Thursday, March 6, 2014

ಅಂಕಣ ೧೦: ಸಾಫ್ಟ್ ಲೋಕದಿಂದ ವೈರಾಗ್ಯದತ್ತ

ಸಾಫ್ಟ್ ಲೋಕವೆಂದರೆ ಕೈ ತುಂಬಾ ಸಂಬಳವೆನ್ನುವುದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ಅದಿರಲಿ, ನಮಗೆ ಇಷ್ಟೊಂದು ಸಂಬಳ ಯಾಕೆ ಸಿಗುತ್ತದೆ ಗೊತ್ತಾ ? ನಾವು ಕೆಲಸ ಮಾಡುವ ಸಂಸ್ಥೆಗಳು ಕ್ಲೈಂಟ್ ಗಳಿಗೆ ಡಾಲರ್ ಲೆಕ್ಕದಲ್ಲಿ ಅಥವಾ ಕ್ಲೈಂಟ್ ದೇಶದ ಕರೆನ್ಸಿ ತಕ್ಕಂತೆ ಚಾರ್ಜ್ ಮಾಡುವುದರಿಂದ ನಮಗೆ ಅದು ರುಪಾಯಿಗೆ ಕನ್ವರ್ಟ್ ಆಗಿ ಇಷ್ಟು ಸಂಬಳ ಬರುತ್ತದೆ. ಆದರೆ ನೀವು ಒಂದು ಗಮನಿಸಿ, ಇತ್ತೀಚಿನ ದಿನಗಳಲ್ಲಿ 6th pay, 7th pay commision ಗಳಿಂದ  ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರಿಗಳ ಸಂಬಳಗಳು  ಹೆಚ್ಚು ಕಡಿಮೆ ಸಾಫ್ಟ್ ಲೋಕದ ಹತ್ತಿರಕ್ಕೆ ಬರುತ್ತಿವೆ. ಹೀಗಾಗಿ ನಾವು ತೆಗೆದುಕೊಳ್ಳುವ ಸಂಬಳ ಅಷ್ಟೊಂದು ಮಹತ್ವದ್ದು ಏನು ಅಲ್ಲ ಬಿಡಿ. ಆದರೂ ಅದೇನೋ ಒಂದು ಕಲ್ಪನೆ ನಮ್ಮ ಜನಕ್ಕೆ, ಸಾಫ್ಟ್ ಲೋಕದವರು ಅಂದರೆ “ಇವರಿಗೆ ರೋಕ್ಕಕ್ಕೆನು ಕಡಿಮೆ ಇಲ್ಲ “ ಅಂತ.



ಒಂದು ಪ್ರಶ್ನೆ, “ ತಿಂಗಳಿಗೆ ಆರಂಕಿಯ ಸಂಬಳ ಎಣಿಸುವ ಸಾಫ್ಟ್ ಲೋಕದ ಜನ, ಇದ್ದಕ್ಕಿದ್ದಂತೆಯೇ ತಮ್ಮ ಕೆಲಸಕ್ಕೆ ಗುಡ್ ಬೈ ಹೇಳಿ, ಬೇರೆ ಏನೇನೋ ಸಾಹಸ ಗಳನ್ನೂ ಮಾಡಲು ಹೋಗುತ್ತಾರೆ ಅಂದ್ರೆ ನೀವು ನಂಬುತ್ತೀರಾ?”
ಖಂಡಿತ ನಂಬಲೇಬೇಕು! ಈ ವಾರ ಸ್ವಲ್ಪ ಇಂಥವರ ಬಗ್ಗೆ ಮಾತಾಡೋಣ.

ಸಾಫ್ಟ್ ಲೋಕದಲ್ಲಿ ನೀವು ಈ ರೀತಿಯ ವಿಚಿತ್ರಗಳನ್ನು ಜಾಸ್ತಿ ಕಾಣಬಹುದು. ಎ. ಸಿ ರೂಂ ನಲ್ಲಿ ಕೂತು ಕೂತು ಬೇಜಾರಾಗಿ, ಇದ್ದಕ್ಕಿದ್ದಂತೆಯೇ ಒಂದು ದಿನ, “ ಅರೆ, ಎತ್ಲಾ ಕಡೆ ಹೋಗ್ತಾ ಇದೆ ನಂ ಜೀವನ?” ಅನ್ನುವ ಒಂದು ಪ್ರಶ್ನೆ ಕಾಡ  ತೊಡಗಿದಾಗ..
“ ಇಷ್ಟು ದಿವಸ, ಬದುಕುವದಕ್ಕೊಸ್ಕರ  ಕೆಲಸ ಮಾಡಿದ್ದು ಸಾಕು, ಇನ್ನು ನಮ್ಮ ಮನಸಿಗೆ ತೃಪ್ತಿ ನೀಡುವ ಕೆಲಸವಾದರೂ ಮಾಡೋಣ” ಅಂತ  ಕೆಲಸಕ್ಕೆ ಗುಡ್ ಬೈ  ಹೇಳಿ ಹೊರಟೆ ಬಿಡುತ್ತಾರೆ ಕೆಲವರು.

ಕೋಡಿಂಗ್ ಬಿಟ್ಟು ಕ್ಯಾಮರಾ ಹಿಡಿದು ಕಾಡಿಗೆ ಹೊರಟವರು, ಟೆಸ್ಟಿಂಗ್ ಬಿಟ್ಟು ಟೂರಿಸಂ ನತ್ತ  ವಾಲಿದವರು, 
ಕ್ವಾಲಿಟಿ ಬಿಟ್ಟು ಕನ್ನಡ ದತ್ತ ಮುಖ ಮಾಡಿದವರು, ಮ್ಯಾನೇಜರ್ ಹುದ್ದೆಯನ್ನ ಕೆಳಗಿಟ್ಟು ಆಧ್ಯಾತ್ಮದತ್ತ  ಓಡಿದವರು, 
ಬೈಕ್ ಹತ್ತಿ ದೇಶ ಸುತ್ತಲು ಹೋದವರು, ಜೇಬಿನಲ್ಲಿ ಒಂದು ರೂಪಾಯಿಯೂ ಇಟ್ಟು ಕೊಳ್ಳದೆ ಪ್ರವಾಸ ಮಾಡುವವರು, 
ಅಷ್ಟೇ ಯಾಕೆ :
ಸಾಫ್ಟ್ ಲೋಕ ಬಿಟ್ಟು ಬಣ್ಣದ ಲೋಕಕ್ಕೆ ಕಾಲಿಟ್ಟವರು, ಕೋಡಿಂಗ್ ಬರೆಯುವ ಕೈಯಲ್ಲಿ ಅಂಕಣ ಬರೆಯಲು ಹೋದವರು ಮತ್ತು ಬರೆಯುತ್ತಲೇ ಇರುವವರು, ತಮ್ಮದೇ ಆದ ಸಂಸ್ಥೆ ಗಳನ್ನು ಸ್ಥಾಪಿಸಿ ಕೊಂಡವರು , ತಮ್ಮ ಸಂಸ್ಥೆಯಿಂದ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವವರು, ಕೃಷಿ ಯತ್ತ ಮುಖ ಮಾಡಿದವರು, ಸಾಫ್ಟ್  ಆದ ಲೋಕವನ್ನು ಬಿಟ್ಟು  ಸಮಾಜ ಸೇವೆಗಾಗಿ ಸಿವಿಲ್ ಸರ್ವಿಸ್ ಜಾಬ್ ಗಳನ್ನೂ ಅರಸಿಕೊಂಡು ಹೋದವರು, ಸಾಫ್ಟ್ ಸಹವಾಸವೇ ಸಾಕೆಂದು ಜೀವನಕ್ಕೊಸ್ಕರ ಸರಕಾರೀ ಕೆಲಸಕ್ಕೆ ಬೇಕಂತಲೇ ಸೇರಿಕೊಂಡವರು..... , ಹೀಗೆ ಹಲವಾರು ಉದಾಹರಣೆ ಗಳನ್ನ ನೋಡ ಬಹುದು. ಮಾಡುವ ಕೆಲಸ ತೃಪ್ತಿ ಕೊಡದೆ ಇದ್ದಾಗ ತಮಗಿಷ್ಟ ವಾದ ಕೆಲಸಗಳನ್ನು ಹುಡುಕಿಕೊಂಡು ಹೋಗುವುದು ಸಾಫ್ಟ್ ಲೋಕದಲ್ಲಿ ಇನ್ನು ಚಾಲ್ತಿಯಲ್ಲಿದೆ.
ಇದೆ ತರಹದ ಇನ್ನೊಂದು ರೀತಿಯ ಗುಂಪು ಇದೆ. ಅವರು ಸಾಫ್ಟ್ ಲೋಕವನ್ನು ಪೂರ್ತಿಯಾಗಿ ಬಿಟ್ಟು ಬರದೆ ಇದ್ದರೂ, ತಮ್ಮ ಒಲವಿನ ವಿಷಯಕ್ಕೆ ವಾರಾಂತ್ಯವನ್ನು ಮೀಸಲಿಡುತ್ತಾರೆ. ಅದು ಸಂಗೀತ, ಬರವಣಿಗೆ, ನಾಟಕ, ಭರತನಾಟ್ಯ, ಮಕ್ಕಳಿಗೆ ಪಾಠ ಹೇಳುವುದು, ತಮ್ಮದೇ ಆದ ವೆಬ್ ಸೈಟ್ ಓಪನ್ ಮಾಡಿ ಅಲ್ಲಿ ಟ್ರೆಕಿಂಗ್, ಟೂರಿಸ್ಟ್ ಪ್ಲೇಸ್ ಗಳ ಬಗ್ಗೆ ಇತರರಿಗೆ ಮಾಹಿತಿ ನೀಡುವಂತಹ ಅಂಕಣಗಳನ್ನು ಬರೆಯುವುದು.  ವಿಶೇಷವೆಂದರೆ ಮಾಡುವ ಕೆಲಸ ಸಾಫ್ಟ್ ವೇರ್ ನಲ್ಲಾದರೂ,  ಮುಕ್ತ ವಿಶ್ವ ವಿದ್ಯಾ ನಿಲಯಗಳಲ್ಲಿ ಕನ್ನಡ ಬಿ.ಎ ಮತ್ತು ಎಮ್.ಎ ಗಳನ್ನೂ ಓದುತ್ತಿರುವವರೂ ಇದ್ದಾರೆ. ಹೇಗಿದ್ದರೂ ನಾವು ಸಾವಿರಾರು ವರ್ಷ ಬದುಕುವದಿಲ್ಲ ವಾದ್ದರಿಂದ, ಬರೀ ಹಣದ ಹಿಂದೆ ಹೋಗುವ ಬದಲು, ಒಂದಿಷ್ಟು ಬೇಸಿಕ್ ನೀಡ್ ಗಳನ್ನ ಪೂರೈಸಿಕೊಂಡು, ತಮಗೆ ಇಷ್ಟವಾದ ಕೆಲಸಗಳಿಗೆ ಸಮಯ ಮೀಸಲಿಡುವವರು ಸಾಫ್ಟ್ ಲೋಕದಲ್ಲಿ ಸಿಗುತ್ತಾರೆ. ಹಾಗಂತ ಎಲ್ಲ ಸಾಫ್ಟ್ ಜನರು ಹೀಗೆಯೇ ಇರುತ್ತಾರೆ ಅಂತ ಅಲ್ಲ. ಒಂದಿಷ್ಟು ಜನರು ಮಾತ್ರ ಈ ಗುಂಪಿಗೆ ಸೇರುತ್ತಾರೆ.
ಒಂದು ಸಲ ಇರುವ ಕೆಲಸವನ್ನು ಕಳೆದುಕೊಂಡರೆ ಮತ್ತೆ ಸಿಗುತ್ತದೋ ಇಲ್ಲವೋ ಎಂಬ ಭಯದಿಂದ ಬದುಕುವವರು ಬಹಳ ಮಂದಿ. ಆದರೆ ಆತ್ಮ ತೃಪ್ತಿ ಗಾಗಿ ಇರುವ ಕೆಲಸವನ್ನು ಬಿಟ್ಟು ಕನಸಿನ ಬೆನ್ನೇರಿ ಹೋಗುವ ಇವರ ಧೈರ್ಯವನ್ನು ಮೆಚ್ಚಲೇಬೇಕು. ಈ ವಾರದ ಬಿಲ್ಡ್ ಲೇಬಲ್ : ಸಾಫ್ಟ್ ಲೋಕದ ಜನರು ಸಿವಿಲ್ ಸರ್ವಿಸ್ ಗೆ ವಲಸೆ ಹೋಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇತ್ತೀಚಿನ ದಿನಗಳಲ್ಲಿ ಸಾಫ್ಟ್ ಜನರು “ಪಾಲಿಟಿಕ್ಸ್ “ ನ ಕಡೆಗೆ ಇಂಟರೆಸ್ಟ್ ತೋರಿಸ್ತಾ ಇರುವುದು ಒಂದು ಹೊಸ ಬೆಳವಣಿಗೆ. ಇದು ಒಳ್ಳೆಯದೋ, ಕೆಟ್ಟದ್ದೋ ಎಂದು ಅವರ ಪಾಲಿಟಿಕ್ಸ್ ಜೀವನ ಶುರುವಾದ ಮೇಲೆ ಹೇಳಬಹುದು.

No comments:

Post a Comment