ಸಾಫ್ಟ್ ಲೋಕದ ಜನರು ದುಡ್ಡು ಗಳಿಸುತ್ತಾರೆ ಎನ್ನುವುದೇನೋ ನಿಜ, ಆದರೆ ಅದರಲ್ಲಿ ಎಷ್ಟು ಉಳಿಸುತ್ತಾರೆ ಎನ್ನುವುದು ಪ್ರಶ್ನೆ. ನೀವು ಯಾವ ಸಾಫ್ಟ್ ವೇರ್ ಎಂಜಿನೀರ್ ಹತ್ತಿರ ಹೋಗಿ ಅವರ ಸಂಬಳದ ಬಗ್ಗೆ ಸ್ವಲ್ಪ ಮಾತಾಡಿ ನೋಡಿ, ಅವರು ಹೇಳುವುದು:
“ ಅಯ್ಯೋ ಸುಮ್ನಿರಪ್ಪ ಸಾಕು, ಎಲ್ಲರ ಕಣ್ಣಲ್ಲೂ ನಾವು ಜಾಸ್ತಿ ದುಡ್ಡು ತಗೊತೀವಿ ಅನ್ನೋದಷ್ಟೇ ಗೊತ್ತು. ಆದರೆ ನಮಗೂ ಖರ್ಚುಗಳೂ ಅಷ್ಟೇ ಇರುತ್ತೆ. ಸಾಫ್ಟ್ ವೇರ್ ಎಂಜಿನೀರ್ ಅಂದ ತಕ್ಷಣ ದುಡ್ದೇನು ಮರದ ಮೇಲಿಂದ ಬೀಳಲ್ಲ” ಅಂತ.
ಬೇರೆ ಲೋಕದ ಜನರಿಗೆ ಮಾತ್ರ ಅಲ್ಲ ನಮಗೂ ಮಾತ್ರ ಈ ಪ್ರಶ್ನೆ ಇದ್ದೆ ಇದೆ. “ಸಂಬಳ ಇಷ್ಟೊಂದು ಬಂದ್ರು ಸಹ ಯಾವ ಕಡೆಯಿಂದಲೋ ಬಂದ ಎಲ್ಲ ಹಣವೂ ಖರ್ಚಾಗಿ ಹೋಗುತ್ತಲ್ಲ ಅಂತ”. ಮೊನ್ನೆ ನನ್ನ ಸ್ನೇಹಿತ ಹೇಳುತ್ತಿದ್ದ: “ ದುಡ್ಡು ATM ನಲ್ಲಿರೋ ವರೆಗೂ ಮಾತ್ರ ಸೇಫ್, ಅಲ್ಲಿಂದ ಏನಾದ್ರೂ ಡ್ರಾ ಮಾಡಿ ಕೈಗೆ ತಗೊಂಡೆ ಅಂದ್ರೆ ಮುಗೀತು ಕಥೆ. ಅದು ಯಾವಾಗ ಖಾಲಿ ಆಗಿರುತ್ತೋ ಗೊತ್ತೇ ಆಗಿರೋದಿಲ್ಲ”.
ಹಲವಾರು ಕ್ಲಿಷ್ಟಕರವಾದ ಸಮಸ್ಯೆಗಳಿಗೆ ಪರಿಹಾರ ಗಳನ್ನ ನಮ್ಮ ಲಾಜಿಕ್ ಮುಖಾಂತರ ಅತ್ಯಂತ ಸುಲಭವಾಗಿ ಕೋಡ್ ಬರೆದು ಬಿಸಾಕುವ ನಾವು “ದುಡ್ಡಿನ” ವಿಷಯಕ್ಕೆ ಬಂದಾಗ ಮಾತ್ರ “ದಡ್ಡರಾಗಿ” ಬಿಡುತ್ತೇವೆ, ಮತ್ತು ದಡ್ದರಾಗುತ್ತಲೇ ಇದ್ದೇವೆ (ಪ್ರತಿ ತಿಂಗಳು). “ ದುಡ್ಡು ಎಷ್ಟಿದ್ದರೂ ಸಾಲೋದಿಲ್ಲಾ ರೀ ಈ ಕಾಲದಲ್ಲಿ” ಅನ್ನೋ ಮಾತು ನಮ್ಮ ಸಾಫ್ಟ್ ಲೋಕದವರಿಗೂ ಸಹ ಅನ್ವಯಿಸುತ್ತದೆ ಅನ್ನೋದು ಮಾತ್ರ ಅಷ್ಟೇ ಸತ್ಯ. “ ನೀವು ಬಿಡ್ರಿ ಆರಾಮಾಗಿ ತಿಂಗಳ ಕೊನೆಗೆ AC room ನಲ್ಲಿ ಕೂತು ಲಕ್ಷ ಗಟ್ಟಲೆ ಸಂಬಳ ಎಣಿಸುತ್ತೀರಾ “ ಅನ್ನೋದು ಬಲು ಸುಲಭದ ಮಾತು.
ನೀವು ನಂಬುತ್ತೀರೋ ಬಿಡುತ್ತೀರೋ, ಬಹಳಷ್ಟು ಜನ ಸಾಫ್ಟ್ ಲೋಕದ ಜನರಿಗೆ ದುಡ್ಡು ಮ್ಯಾನೇಜ್ ಮಾಡೋದು ಅವರಿಗೆ ಕಷ್ಟದ ವಿಷಯ. ಈ tax, investment, ಇನ್ನೊಂದು ಮತ್ತೊಂದು ಅಂದ್ರೇನೆ ಬಹಳಷ್ಟು ಜನರಿಗೆ ಇದು ಒಂಥರಾ ತುಂಬಾ ಇರಿಟೆಶನ್ ಕೂಡ. ಇರಿಟೆಶನ್ ಅನ್ನೋದಕ್ಕಿಂತ ಇನ್ನೊಂದು ಅರ್ಥದಲ್ಲಿ ಇದನ್ನ ತಿಳಿದುಕೊಳ್ಳೋದಕ್ಕೆ ಆಸಕ್ತಿ ಇರುವುದಿಲ್ಲ. ಅದಕ್ಕೇನೆ ನಮ್ಮವರು ಮಾಡುವ ಬೆಸ್ಟ್ ಕೆಲಸ ಎಂದರೆ ತಮಗೆ ಗೊತ್ತಿಲ್ಲದ್ದನ್ನು out source ಮಾಡಿ ತಣ್ಣಗೆ ಕೂತುಬಿಡುತ್ತಾರೆ. ಹಾಗಂತ ಎಲ್ಲ ಸಾಫ್ಟ್ ಲೋಕದ ಜನ ಹೇಗಿರುತ್ತಾರೆ ಅನ್ಕೋಬೇಡಿ ಮತ್ತೆ. ಕೆಲವರಂತೂ ಈ ಮೇಲೆ ಹೇಳಿದ್ದನ್ನೆಲ್ಲ ಅರೆದು ಕುಡಿದು ಬಿಟ್ಟಿರುತ್ತಾರೆ. mutual fund, stock, shares ಹಲವಾರು ರೀತಿಯ ವಿಷಯಗಳನ್ನು ತಿಳಿದು ಕೊಂಡಿರುತ್ತಾರೆ. ಆದರೆ ಇಂಥವರ category ಸಾಫ್ಟ್ ಲೋಕದಲ್ಲಿ ಸ್ವಲ್ಪ ಕಡಿಮೆ ಎನ್ನಬಹುದು.
ಇನ್ನು ತಿಂಗಳ ಸಂಬಳದ ವಿಷಯಕ್ಕೆ ಬರುವುದಾದರೆ ಟ್ಯಾಕ್ಸ್ ಕಟ್ ಆಗಿಯೇ ನಮ್ಮ ಕೈಗೆ ಬಂದಿರುತ್ತೆ. ಬಂದ ಸಂಬಳದಲ್ಲಿ ಬೃಹತ್ ಮೊತ್ತ ಹೋಗುವುದು ಬೆಂಗಳೂರಿನ ಮನೆಯ ಬಾಡಿಗೆಗೆ ಅಥವಾ ಮನೆ ಖರಿದಿಸಿದ್ದರೆ ಅದರ ಕಂತಿಗೆ. ತದ ನಂತರ ಹೋಗುವುದು ನಾವೇ ಮಾಡಿಕೊಂಡಿರುವ ಹಲವಾರು ಲೋನ್ ಗಳಿಗೆ, ಆಮೇಲೆ ನಮ್ಮದೇ ಆದ ಒಂದಿಷ್ಟು commitment ಗಳಿಗೆ, ಇನ್ನು ಬೆಂಗಳೂರಿನಂತ ಊರಿನಲ್ಲಿ ಮಕ್ಕಳ ಶಾಲೆಯ admission ಅಥವಾ fees ಕಥೆ ಕೇಳಿದರೆ ನಾವು ಎರಡೆರಡು ಸಾಫ್ಟ್ ವೇರ್ ಕಂಪನಿ ಗಳಲ್ಲಿ ಕೆಲಸ ಮಾಡಿದರೂ ಕಡಿಮೆಯೇ. ಕೊನೆಗೆ ಉಳಿಯುವುದು ಮಾತ್ರ ಒಂದೇ ಒಂದು : “ ಪುನಃ ಮುಂದಿನ ತಿಂಗಳ ಸಂಬಳದ ದಾರಿ ಎದುರು ನೋಡುತ್ತಾ ಕೂಡುವುದು” .
ಇದನ್ನೆಲ್ಲಾ ನೋಡಿದರೆ, ನಮ್ಮ ತಂದೆ - ತಾಯಿ ಯಂದಿರ ತಲೆಮಾರು ಎಷ್ಟೋ ವಾಸಿ . ಇರುವ ಸರಕಾರೀ ಸಂಬಳದಲ್ಲಿಯೇ ಅವರು ತಮ್ಮ ಕೆಲಸದಿಂದ ರಿಟೈರ್ ಆಗೋ ಹೊತ್ತಿಗೆ: ಮಗನ ಓದು, ಮಗಳ ಮದುವೆ, ಜೊತೆಗೆ ತಮಗೊಂದು ಚಿಕ್ಕದಾದ ಚೊಕ್ಕದಾದ ಮನೆ ಎಲ್ಲವನ್ನು ಮಾಡಿಕೊಂಡಿರುತ್ತಾರೆ. ಇಷ್ಟಲ್ಲದೆ ಬಂಧು - ಬಳಗದವರಿಗೂ, ಅಕ್ಕ ಪಕ್ಕ ದವರಿಗೂ ಒಂದಿಷ್ಟು ಆಸರೆ ಆಗಿರುತ್ತಾರೆ. ನಿಜಕ್ಕೂ ಹೆಮ್ಮೆ ಪಡುವ ವಿಷಯವೇ. ಇರುವಷ್ಟರಲ್ಲಿಯೇ ಎಲ್ಲವನ್ನು ಶಾಸ್ತ್ರೋಕ್ತವಾಗಿ ಮಾಡಿ ಮುಗಿಸಿರುತ್ತಾರೆ.
ನಮ್ಮ ಕೈಗೆ ಇಷ್ಟು ದುಡ್ಡು ಬರುತ್ತಿದ್ದರೂ ಅದೆಲ್ಲಿ ಕೈ ಜಾರಿ ಹೋಗುತ್ತೋ ನಮಗೆ ಗೋತ್ತಿರೋದಿಲ್ಲ.
ಈ ವಾರದ ಬಿಲ್ಡ್ ಲೇಬಲ್ :
“ ಮಗಾ, ಮೂರು ವರ್ಷ ಆಯ್ತು ಸಾಫ್ಟ್ ವೇರ್ ಕೆಲಸ ಮಾಡ್ತಾ. Royal enfield ಬೈಕ್ ಒಂದನ್ನ ತಗೊಂಡಿದ್ದು ಬಿಟ್ರೆ ನನ್ನದು ಅಂತ ಏನು ಉಳಿಸೆ ಇಲ್ಲ. ಇಷ್ಟು ದಿನ ದುಡಿದ ದುಡ್ಡು ಎಲ್ಲಿಗೆ ಹೋಯ್ತು ಅಂತ ? ನನ್ನ ಮದುವೆಗೆ ನಮ್ಮಪ್ಪನ ಹತ್ತಿರಾನೇ ದುಡ್ಡು ಕೇಳಿದೀನಿ ಗೊತ್ತಾ?” ಅಂತ ನನ್ನ ಗೆಳೆಯನೊಬ್ಬ full feeling ಅಲ್ಲಿ ಹೇಳ್ತಾ ಇದ್ರೆ, ಉತ್ತರ ಗೊತ್ತಿರದೇ ನಾನು ಕೂಡ ಸುಮ್ಮನಾಗಿದ್ದೆ!
No comments:
Post a Comment