆ, ಬರೀ ಬ್ಯಾಚುಲರ್ ಗಳೇ ಇರಬೇಕು ಎನ್ನುವ  ರೂಲ್ ಏನು ಇಲ್ಲ. ಒಟ್ಟಿನಲ್ಲಿ ಕೊಟ್ಟಿರುವ ಕೆಲಸವನ್ನು ಕೊಟ್ಟಿರುವ ಸಮಯಕ್ಕಷ್ಟೇ ಮೀಸಲಿರಿಸಿ, ಜೀವನವನ್ನು ತಮ್ಮದೇ ಆದ ರೀತಿಯಲ್ಲಿ ಎಂಜಾಯ್ ಮಾಡುವ ಭಾರಿ ತರಲೆ ಗಳಿವರು  ಹಾಗೇನೆ ವ್ಯವಹಾರಿಕ ವಾಗಿ ಮಹಾ ಚತುರರು ಸಹ.

ಈ ವಾರದ ಬಿಲ್ಡ್ ಲೇಬಲ್ :  ಒಂದೇ ಮಾತಿನಲ್ಲಿ ಹೇಳಬೇಕೆಂದರೆ “ ಪಡ್ಡೆ “ ಗಳು ಕಂಪನಿ ಯಲ್ಲಿದ್ದಾಗ ಏನು ಗೊತ್ತಾಗುವುದಿಲ್ಲ. ಆದರೆ  ಈ ಪಡ್ಡೆ ಗಳ absence ಮಾತ್ರ ಥಟ್ಟನೆ  ಗೊತ್ತಾಗುತ್ತದೆ.

1 comment:

  1. ನಮ್ಮದು ಒಂದ್ ಕಾಲದಲ್ಲಿ ಇಂಥ ಗುಂಪು ಇತ್ತು ರೀ... :)

    ReplyDelete