Wednesday, May 14, 2014

ಅಂಕಣ ೧೮ : ಸಾಫ್ಟ್ ಲಾಂಗ್ ವೀಕೆಂಡ್


ಮೊಟ್ಟ ಮೊದಲನೆಯದಾಗಿ “ವೀಕೆಂಡ್ “ ಅಂದರೆ ಸಾಫ್ಟ್ ಲೋಕದಲ್ಲಿ  “ಎರಡು ದಿನದ ರಜೆಯ ಮಜಾ” ಅಂತ ಅರ್ಥ.
ವಾರದ ಕೊನೆಯಲ್ಲಿ ಸಿಗುವ ಎರಡು ದಿನ “ಶನಿವಾರ” ಮತ್ತು “ ಭಾನುವಾರ” ನಮ್ಮ ಪಾಲಿಗೆ ಒಂದು ರೀತಿಯ ರೆಫ್ರೆಶರ್  ಇದ್ದ ಹಾಗೆ. "ವೀಕೆಂಡ್” ಜೊತೆಗೆ ಇನ್ನೊಂದು ಪದವೂ ಇದೆ, ಅದು “ ಲಾಂಗ್ ವೀಕೆಂಡ್” ಅಂತ. ಅಂದರೆ ಶನಿವಾರ ಮತ್ತು ಭಾನುವಾರದ ಜೊತೆಗೆ ಇನ್ನೊದು ದಿನ ( ಶುಕ್ರವಾರ ಅಥವಾ ಸೋಮವಾರ) ರಜಾ  ಸಿಕ್ಕರೆ ನಮ್ಮ ಪಾಲಿಗೆ ಅದು “ ಲಾಂಗ್ ವೀಕೆಂಡ್” ಆಗುತ್ತೆ.



ಈ ಲಾಂಗ್ ವೀಕೆಂಡ್ ಸೃಷ್ಟಿಸೋ ಗದ್ದಲ  ಅಷ್ಟು ಇಷ್ಟು ಅಲ್ಲ! ನಿಮಗೆ ಲಾಂಗ್ ವೀಕೆಂಡ್ ಬಗ್ಗೆ ತಿಳ್ಕೋ ಬೇಕು ಅಂದರೆ ಒಂದು ಕೆಲಸ ಮಾಡಿ, ಇದು ಶುರುವಾಗುವುದಕ್ಕಿಂತ ಹಿಂದಿನ ದಿನ ರಾತ್ರಿ ಒಂದು ಸಲ ಮೆಜಸ್ಟಿಕ್ ಗೆ ವಿಸಿಟ್ ಕೊಟ್ಟು ಬನ್ನಿ ನಿಮಗೆ ಗೊತ್ತಾಗುತ್ತೆ ಇದರ ಪ್ರಭಾವ. ಜನ ಜಂಗುಳಿ. ಅಷ್ಟೇ ಅಲ್ಲ ಮರುದಿನ ಬೆಳಿಗ್ಗೆ ೮ ಗಂಟೆಯ ಸುಮಾರಿಗೆ ತುಮಕೂರು ಮತ್ತು ಮೈಸೂರು ರೋಡ್ ನಲ್ಲಿರೋ ಟೋಲ್ ಗೇಟ್ ಬಳಿ  ಲಾಂಗ್ ಕ್ಯೂ  ನಲ್ಲಿ ನಿಂತಿರುವ ವೆಹಿಕಲ್ಸ್ ನೋಡಿದರೆ ನಿಮಗೆ ಲಾಂಗ್ ವೀಕೆಂಡ್ ನ ಅರ್ಥ ಸಂಪೂರ್ಣವಾಗಿ ಆಗುತ್ತದೆ.

ಒಂದು ವೇಳೆ ಯಾವುದಾದರೂ ಹಬ್ಬ ಹರಿದಿನಗಳು ಸೋಮವಾರ ಅಥವಾ ಶುಕ್ರವಾರದ ಬದಲಿಗೆ ಮಂಗಳ ವಾರ ಅಥವಾ ಗುರುವಾರ ಬಂತೆಂದರೆ ಸಾಕು, ಸಾಫ್ಟ್ ಲೋಕದ ಮ್ಯಾನೇಜರ್ ಗಳು ತಕ್ಷಣ ಜಾಗೃತ ರಾಗಿ ಬಿಡುತ್ತಾರೆ. ಯಾಕಂದರೆ ಪ್ರಾಜೆಕ್ಟ್ ನಲ್ಲಿ ಇರೋರೆಲ್ಲ ಸೋಮವಾರ/ ಶುಕ್ರವಾರ ರಜೆ ಹಾಕಿ ಒಟ್ಟಿಗೆ ನಾಲ್ಕು ದಿನ ಜೈ ಅಂದು ಬಿಡುತ್ತಾರೆ. ಅದಕ್ಕೆ ಮ್ಯಾನೇಜರ್ ಗಳು ವಾರದ ಮುಂಚೆನೆ ಯಾರ್ಯಾರು ಊರಿಗೆ ಹೋಗುತ್ತಿದ್ದಾರೆ ಅನ್ನೋದನ್ನ ಒಂದು ರೌಂಡು ಸರ್ವೇ ಮಾಡಿ ತಮ್ಮ ಎಕ್ಸೆಲ್ ಶೀಟ್ ಅನ್ನು ಅಪ್ - ಡೆಟ್  ಮಾಡಿಬಿಟ್ಟಿರುತ್ತಾರೆ.  ಇನ್ನು ಕೆಲವರಂತೂ ಬಿಡಿ, ಮ್ಯಾನೇಜರ್ ಗಳನ್ನೂ ಮೆಚ್ಚಿ ಸುವುದಕ್ಕೊಸ್ಕರ ಮಾಡಿಸಿದ ರಿಸರ್ವಶನ್ ಕ್ಯಾನ್ಸೆಲ್ ಮಾಡಿಸಿ ಕೆಲಸಕ್ಕೆ ಬಂದು ಶಹಬ್ಬಾಸ್ ಗಿರಿ ತೊಗೊಳ್ಳುತ್ತಾರೆ.


ಸಾಧಾರಣ ವಾಗಿ ವೀಕೆಂಡ್ ಬಂತೆಂದರೆ ಸಾಫ್ಟ್ ಲೋಕದಲ್ಲಿ ಬೆಂಗಳೂರಿನಿಂದ ಶುಕ್ರವಾರ ಸಂಜೆ ಮೈಸೂರು, ತುಮಕೂರು, ಚೆನ್ನೈ, ಚಿತ್ತೂರು, ಹೋಗುವವರ ಸಂಖ್ಯೆ ಜಾಸ್ತಿ. ಒಂದು ವೇಳೆ ಮೂರು ದಿನ ರಜದ ಲಾಂಗ್ ವೀಕೆಂಡ್  ಬಂತೆಂದರೆ ಇವರ ಜೊತೆ ರಾಯಚೂರು, ಗುಲ್ಬರ್ಗ, ಬಿಜಾಪುರು, ಕರ್ನೂಲು, ಕೊಯಿಮ್ಬತ್ತುರು ಜನರು ಸಹ ತಮ್ಮ ತಮ್ಮ ಊರಿಗೆ ಹೋಗಲು ಎದ್ದು ಕುಳಿತು ಬಿಡುತ್ತಾರೆ. ಇನ್ನೇನಾದರೂ ನಾಲ್ಕು ದಿನದ ರಜ ಸಿಕ್ಕಿತೆಂದರೆ ಸಾಕು, ಇರುವ ಇಷ್ಟು ಜನರ ಜೊತೆಗೆ ಉತ್ತರ ಭಾರತದವರು
(ಬೆಂಗಳೂರಿನಲ್ಲಿರುವವರು) ತಮ್ಮ ಫ್ಯಾಮಿಲಿ ಜೊತೆ ಕರ್ನಾಟಕದ ದಲ್ಲಿರುವ ಮತ್ತು ಅಕ್ಕ ಪಕ್ಕ ರಾಜ್ಯದಲ್ಲಿರುವ ಊರುಗಳನ್ನ ನೋಡಲು ಹೊರಟುಬಿಡುತ್ತಾರೆ. ಅದಕ್ಕೆನೆ ಲಾಂಗ್ ವೀಕೆಂಡ್ ನ ಹಿಂದಿನ ದಿನ ರಾತ್ರಿ ಮತ್ತು ಮರುದಿನ ಬೆಳಿಗ್ಗೆ ಅಷ್ಟೊಂದು ಟ್ರಾಫಿಕ್ ಇರುತ್ತೆ.


ಸಾಮಾನ್ಯವಾಗಿ ಉತ್ತರ ಭಾರತದವರು ದಸರಾ ಮತ್ತು ದೀಪಾವಳಿಗೆ ಹೋಗುವುದರಿಂದ ಅವರು ಆ ಸಮಯದಲ್ಲಿ  ೨ ವಾರ ರಜೆ ತಗೊಂಡು  ಬಿಡುತ್ತಾರೆ. ಒಂದು ವೇಳೆ ಉತ್ತರ ಭಾರತದವರು ಮೂರು ವಾರಗಳ ರಜೆ ತಗೊಂಡಿದಾರೆ ಅಂದರೆ ಒಂದು ತನ್ನದೇ ಮದುವೆಗೆ ಹೋಗಿದಾನೆ ಅಂತ ಅರ್ಥ, ಇಲ್ಲ ಅಂದ್ರೆ ತನ್ನ ಊರಿನಲ್ಲಿ ಕೆಲಸ ಹುಡುಕೋಕೆ ಹೋಗಿದಾನೆ ಮತ್ತು ವಾಪಸು ಬಂದ ತಕ್ಷಣ ರಿಸೈನ್ ಮಾಡ್ತಾನೆ ಅಂತ ಸಾಫ್ಟ್ ಲೋಕದಲ್ಲಿ ಮಾತು ಚಾಲ್ತಿಯಲ್ಲಿದೆ.


ವಾರ ಪೂರ್ತಿ ಕಂಪ್ಯೂಟರ್ ನ ಒಳಗೆ ತಲೆಯಿಟ್ಟು ಕೂತಿರುವ ದೇಹಕ್ಕೆ ಒಂದು ಮೂರ್ನಾಕು ದಿನವಾದರೂ ಹಾಯಾಗಿ ಬೆಂಗಳೂರಿಂದ ಹೊರಗೆ ಹೋಗಿ ಬರುವ ಅಭ್ಯಾಸ ಒಳ್ಳೆಯದೇ. ಪ್ರತಿ ದಿನವೂ ಒಂದು ಕೋಟಿಯಷ್ಟು ಜನರ ಭಾರ ಹೊರುವ ಬೆಂಗಳೂರಿಗೂ ಸಹ ಈ ಥರದ ಲಾಂಗ್ ವೀಕೆಂಡ್ ನಲ್ಲಿ ಒಂದಿಷ್ಟು ಸಾವಿರ ಜನರ ಭಾರ ಕಡಿಮೆಯಾಗಿ ಅದು ಕೂಡ ನಿಟ್ಟುಸಿರು ಬಿಡುತ್ತೆ ( ಆದರೆ ಆ ಭಾರ ಅಕ್ಕ - ಪಕ್ಕ ದ ನಗರಗಳಾದ ತುಮಕೂರು, ಮೈಸೂರು , ಚೆನ್ನೈ , ಮುಂತಾದ ಕಡೆ ಹೋಗಿರುತ್ತೆ )
ಲಾಂಗ್ ವೀಕೆಂಡ್ ನಲ್ಲಿ ಒಂದು ಸಲ ನೀವು ಬೆಂಗಳೂರನ್ನ ನಿಮ್ಮ ವೆಹಿಕಲ್ ನಲ್ಲಿ ಸುತ್ತು ಹಾಕಿ. ಟ್ರಾಫಿಕ್ ತಲೆ ಬಿಸಿಯೇ ಇರುವುದಿಲ್ಲ. ಎಲ್ಲೆಂದರಲ್ಲಿ ಅಡ್ಡಾಡಬಹುದು. ಬೆಂಗಳೂರು ಹಗುರ ವಾಗಿರುತ್ತೆ,  ಒಂದು ಥರ ಮನಸಿನ ಭಾರ ಕಡಿಮೆಯಾದಂತೆ.

ಈ ವಾರದ ಬಿಲ್ಡ್ ಲೇಬಲ್ : ವೀಕೆಂಡ್ ಲಾಂಗ್ ಇರಲಿ ಶಾರ್ಟ್ ಇರಲಿ, ಸಾಫ್ಟ್ ಲೋಕದ ಜನ ಬೆಂಗಳೂರಿನ ಹೊರಗಿರಲಿ, ಒಳಗಿರಲಿ. ಅವರ ಬ್ಯಾಗ ನಲ್ಲಿ ಮಾತ್ರ ಒಂದು ಲ್ಯಾಪ್-ಟಾಪ್, ಕ್ಯಾಮೆರಾ, ತ್ರೀ ಜಿ ಇಂಟರ್ನೆಟ್ ಸೌಲಭ್ಯದ ಮೊಬೈಲ್, ಹ್ಯಾಂಡ್ ಫ್ರೀ ಇದ್ದೆ ಇರುತ್ತೆ. ಇಷ್ಟು ಇಲ್ಲ ದಿದ್ದರೆ ಅದು ಸಾಫ್ಟ್ ಲೋಕಕ್ಕೆ ಅವಮಾನ!

No comments:

Post a Comment