Wednesday, April 23, 2014

ಅಂಕಣ ೧೫ : ಸಾಫ್ಟ್ ಲೈಫ್-ಸೈಕಲ್

ಇನ್ನು ಆವಾಗ ಯೌವನಕ್ಕೆ ಕಾಲಿಡುತ್ತಿರುವ ವಯಸ್ಸು. ಒಂದು ಇಂಜಿನೀಯರಿಂಗ್ ಡಿಗ್ರಿ ಇನ್ನು ಸ್ವಲ್ಪ ದಿನದಲ್ಲಿ ಕೈಗೆ ಬರಲು ರೆಡಿ ಆಗಿರುತ್ತೆ.  ಕಾಲೇಜಿನಲ್ಲಿ ಇರಬೇಕಾದರೆ ನೆ ಕೈಯಲ್ಲೊಂದು ಆಫರ್ ಲೆಟರ್ ಇರುತ್ತೆ .ಇಂಜಿನೀಯರಿಂಗ್  ಕಾಲೇಜಿನಿಂದ ಹೊರಗಡೆ ಬಂದ  ತಕ್ಷಣ ವೆ ಹತ್ತು ಇಲ್ಲ ಹದಿನೈದು ದಿನದ ರೆಸ್ಟ್ ನಂತರ ಸಾಫ್ಟ್ ಕಂಪನಿಯ ಬಾಗಿಲಿಗೆ ಹೋಗಿ ನಮ್ಮ ಹಾಜರಿ ಹಾಕಬೇಕು.


ಕೆಲಸಕ್ಕೆ ಸೇರಿದ ಒಂದು ತಿಂಗಳು ಟ್ರೈನಿಂಗ್ , ಹೆಚ್. ಆರ್  ಪ್ರೋಸೆಸ್, ಹೊಸ ಕ್ಯೂಬಿಕ್, ಹೊಸ ಪ್ರಾಜೆಕ್ಟ್ ಟೀಂ, ಹೊಸತಾಗಿ  ತನ್ನ ಹೆಸರಿನಿಂದಲೇ ಶುರುವಾದ ಬ್ಯಾಂಕ್ ಅಕೌಂಟ್, ಬೆಂಗಳೂರಿನಲ್ಲೊಂದು ಚಿಕ್ಕದಾದ ರೂಮು ಅಥವಾ ಪಿ. ಜಿ ಗಾಗಿ  ಹುಡುಕಾಟ, ಕಂಪನಿ ಯಲ್ಲಿನ ಕ್ಯಾಂಟೀನ್ ಊಟ, ಆಫಿಸಿನಲ್ಲಿ ನಮ್ಮ ಅಕ್ಕ - ಪಕ್ಕ ದ ಕ್ಯೂಬಿಕ್ ನಲ್ಲಿ ಕೂತಿರುವ ಮತ್ತು ಸೀನಿಯರ್ ಎನಿಸಿಕೊಂಡಿರುವವರಿಂದ  ಪುಂಖಾನು ಪುಂಖವಾಗಿ ಸಾಫ್ಟ್ ಲೋಕದ ಬಗ್ಗೆ  ಉಪದೇಶ, ನಮ್ಮ ಪಾಲಿಗೆ ಸಾಕ್ಷಾತ್ ರೋಲ್ ಮಾಡೆಲ್ ಆಗಿರುವ ಮ್ಯಾನೇಜರ್, ಯಾವಾಗಲೂ  ಒಂದಿಲ್ಲ ಒಂದು ಕೆಲಸದಲ್ಲಿ ಬ್ಯುಸಿ ಆಗಿರುವ ಟೀಂ ಲೀಡ್, ನಮ್ಮ ಹಾಗಿಯೇ ಹೊಸತಾಗಿ ಕೆಲಸಕ್ಕೆ ಸೇರಿದ ಜನರ ಗುಂಪು, ವಾರಕ್ಕೊಂದು ಸಲ ಕಂಪನಿಯ ಕ್ಯಾಂಟೀನ್ ಊಟ ಬಿಟ್ಟು ಆಚೆ ಕಡೆ ಹೋಟೆಲಿನಲ್ಲಿ ಊಟ, ತಿಂಗಳಿಗೊಂದು ಮೂವಿ, ಕೆಲಸಕ್ಕೆ ಸೇರಿದ ಒಂದೆರಡು ತಿಂಗಳಿನಲ್ಲೇ ಫ್ರೆಷೆರ್ಸ್ ತಂಡದಿಂದ ಹೋಗುವ ಒಂದು ಟ್ರಿಪ್, ಪ್ರತಿ ತಿಂಗಳ ಕೊನೆಗೆ ನಮ್ಮ ಕೈಗೆ ಬಂದೆಟುಕುವ  ಗರಿ ಗರಿ ನೋಟಿನ ಸಾವಿರಾರು ರುಪಾಯಿಯ ಸಂಬಳ,
ಮೊದಲನೆಯ ಸಂಬಳದಲ್ಲಿ ಮನೆಯ ಹಿರಿಯರ ಅಪ್ಪಣೆಯಂತೆ ದೇವರಿಗೆ ಒಂದಿಷ್ಟು, ಮನೆಯ ಮಂದಿಗೆಲ್ಲ ಗಿಫ್ಟ್ ಗಳು, ಕೆಲಸ ಸಿಕ್ಕು ಮೊದಲ ಸಲ ಊರಿಗೆ ಹೋದ ನಂತರ ನಮಗೆ ಮನೆಯಲ್ಲಿ ಸಿಗುವ ರಾಜ ಮಾರ್ಯಾದೆ, ನಮ್ಮ ಬಂಧು ಬಳಗದಲ್ಲಿ ಇನ್ನು  ಎಂಜಿನೀರಿಂಗ್ ಓದುತ್ತಿರುವವರ ಕಣ್ಣಿಗೆ ನಾವೇ ರೋಲೆ ಮಾಡೆಲ್!, ಅವರಿಗೆ ನಮ್ಮಿಂದ ಪುಂಖಾನು  ಪುಂಖವಾಗಿ ಉಪದೇಶ, ನಮ್ಮ ಊರಿನ ಅಕ್ಕ -ಪಕ್ಕದ ಮನೆಯಲ್ಲಿರುವವರಿಗೆ ಯಥಾ ಪ್ರಕಾರ ನಮ್ಮ ಕೆಲಸಕ್ಕಿಂತ ನಮಗೆಷ್ಟು ಸಂಬಳ ಬರುತ್ತಿರಬುಹುದು ಎನ್ನುವ ಲೆಕ್ಕಾಚಾರ.........
ಹೆಚ್ಚು ಕಡಿಮೆ ಪ್ರತಿ ಯೊಬ್ಬ ಸಾಫ್ಟ್ವೇರ್ ಎಂಜಿನೀರ್ ಅನುಭವಿಸಿರುವ ಕ್ಷಣಗಳಿವು ಮತ್ತು ಮರೆಯಲಾರದ ಕ್ಷಣಗಳು ಸಹ!

ಒಂದೆರಡು ವರ್ಷಗಳ ನಂತರ :
ಹೆಚ್ಚು ಕಡಿಮೆ ಎಲ್ಲ ಸಾಫ್ಟ್ ಲೋಕದಲ್ಲಿರುವವರಿಗೆ ಮೊದಲ ಒಂದೆರಡು ವರುಷ ಲರ್ನಿಂಗ್ ಕರ್ವ. ಕೆಲಸಕ್ಕೆ ಸೇರಿದ ಮೊದಲ ಎರಡು ವರ್ಷ ಆಗಿದ್ದೆ ಗೊತ್ತಾಗುವುದಿಲ್ಲ. ಅದರಲ್ಲೂ ಒಂದು ಒಳ್ಳೆ ಪ್ರಾಜೆಕ್ಟ್ ಸಿಕ್ಕರಂತು ಮುಗಿದೇ ಹೋಯ್ತು, ಸಮಯದ ಪರಿವೆ ಇರುವುದಿಲ್ಲ. ಒಂದು ವರ್ಷ ಆಗುತ್ತಿದ್ದಂತೆಯೇ ಕೈಗೆ ಬರುವ ಸಂಬಳ ಸ್ವಲ್ಪ ಜಾಸ್ತಿ ಆಗಿರುತ್ತದೆ. ಇನ್ನು ಬ್ಯಾಚುಲರ್ ಇರುವುದರಿಂದ ಮನೆಯ ಮುಂದೆ ಒಂದು ಟೂ ವೀಲರ್ ಸಹ ಬಂದು ನಿಂತಿರುತ್ತದೆ. ಅಷ್ಟರಲ್ಲಿ ಮನಸ್ಸು ಒಂದೆರಡು ಸಲ “ GRE, TOFEL, GATE “ ಬಗ್ಗೆನು ಒಂದಿಷ್ಟು ಯೋಚಿಸಿರುತ್ತದೆ. ಹಾಗೆ ಯೋಚಿಸುತ್ತಿರಬೇಕಾಗಾದ “ ಆನ್ - ಸೈಟ್” ಆಫರ್ ನ ಕನಸು ನಮ್ಮ ಮ್ಯಾನೇಜರ್ ತೊರಿಸುತ್ತಾರೆ. ಅದಷ್ಟಕ್ಕದೆ  “ GRE, TOFEL, GATE “  ಕನಸು ಪಕ್ಕಕ್ಕೆ ಸರಿದು ಆನ್ - ಸೈಟ್ ಗೆ ದಾರಿ ಮಾಡಿ ಕೊಡುತ್ತವೆ.

ಇಲ್ಲಿ ತಮಾಷೆಯ ವಿಷಯ ವೆಂದರೆ, ನಾನು “ ಆನ್ - ಸೈಟ್”  ಹೋಗಬೇಕು ಅನ್ನುವ ಹಂಬಲಕ್ಕಿಂತ ನನ್ನ ಜೊತೆ  ಕಾಲೇಜಿನಲ್ಲಿ ಓದಿ ಬೇರೆ ಕಂಪನಿ ಯಲ್ಲಿ ಕೆಲಸ ಮಾಡುತ್ತಿರುವ ಗೆಳೆಯ ನನಗಿಂತ ಮುಂಚೆ ಆನ್ - ಸೈಟ್ ಹೋದ ಅಂತ ಕೇಳಿದಾಗ ಮನಸ್ಸು ಅದಾಗದೆ ಚುರ್ ಎನ್ನುತ್ತದೆ. ಅದಕ್ಕೆ ಏನಾದ್ರೂ ಆಗಲಿ ನಾನು ಹೋಗಿ ಬರಬೇಕು ಎನ್ನುವ ಹಂಬಲ ಜಾಸ್ತಿ ಆಗಿರುತ್ತದೆ. ಅದರ ಜೊತೆಗೆ ಮನೆಯ ಅಕ್ಕ - ಪಕ್ಕ ದವರು “ ಏನಪ್ಪಾ, ಇನ್ನು ಯಾವ ದೇಶಕ್ಕೂ ಹೋಗಿಲ್ವಾ?, ನಮ್ಮ ಹುಡುಗ ಆಗ್ಲೇ ಹೋಗಿ ಬಂದಾ.. “ ಅಂದಾಗಂತೂ ಕೇಳೋದೇ ಬೇಡ.

ಒಂದೈದು ವರ್ಷಗಳ ನಂತರ :
ಇಷ್ಟರಲ್ಲಾಗಲೇ ನಾವು ಮಾಡುತ್ತಿರುವ ಸಾಫ್ಟ್ ಕೆಲಸದ ಮೇಲೆ ಒಂದು ಹಿಡಿತ ಬಂದಿರುತ್ತದೆ. ಹಿಡಿತದ ಜೊತೆಗೆ, ಟೀಮ್ ಲೀಡ್, ಟೆಸ್ಟ್ ಮ್ಯಾನೇಜರ್, ಟೆಸ್ಟ್ ಲೀಡ್, ಪ್ರಾಜೆಕ್ಟ್ ಲೀಡ್, ಕ್ವಾಲಿಟಿ ಹೆಡ್, ಡಿಪಾರ್ಟ್ಮೆಂಟ್ ಹೆಡ್, ಮಾಡ್ಯೂಲ್ ಲೀಡ್,  ಹೀಗೆ ಅವರವರ ಕಂಪನಿ ಗೆ ತಕ್ಕಂತೆ ಒಂದು ಗ್ರೇಡ್ ಕೂಡ ಬಂದಿರುತ್ತದೆ. ಕೈಗೆ ಬರುವ ಸಂಬಳದ ತೂಕವೂ ಜಾಸ್ತಿ ಆಗಿರುತ್ತದೆ. ಮನೆಯಲ್ಲಿ ಮದುವೆಗಾಗಿ ಗಂಡು / ಹೆಣ್ಣು  ಹುಡುಕುವುದಕ್ಕೆ ಶುರು ಮಾಡಿರುತ್ತಾರೆ.

ಒಂದತ್ತು ವರ್ಷಗಳ ನಂತರ :
ಇದನ್ನು ಹೇಳುವ ಅವಶ್ಯಕತೆಯೇ ಇಲ್ಲ.  ನಿಮ್ಮೆಲ್ಲರಿಗೂ ಗೊತ್ತು. ಇಷ್ಟು ವರುಷ ಅನುಭವ ಆಗುವ ಹೊತ್ತಿಗೆ ಒಂದು ಒಳ್ಳೆಯ ಜಾಗ ಅಥವಾ ಪೊಸಿಶನ್ ಸಿಕ್ಕಿರುತ್ತದೆ. ಕಂಪನಿಯ ಒಂದೆರಡು ಅವಾರ್ಡ್ ಗಳು ನಮ್ಮ ಕ್ಯೂಬಿಕ್ ನಲ್ಲಿ ಬಂದು ಕೂತಿರುತ್ತವೆ. ಸಂಬಳದ ತೂಕಕ್ಕೆ ತಕ್ಕಂತೆ ಹೊರಗಡೆಯ ಕರ್ಚು ಸಹ ಜಾಸ್ತಿ ಆಗಿರುತ್ತದೆ. ಮದುವೆ  ಆಗಿ ಮಕ್ಕಳು ಸ್ಕೂಲ್ ಗೆ ಹೋಗುತ್ತಿರುತ್ತಾರೆ. ಸಂಬಳ ದ ಜೊತೆಗೆ ಹೋಂ ಲೋನ್ , ಕಾರ್ ಲೋನ್, ಸೈಟ್ ಲೋನ್, ಪರ್ಸನಲ್ ಲೋನ್ ಸಹ ನಮ್ಮ ಬೆನ್ನ ಮೇಲೆ ಬಂದು ಕೂತಿರುತ್ತವೆ. ವರ್ಷಕ್ಕೊಂದು ಸಲ ಫ್ಯಾಮಿಲಿ ಟ್ರಿಪ್, ವೀಕೆಂಡ್ ನಲ್ಲಿ ಮಕ್ಕಳ ಸ್ಕೂಲ್ ನಲ್ಲಿ ಪೇರೆಂಟ್ಸ್ ಮೀಟಿಂಗ್, ಒಂದು ವೇಳೆ  ಯಾವುದೇ ಕಾರ್ಯಕ್ರಮ ಇಲ್ಲ ಅಂದರೆ ಮಾತ್ರ ಮನೆಯಲ್ಲಿ ರೆಸ್ಟ್.  ಇನ್ನು ಹಬ್ಬ ಹರಿದಿನಗಳ ಲಾಂಗ್ ವೀಕೆಂಡ್ ನಲ್ಲಿ ಬೆಂಗಳೂರಿನ ಹೊರಗಿರುವ ಅಪ್ಪ - ಅಮ್ಮ ಅಥವಾ ಅತ್ತೆ ಮಾವ ನ ಮನೆಗೆ ಕುಟುಂಬ ಸಮೇತ  ಹೋಗಿ ಬರುವುದು.  ಹೀಗೆ ನಡೆಯುತ್ತಿರುತ್ತದೆ ನಮ್ಮ ಜೀವನ, ಸಾಫ್ಟ್ ಲೋಕದ ಜೀವನ.

ಈ ವಾರದ ಬಿಲ್ಡ್ ಲೇಬಲ್ : ನೀವು ಇಷ್ಟು ಹೊತ್ತು ಓದಿದ್ದು “ ಕಥೆಯಲ್ಲ !..... ಇದು ಜೀವನ”

No comments:

Post a Comment