Thursday, January 30, 2014

ಅಂಕಣ ೫ : ಸಾಫ್ಟ್ ಲಂಚ್ ಬಾಕ್ಸ್

ಸಾಫ್ಟ್ ಲೋಕದಲ್ಲಿ ಬಹಳಷ್ಟು ಜನರ ಊಟದ ಡಬ್ಬಿ “ಟಪ್ಪರ್ ವೇರ್” ಆಗಿರುತ್ತದೆ ಎನ್ನುವುದು ಎರಡನೇ ಮಾತಿಲ್ಲ. ಕಂಪನಿಯ ಕ್ಯಾಂಟೀನ್ ಊಟದ ಮಹಿಮೆಯೋ, ಅಥವಾ ಪ್ರತಿದಿನವೂ ಹೊರಗಡೆ ತಿಂದು ಆರೋಗ್ಯ ಹಾಳು  ಮಾಡಿಕೊಳ್ಳುವುದು ಬೇಡ ಎಂತಲೋ, ಇತ್ತೀಚಿಗೆ ಮನೆಯಿಂದ  ಊಟ ತರುವವರ ಸಂಖ್ಯೆ ಜಾಸ್ತಿನೆ ಆಗಿದೆ ಅಂತ ಅನ್ನಬಹುದು.

ಒಂದಿಷ್ಟು ಜನ (ವಿಶೇಷವಾಗಿ ಮದುವೆಯಾದವರು) ಪ್ರತಿ ದಿನವೂ ಊಟದ ಡಬ್ಬಿ ಯನ್ನ ತರುವುದು ವಾಡಿಕೆ. ಮಧ್ಯಾನದ ಊಟದ ಸಮಯದಲ್ಲಿ ಕ್ಯಾಂಟೀನ್ ನಲ್ಲಿ ರುವ ಮೈಕ್ರೋ ವೇವ್ ಓವನ್ ಮುಂದೆ  ಡಬ್ಬಿ ತಂದವರ ಒಂದು ದೊಡ್ಡ ಕ್ಯೂ ನಿಂತೇ ಇರುತ್ತದೆ. ತಮ್ಮ ಸಹೋದ್ಯೋಗಿ ಗಳ ಜೊತೆ ಕ್ಯಾಂಟೀನ್ ನಲ್ಲಿ ತಮ್ಮ ಊಟದ ಡಬ್ಬಿ ಯನ್ನು ಬಿಚ್ಚಿ ಲೋಕಾ ರೂಡಿ ಮಾತನಾಡುತ್ತಾ  ಊಟ ಮಾಡಿ ,  ಊಟವಾದ ನಂತರ ಒಂದಿಷ್ಟು ವಾಕ್ ಮಾಡುವುದು ಸಾಫ್ಟ್ ಲೋಕದಲ್ಲಿ ನ ಸಂಪ್ರದಾಯ.



ಕೆಲವೊಬ್ಬರು ಈ ಊಟದ ಡಬ್ಬಿ ಗೆ ಎಷ್ಟು ಅಂಟಿಕೊಂಡು ಬಿಟ್ಟಿರುತ್ತಾರೆ ಎಂದರೆ, ಅಪರೂಪಕ್ಕೊಮ್ಮೆ ಇದ್ದಕ್ಕಿದ್ದಂತೆಯೇ ಟೀಂ ನಲ್ಲಿರುವ ಎಲ್ಲರು “ಇವತ್ತು ಮಧ್ಯಾನದ ಊಟ ಹೊರಗಡೆ ಹೋಟೆಲ್ ನಲ್ಲಿ ಮಾಡೋಣ” ಅಂತ ತೀರ್ಮಾನಿಸಿದರೆ, ಇವರು ಮಾತ್ರ ಜಪ್ಪಯ್ಯ ಅಂದರೂ ಹೊರಗಡೆ ಊಟಕ್ಕೆ ಬರುವುದಿಲ್ಲ.

“ ಮನೆಯಿಂದ ಡಬ್ಬಿ ತಂದಿದೀನಿ, ಡಬ್ಬಿ ಖಾಲಿ ಮಾಡದೆ ಮನೆಗೆ ತಗೊಂಡು ಹೋದರೆ, ನಾಳೆಯಿಂದ ದಿನಾನೂ ಹೊರಗಡೆ ಊಟ ಮಾಡೋ ಪರಿಸ್ಥಿತಿ ಬರ್ತದ” ಅಂತ ಅಷ್ಟೇ ನಿಧಾನವಾಗಿ ಸಮಝಾಯಿಸಿ ಕೊಡ್ತಾರೆ. ಆದರೂ ಒಂದೊಂದು ಸಲ ತಮ್ಮ ಊಟದ ಡಬ್ಬಿಯನ್ನ ಯಾರಿಗಾದರು ಕೊಟ್ಟು, ಇವರು ಊಟಕ್ಕೆ ಎಲ್ಲರ ಜೊತೆ ಬರುತ್ತಾರೆ. ಆದರೆ ಪ್ರತಿಸಲವೂ ಹೀಗೆ ಮಾಡುವುದಿಲ್ಲ. “ ಹೊರಗಡೆ ಊಟಕ್ಕೆ ಹೋಗುವುದಾದರೆ, ನನಗೆ ಒಂದು ದಿನ ಮುಂಚೆ ಹೇಳಿಬಿಡಿ, ನಾನು ಆ ದಿನ ಡಬ್ಬಿ ತರೋದಿಲ್ಲ!” ಅಂತಾನು ಇವರು ಉಳಿದ ಟೀಂ ಮೆಂಬರ್ಸ್ ಗೆ ಹೇಳಿರುತ್ತಾರೆ.

ಊಟದ  ಡಬ್ಬಿಗೂ ಬೇರೆ ಬೇರೆ ಕಚೇರಿಗಳಿಗೂ ಇರುವ ಸಂಭಂದ ಹೇಗೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ನಮ್ಮ ಸಾಫ್ಟ್ ಲೋಕದಲ್ಲಿ ಊಟದ ಡಬ್ಬಿ ಎಲ್ಲವನ್ನು ಹೇಳಿಬಿಡುತ್ತದೆ. ಈ ಊಟದ ಡಬ್ಬಿಯ ಕರಾಮತ್ತೆ ಹಾಗೆ.....ನಮ್ಮಲ್ಲಿ Freshers (ಹೊಸತಾಗಿ ಕೆಲಸಕ್ಕೆ ಸೇರಿದವರು)  ಕಂಪನಿಗೆ ಬರುವಾಗ ಊಟದ ಡಬ್ಬಿಯ ಜೊತೆಗೆ ಬರುವುದು ತುಂಬಾ ಕಡಿಮೆ. ಊಟದ ಡಬ್ಬಿ ಏನಿದ್ದರು ಸಂಸಾರಸ್ಥರ ಸ್ವತ್ತು ಎನ್ನುವಷ್ಟರ ಮಟ್ಟಿಗೆ ಮಾತು ಚಾಲ್ತಿಯಲ್ಲಿದೆ. ಅದಿರಲಿ, ಈಗ ಊಟದ ಡಬ್ಬಿ ಏನೇನು ಕಥೆ ಹೇಳುತ್ತದೆ ಅನ್ನೋದನ್ನ ನೋಡೋಣ.

೧. ಯಾರಾದರು ಕ್ಯಾಂಟೀನ್ ಗೆ ಊಟದ ಡಬ್ಬಿ ಯನ್ನ ಹಿಡಿದು ಕೊಂಡು ಸ್ವಲ್ಪ ನಾಚುತ್ತ, ಎಲ್ಲ ಕಡೆಗೂ ನೋಡುತ್ತಾ ಬರುತ್ತಿದ್ದಾರೆಂದರೆ, ಅವರು ಇತ್ತೀಚಿಗೆಷ್ಟೇ ಮದುವೆಯಾಗಿದ್ದಾರೆ  ಅಂತ ಅರ್ಥ.

೨. ಕೆಲಸಕ್ಕೆ ಸೇರಿ ಇನ್ನು ಒಂದು ವರ್ಷವೂ ಆಗಿರದೆ ಕೈಯಲ್ಲಿ ಊಟದ ಡಬ್ಬಿ ಹಿಡಿದುಕೊಂಡು ಕ್ಯಾಂಟೀನ್ ಗೆ ರಾಜಾರೋಷವಾಗಿ ಎಂಟ್ರಿ ಹೊಡೆಯುತ್ತಾರೆ ಅಂದ್ರೆ, ಆ ಊಟದ ಡಬ್ಬಿ ನಿಜವಾಗಿಯೂ ಅವರದಲ್ಲ! ಅವರ ಪ್ರಾಜೆಕ್ಟ್ ಟೀಂ ನಲ್ಲಿ ಡಬ್ಬಿ ತಂದಿರೋರು ಹೊರಗಡೆ ಊಟಕ್ಕೆ ಹೋಗಿದ್ದರಿಂದ, ಇವರಿಗೆ ತಾವು ತಂದ ಊಟದ ಡಬ್ಬಿಯನ್ನ ಕೊಟ್ಟಿದ್ದಾರೆ ಅಂತ ಅರ್ಥ.

೩. ಪ್ರತಿ ದಿನವೂ ಮನೆಯಿಂದ ಊಟ ದ ಡಬ್ಬಿ ತರುವವರು,ಒಂದು ದಿನ ಊಟದ ಡಬ್ಬಿ ತರದೇ, ತಮ್ಮ ಪ್ರಾಜೆಕ್ಟ್ ಟೀಂ ನಲ್ಲಿ ಇರೋರಿಗೆಲ್ಲ “Lets go out for lunch today “ ಅಂತ ಮೇಲ್ ಹಾಕಿದರೆ, ಅವರು ಆ ದಿನ ಮನೆಯಲ್ಲಿ ಜಗಳ ವಾಡಿಕೊಂಡು  ಬಂದಿದ್ದಾರೆ ಅಂಥ ಅರ್ಥ.

೪. ಪ್ರತಿ ದಿನವೂ ಊಟದ ಡಬ್ಬಿ ತರೋರು, ಒಂದು ಹದಿನೈದು ದಿನವಾದರೂ ಸತತ ಡಬ್ಬಿ ತಂದಿಲ್ಲ ವೆಂದರೆ ಅವರ ಮನೆಯವರು ತವರು ಮನೆಗೆ ಹೋಗಿದ್ದಾರೆ ಅಂತ ಅರ್ಥ.

೫. ಪ್ರತಿ ದಿನವೂ ಊಟದ ಡಬ್ಬಿ ತರುವವವರು ಆ ದಿನ ಊಟದ ಡಬ್ಬಿ ಯನ್ನ ವಿಶೇಷವಾಗಿ ಎಲ್ಲರಿಗೂ ತೋರಿಸಿ, ಊಟ ಮಾಡುತ್ತಾರೆ ಎಂದರೆ ಆ ದಿನ ಅಡುಗೆ ಅವರ ಹೆಂಡತಿ ಮಾಡಿದ್ದಲ್ಲ, ಅವರ ತಾಯಿ ಮಾಡಿದ್ದು ಅಂತ ಅರ್ಥ!

೬. ಪ್ರತಿ ದಿನವೂ ಕ್ಯಾಂಟೀನ್ ಗೆ ಬಂದು ಊಟ ಮಾಡುವ “ ಅವರು”, ಈ ದಿನ ಊಟಕ್ಕೆ ಕ್ಯಾಂಟೀನ್ ಗೆ ಬರದೆ ತಮ್ಮ ಕ್ಯೂಬಿಕ್ ನಲ್ಲೆ ಊಟದ ಡಬ್ಬಿ ತೆಗೆದು ಊಟ ಮಾಡುತ್ತಿದ್ದಾರೆಂದರೆ, ಒಂದು ಅವರು ಕಾನ್ಫರೆನ್ಸ್ ಕಾಲ್ ನಲ್ಲಿ ಇದ್ದಾರೆಂದು ಅರ್ಥ, ಇಲ್ಲಾ ತರಾತುರಿಯಲ್ಲಿ ಊಟವಾದ  ಮೇಲೆ ಯಾವುದೋ ಒಂದು ವಿಶೇಷ ಮೀಟಿಂಗ್ ಗೆ ತಯಾರಿ ಮಾಡಿಕೊಳ್ಳುತ್ತಾರೆ ಅಂತ ಅರ್ಥ.

ಊಟ ಮತ್ತು ಊಟದ ಡಬ್ಬಿ ಯ ಬಗ್ಗೆ  ಇಷ್ಟು ಸಾಕು!


ಈ ವಾರದ  ಬಿಲ್ಡ್ ಲೇಬಲ್: ಅಪ್ಪಿ ತಪ್ಪಿ ಮ್ಯಾನೇಜರ್ ಆಗಿರೋರು ತಮ್ಮ ಸ್ನೇಹಿತರ ಜೊತೆ ಹೊರಗಡೆ ಊಟಕ್ಕೆ ಹೋಗುವ ಮುನ್ನ ತಮ್ಮ ಊಟದ ಡಬ್ಬಿ ಯನ್ನ ಆಗ ತಾನೇ ಕೆಲಸಕ್ಕೆ ಸೇರಿದ Fresher ಗೆ ಕೊಟ್ಟರೆ, ಆ ಈಡೀ ದಿನ Fresher ಆಕಾಶದಲ್ಲಿ ತೇಲಾಡು ತ್ತಿರುತ್ತಾನೆ. ಯಾಕಂದ್ರೆ ಊಟ ಡಬ್ಬಿಯನ್ನ ಅವನಿಗೆ ಕೊಟ್ಟಿರೋದು ಅವನ ಪಾಲಿಗೆ ಸಾಕ್ಷಾತ್ ಭಗವಂತನ ಸ್ವರೂಪರಾದ “ಮ್ಯಾನೇಜರ್”. ಅದು ಸ್ವತಃ ಅವರ ಊಟದ ಡಬ್ಬಿಯನ್ನು! ಈ ವಿಷಯ ಟೀಂ ನಲ್ಲಿರುವ ಉಳಿದ Fresher ಗಳಿಗೆ ಜೀರ್ಣಿಸಿ ಕೊಳ್ಳದ ವಿಷಯ ಅಂತ ಬಾಯ್ಬಿಟ್ಟು ಬೇರೆ ಹೇಳಬೇಕಾಗಿಲ್ಲ!

Thursday, January 23, 2014

ಅಂಕಣ ೪ : ಸಾಫ್ಟ್ ಪಡ್ಡೆಗಳು

ಏನಪ್ಪಾ ಇದು ಸಾಫ್ಟ್ ವೇರ್ ರಿಲೇಟೆಡ್ ಟಾಪಿಕ್ಕೋ  ಅಥವಾ ಬೇರೆ ಯಾವುದೋ ಟಾಪಿಕ್ಕೋ ? ಅಂತ ಅನ್ಕೋಬೇಡಿ. ಖಂಡಿತ ಇದು “ಸಾಫ್ಟ್ “ ಟಾಪಿಕ್. ಸಾಫ್ಟ್ ಇಂಜಿನಿಯರ್ ಗಳು ಮನುಷ್ಯರೇ. ನಮ್ಮಲ್ಲಿಯೂ “ ಪಡ್ಡೆಗಳು” ಇರ್ತಾರೆ ಕಣ್ರೀ.
ಬರೀ ನಮ್ಮಲ್ಲಿ ಏನು ಬಂತು ಬೇರೆ ಯಾವುದೇ ಫಿಲ್ಡ್ ತಗೊಂಡರೂ ಅಲ್ಲೊಂದಿಷ್ಟು  ಜನ ಪಡ್ಡೆ ಗಳು ಇದ್ದೆ ಇರ್ತಾರೆ ಅನ್ನೋದು ನನ್ನ ವಾದ. ಅಷ್ಟಕ್ಕೂ “ಪಡ್ಡೆ” ಅನ್ನೋ ಶಬ್ದ ಕೇವಲ  ಅರ್ಧಂಬರ್ಧ ಡಿಗ್ರಿ ಮುಗಿಸಿದ, ಅಥವಾ ಕೆಲ್ಸಾ ಇಲ್ದೆ ಖಾಲಿ ಹರಟೆ ಹೊಡೆಯೋರ ‘ ಕಾಪಿ ರೈಟ್ “ ಏನು ಅಲ್ಲವಲ್ಲ ?


ಸಾಫ್ಟ್ ವೇರ್ ನಲ್ಲಿ ಈ ಪಡ್ದೆಗಳದ್ದೆ  ಒಂದು ಗುಂಪು ಇರುತ್ತೆ. ಅದೇನೋ ಗೊತ್ತಿಲ್ಲ, ಸಾವಿರಾರು ಜನರ ಮಧ್ಯೆಯೂ ಈ ಥರದೊರೆಲ್ಲ ಅದೇಗೋ ಹತ್ತಿರವಾಗಿ ಒಂದು ಗುಂಪು ಕಟ್ಟಿ ಕೊಂಡು ಬಿಟ್ಟಿರುತ್ತಾರೆ. ಇಂತವರು ಯಾವುದೇ ಕಂಪನಿ ಗೆ  ಸೇರಿದರೂ ಸಹ ಅತ್ಯಂತ ಕಡಿಮೆ ಸಮಯದಲ್ಲಿ ಹೊಸ ಕಂಪನಿ ಯಲ್ಲಿ ತಮ್ಮ ಗುಂಪನ್ನ ಪತ್ತೆ ಹಚ್ಚಿ ಅದರಲ್ಲಿ ಒಂದು  ಪ್ಲೇಸು ಫಿಕ್ಸ್ ಮಾಡಿಕೊಂಡು ಬಿಟ್ಟಿರುತ್ತಾರೆ.  ಇವರು ಒಂದು ರೀತಿಯ ವಿಚಿತ್ರ ಜನ. ಇವರ ಗುಂಪೇ ಇವರಿಗೆ ಮುಖ್ಯ!  ಟೀ ಕುಡಿಯೋದ್ರಿಂದ  ಹಿಡಿದು, ಬತ್ತಿ ಹೊಡೆಯೋದ್ರಿಂದ  ಹಿಡಿದು, ವೀಕೆಂಡ್ “ಎಣ್ಣೆ’ ಪಾರ್ಟಿ ಯಿಂದ ಹಿಡಿದು…. ಟ್ರೆಕಿಂಗ್, ಮೂವಿ, ಟ್ರಿಪ್ ಹೀಗೆ ಎಲ್ಲೇ ಹೋಗಲಿ ಇವರ ಗುಂಪು ಜೊತೆಯಾಗಿ ಇರುತ್ತದೆ.

ಹಾಗಂತ ಇವರು ಪ್ರೊಫೆಶನಲ್ ಅಲ್ಲ ಅಂತ ಅನ್ಕೋಬೇಡಿ. ಇವರು ಕೆಲಸವನ್ನು ಸಹ ಅಷ್ಟೇ ಬೇಗ ಮುಗಿಸಿ ಆದಷ್ಟು ಬೇಗ ತಮ್ಮ ಗುಂಪನ್ನು ಸೇರಿಕೊಳ್ಳುತ್ತಾರೆ.  ಈ ಗುಂಪಿಗೆ ಕಂಪನಿಯಲ್ಲಿನ  ವಿಷಯಗಳು, ಆಗು ಹೋಗುಗಳು ಅದೆಗೂ ಗಾಸಿಪ್ ರೂಪದಲ್ಲಿ ಗೊತ್ತಿರುತ್ತವೆ. ಇವರು ಒಟ್ಟಿಗೆ ಸೇರಿದಾಗಲೂ ಸಹ ಮಾತಾನಾಡುವುದು ಇಂತಹ ಗಾಸಿಪ್ ಗಳ ಬಗ್ಗೆ ಯೇ . ವಿಪರ್ಯಾಸ ಅಂದರೆ ಇವರಾಡುವ ಬಹಳಷ್ಟು ಗಾಸಿಪ್ ಗಳು ರಿಯಾಲಿಟಿ ಆಗುತ್ತವೆ !

ಇವರ ಇನ್ನೊಂದು ವಿಶೇಷವೆಂದರೆ ಆಫಿಸಿನಲ್ಲಿರುವ ಎಲ್ಲ ಹುಡುಗಿಯರಿಗೂ ಒಂದೊಂದು ಅಡ್ಡ ಹೆಸರು ಕೊಟ್ಟಿರುತ್ತಾರೆ. ಬರೀ ಹುಡುಗಿಯರಿಗೆ ಮಾತ್ರವಲ್ಲ ಮ್ಯಾನೇಜರ್ ಗಳಿಗೂ ಸಹ ಒಂದೊಂದು ಕೋಡ್ ವರ್ಡ್ ಕೊಟ್ಟಿರುತ್ತಾರೆ. ತುಂಬಾ ಸಮಯದಲ್ಲಿ ಇವರ ಮಾತು ಕಥೆ ಈ ಕೋಡ್ ವರ್ಡ್ ಗಳನ್ನೇ ಒಳಗೊಂಡಿರುತ್ತದೆ.

ಸದಾ ಕಂಪ್ಯೂಟರ್ ನಲ್ಲಿ ತಲೆಯಿಟ್ಟು ಕೆಲಸ ಮಾಡುವ ಜಾಯಮಾನದವರು ಇವರಲ್ಲ. ಕೊಟ್ಟಿರುವ ಕೆಲಸವನ್ನು ಕೊಟ್ಟಿರುವ ಸಮಯದಲ್ಲೇ ಮುಗಿಸಿ (ಒಂದು ವೇಳೆ ಅದು ಬೇಗ ಮುಗಿದರೂ ಸಹ, ಕೆಲಸ ಮುಗಿದಿದೆ ಅಂತ ಮ್ಯಾನೇಜರ್ ಗೆ ಹೇಳುವುದಿಲ್ಲ!) ಬಿಡುವ ಫಟಿಂಗ ರಿವರು.  ಇವರ ಚರ್ಚೆಯಲ್ಲಿ ಹೊಸ ಮಾಡೆಲ್ ಕಾರ್, ಬೈಕ್, ಕಂಪನಿಗೆ ಹೊಸತಾಗಿ ಸೇರಿದ ಹೆಚ್. ಆರ್ (ಹುಡುಗಿಯಾಗಿದ್ದರೆ), ಹೊಸತಾಗಿ ಜೋಯಿನ್ ಆದ ಡಿಪಾರ್ಟ್ಮೆಂಟ್  ಹೆಡ್, ಇತ್ತೆಚಿಗೆ ರಿಲೀಸ್ ಆದ ಮೂವಿ, ಬೆಂಗಳೂರಿನ ಆಸು ಪಾಸು ಖಾಲಿ ಇರುವ ಬಿ. ಡಿ . ಎ  ಅಪ್ರೂವ್ ಸೈಟ್ … ಹೀಗೆ ಎಲ್ಲ ವಿಷಯಗಳ ಬಗ್ಗೆ ಮಾತು ನಡೆಯುತ್ತಲೇ ಇರುತ್ತವೆ. ಇವರು ಕೇವಲ ತಮ್ಮ ಕಂಪನಿ ಯ ಪಡ್ಡೆಗಳ ಜೊತೆ ಮಾತ್ರವಲ್ಲ ಬೇರೆ ಕಂಪನಿ ಯ ಪಡ್ಡೆಗಳ ಜೊತೆಗೋ ಸಂಪರ್ಕವಿಟ್ಟು ಕೊಂಡಿರುತ್ತಾರೆ. ಇವರ ನೆಟ್ವರ್ಕ್ ಭಾರಿ ಸ್ಟ್ರಾಂಗ್ ಇರುತ್ತದೆ.

ಪಡ್ಡೆ ಗಳು ಅಂದರೆ ಬರೀ ಹುಡುಗಿಯರ ಬಗ್ಗೆ ಹರಟೆ ಹೊಡೆಯುವವರಲ್ಲ!  ಇವರು ಚರ್ಚಿಸುವ ವಿಷಯಗಳಲ್ಲಿ ಹುಡುಗಿಯರ ಟಾಪಿಕ್ಕು  ಸಹ ಒಂದು ಅಷ್ಟೇ ! ಇವರ ಗುಂಪಿನಲ್ಲಿ ಆದಷ್ಟು ಬ್ಯಾಚುಲರ್ ಗಳೇ ಜಾಸ್ತಿ ಇರುವುದು ವಾಡಿಕೆ. ಆದರೆ, ಬರೀ ಬ್ಯಾಚುಲರ್ ಗಳೇ ಇರಬೇಕು ಎನ್ನುವ  ರೂಲ್ ಏನು ಇಲ್ಲ. ಒಟ್ಟಿನಲ್ಲಿ ಕೊಟ್ಟಿರುವ ಕೆಲಸವನ್ನು ಕೊಟ್ಟಿರುವ ಸಮಯಕ್ಕಷ್ಟೇ ಮೀಸಲಿರಿಸಿ, ಜೀವನವನ್ನು ತಮ್ಮದೇ ಆದ ರೀತಿಯಲ್ಲಿ ಎಂಜಾಯ್ ಮಾಡುವ ಭಾರಿ ತರಲೆ ಗಳಿವರು  ಹಾಗೇನೆ ವ್ಯವಹಾರಿಕ ವಾಗಿ ಮಹಾ ಚತುರರು ಸಹ.

ಈ ವಾರದ ಬಿಲ್ಡ್ ಲೇಬಲ್ :  ಒಂದೇ ಮಾತಿನಲ್ಲಿ ಹೇಳಬೇಕೆಂದರೆ “ ಪಡ್ಡೆ “ ಗಳು ಕಂಪನಿ ಯಲ್ಲಿದ್ದಾಗ ಏನು ಗೊತ್ತಾಗುವುದಿಲ್ಲ. ಆದರೆ  ಈ ಪಡ್ಡೆ ಗಳ absence ಮಾತ್ರ ಥಟ್ಟನೆ  ಗೊತ್ತಾಗುತ್ತದೆ.

Thursday, January 16, 2014

ಅಂಕಣ ೩ : ಸಾಫ್ಟ್ ಕುಟುಂಬ

ಯಾವುದಾದರು ಒಂದು ಗೌರ್ಮೆಂಟ್  ಆಫೀಸ್ ತಗೊಳ್ಳಿ, ಅಲ್ಲಿ ಕೆಲಸಕ್ಕೆ ಸೇರಿದ ಒಂದೆರಡು ವರ್ಷದಲ್ಲಿ ಎಲ್ಲರು ಎಲ್ಲರಿಗೆ ಪರಿಚಯವಾಗಿ ಬಿಟ್ಟಿರುತ್ತಾರೆ. ಇನ್ನು ಒಂದೆರಡು ವರ್ಷ ಕಳೆದರಂತು ಮುಗಿದೇ ಹೋಯ್ತು, ಎಲ್ಲರ ಕುಟುಂಬಗಳು ಎಲ್ಲರಿಗು ಪರಿಚಯ ವಾಗಿ ಹೋಗಿರುತ್ತವೆ.  ಅಲ್ಲಿ ಎಲ್ಲರ ವಿಷಯ ( ಒಳ್ಳೆಯದಿರಲಿ, ಕೆಟ್ಟದಿರಲಿ ) ಎಲ್ಲರಿಗು ಗೊತ್ತಿರುತ್ತೆ. ಅಷ್ಟೊಂದು ಆತ್ಮೀಯತೆ ಅಲ್ಲಿರುತ್ತದೆ. ಒಬ್ಬರ ಕಷ್ಟದಲ್ಲಿ  ಮತ್ತೊಬ್ಬರು ಭಾಗಿಯಾಗುತ್ತಾರೆ. ಇವತ್ತಿಗೂ ಸಹ ಗೌರ್ಮೆಂಟ್ ನೌಕರಿದಾರರ  ಮನೆಯಲ್ಲಿ ಒಂದು ಕಾರ್ಯಕ್ರಮ ನಡೆದರೆ ಸಾಕು, ಸಂಪೂರ್ಣ ಡಿಪಾರ್ಟ್ ಮೆಂಟ್ ಅಲ್ಲಿಗೆ ಬಂದು ಶುಭಕೋರಿ ಹೋಗುತ್ತಾರೆ.



ಯಾಕೋ ಈ ವಿಷಯದಲ್ಲಿ ನಮ್ಮ ಸಾಫ್ಟ್ ಕುಟುಂಬ ಯೆಡವುತ್ತಿದೆ ಅನಿಸುತ್ತದೆ. ನಮ್ಮ ಕೆಲಸದ ಮಧ್ಯೆ ಅದೆಷ್ಟು ಮುಳುಗಿಬಿಟ್ಟಿರುತ್ತಿವಿ ಅಂದರೆ ನಮ್ಮ ಕ್ಯುಬಿಕ್  ನಿಂದ  ಒಂದೆರಡು ಕ್ಯುಬಿಕ್ ಆಚೆಗೆ - ಈಚೆಗೆ ಯಾರಿದ್ದಾರೆ ಅನ್ನೋದನ್ನೇ ಎಷ್ಟೋ ಸಲ ಮರೆತುಬಿಟ್ಟಿರುತ್ತೇವೆ.
ಯಾರಾದರು ಪುಣ್ಯಾತ್ಮ  :
“sweets at my desk
Occasion : Got engaged! “
ಅಂತ ಮೇಲ್ ಹಾಕಿದಾಗಲೇ ನಮಗೆ ಅವನ ನಿಶ್ಚಿತಾರ್ಥ ಆಗಿದೆ ಅಂತ ಗೊತ್ತಗುತ್ತದೆ. ಇಲ್ಲಾಂದ್ರೆ ಅವನ್ಯಾರೋ, ನಾವ್ಯಾರೊ.  ಎಷ್ಟೊಂದು ಸಲ   ಈ ತರಹದ ಮೇಲ್ ಗಳು ಬಂದಾಗ (ಉದಾಹರಣೆಗೆ : ಗೋಪಾಲ್ ಎನ್ನುವವನಿಂದ ಮೇಲ್ ಬಂತು ಅಂದು ಕೊಳ್ಳೋಣ) ತಕ್ಷಣ ನಮ್ಮ ಪಕ್ಕದಲ್ಲಿರೋರನ್ನ ಪಿಸು ಮಾತಿನಲ್ಲಿ ನಾವು ಕೇಳೋ ಪ್ರಶ್ನೆ :
“ ಹೇಯ್, ಈ ಗೋಪಾಲ್ ಅಂದ್ರೆ ಯಾರು? “.
 ಅವರು ಹೇಳಿದ ಮೇಲೆ .....
“ ಒಹ್.. ಅವರ… “ ಅಂತ ಭಾರಿ ಗೊತ್ತಿರೋರ ಹಾಗೆ ಬಿಲ್ಡ್ ಅಪ್ ಕೊಟ್ಟು ಸ್ವೀಟ್ಸ್ ತಿಂದು ಅವರಿಗೊಂದು ವಿಶ್ ಮಾಡಿ ತಿರುಗಾ ನಮ್ಮ  ಕ್ಯುಬಿಕ್ ನಲ್ಲಿರುವ ಸಿಸ್ಟಮ್ ನಲ್ಲಿ ತಲೆ ತುರುಕಿ ಕೂಡುವುದು ನಮ್ಮ ವಾಡಿಕೆ ಯಾಗಿಹೋಗಿದೆ.
ತಿರುಗಾ ನಮಗೆ ಗೋಪಾಲನ ಬಗ್ಗೆ ನೆನಪಾಗುವುದು, ಅವನ ಇನ್ನೊಂದು ಮೇಲ್:
“ Blessed with baby boy. Both Mother and Baby doing fine..  “  ಬಂದಾಗಲೇ !!
“ ಎಲಾ ಇವನ! ಇನ್ನು ಮೊನ್ನೆ ತಾನೇ ಎಂಗೇಜ್ಮೆಂಟ್  ಆಗಿತ್ತು; ಅದಾಗಲೇ ಮದುವೇನೂ ಆಗಿ ಮಕ್ಕಳೂ ಆಗಿ ಹೋಯ್ತಾ?” ಅನ್ನೋ ಮಾತು ನಮಗೆ ಗೊತ್ತಿಲ್ಲದಂತೆಯೇ ನಮ್ಮ ಬಾಯಿ ತುದಿಗೆ ಬಂದಿರುತ್ತದೆ.
ಆದರೆ ಯಾವುದಾದರೂ ಸ್ಕೂಲು, ಕಾಲೇಜು, ಬ್ಯಾಂಕು … ತಗೊಳ್ಳಿ ಹೀಗಾಗಲು ಚಾನ್ಸೇ  ಇಲ್ಲ!. ಒಂದು ಕಾಲೇಜಿನಲ್ಲಿ  ಗುಮಾಸ್ತನ ಮಗನ ಮದುವೆಯಾದರೂ ಕಾಲೇಜು ಪ್ರಿನ್ಸಿಪಾಲರಿಗೂ ವಿಷಯ ಗೊತ್ತಿರುತ್ತದೆ. ಆದರೆ ನಮ್ಮ ಸಾಫ್ಟ್ ಲೋಕದಲ್ಲಿ ಹಾಗಲ್ಲ. “ಇಲ್ಲಿ ಎಲ್ಲರು ಎಲ್ಲರಿಗೂ ಗೊತ್ತು ಮತ್ತು ಯಾರು ಯಾರಿಗೂ ಗೊತ್ತಿಲ್ಲ”  ಅಂದರೆ ತುಂಬಾ ಸೂಕ್ತ.  ಇನ್ನು ಬಿಡಿಸಿ ಹೇಳಬೇಕಂದರೆ, ಸಾಫ್ಟ್ ಲೋಕದಲ್ಲಿ ಯಾರಾದರು ಎದುರಿಗೆ ಬಂದಾಗ ತುಟಿ ಅಗಲ  ಮಾಡಿ ನಗುವಷ್ಟು ಎಲ್ಲರು ಎಲ್ಲರಿಗೂ ಗೊತ್ತು. ಆಮೇಲೆ ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ. ಅಪರೂಪಕ್ಕೊಮ್ಮೆ ಸಿಕ್ಕಾಗಲೂ ಸಹ ಒಂದೆರಡು ಮಾತಿನ ನಂತರ ಏನು ಮಾತಾಡಬೇಕು ಅಂತ ತಿಳಿಯದೆ:
“ Lets catch up some time and talk“ ಅಂತ ಒಬ್ಬ ಅಂದರೆ
“Sure .. Sure .. carry on .. see .. u … bye “ ಅಂತ ಇನ್ನೊಬ್ಬ ಅನ್ನುತ್ತಾನೆ.
ಎದುರು - ಬಿದುರು ಸಿಕ್ಕಾಗಲೆ ಐದು ನಿಮಿಷ ಮಾತಾಡದವರು ಮತ್ತೆ ಯಾವಾಗ  “catch up” ಆಗುತ್ತಾರೆ ಅನ್ನುವುದು ಆ ಭಗವಂತನೇ ಬಲ್ಲ !
ನಿಜವಾಗಲು ಸಾಫ್ಟ್ ಲೋಕದಲ್ಲಿ ಜನರು ಅಷ್ಟೊಂದು ಬ್ಯುಸಿ ನಾ? ಅಥವಾ ನಾವು ಅಷ್ಟೊಂದು ಬ್ಯುಸಿ ಅಂತ ತೊರಿಸಿಕೊಳ್ಳುತ್ತೇವಾ? ಅಥವಾ ಜನರೇ ಬೇಡವೆಂದು ನಿಧಾನವಾಗಿ ಒಬ್ಬಂಟಿ ತನಕ್ಕೆ ನಾವು ಒಗ್ಗಿಕೊಂಡು ಬಿಡುತ್ತಿದ್ದೆವಾ ?
ಉತ್ತರ ನಿಜವಾಗಲು ನನಗೆ ಗೊತ್ತಿಲ್ಲ .....


ಈ ವಾರದ ಬಿಲ್ಡ್ ಲೇಬಲ್ : ಎಲ್ಲರು ಒಟ್ಟಿಗೆ ಇರುವುದಕ್ಕೆ ಕುಟುಂಬ ಅನ್ನುವುದಕ್ಕಿಂತಲೂ, ಒಬ್ಬರ ಬಗ್ಗೆ ಇನ್ನೊಬ್ಬರು ಕಾಳಜಿ ತೋರಿಸುವುದೇ ನಿಜವಾದ ಕುಟುಂಬ ಎನ್ನಬಹುದು.

Thursday, January 9, 2014

ಅಂಕಣ ೨ : ಪೇಪರ್ ಹಾಕ್ತೀನಿ


ಸಾಫ್ಟ್ ಲೋಕದಲ್ಲಿ “ ಪೇಪರ್ ಹಾಕಿದೀನಿ” ಅಂದ್ರೆ ರಿಸೈನ್ ಮಾಡಿದೀನಿ  ಅಂತ ಅರ್ಥ. ಅಂದ್ರೆ ಕೆಲಸಕ್ಕೆ ರಾಜಿನಾಮೆ ಕೊಟ್ಟಿದೀನಿ ಅಂತ ಅರ್ಥ. ಇದನ್ನೇ ಇಂಗ್ಲಿಷ್ ನಲ್ಲಿ ಸ್ವಲ್ಪ ಸ್ಟೈಲ್ ಆಗಿ "I have put my papers” ಅಂತ ಹೇಳ್ತಾರೆ. ಈ ಪೇಪರ್ ಹಾಕ್ತೀನಿ, ಹಾಕಿದೀನಿ ಅನ್ನೋರ ಬಗ್ಗೆ ಸ್ವಲ್ಪ ತಿಳ್ಕೊಳ್ಳೋಣ ಬನ್ನಿ.


“ಕೆಲವೊಂದು ಸಲ ಆಗುವುದೇ ಹೀಗೆ. ಏನು ಮಾಡಿದರೂ, ಎಷ್ಟೇ ಹುಡುಕಾಡಿದರೂ ಹುಡುಕುತ್ತಿರುವ ಬಗ್ ಮಾತ್ರ ಕಣ್ಣಿಗೆ ಬೀಳುವುದಿಲ್ಲ. ನಮ್ಮ ಕಂಪೋನೆಂಟ್ ನ ಇಡೀ ಕೋಡ್ ನೆಲ್ಲ ತಡಕಾಡಿದರೂ, ಎಲ್ಲಿ ಉಲ್ಟಾ ಹೊಡಿತಾ ಇದೆ ಅಂತ ಗೊತ್ತಾಗುವುದಿಲ್ಲ.

ಸರಿ ಹೋಯ್ತಾ ? ಸರಿ ಹೋಯ್ತಾ ? ಅಂತ ಬೆನ್ನ ಹಿಂದೆ ಲೀಡ್ ನಿಂತಿದ್ದರೆ , still how many labels are pending for the new build? ಅಂತ ಮ್ಯಾನೇಜರ್  indirect ಆಗಿ ನನಗೆ "ಬೇಗ ಕೆಲಸ ಮುಗಿಸು, ಲೇಬಲ್ ಸಬ್ಮಿಟ್ ಮಾಡು" ಅನ್ನೋ ರೀತಿಯಲ್ಲಿ ಹೇಳುತ್ತಿರುತ್ತಾನೆ. ನನ್ನ ಕಡೆಗೆ ಬೇರೆ ನೋಡುತ್ತಿರುತ್ತಾನೆ. ಹೊಸತಾಗಿ ಆಗಬೇಕಿದ್ದ ಬಿಲ್ಡ್ ಗೆ ಬೇರೆ ಎಲ್ಲರೂ  ತಮ್ಮ ತಮ್ಮ  ಲೇಬಲ್ ಗಳನ್ನ ಕೊಟ್ಟು ಆರಾಮಾಗಿ ಕೂತಿರುತ್ತಾರೆ. ನನ್ನ ಒಂದು ಲೇಬಲ್ ನಿಂದ ಬಿಲ್ಡ್ ಗೆ ತಡವಾಗುತ್ತಿರುತ್ತದೆ. ಪ್ರಾಜೆಕ್ಟ್ ಟೀಂ ನ ಎಲ್ಲರ ದೃಷ್ಟಿ ನನ್ನ ಮೇಲೆ ಇರುತ್ತದೆ. ಪ್ರೆಷರ್ ನಿಂದ ತಲೆ ಕಾದು  ಕಾದು  ಒಳ್ಳೆ ಕುಕ್ಕರ್ ಥರ ಸೀಟಿ ಹೊಡಿತಾ ಇರುತ್ತೆ. ಅವಾಗ್ಲೇ ಅನಿಸೋದು : “ಥುತ್ ತೆರಿ, ನಂದು ಒಂದು ಜನ್ಮಾನಾ ? ಮೊದ್ಲು ಪೇಪರ್ ಹಾಕಿ ಬೇರೆ ಏನಾದ್ರು ನೋಡ್ಕೋಬೇಕು ಅಂತ! “ ಇದು ಒಂದು ಥರದ  ಪೇಪರ್ ಹಾಕ್ತೀನಿ ಅನ್ನೋ ಕೆಟಗರಿ.
“ಅವರು ಇರುವುದೇ ಹಾಗೆ, ಎಂದು ಬಿಡದವರು ಮತ್ತು ಬಿಟ್ಟು ಹೋಗುತ್ತೇನೆ ಅಂತ ಯಾವಾಗಲು ಹೇಳುತ್ತಿರುವವರು. ನೀವು ಅವರ ಜೊತೆ ಒಂದು ಸಲ ಮಾತನಾಡಿಸಿ ನೋಡಿ, “ ಛೆ, ಯಾವನಿಗ್ರಿ ಬೇಕು ಈ ಕೆಲಸ, ಏಳು ವರ್ಷದಿಂದ ಮಾಡಿದ್ದೆ ಮಾಡಿ ಸಾಕಾಯ್ತು. ಹೊರಗಡೆ ಹೋಗಿ ಅತ್ಲಾಗಿ ಏನಾದ್ರೂ ಬೇರೆ ಮಾಡೋಣ ಅನಿಸಿ ಬಿಟ್ಟಿದೆ. ಪ್ರತಿ ವರ್ಷ ಬಕೆಟ್ (ಬಕೆಟ್ ಹಿಡಿಯುವುದು ಅಂದರೆ ಮ್ಯಾನೇಜರ್ ಅನ್ನು ಖುಷಿ ಪಡಿಸುವುದು ಅಂತ ಅರ್ಥ) ಹಿಡಿಲೇ ಬೇಕು. ನಿಜವಾದ ಕೆಲಸಕ್ಕೆ ಬೆಲೆನೆ ಇಲ್ಲ. ಥೋ ತ್ತೆರಿ..... ” ಹೀಗೆ ಮುಂದು ವರಿಯುತ್ತಲೇ ಇರುತ್ತದೆ ಇವರ ಭಾಷಣ. ವೀಪರ್ಯಾಸ ಅಂದರೆ ಕಳೆದು ಏಳೆಂಟು  ವರ್ಷ ದಿಂದಲೂ ಇವರು ಹೀಗೆ ಅಂದುಕೊಂಡು ಬಂದಿರುತ್ತಾರೆ. ಒಂದು ದಿನವೂ ಸಹ ಆಡಿದ ಮಾತನ್ನು ಮಾಡಿ ತೋರಿಸಿರುವುದಿಲ್ಲ.
ಅವರ ತಲೆ ಕೆಟ್ಟಾಗ, ಮೂಡ ಸರಿ ಇಲ್ಲ ದಿರುವಾಗ, ಮ್ಯಾನೇಜರ್ ಕೈಲಿ ಚೆನ್ನಾಗಿ ಸಪರೆಟ್ ಆಗಿ ಮೀಟಿಂಗ್ ರೂಂ ನಲ್ಲಿ ಬೈಸಿಕೊಂಡಾಗ, ಕೊಟ್ಟಿರೋ ಲೇಬಲ್ ಸರಿಯಾಗಿ ಇಲ್ಲದಿರುವಾಗ, ಫಿಕ್ಸ್ ಮಾಡಿದ ಬಗ್ ಯಡವಟ್ಟಾಗಿ ವಾಪಾಸು ಬಂದು ಅವರಿಗೇನೆ ಅಮರಿಕೊಂಡಾಗ,  ಅವರು ಆಡುವುದು ಹೀಗೆಯೇ. ಒಂದು ಹತ್ತು ನಿಮಿಷ ಅಷ್ಟೇ! ಆಮೇಲೆ ತಾವು ಏನು ಮಾತಾಡಿಯೇ ಇಲ್ಲವೇನು ಅನ್ನೋವಂತೆ ಮತ್ತೆ ತಮ್ಮ ಕ್ಯೂಬಿಕ್ ಗೆ ಬಂದು  ಸಿಸ್ಟಮ್ ಅನ್ ಲಾಕ್ ಮಾಡಿ  ಕೋಡ್ ನ ಓಪನ್ ಮಾಡಿಕೊಂಡು ಡಿಬಗ್ ಮಾಡ್ತಾ ಕೂತು ಬಿಟ್ಟಿರುತ್ತಾರೆ. ಅದೇ ಸಮಯಕ್ಕೆ ನೀವು ಅವರ ಹತ್ತಿರ ಹೋಗಿ:
“ಏನ್ರಿ, ಏನೋ ಫುಲ್ ಸೀರಿಯಸ್ ಆಗಿ ಕೆಲಸ ಮಾಡ್ತಾ ಇದೀರಾ, ಬನ್ನಿ ಕಾಫಿ ಕುಡಕೊಂಡು ಬರೋಣ” ಅನ್ನಿ. 
ಪಾಪ ಅವರ ಧ್ವನಿಯೆಲ್ಲ ಇಳಿದು ಹೋಗಿ, ಅಳಿದುಳಿದ ಶಕ್ತಿಯಲ್ಲಿ: 
“ಇವತ್ತೇ ಬಿಲ್ಡ್ ಗೆ ಲೇಬಲ್  ಸಬ್ಮಿಟ್ ಮಾಡಬೇಕಂತೆ, ಅದು ಅಲ್ದೆ ಮ್ಯಾನೇಜರ್ ಬೇರೆ ತಮ್ಮ ರೂಮಿಗೆ ಕರ್ಕೊಂಡು ಹೋಗಿ ಉಗ್ದಿದಾರೆ. ಅದಕ್ಕೆ ಸ್ವಲ್ಪ ಕೋಡ್  ನೋಡ್ತಾ ಕೂತಿದೀನಿ. ಕಾಫಿ ಗೆ ಬರೋಕೆ ಆಗಲ್ಲ ರೀ, ನೀವು ಹೋಗ ಬನ್ನಿ. ನಾನು ಆಮೇಲೆ ಹೋಗ್ತೀನಿ”  ಅಂತ ಉತ್ತರ ಬರುತ್ತದೆ. ಇಂತವರು ಬಹಳ ಬೇಗ ಹರ್ಟ್ ಆಗುತ್ತಾರೆ ಮತ್ತು ಅಷ್ಟೇ ಬೇಗ ಅದನ್ನ ಮರೆತು ತಮ್ಮ ಕೆಲಸದಲ್ಲಿ ತೊಡಗಿ ಕೊಂಡು ಬಿಡುತ್ತಾರೆ.” ಇದು ಇನ್ನೊಂದು ಥರ ಪೇಪರ್ ಹಾಕ್ತೀನಿ ಅನ್ನೋ ಕೆಟಗರಿ.
ಇನ್ನು ಮೂರನೆಯ ಥರದೋರು : ಸಾಫ್ಟ್  ಜಗತ್ತನ್ನೇ ಇನ್ನು ಸರಿಯಾಗಿ ನೋಡದ  ಉತ್ಸಾಹಿಗಳು. ಇವರು  ಪದೇ ಪದೇ  ಆಡುವ ಮಾತು : “ ಪೇಪರ್ ಹಾಕ್ತೀನಿ” . ಹಿಂದೂ ಮುಂದು ನೋಡದೆ ಈ ಮಾತು ಆಡಿದಾಗ ಕೇಳುವವರಿಗೆ ತಲೆ ಕೆಡದೆ ಇರುವುದಿಲ್ಲ. “ ಪೇಪರ್ ಹಾಕ್ತೀನಿ” ಅನ್ನೋ ಮಾತು ಪ್ರತಿಷ್ಠೆ ಗೋ, ಪೌರುಶಕ್ಕೋ ಆಡುವ ಮಾತು ಅಂತ ನಮ್ಮ ಉತ್ಸಾಹಿಗಳು ತಿಳಿದು ಕೊಂಡಿರುತ್ತಾರೆ. ಸಾಫ್ಟ್ ಲೋಕದಲ್ಲಿ ಮಾತೆತ್ತಿದರೆ “ ಈ ಸಲ ಗ್ಯಾರಂಟಿ ಕಣೋ, ಪೇಪರ್ ಹಾಕೇ  ಬಿಡ್ತೀನಿ” ಅನ್ನುವ ಭೂಪರು ಬಹಳಷ್ಟು ಜನ ಸಿಗ್ತಾರೆ. ಮೊನ್ನೆ ಯಾರೋ ಒಬ್ಬರು ಅವರು ಪ್ರತಿ ಸಲದ ರೂಢಿಯಂತೆ, “ ಈ ಸಲ ನೋಡ್ತಾ ಇರು, ಪೇಪರ್ ಹಾಕೇ ಬಿಡ್ತೀನಿ” ಅಂದಾಗ, ಇದೇ ಮಾತು ಕೇಳಿ ಕೇಳಿ ರೋಸಿ ಹೋಗಿದ್ದ ಎದುರಿಗಿದ್ದವನು ಕೇಳಿದ, “ಹೊರಗಡೆ ಜಾಬ್ ಹುಡುಕ್ಕೊಂಡಿದೀಯಾ?” “ಇನ್ನು ಇಲ್ಲ”. “ ಹಾಗಾದ್ರೆ, ಪೇಪರ್ ಹಾಕ್ತೀನಿ, ಪೇಪರ್ ಹಾಕ್ತೀನಿ ಅನ್ನೋದು ಬಿಟ್ಟು, ಸುಮ್ನೆ ತೆಪ್ಪಗೆ ಇಲ್ಲೇ ಕೆಲಸ ಮಾಡು. ಇರೋ ಕೆಲಸಾನು ಕಳಕೊಂಡ್ರೆ ಹೊರಗಡೆ “ದಿನಾ ಪೇಪರ್ ಹಾಕೋ” ಕೆಲಸಾನೂ ಸಿಗಲ್ಲ!” ಅಂದಾಗ
“ಪೇಪರ್ ಹಾಕ್ತೀನಿ ಅಂದವನ ಮುಖ ಪೆಚ್ಚು - ಪೆಚ್ಚಾಗಿತ್ತು”.   ಈ ವಾರದ ಬಿಲ್ಡ್ ಲೇಬಲ್: ಪೇಪರ್ ಹಾಕೊಕಿಂತ ಮುಂಚೆ ಅಟ್ ಲೀಸ್ಟ್ “ಪೆಪ್ಪರಮೆಂಟಾಯಿ”  ತಿನ್ನೋವಷ್ಟು  ಕಾಸು ಜೇಬಲ್ಲಿದೆಯಾ? ಅಂತ ನೋಡ್ಕೊಳ್ಳೊದು ಒಳ್ಳೇದು!

Thursday, January 2, 2014

ಅಂಕಣ ೧ : ಪ್ರಸ್ತಾವನೆ

ನಮ್ಮ ಸಾಫ್ಟ್ ವೇರ್ ಪ್ರಪಂಚವೇ ಹಾಗೆ, ಹೊರಗಿನ ಪ್ರಪಂಚದವರಿಗೆ ಇದೊಂದು ನಿಗೂಢ ಲೋಕ. ನಾವು ಇಲ್ಲಿ ಏನು ಕೆಲಸ ಮಾಡುತ್ತೇವೆ ಅಂತ ಬಹಳಷ್ಟು ಬೇರೆಯ ಪ್ರೊಫೆಷನಲ್ ಜನರಿಗೆ ಗೊತ್ತೇ ಇರುವುದಿಲ್ಲ. ಒಬ್ಬ ಲಾಯರ್ ಆದರೆ ಕೋರ್ಟ್ ನಲ್ಲಿ ವಾದ ಮಾಡುತ್ತಾನೆ ಅನ್ನಬಹುದು, ಒಬ್ಬ ಡಾಕ್ಟರ ಆದರೆ ಹಾಸ್ಪಿಟಲ್ ನಲ್ಲಿ ಪೇಶಂಟ್ ಗಳನ್ನ ನೋಡ್ತಾನೆ ಅನ್ನಬಹುದು. ಆದರೆ ಸಾಫ್ಟ್ ವೇರ್ ಇಂಜಿನಿಯರ್  ಅಂದ್ರೆ  ನಾವೇನು ಕೆಲಸ ಮಾಡ್ತಿವಿ ಅನ್ನೋದು ಹೊರಗಿನವರಿಗೆ ಅಷ್ಟೊಂದು ಗೊತ್ತಿರುವುದಿಲ್ಲ.


ಈಗಲೂ ಸಹ ನಮ್ಮ ಹತ್ತಿರದವರಿಗೆ, ಬಂಧು ಬಳಗದವರಿಗೆ ನಾವು ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇವೆ ಅಂದರೆ ಅವರು ನಮಗೆ ಕೇಳುವ ಮೊದಲ ಪ್ರಶ್ನೆ : ನಿಮ್ಮ ಸಂಬಳ ಎಷ್ಟು? ಅಂತ.  ಒಂದಿಷ್ಟು ಜನ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೊಗಿ : ಎಷ್ಟು ವರ್ಷ ಆಯ್ತು ಕೆಲಸ ಮಾಡ್ತಾ? ಅಂತ ಕೇಳಿ ನಮಗೆ ಬರುವ ಸಂಬಳವನ್ನು ಅವರು ಮನಸಿನಲ್ಲಿ ಲೆಕ್ಕ ಹಾಕುತ್ತಿರುತ್ತಾರೆ. ಇನ್ನು ಕೆಲವೊಬ್ಬರಂತು ನೇರವಾಗಿಯೇ:  “ನಿಂಗೆ  ತಿಂಗಳಿಗೆ ಇಷ್ಟು ಬರುತ್ತೆ ಅಲ್ವಾ?” ಅಂತ ಕೇಳಿಯೇ ಬಿಡುತ್ತಾರೆ!


ಇವತ್ತಿಗೂ ಸಹ ಹೊರಗಿನ ಪ್ರಪಂಚಕ್ಕೆ ನಾವೊಂದು ಎಲಿಯನ್ ತರಹ.  ನಮ್ಮ ಕೆಲಸವಂತೂ ಅವರಿಗೆ  “ಏಳು ಸುತ್ತಿನ ಕೋಟೆ”  ಯಲ್ಲಿರುವ ನಿಧಿಯಷ್ಟೇ ಪರಿಚಿತ. ಇನ್ನೊಂದು ವಿಷಯ ಎಂದರೆ ಹೊರಗಿನ  ಪ್ರಪಂಚದವರಿಗೆ ನಮ್ಮ ಸಂಬಳದ ಮೇಲಿರುವಷ್ಟು  ಕೂತುಹಲ, ನಾವೇನು ಕೆಲಸ ಮಾಡುತ್ತೇವೆ ಅನ್ನೋದರ ಬಗ್ಗೆ ಇರುವುದಿಲ್ಲ ಬಿಡಿ. ಅಷ್ಟೇ ಏಕೆ, ನಮ್ಮ ತಂದೆ ತಾಯಿ ಗೂ ಸಹ ನಮ್ಮ ಕೆಲಸದ ಬಗ್ಗೆ ಅಷ್ಟು ಗೊತ್ತಿರುವುದಿಲ್ಲ. ಯಾರಾದರು ಕೇಳಿದರೆ ಅವರು ಹೇಳುವುದು:
“ ನನ್ನ ಮಗ/ ಮಗಳು ಸಾಫ್ಟ್ ವೇರ್ ಇಂಜಿನಿಯರ್ ಇದಾನೆ/ ಇದಾಳೆ”, ಇನ್ನೂ ಹೆಚ್ಚೆಂದರೆ “ಇಂತ ಕಂಪನಿಯಲ್ಲಿ ಕೆಲಸ ಮಾಡ್ತಾನೆ/ ಮಾಡ್ತಾಳೆ" ಅನ್ನೋದು ಮಾತ್ರ ನಮ್ಮ ತಂದೆ ತಾಯಿಗೆ ಗೊತ್ತಿರುತ್ತದೆ. ಅದು ಗೊತ್ತಿರಲೇಬೇಕು ಸಹ. ಯಾಕಂದ್ರೆ ನಾಲ್ಕಾರು ಜನರ ಮುಂದೆ ಅದು ಅವರಿಗೆ ಹೆಮ್ಮೆಯ ವಿಷಯವೂ ಹೌದು.

ಆದರೆ ಸಾಫ್ಟ್ ವೇರ್ ಇಂಜಿನೀರ್  ಕೆಲಸ ಹೇಗಿರುತ್ತದೆ? ಅವರ ದಿನಚರಿ ಹೇಗಿರುತ್ತದೆ? ಅವರು ಜೀವನವನ್ನ ನೋಡುವ ಬಗೆ ಹೇಗೆ? ಸೂಟು -ಬೂಟು, ಟೈ, ಷೂ  ಹಾಕಿಕೊಂಡು ಸಾಫ್ಟ್ ಆಗಿ ಕಾಣುವ ಸಾಫ್ಟ್ ಜನರ ಜೀವನ ಹೇಗಿರುತ್ತದೆ?  ಹೀಗೆ ಸಾಫ್ಟ್ ವೇರ್  ಬದುಕಿನ ಬಗ್ಗೆ ಒಂದಿಷ್ಟು   ಕೂತುಹಲ ಕಾರಿ ಮಾಹಿತಿ ಬಗ್ಗೆ ಎಲ್ಲರಿಗು ಅಲ್ಲದಿದ್ದರೂ ಒಂದಿಷ್ಟು ಜನಕ್ಕಂತೂ  ಆಸಕ್ತಿ ಇದ್ದೆ  ಇರುತ್ತದೆ.  ಬೇರೆಯವರ  ಆಸಕ್ತಿ ಒಂದು ಕಡೆ ಇರಲಿ,  ನಮ್ಮ ಸಾಫ್ಟ್ ವೇರ್ ಬದುಕನ್ನೇ ನಾವು ಒಂದು ಸಲ ಕನ್ನಡಿಯಲ್ಲಿ ನೋಡಿಕೊಂಡರೆ ಹೇಗಿರುತ್ತದೆ ಅಂತ?  ಸಾಫ್ಟ್ ವೇರ್ ಲೋಕದಲ್ಲಿರುವ ಚಿತ್ರ - ವಿಚಿತ್ರ ಜನರ ಬಗ್ಗೆ,  on bench ನಲ್ಲಿ ಆರಾಮ್ ಆಗಿ ಕುತಿರೋರಿಂದ ಹಿಡಿದು, ಪ್ರಾಜೆಕ್ಟ್ ಡೆಡ್ ಲೈನ್ ನಲ್ಲಿ ಕೊತ - ಕೊತನೆ ಕುದಿಯುತ್ತಿರುವವರ ವರೆಗೆ, Testing ಯಿಂದ ಹಿಡಿದು Development  ವರೆಗೆ, Quality ಯಿಂದ ಹಿಡಿದು Compliance  ವರೆಗೆ, H.R ಯಿಂದ ಹಿಡಿದು Help Desk  ನವರ ವರೆಗೆ, ಕಾಫಿ ಟೇಬಲ್  ನಲ್ಲಿ ನಡೆಯುವ ಸ್ವಾರಸ್ಯಕರ  ಗಾಸಿಪ್ ನಿಂದ ಹಿಡಿದು ಮ್ಯಾನೇಜರ್ ಗಳ ಮೇಲಿನ ಕಥೆಗಳ ಬಗ್ಗೆ, ಹೀಗೆ  ನಮ್ಮ ಸಾಫ್ಟ್ ಜೀವನ ಶೈಲಿಯ ಒಂದೊಂದೇ ವಿಷಯದ ಬಗ್ಗೆ,ಒಂದಿಷ್ಟು ವಿಚಾರ ವಿನಿಮಯ ಗಳನ್ನ ಮಾಡಿಕೊಂಡರೆ ಚೆನ್ನಾಗಿರುತ್ತದೆ ಅಲ್ವಾ?  

ಇನ್ನು ಮುಂದೆ ಪ್ರತಿ ಶುಕ್ರವಾರ ನಿಮ್ಮ ಮುಂದೆ ಇಂತದೊಂದು ಅಂಕಣ ತಪ್ಪದೆ ಬರುತ್ತದೆ. 

ಇದುವೇ
ಸಾಫ್ಟ್ ಡೈರಿ!!
ಈ ವಾರದ ಬಿಲ್ಡ್ ಲೇಬಲ್ : ಸಾಫ್ಟ್ ವೇರ್ ಲೈಫ್ ಹೊರಗಿನಿಂದ ನೋಡುವವರಿಗೆ ಪಾವ್ - ಬಾಜಿ ಥರ, ಒಳಗಿದ್ದವರಿಗೆ “ಪಾವ್” ಗಾಗಿ ಸದಾ ಬಿಸಿ ಹಂಚಿನ ಮೇಲೆ ಕುದಿಯುತ್ತಿರುವ “ಬಾಜಿ ( ಪಲ್ಯದ)” ಥರ.