Thursday, April 3, 2014

ಅಂಕಣ ೧೩ : ಸಾಫ್ಟ್ ವೇರ್ ಮತ್ತು ಗೂಗಲ್ಲು !

“ನೀ ಮಾಯೆಯೊಳಗೋ - ಮಾಯೆ ನಿನ್ನೊಳಗೊ” ಎನ್ನುವಂತೆ  “ಸಾಫ್ಟ್ ಲೋಕದಲ್ಲಿ ಗೂಗಲ್ಲೋ ಅಥವಾ ಗೂಗಲ್ ನಲ್ಲಿ ಸಾಫ್ಟ್ ಲೋಕವೋ” ಎನ್ನುವಂತಾಗಿದೆ.  ಈ ಮಾತನ್ನ ಬಹಳಷ್ಟು ಜನ ಸಾಫ್ಟ್ ವೇರ್ ಎಂಜಿನೀಯರ್ಸ್ ಒಪ್ಕೋತಾರೆ ಸಹ. ಹೇಗೆ ಒಬ್ಬ ದಿನಸಿ ಅಂಗಡಿಯ ಮಾಲೀಕ, ಪ್ರತಿದಿನ ಶಟರ್ ಎಳೆದು ತನ್ನ ಅಂಗಡಿಯನ್ನ ತೆಗೆದು ದೇವರ ಫೋಟೋ ಕೆ ಕೈ ಮುಗಿದು ಗಲ್ಲೆದ ಮೇಲೆ ಕೂತ್ಕೊತಾನೋ, ಹಾಗೇನೆ ಸಾಫ್ಟ್ ಲೋಕದಲ್ಲಿ ನಾವು ಪ್ರತಿದಿನ ಸಿಸ್ಟಮ್ ಅನ್ಲಾಕ್ ಮಾಡಿ, ಇಂಟರ್ನೆಟ್ ಓಪನ್ ಮಾಡಿ ಅಲ್ಲಿ ಗೂಗಲ್ ಎನ್ನುವ ಪೇಜ್ ಕಾಣಿಸಿದ ಮೇಲೆಯೇ ಮುಂದಿನ ಕೆಲಸ ಕಾರ್ಯಗಳು ಆರಂಭವಾಗುವುದು.



ಕೋಡಿಂಗ್ ನಲ್ಲಿ ಯಡವಟ್ಟು ಆದಾಗ, ಟೆಸ್ಟಿಂಗ್ ನ ಪ್ರೋಸೆಸ್ ಬಗ್ಗೆ ಡೌಟು ಬಂದಾಗ, ಏನೋ ಒಂದು ಟೆಕ್ನಿಕಲ್ ಆಗಿ ಇನ್ ಪುಟ್ ಬೇಕಾದಾಗ ನಮ್ಮ ಕೈಬೆರಳುಗಳು ಪಟ ಪಟನೆ ಟೈಪ್ ಮಾಡುವ ಅಕ್ಷರ “ ಗೂಗಲ್”.  ಈ ಅರ್ಥದಲ್ಲಿ ಪ್ರಸಿದ್ದವಾದ ಕನ್ನಡ ಚಿತ್ರಗೀತೆಯನ್ನ ಸಾಫ್ಟ್ ಲೋಕದವರು ಗೂಗಲ್ ಗೆ ಬಳಸಿದರೂ ತಪ್ಪಿಲ್ಲ:
ಗೂಗಲ್ ಎಂದರೆ ಏನೋ ಹರುಷವೋ
ನಮ್ಮ ಪಾಲಿಗೆ ಅದುವೇ ದೈವವು .
ಸಾಫ್ಟ್ ಲೋಕದಲ್ಲಿ ಒಂದು ಮಾತು ಚಾಲ್ತಿಯಲ್ಲಿದೆ : ಸಾಫ್ ವೇರ್ ಇಂಜಿನಿಯರ್ ಗೆ ಕೊಡಬಹುದಾದ  ಶಿಕ್ಷೆ ಏನು?
ಏನಿಲ್ಲ, ಅವನ ಕೀ ಬೋರ್ಡ್ ನಿಂದ “Ctrl + C “ ಮತ್ತು “Ctrl + V “ ಬಟನ್ ಗಳನ್ನ ಕಿತ್ತು ಬಿಸಾಡಿ ಬಿಡಿ ಸಾಕು. ಅವನು ತನ್ನ ಆಸ್ತಿ ಹೋದಷ್ಟು ವಿಲ  ವಿಲನೆ ಒದ್ದಾಡಿ ಬಿಡುತ್ತಾನೆ. ಅದಕ್ಕಿಂತಲೂ ದೊಡ್ಡ ಶಿಕ್ಷೆ ಎಂದರೆ ಕಂಪನಿ ಯ ಇಂಟರ್ನೆಟ್ ನಲ್ಲಿ ಗೂಗಲ್ ಪೇಜ್ ಗೆ ಆಕ್ಸೆಸ್ ಕೊಡದೆ ಇದ್ದರಂತೂ ಮುಗಿದೇ ಹೋಯ್ತು ಕಥೆ.

ಗೂಗಲ್ ನಲ್ಲಿ ಏನು ಸಿಗುತ್ತೆ ಅನ್ನೋದಕ್ಕಿಂತ, ಏನು ಸಿಗಲ್ಲ ಅಂತ ಹೇಳಿ?  ಒಂದು ಜಮಾನ ದಲ್ಲಿ ಕಳೆದು ಹೋದ ಬಾಯ್ ಫ್ರೆಂಡ್ ನ ಲೇಟೆಸ್ಟ್ ಪ್ರೊಫೈಲ್ ನಿಂದ ಹಿಡಿದು ಪ್ರತಿಯೊಂದು ಸಿಗುತ್ತದೆ. ಅದರಲ್ಲೂ ಸಾಫ್ಟ್ ಲೋಕದವರಿಗೆ ಕೋಡಿಂಗ್, ಟೆಸ್ಟಿಂಗ್, ಕ್ವಾಲಿಟಿ, ಮ್ಯಾನೇಜ್ಮೆಂಟ್ ಪ್ರೋಸೆಸ್, ಇಂಟರ್ವ್ಯೂ ಕ್ವೆಶನ್ಸ್  ಬಗ್ಗೆ ಮಾಹಿತಿ ಎಲ್ಲವು ಸಿಗುತ್ತವೆ.ಅವತ್ತಿನ ದಿನ ಪತ್ರಿಕೆ ಓದಬೇಕೆಂದರೆ, ಲೈವ್ ಕ್ರಿಕೆಟ್ ಸ್ಕೋರ್ ತಿಳಿಯಬೇಕೆಂದರೆ, ಹೊಸ ಸ್ಕೂಲು, ಕಾಲೇಜು, ಅಷ್ಟೇ ಏಕೆ ನಾವು ಬದಲಾಯಿಸಬೇಕೆನ್ನುವ ಕಂಪನಿ ಯ ಬಗ್ಗೆ ಮಾಹಿತಿ ಕೂಡ ಗೂಗಲ್ ನಲ್ಲಿ ಲಭ್ಯ.  ನೀವು ಯಾವುದೇ ವಿಷಯದ ಕುರಿತು ಸರ್ಚ್ ಕೊಡಿ, ಅದನ್ನಾಗಲೇ ಯಾರೋ ಒಬ್ಬ ಪುಣ್ಯಾತ್ಮ ಹುಡುಕಿಟ್ಟು ರುತ್ತಾನೆ, ಇಲ್ಲಾಂದ್ರೆ  ಅವನು ನಮ್ಮ ಹಾಗೇನೆ ಆ ವಿಷಯದ ಹಿಂದೆ ಬಿದ್ದಿರುತ್ತಾನೆ.
ಟೆಕ್ನಿಕಲ್ ಹೆಲ್ಪ್ ನಿಂದ ಹಿಡಿದು  ಬಿಚ್ಚಿ ಹೋದ ಗುಂಡಿ ಯನ್ನು ತಿರುಗಿ ಅಂಗಿಗೆ ಹಚ್ಚುವುದು ಹೇಗೆ ಎನ್ನುವುದು ಸಹ ನಿಮಗೆ ಗೂಗಲ್ ನಲ್ಲಿ ಲಭ್ಯ. ಸಾಫ್ಟ್ ಲೋಕದವರಿಂದ ಗೂಗಲ್ ನನ ಕಸಿದುಕೊಂಡು ಬಿಟ್ಟರೆ, ಅವರ ಪಾಡು : “ ಮೀನು ನೀರಿನಿಂದ ಹೊರ ಬಿದ್ದಂತಾಗುತ್ತದೆ”.

ಇದು ಬರೆ ಗೂಗಲ್ ಬಗ್ಗೆ ಆಯಿತು, ಇನ್ನು ಗೂಗಲ್ ನ ಒಂದೊಂದು ಅಪ್ಲಿಕೇಶನ್ ಬಗ್ಗೆ ಹೇಳುತ್ತಾ ಹೋದರಂತೂ ಕಥೆ ಮುಗಿದೇ ಹೋಯಿತು. ಬೆಂಗಳೂರಿನಲ್ಲಿ ಯಾವುದಾದರು ಹೊಸ ಏರಿಯ ಗೆ ಹೋಗಬೇಕಾದರೆ ಮೊದಲು ನೆನಪಿಗೆ ಬರುವುದೇ ಗೂಗಲ್ ಮ್ಯಾಪ್ಸ್. ಇಷ್ಟೊಂದು ಒಂದೇ ಅಂಗಡಿಯಲ್ಲಿ ಸಿಗಬೇಕಾರೆ ಸಾಫ್ಟ್ ಲೋಕದವರು ಸುಮ್ಮನೆ ಬಿಡುತ್ತಾರೆಯೇ. ಒಂದು ವೇಳೆ ಹುಡುಕಲಿಕ್ಕೆ ಏನು ವಿಷಯವಿಲ್ಲ ವೆಂದರು ಗೂಗಲ್ ಪೇಜ್ ಓಪನ್ ಮಾಡಿ ಒಂದೊಂದು ಸಲ, “ಏನು ಟೈಪ್ ಮಾಡಲಿ?” ಅಂತ ಕೆಲವರು ಆಲೋಚಿಸುತ್ತಾರೆ.  ಇನ್ನು ಕೆಲವರು, “getting bored “ ಅಂತ ಕೂಡ ಸರ್ಚ್ ಕೊಡ್ತಾರೆ. ಅದಕ್ಕೂ ಕೂಡ ನಿಮಗೆ ಸಾವಿರದ ಎಂಟು ಮಾಹಿತಿಗಳು ಬರುತ್ತವೆ.

“ಗೂಗಲ್ ಬಿಟ್ಟು ಸಾಫ್ಟ್ ಲೋಕ , Ctrl+C ಮತ್ತು Ctrl+V ಕೀ ಗಳನ್ನ ಬಿಟ್ಟು ಸಾಫ್ಟ್ ವೇರ್ ಎಂಜಿನೀಯರ್ ಇರಲು ಸಾಧ್ಯವಿಲ್ಲ ಕಾಂತಾ!” ಅನ್ನುವ ಮಾತು ತುಂಬಾ ದೂರ ಏನು ಇಲ್ಲ.


ಈ ವಾರದ ಬಿಲ್ಡ್ ಲೇಬಲ್ : ನನ್ನ ಸ್ನೇಹಿತನ ಪ್ರಾಕ್ಟಿಕಲ್   ಮಾತು, “ ಗೂಗಲ್ ನಲ್ಲಿ ನಿನಗೆ ಎಲ್ಲ ಹುಡುಕಿ ಕೊಡಬಹುದು, ಆದರೆ ದೇವಸ್ಥಾನದ  ಎದುರುಗಡೆ ಬಿಟ್ಟು ಕಳೆದು ಹೋದ ಚಪ್ಪಲಿ ಮಾತ್ರ ಆ ಗೂಗಲ್ ನಿಂದಲೂ ಹುಡುಕಲೂ ಸಾಧ್ಯವಿಲ್ಲ”, ನನ್ನ ಅನಿಸಿಕೆ : ಯಾವನಿಗ್ಗೊತ್ತು, ಈ ಅಂಕಣ ನೀವು ಓದುವ ಹೊತ್ತಿಗೆ ಗೂಗಲ್ ನೋರು ಅದಕ್ಕೂ ಒಂದು “app“ ಬರದ್ರೂ ಬರ್ದಿರ್ತಾರೆ!

No comments:

Post a Comment