Thursday, March 27, 2014

ಅಂಕಣ ೧೨: ಸಾಫ್ಟ್ ಜಂಪ್

ಈ ಅವಕಾಶ ಇರೋದು ನಮಗೆ ಮಾತ್ರ ಅಂತ ಎದೆ ತಟ್ಟಿ  ಹೇಳಬಹುದು. ಒಂದು ಕಾಲವಿತ್ತು ಮತ್ತು  ಈಗಲೂ ಕೆಲವು ಕ್ಷೇತ್ರಗಳಲ್ಲಿ ಇದೆ ಸಹ, ಅಲ್ಲಿ  ಯಾರಾದರು  ನೌಕರಿಗೆ ಸೇರಿದರೆ ಜೀವನವಿಡಿ ಅದೇ ಸಂಸ್ಥೆಯಲ್ಲಿಯೇ ಕಾಲ ಕಳೆಯಬೇಕು. ಅದು ಸರಕಾರಿ ನೌಕರಿಯಾಗಿದ್ದರೆ ಅಬ್ಬಬ್ಬಾ ಅಂದರೆ ಒಂದು ಊರಿನಿಂದ ಇನ್ನೊಂದು ಊರಿಗೆ ವರ್ಗಾವಣೆ ಆಗಬಹುದೇ ವಿನಃ ಆ ಸಂಸ್ಥೆಯನ್ನೇ ಬಿಟ್ಟು ಹೊರಗಡೆ ಬರಲು ಆಗುವುದಿಲ್ಲ.  ಹಾಗೇನೆ ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ ಅದೇ ಸಂಸ್ಥೆಯಲ್ಲಿಯೇ ನಿವೃತ್ತಿ ಹೊಂದುವುದು ಅವರಿಗೂ ಸಹ ಒಂದು ಹೆಮ್ಮೆಯ ವಿಷಯವಾಗಿತ್ತು.  




ಆದರೆ ಸಾಫ್ಟ್ ಲೋಕದಲ್ಲಿ ಹಾಗಲ್ಲ, ಒಂದು ಕಂಪನಿ ಸಾಕು ಎನಿಸಿದರೆ, ಮತ್ತೊಂದಕ್ಕೆ  ಹೋಗಬಹುದು. ಹಾಗಂತ ಮನಸು ಬಂದಂತೆ ಕಂಪೆನಿಗಳನ್ನ ಬದಲಿಸಿಕೊಂಡು ಹೋಗಲು ಆಗುವುದಿಲ್ಲ. ಅದಕ್ಕೂ  ಒಂದು ಲಿಮಿಟ್ ಇರುತ್ತದೆ. ಈಗ ಬಿಡಿ, ಬರೀ ಸಾಫ್ಟ್ ವೇರ್ ಅಷ್ಟೇ ಅಲ್ಲ,  ಜಾಗತೀಕರಣದ ಪ್ರಭಾವದಿಂದ  ಪತ್ರಿಕಾ ಮಾಧ್ಯಮಗಳು, ಟಿ .ವಿ ಚಾನೆಲ್ ಗಳು, ಕಾಲ್ ಸೆಂಟರ್ ಗಳು, ಮ್ಯಾನುಫ್ಯಾಕ್ಚರಿಂಗ್ ಕಂಪನಿ ಗಳು..ಮುಂತಾದ.   ಅಲ್ಲಿಯೂ ಸಹ ಜನ ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ವಲಸೆ ಹೊಗುವುದನ್ನು ನೋಡಬಹುದು.
ಸಾಫ್ಟ್ ಲೋಕದಲ್ಲಿ ಒಬ್ಬ ಎಂಜಿನೀರ್ ಒಂದು ಕಂಪನಿ ಯಿಂದ ಇನ್ನೊಂದು ಕಂಪನಿಗೆ ಜಂಪ್ ಮಾಡಬೇಕಾದರೆ ಏನೆಲ್ಲಾ ಯೋಚನೆ ಮಾಡುತ್ತಾನೆ? ಸಬ್ಜೆಕ್ಟ್ ತುಂಬ ಇಂಟೆರೆಸ್ಟಿಂಗ್  ಆಗಿದೆ ಅಲ್ವಾ ? ಬನ್ನಿ ಹಾಗಿದ್ರೆ ಒಂದು ಸುತ್ತು ಇದರ ಸುತ್ತಲು ಗಿರಕಿ  ಹೊಡೆಯೋಣ!
೧. ಸಾಮಾನ್ಯವಾಗಿ ಆಗ ತಾನೇ ಕೆಲಸಕ್ಕೆ ಸೇರಿ ೧-೨ ವರ್ಷ ಅನುಭವ ಆಗಿರೋರು ಜಂಪ್ ಮಾಡೋದು ಅಷ್ಟೇನೂ ಕಷ್ಟ ಅಲ್ಲ. ಮತ್ತೆ ಇವರು ಬ್ಯಾಚುಲರ್ ಗಳು ಆಗಿರೋದ್ರಿಂದ ಇವರಿಗೆ ಕಮಿಟ್ಮೆಂಟ್ ಗಳು ಅಷ್ಟೊಂದು ಇರೋದಿಲ್ಲ. ಹೀಗಾಗಿ ಇವರು ಕಂಪನಿ ಬದಲಿಸ ಬೇಕಾದರೆ ಅಷ್ಟೊಂದು ಯೋಚನೆ ಮಾಡುವುದಿಲ್ಲ. ಒಂದೊಳ್ಳೆ ಆಫರ್ ಬಂದ್ರೆ, ಇರೋ ಕಂಪನಿಯಲ್ಲಿ ಕೆಲಸ ಸರಿಯಾಗಿಲ್ಲ ಅಂದ್ರೆ ಅಥವಾ ಏನೋ ಒಂದಲ್ಲ ಒಂದು ಕಿರಿಕ್ಕು ಇದ್ರೆ, ಆನ್ ಸೈಟ್ ಇರೋ ಅವಕಾಶ ಮತ್ತೊಂದು ಕಂಪನಿ ಯಲ್ಲಿ ಸಿಕ್ಕರೆ,  ಇವರು ಥಟ್ ಅಂತ ಇರೋ ಕಡೆಗೆ “ ಬೈ ಬೈ “ ಹೇಳಿಬಿಡುತ್ತಾರೆ.
೨. ಇನ್ನು ೩ ರಿಂದ  ೫ ವರುಷದ ಅನುಭವ ವಿರುವವರು, ಹೊರಗಡೆ ಮಾರ್ಕೆಟ್ ಸರಿ ಯಿಲ್ಲ ಅಂದ್ರೆ,  ಇರುವ ಕಂಪನಿ ಯಲ್ಲಿಯೇ ಒಂದು ಹುದ್ದೆ ಹುಡುಕಿಕೊಂಡು ಗಟ್ಟಿಯಾಗಿ ತಳವೂರಲು ನೋಡುತ್ತಿರುತ್ತಾರೆ. ಇಲ್ಲಾಂದ್ರೆ ಅವರು ಸಹ ಆರು ತಿಂಗಳಿಗೊಂದರಂತೆ interview ಕೊಡುತ್ತಲೇ ಇರುತ್ತಾರೆ.
೪. ಇನ್ನು ಕೆಲಸಕ್ಕೆ ಸೇರಿ ೫ - ೮ ವರ್ಷ ಅನುಭವ ಆಗಿರೋರು ಜಂಪ್ ಮಾಡ ಬೇಕಾದರೆ ತುಂಬಾ ಲೆಕ್ಕಾಚಾರಗಳು ಹಾಕುತ್ತಾರೆ. ಸಾಮಾನ್ಯವಾಗಿ ಇವರು ಸಂಸಾರಸ್ಥ ರಾಗಿರೋದ್ರಿಂದ  ಇವರಿಗೆ ಕಮಿಟ್ಮೆಂಟ್ ಗಳು ಜಾಸ್ತಿ.  ಹೋಂ ಲೋನ್, ಪರ್ಸನಲ್ ಲೋನ್, ಆಗ ತಾನೇ ಕೊಂಡ  ಹೊಚ್ಚ ಹೊಸ ಕಾರಿನ ಲೋನ್, ಬೆಂಗಳೂರು ಅಥವಾ ಮೈಸೂರಿನ ನಲ್ಲಿ ಇನ್ವೆಸ್ಟ್ ಮಾಡಿದ ಸೈಟ ಲೋನ್ .. ಹೀಗೆ ಲೋನ್ ಲೋಕದಲ್ಲಿ ಬಂಧಿಯಾಗಿರುವ ಇವರು ಇವೆಲ್ಲವುಗಳನ್ನು ಲೆಕ್ಕಾಚಾರ ಹಾಕಿ ಕೊಂಡೆ ಮುಂದಿನ ಹೆಜ್ಜೆ ಇಡುತ್ತಾರೆ.
೫. ಇನ್ನು ಕೊನೆಯದಾಗಿ ೧೦ ವರ್ಷ ಮೇಲೆ ಅನುಭವ ಉಳ್ಳವರು ಇರುವ ಕಡೆಯೇ ಸೀಟ್ ಬೆಲ್ಟ್ ಹಾಕಿಕೊಂಡು ಆಯಕಟ್ಟಿನ ಜಾಗದಲ್ಲಿ ಕೂತಿರುವುದರಿಂದ, ಇವರು ಕಂಪನಿ ಬದಲಿಸುವ ಶೇಕಡಾವಾರು ವಿರಳ ಎನ್ನಬಹುದು. ಕಂಪನಿ ಬದಲಿಸೋರು ಕೇವಲ ಹಣವನ್ನಷ್ಟೇ ನೋಡುತ್ತಾರೆ ಎನ್ನುವಮಾತು ಎಲ್ಲ ಕಾಲಕ್ಕೋ ಅಪ್ಲೈ ಆಗುವುದಿಲ್ಲ. ಬೆಂಗಳೂರಿನ ಟ್ರಾಫಿಕ್ ಗೆ ಹೆದರಿ ಕೆಲವರು ತಮ್ಮ ಮಕ್ಕಳ ಸ್ಕೂಲ್, ಹೆಂಡತಿಯ ಆಫಿಸ್ ಅಥವಾ ತಮ್ಮ ಮನೆಗೆ  ಹತ್ತಿರವಿರುವ ಕಂಪನಿ ಯನ್ನೇ ಆರಿಸಿಕೊಂಡು ಬದಲಿಸುತ್ತಾರೆ. ಹೀಗೆ ಮಾಡುವಾಗ ಸಂಬಳದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಕೆಲವರು ತಮ್ಮ ಸಧ್ಯದ ಕೆಲಸ ನಿಂತ ನೀರಾಗಿದೆ ಅನ್ನಿಸಿದ ಕೂಡಲೇ ಹೊಸ ಛಾಲೆಂಜ್ ಗಾಗಿ ಕೆಲಸ ಬದಲಿಸುತ್ತಾರೆ. ಮತ್ತೆ ಕೆಲವರು ತಮ್ಮ ಅನುಭವಕ್ಕೆ ತಕ್ಕಂತೆ ಹುದ್ದೆಗಳು ಸಿಕ್ಕಾಗ ಸಂಬಳದ ಬಗ್ಗೆ ಅಷ್ಟೊಂದು ಚೌಕಾಸಿ ಮಾಡದೆ ಕೆಲಸ ಬದಲಿಸುತ್ತಾರೆ.  ಇನ್ನು ಹೆಂಗಸರಾದರೆ ಮದುವೆಯಾದಮೇಲೆ ತಮ್ಮ ಗಂಡನ ಕಂಪನಿಗೆ ಅಥವಾ ಕೆಲವೊಂದು ಸಲ ಗಂಡನೇ ಹೆಂಡತಿಯ ಕಂಪನಿಗೆ ಬದಲಾಗುವುದು ಉಂಟು. ಇದಕ್ಕಾಗಿ ಕೆಲವೊಂದು ಕಂಪನಿಗಳಲ್ಲಿ ವಿಶೇಷ ಸೌಲಭ್ಯಗಳೂ ಇರುತ್ತವೆ. ಕಂಪನಿ ಬದಲಾಯಿಸುವಾಗ  ತುಂಬಾ ಇಂಟೆರೆಸ್ಟಿಂಗ್ ವಿಷಯ ಅಂದರೆ:  ಒಂದೊಂದು ಸಲ ಕಂಪನಿ ಬದಲಿಸುವಾಗ ಇಂಟರ್ ವ್ಯೂ ನಲ್ಲಿ ಕೆಲವರು ಸೆಲೆಕ್ಟ್ ಆಗದೆ ಇದ್ದರೆ, ಮತ್ತೊಂದು ಸಲ ಸೆಲೆಕ್ಟ್ ಆದರೂ ಇವರೇ ಆ ಕಂಪನಿ ತಮಗೆ ಸೂಟ್ ಆಗುವುದಿಲ್ಲ ಎಂದು ಹೋಗುವುದಿಲ್ಲ. ವಿಶೇಷವೆಂದರೆ, ಕಂಪನಿ “A” ಯಿಂದ ಕಂಪನಿ “B” ಗೆ ಜಂಪ್ ಮಾಡಿ ಅಲ್ಲಿನ ವಾತಾವರಣ ಸರಿ ಹೋಗದಿದ್ದರೆ ಪುನಃ ತಮ್ಮ ಮೊದಲ ಕಂಪನಿ “A” ಗೆ ಬಂದು ಸೇರುವ ಜನರೂ ಸಾಫ್ಟ್ ಲೋಕದಲ್ಲಿ ಇದ್ದಾರೆ. ಇದನ್ನ ಸಾಫ್ಟ್ ಲೋಕದ ಭಾಷೆಯಲ್ಲಿ “welcome back policy “ ಅನ್ನುತ್ತಾರೆ. ಹೀಗೆ ಬದಲಾಗುತ್ತಿರುವ ಜಗತ್ತಿನಲ್ಲಿ, ಬದಲಾಗುತ್ತಿರುವ ನಾವೆಲ್ಲ ನಮ್ಮ  ನಮ್ಮ ಕಂಪೆನಿಗಳನ್ನು ಬದಲಾಯಿಸುವುದು ವಿಶೇಷವೇನು ಅಲ್ಲ ಬಿಡಿ. ಆದರೆ ಹೊರಗಡೆಯಿಂದ ನೋಡುವವರಿಗೆ ಇದೊಂದು ವಿಶೇಷ ಸಂಗತಿಯೇ ಸರಿ. ಈ ವಾರದ ಬಿಲ್ಡ್  ಲೇಬಲ್ : ಬದಲಾವಣೆ ಜಗದ ನಿಯಮ, ಬದಲಾಗುವುದು ಪ್ರಕೃತಿಯ ನಿಯಮ, ಬದಲಾಗುತ್ತಲೇ ಇರುವುದು ನಮ್ಮ ಜೀವನದ ನಿಯಮ, ಬರಿ ನಮ್ಮ ಕೆಲಸವನ್ನಷ್ಟೇ ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ಕಂಪನಿಗಳಿಗೆ ಬದಲಾಯಿಸುವುದು ಸಾಫ್ಟ್ ಲೋಕದ ನಿಯಮ. ಒಪ್ಕೊತೀರಾ?

No comments:

Post a Comment