Thursday, April 10, 2014

ಅಂಕಣ ೧೪ : ಸಾಫ್ಟ್ ಅಪ್ರೈಸಲ್!!

ಏನಿದು ಅಪ್ರಯೋಜಕ ಟೈಮ್ ಅಂತ ಅನ್ಕೋಬೇಡಿ.  ಇದು ಅಪ್ರೈಸಲ್ ಟೈಮ್ ! ಹಾಗಂದರೆ ಏನು ಅಂತೀರಾ? ಇಲ್ಲಿ ಕೇಳಿ.
ನಮ್ಮ ಸರಕಾರೀ ನೌಕರಿಗಾದರೆ ವರ್ಷಕ್ಕೊಂದು ಸಲ ಪಗಾರ ಇಂತಿಷ್ಟು ಅಂತ ಜಾಸ್ತಿ ಆಗುತ್ತಿರುತ್ತದೆ. ನಮ್ಮ ಸಾಫ್ಟ್ ಲೋಕದಲ್ಲಿ
ಸಹ ಪಗಾರ ಜಾಸ್ತಿ ಆಗುತ್ತದೆ. ಆದರೆ ಎಲ್ಲರಿಗೂ ಒಂದು ರೀತಿ ಅಲ್ಲ. ಅದಕ್ಕೆ ಅಂತಾನೆ ಒಂದು ಪ್ರೋಸೆಸ್ ಇರುತ್ತೆ. ಕೆಲವೊಂದು ಕಂಪನಿ ಯಲ್ಲಿ ಇದನ್ನ  ಅಪ್ರೈಸಲ್ ಅಂತ ಕರೆದರೆ, ಮತ್ತೆ ಕೆಲವೊಂದು ಕಂಪನಿ ಯಲ್ಲಿ ಇದನ್ನ ಎಂಪ್ಲಾಯಿ ಡೈಲಾಗ್ ಅಂತಾನು ಕರೀತಾರೆ.




ಒಂದು ವರ್ಷದಲ್ಲಿ ಒಬ್ಬ ಎಂಪ್ಲಾಯಿ ಮಾಡಿದ ಕೆಲಸ ನೋಡಿ ಅವನಿಗೆ ಇಂತಿಷ್ಟು  ಪಗಾರ ಜಾಸ್ತಿ  ಮಾಡುತ್ತಾರೆ, ಇದನ್ನ ಹೈಕ್ ಅಂತಾನು ಕರೆಯುತ್ತಾರೆ. ಇದು ಎಲ್ಲರಿಗೂ ಒಂದೇ ರೀತಿ ಆಗಿರುವುದಿಲ್ಲ. ಹಾಗಂತ ಪ್ರತಿಯೊಬ್ಬರಿಗೂ ಬೇಕಾ ಬಿಟ್ಟಿಯಾಗಿ  ಕೊಡೋಹಾಗಿಲ್ಲ. ಅವರು ಮಾಡಿದ ಕೆಲಸ, ಅವರ ಪ್ರಾಜೆಕ್ಟ್ ಪೆರ್ಫಾರ್ಮ್ ಮಾಡಿದ ರೀತಿ, ಓವರ್ ಆಲ್ ಅವರ ಡಿಪಾರ್ಟ್ ಮೆಂಟ್ ಆ ವರ್ಷದಲ್ಲಿ ಮಾಡಿದ ಬಿಸಿನೆಸ್ ಎಲ್ಲವನ್ನು ಲೆಕ್ಕಕ್ಕೆ ತೆಗೆದು ಕೊಂದು ಒಂದು ಪ್ರಾಜೆಕ್ಟ್ ಗೆ ಇಷ್ಟು ಹಣ ಕೊಟ್ಟಿರುತ್ತಾರೆ. ಅದರಲ್ಲಿಯೇ ಪ್ರಾಜೆಕ್ಟ್ ನ ಎಲ್ಲ ಸದಸ್ಯರಿಗೆ ಹೈಕ್ ಸಿಗುತ್ತದೆ.   ಪ್ರತಿ ಸಲದ ಅಪ್ರೈಸಲ್ ನಲ್ಲಿ : “ you have only done whatever assigned to you, but you should have taken more responsibility and proactive steps to perform better” ಅನ್ನೋ ಮಾತುಗಳು ಮ್ಯಾನೇಜರ್ ಯಿಂದ ಕೇಳಿ ಕೇಳಿ ಎರಡೂ ಕಿವಿಗಳಿಗೆ ತೂತು ಬಿದ್ದಿರುತ್ತವೆ.


ಕೆಲಸಕ್ಕೆ ಸೇರಿದ ಮೊದಲೆರಡು ವರ್ಷದಲ್ಲಿ ಕಂಪನಿ ಯವರು ಕೊಡುವ ಹೈಕ್ ನ ಬಗ್ಗೆ ಭಾರಿ ಕುತೂಹಲವಿರುತ್ತದೆ. ಅನುಭವ ಅಗ್ತಾ ಅಗ್ತಾ ಇದು ಕುತೂಹಲ ಕಡಿಮೆ ಆಗ್ತಾ ಹೋಗುತ್ತದೆ. ಮೊದಲು ಜಾಸ್ತಿ ಹೈಕ್ ಗಾಗಿ ಬಡಿದಾಡುವ ಜೀವ, ಅನುಭವವಾದ ನಂತರ ಪ್ರಮೋಷನ್ ಗಾಗಿ ಪರಿತಪಿಸುತ್ತೆ. ಇವೆರಡು ತಾವು ಬಯಸುವ ರೀತಿಯಲ್ಲಿ ಸಿಗದಿದ್ದರೆ ಎಂಪ್ಲಾಯಿಗಳು ತಮ್ಮ ಗಂಟು ಮೂಟೆಯನ್ನ  ಕಂಪನಿಯಿಂದ ಕಟ್ಟುತ್ತಾರೆ. ಹಾಗಂತ ಪ್ರತಿವರ್ಷ ಎಲ್ಲ ಎಂಪ್ಲಾಯಿಗಳು ಕಂಪನಿ ಬದಲಿಸುತ್ತಾರೆ ಅಂತ ಅಲ್ಲ.


ಈ ಅಪ್ರೈಸಲ್ ಟೈಮ್ ನ ಮೂರು ರೀತಿಯಲ್ಲಿ ವಿವರಿಸಬಹುದು.

ಮೊದಲನೆಯ ಕೆಟಗರಿ : ಕೆಲಸಕ್ಕೆ ತಕ್ಕಂತೆ ಭಡ್ತಿ ಮತ್ತು ಸಂಬಳದಲ್ಲಿ ಏರಿಕೆ. ಈ ಕೆಟಗರಿಗೆ ಬರುವವರು ತುಂಬಾ ಖುಷಿಯಾಗಿ ಇರುತ್ತಾರೆ. ಏನೇ ಆಗಲಿ ಈ ಕಂಪನಿ ಮಾತ್ರ ಬಿಡುವುದು ಬೇಡ. ಈಡಿ ಜೀವನವನ್ನೇ ಇಲ್ಲೇ ಕಳೆದುಬಿಡೋಣ ಅನ್ನೋವಷ್ಟರ ಮಟ್ಟಿಗೆ ಸೆಂಟಿಮೆಂಟ್ ಬಂದು ಬಿಟ್ಟಿರುತ್ತೆ. ಇವರ ಪಾಲಿಗೆ ಮ್ಯಾನೇಜರ್ ಸಾಕ್ಷಾತ್ ದೇವರು ಆಗಿಬಿಟ್ಟಿರುತ್ತಾರೆ
ಎರಡನೆಯ ಕೆಟಗರಿ : ಕಾರಣಾಂತರ  ಗಳಿಂದ ಅವರ ಪರ್ಫಾರ್ಮೆನ್ಸ್ ಸರಿಯಾಗಿ ಇರೋಲ್ಲ, ಪ್ರಾಜೆಕ್ಟ್ ಕೂಡ ಅಷ್ಟೊಂದು ಸಕ್ಸಸ್ ಆಗಿರೋಲ್ಲ. ಇಂತಹ ಕೆಟಗರಿಯಲ್ಲಿ ಬರುವ ಜನರು ಒಂದು ರೀತಿಯ ಸಮಾಧಾನ ಮಾಡಿಕೊಂಡು ಇರುತ್ತಾರೆ.
ಮೂರನೆಯ ಕೆಟಗರಿ : ಎದ್ದು ಬಿದ್ದು ಕೆಲಸ ಮಾಡಿರುತ್ತಾರೆ. ಆದರೆ ಅಪೇಕ್ಷಿಸಿದ ಮಟ್ಟಿಗಿಂತ  ಸಂಬಳ ಏರಿಕೆ ಆಗಿರುವುದಿಲ್ಲ. ಭಡ್ತಿ ಯಂತು ದೂರದ ಮಾತು. ಇದರ ಮೇಲೆ ಬರೆ ಎಳೆದಂತೆ, ಇವರ ಪಕ್ಕದಲ್ಲೇ ಕೂತಿರುವವರಿಗೆ ಚೆನ್ನಾಗಿ ಹೈಕ್ ಬಂದು ಬಿಟ್ಟಿರುತ್ತೆ.
ಇನ್ನು ಕೇಳ್ತೀರಾ. ಶುರುವಾಗುತ್ತೆ ಬೆಂಕಿ! 
ಈ ಕೆಟಗರಿಗೆ ಸಂಭಂದ ಪಟ್ಟ ಒಂದು ತಮಾಷೆ ಮಾತು ಕಥೆ ನೋಡೋಣ ಬನ್ನಿ .
ಮೊದಲನೆಯವ : ಯಾಕಪ್ಪ ಡಲ್  ಆಗಿದೀಯಾ? ಏನಾಯ್ತು? ಹೆಂಗಾಯ್ತು ಅಪ್ರೈಸಲ್ ?
ಎರಡನೆಯವ : ತೊಥ್, ಸಾಕಾಯ್ತು ಕಣಪ್ಪ.  ಪ್ರತಿ ಸಲಾನು ಇದೆ ಗೋಳು. ಕೆಲಸ ಮಾಡೋರನ್ನ ಯಾರು ಕೇಳೋರೆ ಇಲ್ಲ. ನಾನು ಇನ್ಮೇಲಿಂದ ಕೂಲಾಗಿ ಬಂದು ಕೂಲಾಗಿ ಹೋಗ್ತೀನಿ. ಏನಾದ್ರು ಆಗಲಿ, ಯಾರು ಏನಾದ್ರೂ ಅನ್ಕೊಳ್ಳಿ.
ಮೊದಲನೆಯವ : ನೀನು ಚೂರು ಷೋ ಆಫ್ ಮಾಡೋದು ಕಲಿಯೋ? ಅವಾಗ್ಲೇ ನಿನ್ನ ಮೇಲಗಡೆ ಇರೋರಿಗೆ ನೀನು ಕೆಲಸ ಮಾಡ್ತಾ ಇದ್ದೀಯ ಅಂತ ಗೊತ್ತಾಗುತ್ತೆ.
ಎರಡನೆಯವ : ಹೌದು ಕಣೋ. ಷೋ ಆಫ್ ಗೆ ಬೆಲೆ ಜಾಸ್ತಿ. ಬಟ್ ಏನ್ ಮಾಡ್ಲಿ? ನನಗೆ ಶೋ ಆಫ್ ಮಾಡೋಕೆ ಬರಲ್ವೆ?
ಆದರೂ ಈ ಮೇಲಗಡೆ ಇರೋರಿಗೆ, ಯಾರು ಕೆಲಸ ಮಾಡ್ತಾರೆ, ಯಾರು ಮಾಡಲ್ಲ ಅಂತ ಗೊತ್ತಗೊದಿಲ್ಲವೇನೋ? ಷೋ ಆಫ್ ಮಾಡಲೇಬೇಕಾ?
ಮೊದಲನೆಯವ : ಅವರು ಕೂಡ ಅವರ ಮೇಲಿನವರನ್ನ ಮೆಚ್ಚಿಸೋದ್ರಲ್ಲಿ ಬ್ಯುಸಿ ಇರ್ತಾರೆ. ಹೀಗಾಗಿ ಅವರ ಕೆಳಗೆ ಏನ್ ನಡೀತಾ ಇದೆ ಅಂತ ಹೇಗೆ ಗೊತ್ತಾಗುತ್ತೆ ಹೇಳು?
ಎರಡನೆಯವ : ಹೌದಲ್ವಾ ? ನಿನ ಮಾತಲ್ಲೂ ಪಾಯಿಂಟ್ ಇದೆ. ಅದಿರ್ಲಿ ಬಿಡು, ನಿಂದು ಹೇಗಾಯ್ತು ? ಹೈಕ್ ಚೆನ್ನಾಗಿ ಬಂತಾ?
ಮೊದಲನೆಯವ : ಇಲ್ಲ. ಅದಕ್ಕೆ ನನಗೆ ಇನ್ನೊಬ್ರು ಹೇಳಿದ್ದನ್ನ ನಾನು ನಿನಗೆ ಇಷ್ಟೊತ್ತು ಹೇಳಿದೆ!!

ಈ ವಾರದ ಬಿಲ್ಡ್ ಲೇಬಲ್ : ಸಾಲದ ವಿಚಾರದಲ್ಲಿ  “ಕೊಟ್ಟೋನು ಕೋಡಂಗಿ ಇಸ್ಕೊಂಡೊನು ಈರಭದ್ರ “; ಆದರೆ ಅದು ಹೈಕ್ ವಿಚಾರದಲ್ಲಿ “ಇಸ್ಕೊಂಡೊನು ಕೋಡಂಗಿ, ಕೊಟ್ಟೋನು ಕಾಲಭೈರವ”.

1 comment: