Thursday, June 26, 2014

ಅಂಕಣ ೨೩ : ಸಾಫ್ಟ್ ಪಾಲಿಟಿಕ್ಸ್

ಇದಕ್ಕೂ ಮುಂಚೆ, ಸಾಫ್ಟ್ ಲೋಕ ಹೇಗೆ ಬೇರೆ ಲೋಕಗಳಿಗಿಂತ ಭಿನ್ನವಾಗಿದೆ ಅನ್ನುವುದರ ಬಗ್ಗೆ ಹಿಂದಿನದೊಂದು ಅಂಕಣದಲ್ಲಿ ಸಾಫ್ಟ್ ಲೋಕದ ಧನಾತ್ಮಕ ಅಂಶಗಳ ಬಗ್ಗೆ ಓದಿದ್ದೀರಿ. ಈಗ ಅದರ ಇನ್ನೊಂದು ಮುಖದ ಬಗ್ಗೆ ಯೂ ತಿಳಿದುಕೊಳ್ಳೋಣ.

ಇಲ್ಲಿ ಪ್ರತಿ ಭಟನೆಗಳು ಇರುವುದಿಲ್ಲ, “ಬೀದಿಗಿಳಿದು ಹೋರಾಟ ಮಾಡ್ತೇನೆ” ಎನ್ನುವ ಮಾತುಗಳು ಇರುವುದಿಲ್ಲ, "ರಾಜ್ಯದಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇನೆ” ಅನ್ನುವಂತೆ ಕಂಪನಿ ಯಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇನೆ ಅಂತ ಯಾರೂ ಹೇಳುವುದಿಲ್ಲ. ಚಳುವಳಿ ಗಳ ಮಾತೆ ಇಲ್ಲಿಲ್ಲ. ಆದರೂ ಸಾಫ್ಟ್ ಲೋಕದಲ್ಲಿ ತನ್ನದೇ ರೀತಿಯಾದ ರಾಜಕೀಯ ಇದೆ. ಸಾಫ್ಟ್ ಲೋಕದಲ್ಲೇ ಏನು ಬಂತು,  ಎಲ್ಲೆಲ್ಲಿ ಜನರು ಇದ್ದಾರೋ ಅಲ್ಲೆಲ್ಲ ರಾಜಕೀಯ ಅನ್ನುವುದು ಇದ್ದೆ ಇರುತ್ತದೆ ಅನ್ನುವುದು ನಮ್ಮೆಲ್ಲರಿಗೂ ಗೊತ್ತಿದ್ದದ್ದೇ ಬಿಡಿ.



ಆದರೆ ಸಾಫ್ಟ್ ಲೋಕದ ಪೊಲಿಟಿಕ್ಸ್ ತುಂಬಾ ಸಾಫ್ಟ್ ಆಗಿ ಇರುತ್ತದೆ. ಹೊಗೆಯಾಡಬೇಕಾದರೆ ಬೆಂಕಿ ಇರಲೇ ಬೇಕು ಎನ್ನುವ ಒಂದು ನಿಯಮವಿದೆ ಆದರೆ ಸಾಫ್ಟ್ ಲೋಕದಲ್ಲಿ  "ಬೆಂಕಿ ಚಿಕ್ಕದಾಗಿ ಹತ್ತಿ, ಉರಿದು ಹೊಗೆಯಾಡುವ ಮೊದಲೇ ಅನಾಮತ್ತಾಗಿ ಬೆಂಕಿಯನ್ನೇ ಕಂಪನಿ ಯ ಕಂಪೌಂಡಿನ ಆಚೆ ಎಸೆದು ಬಿಟ್ಟಿರುತ್ತಾರೆ". ಇದು ಸಾಫ್ಟ್ ಲೋಕದ ರಾಜಕೀಯ.

ಇಲ್ಲಿ ಬಹಿರಂಗ ಸವಾಲುಗಳು ಇರುವುದಿಲ್ಲ, ಬದಲಿಗೆ ಮನಸಿನಲ್ಲಿ ಹಲವಾರು ಲೆಕ್ಕಾಚಾರ ಗಳು ನಡೆಯುತ್ತಿರುತ್ತವೆ. ಪರಸ್ಪರ ಆಗದ ಮುಖಗಳು ಎದುರು - ಬದರು ಬಂದರೆ ಮುಖ ಉರಿ ಉರಿ ಆಗಿರುವುದಿಲ್ಲ, ಬದಲಿಗೆ ಮುಖದ ತುಂಬಾ ಅರಳಿದ ಸಂತಸವಾದ ನಗು ಇರುತ್ತದೆ. ಹತ್ತಾರು ಸಾವಿರ ಆನೆ, ಒಂಟೆ, ಕುದುರೆ ಗಳ ಜೊತೆಗೆ ಬಯಲಿನಲ್ಲಿ ಯುದ್ಧವಿರುವುದಿಲ್ಲ, ಗೆರಿಲ್ಲಾ ಯುದ್ಧದ ತರಹ  ಯಾವ ಟಾರ್ಗೆಟ್ ಗೆ  ಬಾಣ  ಮುಟ್ಟ ಬೇಕೋ  ಅದು ಮುಟ್ಟಿರುತ್ತದೆ.  ಸ್ಟ್ರೈಕ್ ಗಳು ಇರುವುದಿಲ್ಲ, ಮೌನದಲ್ಲಿಯೇ ಇನ್ನೊಬ್ಬರನ್ನು ಮಣಿಸುವ ಶಕ್ತಿ ಇಲ್ಲಿನ ರಾಜಕೀಯಕ್ಕೆ ಮೂಲ. ಹಿಂದೊಮ್ಮೆ ಹೇಳಿದಂತೆ ಸಾಫ್ಟ್ ಲೋಕದ "ಎ.ಸಿ" ರೂಂ ನಲ್ಲಿರುವವರಿಗೆ ಮಾತ್ರ ಗೊತ್ತು ಅದರ ಬಿಸಿ ಎಂಥದು ಅಂತ!
ಶೀತಲ ಸಮರ, ಮುಸುಕಿನ ಗುದ್ದಾಟ, ಮೌನದಲ್ಲಿಯೇ ಇದ್ದು ಎಲ್ಲವನ್ನು ಮುನ್ನಡೆಸುವ ಚಾಣಾಕ್ಷತೆ ಇಲ್ಲಿ ಕಾಣಬಹುದು. ತಲೆ ಕೆಟ್ಟವನು ಕೂಗುತ್ತಾನೆ, ಬುದ್ದಿ ಇದ್ದವನು ಮೌನವಾಗಿದ್ದು ಕೊಂಡೆ ತನ್ನ ಕೆಲಸ ಗೆಲ್ಲಿಸಿಕೊಳ್ಳುತ್ತಾನೆ ಎನ್ನುವುದು ಇಲ್ಲಿನ ಮೂಲ  ಮಂತ್ರ. ನಿಷ್ಟುರತೆ ಇಲ್ಲಿ ಅಷ್ಟೊಂದು   ಬರುವುದಿಲ್ಲ, ಇಲ್ಲೇನಿದ್ದರೂ "ಸಾಫ್ಟ್" ಪೊಲಿಟಿಕ್ಸ್.
ಸಾಮಾನ್ಯವಾಗಿ ಹೊಸತಾಗಿ ಕೆಲಸಕ್ಕೆ ಸೇರಿದ ಹುಡುಗ ಹುಡುಗಿಯರಿಗೆ ಇದು ಅಷ್ಟೊಂದು ಗೊತ್ತಾಗುವುದಿಲ್ಲ, ಆದರೆ ಒಂದೇ ಕಂಪನಿ ಯಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡುತ್ತಾ ಹೋದರೆ ಎಲ್ಲವೂ ನಮ್ಮ ಮುಂದೆ ಎಲೆ ಎಲೆ ಯಾಗಿ ಕಾಣಿಸುತ್ತ ಹೋಗುತ್ತದೆ. ಸಾಫ್ಟ್ ಲೋಕ.... ಸಾಫ್ಟ್?
ಸುಮ್ಮನೆ ಹಾಗೆ ವಿಚಾರ ಮಾಡಿ: ಒಂದು ರಾಜಕೀಯಪಕ್ಷದ ಒಬ್ಬ ಪ್ರಭಾವಿ ವ್ಯಕ್ತಿ ಇನ್ನೊಂದು ರಾಜಕೀಯ ಪಕ್ಷಕ್ಕೆ ಜಂಪ್ ಮಾಡಿದರೆ, ಅವನು ಒಬ್ಬನೇ ಹೋಗುವುದಿಲ್ಲ ಅವನ ಜೊತೆಗೆ ಅವನ ಬೆಂಬಲಿಗರೂ ಹೋಗುತ್ತಾರೆ, ಅಂತೆಯೇ ಸಾಫ್ಟ್ ಲೋಕದಲ್ಲಿಯೂ ಸಹ, ಉನ್ನತ ಹುದ್ದೆಯಲ್ಲಿರುವವರು ಒಂದು ಕಂಪನಿ ಯಿಂದ ಇನ್ನೊಂದು  ಕಂಪನಿ ಗೆ ಹೋದರೆ, ಆರು  ತಿಂಗಳಿನಲ್ಲಿಯೇ ತಮ್ಮ ಹಿಂದಿನ ಕಂಪನಿಯ  ತಮ್ಮ ಆಪ್ತರನ್ನು ತಾವಿರುವ ಕಡೆಗೆ ಎಳೆದುಕೊಂಡು ಬಿಡುತ್ತಾರೆ. ಅದಕ್ಕೆ ಸಾಫ್ಟ್ ಲೋಕದಲ್ಲಿ ಹೇಳೋದು : " ಏನಾದರೂ ಆಗು ಮೊದಲು ಬಾಸ್ ಗೆ ಹತ್ತಿರವಾಗು ಅಂತ !"
ಹಾಗಂತ ಎಲ್ಲ ಕಂಪನಿ ಯಲ್ಲೂ ಈ ಮುಸಿಕಿನ ಗುದ್ದಾಟ ಇರುತ್ತದೆ,ಎಲ್ಲ ಕಾಲದಲ್ಲೂ, ಯಾವಾಗಲೂ ರಾಜಕೀಯ ಇರುತ್ತದೆ ಅಂತ ಹೇಳಲು ಆಗುವುದಿಲ್ಲ. ಆದರೂ ಗುದ್ದಾಟವಿರದೆ ಇರುವ ವಾತಾವರಣ ಸ್ವಲ್ಪ ಕಡಿಮೆ. ಉನ್ನತ ಮಟ್ಟದ ಹುದ್ದೆಯೊಂದು ಖಾಲಿ ಇರುವಾಗ, ನಮಗೆ ಬೇಕಾದವರಿಗೆ ಕಂಪನಿಯಲ್ಲಿ ಒಂದಿಷ್ಟು ಒಳ್ಳೆಯ ಸ್ಥಾನಗಳು ಸಿಗಬೇಕೆಂದಾಗ, ಒಂದಿಷ್ಟು ರಾಜಕೀಯ ಲೆಕ್ಕಾಚಾರಗಳು ನಡೆದಿರುತ್ತವೆ.  Higher management ಎದುರಿಗೆ ತಮ್ಮನ್ನ ತಾವು project ಮಾಡಿಕೊಳ್ಳುವಾಗ ಒಂದಿಷ್ಟು ರಾಜಕೀಯ ಇದ್ದೆ ಇರುತ್ತದೆ. ಇದೊಂಥರ High command ಕಿವಿಗೆ ತಮ್ಮ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳು ತಲುಪಲಿ ಎನ್ನುವ ಎಲ್ಲ ರಾಜಕೀಯ ನಾಯಕರ ತರಹ…. ಹಾಗಂತ ಸಾಫ್ಟ್ ಲೋಕದಲ್ಲಿ ಇರೋರೆಲ್ಲರನ್ನು ಈ ಕೆಟಗರಿಗೆ ಸೇರಿಸಲು ಆಗೋದಿಲ್ಲ ಬಿಡಿ.

ವಾರದ ಬಿಲ್ಡ್ ಲೇಬಲ್ : ಏನ್ರಿ ಹಾಗೆ ಇನ್ನು ಕಣ್ಣರಳಿಸಿ ಕೊಂಡು  ಓದ್ತೀರಾ? ಗಾದೆ ಕೇಳಿಲ್ವಾ.. “ಎಲ್ರು  ಮನೆ ದೋಸೇನೂ ತೂತೆ”

No comments:

Post a Comment