Thursday, March 20, 2014

ಅಂಕಣ ೧೧ : ಸಾಫ್ಟ್ ಲೋಕ ಮತ್ತು ಆನ್ ಲೈನ್ ಶಾಪಿಂಗ್

ಸಾಫ್ಟ್ ಲೋಕಕ್ಕೂ ಆನ್ ಲೈನ್ ಗೂ ಒಂದು ಬಿಡಲಾರದ ನಂಟು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಆನ್ - ಲೈನ್ ಶಾಪಿಂಗ್ ಅನ್ನುವುದು ಒಂದು ರೆವೊಲುಶನ್  ಆಗಿ ಬಿಟ್ಟಿದೆ. ಹಲ್ಲುಜ್ಜುವ ಬ್ರಷ್ ನಿಂದ ಕಾಲಿಗೆ ಹಾಕಿ ಕೊಳ್ಳುವ ಚಪ್ಪಲಿಯ ವರೆಗೆ ನೀವು ಆನ್ - ಲೈನ್ ನಲ್ಲಿ ಶಾಪ್ ಮಾಡಬಹುದು. ಆನ್ - ಲೈನ್ ನಲ್ಲಿ ನೀವು ಆರ್ಡರ್ ಮಾಡಿದ ವಸ್ತುಗಳು ಒಂದೆರಡು ದಿನದಲ್ಲಿಯೇ ನಿಮ್ಮ ಮನೆಗೆ ಹಾಜರ್ ಆಗಿ ಬಿಡುತ್ತವೆ.


ಕಾಲೆಳೆದು ಕೊಂಡು  ಅಂಗಡಿಗೆ ಹೋಗಿ, ನೂರೆಂಟು ಚೌಕಾಸಿ ಮಾಡಿ, ಕೊನೆಗೆ ಇಷ್ಟವಾಗದೆ ಇದ್ದರೆ  ಇನ್ನೊಂದು ಅಂಗಡಿಗೆ ಹೋಗಿ ಅಲ್ಲೂ ಪುನಃ ಇದೆ ಕಥೆಯಾದರೆ ಜೋಲು ಮೊರೆ ಹಾಕ್ಕೊಂಡು ಮನೆಗೆ ಬರುವುದು ತಪ್ಪಿದ್ದಲ್ಲ. ಆದರೆ ಆನ್ - ಲೈನ್ ನಲ್ಲಿ ಹಾಗಲ್ಲ , ಸುಮ್ಮನೆ ಕೂತಲ್ಲೇ ಒಂದು ಕ್ಲಿಕ್ ಮಾಡಿದರೆ ಸಾಕು ನೀವು ಆರ್ಡರ್ ಮಾಡಿದ ವಸ್ತು  ನಿಮ್ಮೆದುರಿಗೆ ಹಾಜರ್!.  ಸಾಫ್ಟ್ ಲೋಕ ಜನರು ಈ ಆನ್ - ಲೈನ್ ಶಾಪಿಂಗ್ ಗೆ ಅದೆಷ್ಟು ಅಂಟಿ  ಕೊಂಡು  ಬಿಟ್ಟಿದ್ದಾರೆ ಎಂದರೆ, ಮೊನ್ನೆ ನನ್ನ ಫ್ರೆಂಡ್ ಹೇಳುತ್ತಿದ್ದ;
“ ನನಗೇನು ಬೇಕೋ ಒಂದು ಲಿಸ್ಟ್ ಮಾಡಿಕೊಂಡು ವೀಕೆಂಡ್ ನಲ್ಲಿ ಒಂದರ್ಧ ಗಂಟೆ ಕೂತು ಬಿಟ್ಟರೆ ಸಾಕು, ಆರ್ಡರ್ ಮಾಡಿದ್ದೆಲ್ಲ ಮನೆಗೆ ಬಂದು ಬೀಳುತ್ತದೆ, ಯಾವನ್ರಿ  ಹೋಗ್ತಾನೆ? ಈ ಬೆಂಗಳೂರು ಟ್ರಾಫಿಕ್ ನಲ್ಲಿ ಹೊರಗಡೆ?”.
ಇನ್ನೊಬ್ಬ ಸ್ನೇಹಿತನಂತು ಒಂದು ಹೆಜ್ಜೆ ಮುಂದಕ್ಕೆ ಹೋಗಿ :
“ ಸೈಜ್ ಕರೆಕ್ಟ್ ಆಗಿ ಗೊತ್ತಿದ್ರೆ ‘ಅಂಡರ್ ವೇರ್’ ಸಹಿತ ಆನ್- ಲೈನ್ ನಲ್ಲಿ ಆರ್ಡರ್ ಮಾಡಬಹುದು. ನಾನಂತೂ ಇದನ್ನೇ ಮಾಡೋದು” ಅಂದಿದ್ದ.

ಇವತ್ತಿನ ಬೆಂಗಳೂರು  ಇಂಟರ್ನೆಟ್ ಮೇಲೆ ಎಸ್ಟೊಂದು ಡಿಪೆಂಡ್ ಆಗಿದೆ ಅಂದ್ರೆ, ನನ್ನ ಸ್ನೇಹಿತ ನೊಬ್ಬನ ಪಿ. ಜಿ ಅಲ್ಲಿ ಅವರಿಗೊಂದು ಸೌಲಭ್ಯವಿದೆ. ಅದೇನಂದರೆ, ಅವರು ತಮ್ಮ ರೂಂ ನಲ್ಲಿ ಕುತ್ಕೊಂಡು ರಾತ್ರಿ ಊಟಕ್ಕೆ ಯಾವ ಡಿಶ್ ಬೇಕು ಅಂತ ಕ್ಲಿಕ್ ಮಾಡಿದರೆ ಸಾಕು ಅವರ ರೂಂ ಗೆ ನೆ ಅಡುಗೆ ಬರುತ್ತದೆ. ತಿಂಗಳ ಕೊನೆಗೆ ಬಿಲ್ ಕಟ್ಟಿದರಾಯ್ತು.

ಸಾಫ್ಟ್ ಲೋಕದ ಬಹಳಷ್ಟು ಜನ ತಮ್ಮ  ಎಲೆಕ್ಟ್ರಿಸಿಟಿ ಬಿಲ್, ವಾಟರ್ ಬಿಲ್, ಪೋಸ್ಟ್ ಪೇಡ ಆಗಿದ್ದರೆ ಮೊಬೈಲ್ ಬಿಲ್, ಪ್ರಿ ಪೇಯ್ಡ್ ಆಗಿದ್ದರೆ ಮೊಬೈಲ್ ರಿಚಾರ್ಜ್, ಎಲ್. ಐ .ಸಿ , ಪ್ರತಿ ತಿಂಗಳ ಲೋನ್ ಗಳ EMI  ಕಂತುಗಳು, ಎಲ್ಲವನ್ನು ಆನ್ - ಲೈನ್ ಮೂಲಕವೇ ಪೇ ಮಾಡಿಬಿಡುತ್ತಾರೆ. ಇನ್ನು ಕೆಲವರು “ ನಾವು ಜೀವಂತ ಇರೋವರೆಗೂ ಈ ಬಿಲ್ ಗಳನ್ನ ಪ್ರತಿ ತಿಂಗಳು ಕಟ್ಟ ಬೇಕಾಗಿರುವುದರಿಂದ net banking ನಲ್ಲಿ ಪ್ರತಿ ತಿಂಗಳು standing instruction  ಕೊಟ್ಟು ಸಂಬಳ ಬಂದ  ತಕ್ಷಣವೇ  ತಾನೇ ಕಟ್ ಆಗುವ ರೀತಿಯಲ್ಲಿ ಮಾಡಿಬಿಟ್ಟಿ ರುತ್ತಾರೆ.

ಸಾಫ್ಟ್ ಲೋಕದ ಕಂಪೆನಿಗಳಲ್ಲಿರುವ ಪ್ರತಿಯೊಂದು ಪ್ರಾಜೆಕ್ಟ್ ಟೀಂನಲ್ಲೂ  ಆನ್ - ಲೈನ್ ಶಾಪಿಂಗ್ ಅನ್ನು ಕರತಲಾಮಲಕ ಮಾಡಿಕೊಂಡವರು ಒಬ್ಬರಾದರೂ ಇರುತ್ತಾರೆ. ಪ್ರಾಜೆಕ್ಟ್ ಟೀಂ ಮೂವಿ ಗೆ ಹೋಗಬೇಕಾದ್ರೆ ಇವರು ಚಕಾ- ಚಕ್ ಅಂತ ಯಾವ ಥಿಯೇಟರ್ ನಲ್ಲಿ ಯಾವ್ ಸಿನೆಮ ಇದೆ, ಟಿಕೆಟ್ ಚಾರ್ಜ್ ಎಷ್ಟು ಅಂತ ಎಲ್ಲ ಮಾಹಿತಿಯನ್ನು ಟೀಂ ಗೆ ಒದಗಿಸುತ್ತಾರೆ. ಟೀಂ ನವರು  ಒಂದು ದಿನದ ಔಟಿಂಗ್ ಹೋಗಬೇಕಾದ್ರು ಅವರು ನೋಡುವುದು ಇವರ ಮುಖವನ್ನೇ. ಯಾವ ಜಾಗಕ್ಕೆ ಹೋಗಬೇಕು, ಅದು ಬೆಂಗಳೂರಿನಿಂದ ಎಷ್ಟು ಕಿಲೋಮೀಟರು, ಅಲ್ಲಿ ರೂಂ ಬುಕಿಂಗ್ ಎಲ್ಲವನ್ನು ಈ  ಇಂಟರ್ನೆಟ್ ಪಂಟರು ಗಳು ಒದಗಿಸಿಬಿಡುತ್ತಾರೆ.  ಇಲ್ಲಿ ಒಂದು ವಿಶೇಷವೆಂದರೆ ಸಾಫ್ಟ್ ಲೋಕದ ಜನರು ಪ್ರತಿದಿನವೂ ಕಂಪ್ಯೂಟರ್ ನ ಮುಂದೆ ಕೂತರೂ  ಎಲ್ಲರಿಗೂ ಆನ್ - ಲೈನ್ ಹುಚ್ಚು ಇರುತ್ತದೆ ಅಂತ ಅಲ್ಲ. ಕೆಲವರಿಗಂತೂ ಇದರ ಬಗ್ಗೆ ಗಂಧ - ಗಾಳಿಯೂ ಇರುವುದಿಲ್ಲ.

ಎಲೆಕ್ಟ್ರಾನಿಕ್ಸ್ ಉಪಕರಣಗಳಾದ ಹ್ಯಾಂಡ್ ಫ್ರೀ, ಮೊಬೈಲ್,  ಸ್ಪೀಕರ್, ಟಿ .ವಿ ಇವೆಲ್ಲವನ್ನೂ ಆನ್ ಲೈನ್ ಆರ್ಡರ್ ಮಾಡುವುದು ಹೊಸದೇನಲ್ಲ. ಆದರೆ ತರಕಾರಿಯನ್ನು ಆನ್ - ಲೈನ್ ನಲ್ಲಿ ನೀವು ಆರ್ಡರ್ ಮಾಡಿ ಮನೆಗೆ ಡೆಲಿವರಿ ಮಾಡಿಸ್ಕೊಬಹುದು ಅಂತ ಗೊತ್ತಾ? ಅಷ್ಟೇ ಏಕೆ, ಪೆನ್ ನಿಂದ ಹಿಡಿದು, ಪುಸ್ತಕ, ಡೈರಿ, ಕುತ್ತಿಗೆಗೆ ಹಾಕಿ ಕೊಳ್ಳುವ ಟೈ ವರೆಗೂ ಆನ್ - ಲೈನ್ ನಲ್ಲಿ ಲಭ್ಯ.

ಇನ್ನು ಹೆಂಗಸರಿಗಂತೂ ಕೇಳುವುದೇ ಬೇಡ. ಇವರು ಮನೇಲಿ ಕೂತು ಆರ್ಡರ್ ಮಾಡಿ, ಗಂಡನ ಆಫೀಸಿನ ಅಡ್ರೆಸ್ಸ್ ಕೊಟ್ಟು ಬಿಡುತ್ತಾರೆ. ಪೆಚ್ಚು ಮೊರೆ ಹಾಕಿಕೊಂಡು ಗಂಡ ಅದಕ್ಕೆಲ್ಲ ದುಡ್ಡು ಕೊಟ್ಟು ಅದೆಲ್ಲವನ್ನು ಮನೆಗೆ ತಗೊಂಡು ಬರಲೇಬೇಕು.

ಇನ್ನು ಪುಸ್ತಕ ಪ್ರೇಮಿಗಳೂ ಸಹ ಆನ್ - ಲೈನ್ ನಲ್ಲಿ ಪುಸ್ತಕ ಆರ್ಡರ್ ಮಾಡುವುದರಲ್ಲೂ ಹಿಂದೆ ಬಿದ್ದಿಲ್ಲ. ಆದರೆ ಕನ್ನಡ ಪುಸ್ತಕಗಳಿಗೆ ಆನ್ - ಲೈನ್ ನಲ್ಲಿ ಎಷ್ಟು ಬೇಡಿಕೆಯಿದೆ ಅನ್ನುವುದು ಒಂದು ಪ್ರಶ್ನೆ.

ನೀವು ಯಾವುದೇ ಸಾಫ್ಟ್ ವೇರ್ ಕಂಪನಿ ಮುಂದೆ ಕೇವಲ ಒಂದು ದಿನ ನಿಂತು ನೋಡಿ , ನಿಮಗೆ ಗೊತ್ತಾಗುತ್ತದೆ,
“ಆನ್ - ಲೈನ್ ಕಂಪನಿ ಯ ಎಷ್ಟು ಜನ ತಮ್ಮ ಟೂ ವೀಲರ್ ಮೇಲೆ ನಿಂತು, ಕಿವಿಯಲ್ಲಿ ಹ್ಯಾಂಡ್ ಫ್ರೀ  ಸಿಗಿಸಿಕೊಂಡು  ಆರ್ಡರ್ ಮಾಡಿದವರಿಗೊಸ್ಕರ ಕಾಯುತ್ತಿರುತ್ತಾರೆ ಅಂತ”.

ಈ ವಾರದ ಬಿಲ್ಡ್ ಲೇಬಲ್ :  ಆನ್- ಲೈನ್ ನಲ್ಲಿ ಕೊಂಡು  ಕೊಳ್ಳುವಾಗ  ಮುಖ ಅರಳಿರುತ್ತದೆ, ಆದರೆ ತಿಂಗಳ ಕೊನೆಗೆ ಕ್ರೆಡಿಟ್ ಕಾರ್ಡ್ ಬಿಲ್ ಬಂದಾಗ ತಲೆ ಯೊಳಗೆ  ಅಷ್ಟು ಆಲೋಚನೆಗಳು ಗಿಮ್ ಅಂತ ತಿರುಗಿ  “ ಬೆಂಗಳೂರಿನ ಕೆ. ಆರ್. ಮಾರ್ಕೆಟ್ನಲ್ಲಿ  ಒಂದು ಕಡೆ ರಾಶಿಯಾಗಿ ಬಿದ್ದ ಕಸದಂತಾಗಿರುತ್ತದೆ”.  

1 comment:

  1. ಚೆನ್ನಾಗಿದೆ :)
    ಬಿಲ್ಡ್ ಲೇಬಲ್ ಕೂಡ ಅಷ್ಟೇ ಸತ್ಯ..

    ReplyDelete