Wednesday, May 28, 2014

ಅಂಕಣ ೧೯ : ನಮ್ಮ ಸಾಫ್ಟ್ ಲೋಕ ಹೇಗೆ ಭಿನ್ನ?

ಖಂಡಿತವಾಗಿಯೂ ನಮ್ಮ ಸಾಫ್ಟ್ ಲೋಕಕ್ಕೂ ಬೇರೆ ಲೋಕಕ್ಕೂ ಒಂದಿಷ್ಟು ವ್ಯತ್ಯಾಸ ಇದೆ.  ಮೊಟ್ಟ - ಮೊದಲನೆಯದಾಗಿ ಸಾಫ್ಟ್ ಲೋಕದಲ್ಲಿ ಸರ್, ಮೇಡಂ ಅನ್ನೋ ಪದಗಳು ಇಲ್ಲವೇ ಇಲ್ಲ. ಹೊಸತಾಗಿ ಕೆಲಸಕ್ಕೆ ಸೇರಿದವರು ಸಹ ಕಂಪನಿಯ ಸಿಇಓ ನನ್ನು ಹೆಸರಿಡಿದು ಕರೆಯಬಹುದು ಮತ್ತು ಕರೆಯುತ್ತಾರೆ ಸಹ. ಸರ್, ಮೇಡಂ ಅನ್ನುತ್ತಾ ಇಪ್ಪತ್ತು ಸಲ ಸಲಾಂ ಹಾಕುವ ಪ್ರವೃತ್ತಿ ನಮ್ಮ ಸಾಫ್ಟ್ ಲೋಕದಲ್ಲಿ ಇಲ್ಲ. ಇಲ್ಲಿ ಎಲ್ಲರೂ ಒಂದೇ ರೀತಿ.  ಮ್ಯಾನೇಜರ್ ಏನಾದ್ರೂ ನಮ್ಮ ಕ್ಯೂಬಿಕ್ ಗೆ ಬಂದಾಗ ನಾವು ಕುಳಿತವರು ಎದ್ದು ನಿಂತು ಗೌರವ ಸೂಚಿಸುವ ಅಗತ್ಯ ಇಲ್ಲ, ನೀವು ಒಂದು ವೇಳೆ ಎದ್ದು ನಿಲ್ಲಲು ಹೊರಟರೆ ಅವರೇ ನಿಮ್ಮನ್ನು “ಕೂತ್ಕೋ ಪರವಾಗಿಲ್ಲ” ಅಂತ ಹೇಳುತ್ತಾರೆ. ಇಂತಹ ರೀತಿಯ ತುಂಬಾ ಫ್ರೆಂಡ್ಲಿ ಆದ ವಾತಾವರಣ ಸಾಫ್ಟ್ ಲೋಕದಲ್ಲಿ ಇರುತ್ತದೆ.



ಕಂಪನಿ ಯಲ್ಲಿ ಯಾರ ಜೊತೆಗಾದರೂ (ನಮಗಿಂತ ಹೆಚ್ಚಿನ ಪೋಸ್ಟ್ ನಲ್ಲಿರುವವರ ಜೊತೆ) ಹೋಗಿ ಮಾತಾಡಬಹುದು. ನಾವು ಯಾರ ಜೊತೆ ಮಾತಾಡ ಬೇಕೆಂದಿರುತ್ತೆವೋ  ಡೈರೆಕ್ಟ್ ಆಗಿ ಅವರಿಗೆ ಒಂದು ಕ್ಯಾಲೆಂಡರ್ ಮೀಟಿಂಗ್ ರಿಕ್ವೆಸ್ಟ್ ಮೇಲ್ ಕಳಿ ಸಿದರೆ ಸಾಕು. ದೊಡ್ಡ ಹುದ್ದೆಯಲ್ಲಿ ಇರೋರನ್ನ ಭೇಟಿಯಾಗಬೇಕಾದರೆ  ಅವರ ಕಚೇರಿ ಮುಂದೆ ಕಾದು  ಕಾದು  ಸುಸ್ತಾಗಿ, ಇಪ್ಪತ್ತು ಸಲ ಎಡತಾಕುವ ಚಾಳಿ ನಮ್ಮ ಸಾಫ್ಟ್ ಲೋಕದಲ್ಲಿಲ್ಲ!


ಇನ್ನು ಕೆಲಸದ ವಿಷಯಕ್ಕೆ ಬಂದರೆ ಪ್ರತಿಯೊಬ್ಬರಿಗೂ ಒಬ್ಬೊಬ್ಬ ರಿಪೋರ್ಟಿಂಗ್ ಮ್ಯಾನೇಜರ್ ಇರೋದರಿಂದ ಅವರಿಗೆ ನಾವು ರಿಪೋರ್ಟ್ ಮಾಡಬೇಕು. ಸರಿ ಮತ್ತು ತಪ್ಪು ಎನಿಸಿದ ವಿಷಯಗಳನ್ನು ಮುಕ್ತವಾಗಿ ಮಾತಾಡಲು ನಮಗೆ ಅವಕಾಶವಿರುತ್ತದೆ. ಇದರ ಜೊತೆಗೆ ನಾವು ಮಾಡುತ್ತಿರುವ ಪ್ರಾಜೆಕ್ಟ್ ನ ಕೆಲಸದ ಕುರಿತು ಪ್ರತಿ ಹಂತದ ಮಾಹಿತಿ ಯನ್ನು ಕ್ಲೈಂಟ್ ಗೆ ತಿಳಿಸುವ ವ್ಯವಸ್ಥೆ ಸಾಫ್ಟ್ ಲೋಕದಲ್ಲಿ ಇದೆ. ಇದರಲ್ಲಿ ಯಾವ್ಯಾವ ರಿಸೋರ್ಸ್ ಎಷ್ಟು ಘಂಟೆಗಳ ಕಾಲ ಕೆಲಸ ಮಾಡಿದ್ದಾರೆ ಅನ್ನೋದನ್ನ ಕ್ಲೈಂಟ್ ರಿಪೋರ್ಟ್ ಕೊದಬೆಕು. ಇದರ ಆಧಾರವಾಗಿಯೇ ಕಂಪನಿ ಯವರು ಕ್ಲೈಂಟ್ ಗೆ  ಬಿಲ್ಲಿಂಗ್ ಮಾಡುತ್ತಾರೆ.


ಸಾಫ್ಟ್ ಲೋಕದ ಕಂಪನಿ ಯಾವುದೇ ಇರಲಿ, ವರ್ಷಕ್ಕೆ ಹತ್ತು  ದಿನ ಮಾತ್ರ ಸಾರ್ವತ್ರಿಕ ರಜೆ ಇರುತ್ತದೆ ( ನಮಗೆ ಸಿಗುವ ವೀಕೆಂಡ್ ಗಳನ್ನು  ಹೊರತು ಪಡಿಸಿ). ಇನ್ನು ಕಂಪನಿ ಒಳಗೆ ಏನೇನು facilities ಇರುತ್ತವೆ ಅನ್ನೋ ವಿಷಯಕ್ಕೆ ಬಂದರೆ, ಹೆಚ್ಚು - ಕಡಿಮೆ ಪ್ರತಿಯೊಂದು ಕಂಪನಿ ಯಲ್ಲೂ Canteen, Transport, Gym, Recreation center, Auditorium, Library, First Aid Health Care Center, Coffee-Tea center, ಗಳು ಇದ್ದೆ ಇರುತ್ತವೆ.


ಪ್ರತಿ ಪ್ರಾಜೆಕ್ಟ್ ನಿಂದ ವರ್ಷಕ್ಕೊಂದು ಸಲ ವಾದರೂ ಔಟಿಂಗ್ ಅಂತ ಹೊರಗೆ ಹೊಗುತ್ತಾರೆ. ಅದು ಬೆಂಗಳೂರಿನ ಸುತ್ತ ಮುತ್ತ ಇರಬಹುದು ಅಥವಾ ಬೆಂಗಳೂರಿನಿಂದ ಹೊರಗೆ ದೂರವೂ ಇರಬಹುದು. ಎಷ್ಟು ದಿನ ಔಟಿಂಗ್ ಹೋಗಬಹುದು ಅನ್ನೋದನ್ನ ಕಂಪನಿ ಕೊಡುವ ಬಜೆಟ್ ಮೇಲೆ ನಿರ್ಧಾರ ಮಾಡುತ್ತಾರೆ, ಎಲ್ಲಿಗೆ ಹೋಗಬೇಕು ಅನ್ನೋದನ್ನ ಪ್ರಾಜೆಕ್ಟ್ ಟೀಂ ಮೆಂಬರ್ಸ್ ಅಭಿಪ್ರಾಯ ಕೇಳಿ ಕೊನೆಗೊಂದು ನಿರ್ಧಾರಕ್ಕೆ ಬರುತ್ತಾರೆ.


ಸಾಫ್ಟ್ ಕಂಪನಿ ಗಳಲ್ಲಿ Trekking team, Cultural team, Sports team ಅಂತ ಇರುತ್ತವೆ. ಆದರೆ ಇದು ಎಲ್ಲ ಕಂಪನಿ ಗಳಲ್ಲಿಯೂ ಇರಬೇಕು ಅಂತ ರೂಲೇನು ಇಲ್ಲ. ಇನ್ನು ಒಂದು ಮುಖ್ಯ ವಿಷಯವೆಂದರೆ ಕೆಲವೊಂದು ಸಾಫ್ಟ್ ಕಂಪೆನಿಗಳಲ್ಲಿ ಪ್ರತಿಯೊಬ್ಬ ಎಂಪ್ಲೋಯೀ ಗೂನೂ ಸಮಾಜ ಸೇವೆಗಾಗಿ ವರ್ಷಕ್ಕೆ ಇಂತಿಷ್ಟು ರಜೆಯನ್ನು ಕೊಡುತ್ತಾರೆ. ಇದನ್ನ ಇಂಗ್ಲಿಷ್ ನಲ್ಲಿ       “Corporate Social Responsibility (CSR)” ಅಂತ ಹೇಳುತ್ತಾರೆ. ಎಂಪ್ಲೋಯೀ ಗಳು ಈ ರಜೆಯನ್ನ ಯಾವುದಾದರು ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಳ್ಳಬಹುದು.


ಇನ್ನೊಂದು ಮುಖ್ಯ ವಿಷಯವೆಂದರೆ ಒಂದು ಕಂಪನಿ ಯಿಂದ ರಿಸೈನ್ ಮಾಡಿದಾಗ, ಅಥವಾ ರಿಟೈರ್ ಆದಾಗ ನಮಗೆ ಬರಬೇಕಾದ ಎಲ್ಲ ರೀತಿಯ ಹಣವನ್ನು ಒಂದು ಪೈಸೆಯೂ ಆಕಡೆ - ಈಕಡೆ ಆಗದಂತೆ ನಮ್ಮ ಅಡ್ರೆಸ್ ಗೆ ಬಂದು ಬೀಳುತ್ತದೆ. ನಮ್ಮ ಹಣಕ್ಕೋಸ್ಕರ ಯಾರ್ಯಾರಿಗೋ ಕಾಲು ಹಿಡಿಯುವ ಅಥವಾ ಲಂಚ ಕೊಡುವ  ಅವಶ್ಯಕತೆ ಸಾಫ್ಟ್ ಲೋಕದಲ್ಲಿ ಇಲ್ಲ.
ಅಷ್ಟೊಂದು ಅಚ್ಚು ಕಟ್ಟು ನಮ್ಮ ಜೀವನ.


ಸ್ವಲ್ಪ ವಿಚಿತ್ರ ಮತ್ತು ಆಶ್ಚರ್ಯ ವೆನಿಸಿದರು ಕೆಲವೊಂದು ಸಾಫ್ಟ್ ಕಂಪನಿ ಗಳಲ್ಲಿ ಊಟವಾದ ಮೇಲೆ ಹಣ್ಣು - ಹಂಪಲು ಗಳನ್ನೂ, ಸಂಜೆ ಹೊತ್ತು ಬ್ರೆಡ್, ಬಿಸ್ಕೆಟ್, ಕೇಕ್ ಗಳನ್ನೂ, ಅಷ್ಟೇ ಏಕೆ ದ್ರಾಕ್ಷಿ ಗೋಡಂಬಿ ಗಳನ್ನೂ ಕೊಡುವ ಪರಿಪಾಟವೂ ಇದೆ. ಸಾಫ್ಟ್ ಲೋಕದಲ್ಲಿ ನಮ್ಮ ಹುದ್ದೆ ಹೆಚ್ಚುತ್ತಾ ಹೋದಂತೆ ನಮಗೆ ಸಿಗುವ ಅನೇಕ ಸೌಲಭ್ಯಗಳು ಸಹ ಹೆಚ್ಚುತ್ತಾ ಹೋಗುತ್ತವೆ.


ಇನ್ನು ಸಾಫ್ಟ್ ಲೋಕದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಏನು ಕಡಿಮೆ ಯಿಲ್ಲ. ರಾಜ್ಯೋತ್ಸವ, ಸ್ವತಂತ್ರ ದಿನಾಚರಣೆ, ದಸರಾ, ದೀಪಾವಳಿ, ಹೋಳಿ ಹಬ್ಬ, ಓಣಂ, ಕ್ರಿಸ್ ಮಸ್, ಪೊಂಗಲ್ ಎಲ್ಲವನ್ನು ಎಲ್ಲರೂ ಸೇರಿ ಆಚರಿಸುತ್ತಾರೆ. ಒಟ್ನಲ್ಲಿ ಇರುವ ಕೆಲಸವನ್ನು ಸರಿಯಾಗಿ ಮಾಡಿಕೊಂಡು ಹೋದರೆ ಸಾಫ್ಟ್ ಲೋಕ ಒಂದು ರೀತಿಯ ಸ್ವರ್ಗವೇ ಸರಿ.

ಈ ವಾರದ ಬಿಲ್ಡ್ ಲೇಬಲ್ : ಒಂದು ವೇಳೆ ನೀವು ಕೆಲಸ ಮಾಡುತ್ತಿರುವ ಕಂಪನಿ ಯಲ್ಲಿ ಮೇಲೆ ಹೇಳಿದ ಯಾವುದೇ ರೀತಿಯ ಸೌಲಭ್ಯ ಗಳು ಸಿಗದೇ ಇದ್ದಲ್ಲಿ  ಚಿಂತೆ ಬೇಡ;  ತಿಂಗಳ ಕೊನೆಗೆ ಸಂಬಳ ಮಾತ್ರ ಗ್ಯಾರಂಟಿ ಸಿಗುತ್ತದೆ !!

Wednesday, May 14, 2014

ಅಂಕಣ ೧೮ : ಸಾಫ್ಟ್ ಲಾಂಗ್ ವೀಕೆಂಡ್


ಮೊಟ್ಟ ಮೊದಲನೆಯದಾಗಿ “ವೀಕೆಂಡ್ “ ಅಂದರೆ ಸಾಫ್ಟ್ ಲೋಕದಲ್ಲಿ  “ಎರಡು ದಿನದ ರಜೆಯ ಮಜಾ” ಅಂತ ಅರ್ಥ.
ವಾರದ ಕೊನೆಯಲ್ಲಿ ಸಿಗುವ ಎರಡು ದಿನ “ಶನಿವಾರ” ಮತ್ತು “ ಭಾನುವಾರ” ನಮ್ಮ ಪಾಲಿಗೆ ಒಂದು ರೀತಿಯ ರೆಫ್ರೆಶರ್  ಇದ್ದ ಹಾಗೆ. "ವೀಕೆಂಡ್” ಜೊತೆಗೆ ಇನ್ನೊಂದು ಪದವೂ ಇದೆ, ಅದು “ ಲಾಂಗ್ ವೀಕೆಂಡ್” ಅಂತ. ಅಂದರೆ ಶನಿವಾರ ಮತ್ತು ಭಾನುವಾರದ ಜೊತೆಗೆ ಇನ್ನೊದು ದಿನ ( ಶುಕ್ರವಾರ ಅಥವಾ ಸೋಮವಾರ) ರಜಾ  ಸಿಕ್ಕರೆ ನಮ್ಮ ಪಾಲಿಗೆ ಅದು “ ಲಾಂಗ್ ವೀಕೆಂಡ್” ಆಗುತ್ತೆ.



ಈ ಲಾಂಗ್ ವೀಕೆಂಡ್ ಸೃಷ್ಟಿಸೋ ಗದ್ದಲ  ಅಷ್ಟು ಇಷ್ಟು ಅಲ್ಲ! ನಿಮಗೆ ಲಾಂಗ್ ವೀಕೆಂಡ್ ಬಗ್ಗೆ ತಿಳ್ಕೋ ಬೇಕು ಅಂದರೆ ಒಂದು ಕೆಲಸ ಮಾಡಿ, ಇದು ಶುರುವಾಗುವುದಕ್ಕಿಂತ ಹಿಂದಿನ ದಿನ ರಾತ್ರಿ ಒಂದು ಸಲ ಮೆಜಸ್ಟಿಕ್ ಗೆ ವಿಸಿಟ್ ಕೊಟ್ಟು ಬನ್ನಿ ನಿಮಗೆ ಗೊತ್ತಾಗುತ್ತೆ ಇದರ ಪ್ರಭಾವ. ಜನ ಜಂಗುಳಿ. ಅಷ್ಟೇ ಅಲ್ಲ ಮರುದಿನ ಬೆಳಿಗ್ಗೆ ೮ ಗಂಟೆಯ ಸುಮಾರಿಗೆ ತುಮಕೂರು ಮತ್ತು ಮೈಸೂರು ರೋಡ್ ನಲ್ಲಿರೋ ಟೋಲ್ ಗೇಟ್ ಬಳಿ  ಲಾಂಗ್ ಕ್ಯೂ  ನಲ್ಲಿ ನಿಂತಿರುವ ವೆಹಿಕಲ್ಸ್ ನೋಡಿದರೆ ನಿಮಗೆ ಲಾಂಗ್ ವೀಕೆಂಡ್ ನ ಅರ್ಥ ಸಂಪೂರ್ಣವಾಗಿ ಆಗುತ್ತದೆ.

ಒಂದು ವೇಳೆ ಯಾವುದಾದರೂ ಹಬ್ಬ ಹರಿದಿನಗಳು ಸೋಮವಾರ ಅಥವಾ ಶುಕ್ರವಾರದ ಬದಲಿಗೆ ಮಂಗಳ ವಾರ ಅಥವಾ ಗುರುವಾರ ಬಂತೆಂದರೆ ಸಾಕು, ಸಾಫ್ಟ್ ಲೋಕದ ಮ್ಯಾನೇಜರ್ ಗಳು ತಕ್ಷಣ ಜಾಗೃತ ರಾಗಿ ಬಿಡುತ್ತಾರೆ. ಯಾಕಂದರೆ ಪ್ರಾಜೆಕ್ಟ್ ನಲ್ಲಿ ಇರೋರೆಲ್ಲ ಸೋಮವಾರ/ ಶುಕ್ರವಾರ ರಜೆ ಹಾಕಿ ಒಟ್ಟಿಗೆ ನಾಲ್ಕು ದಿನ ಜೈ ಅಂದು ಬಿಡುತ್ತಾರೆ. ಅದಕ್ಕೆ ಮ್ಯಾನೇಜರ್ ಗಳು ವಾರದ ಮುಂಚೆನೆ ಯಾರ್ಯಾರು ಊರಿಗೆ ಹೋಗುತ್ತಿದ್ದಾರೆ ಅನ್ನೋದನ್ನ ಒಂದು ರೌಂಡು ಸರ್ವೇ ಮಾಡಿ ತಮ್ಮ ಎಕ್ಸೆಲ್ ಶೀಟ್ ಅನ್ನು ಅಪ್ - ಡೆಟ್  ಮಾಡಿಬಿಟ್ಟಿರುತ್ತಾರೆ.  ಇನ್ನು ಕೆಲವರಂತೂ ಬಿಡಿ, ಮ್ಯಾನೇಜರ್ ಗಳನ್ನೂ ಮೆಚ್ಚಿ ಸುವುದಕ್ಕೊಸ್ಕರ ಮಾಡಿಸಿದ ರಿಸರ್ವಶನ್ ಕ್ಯಾನ್ಸೆಲ್ ಮಾಡಿಸಿ ಕೆಲಸಕ್ಕೆ ಬಂದು ಶಹಬ್ಬಾಸ್ ಗಿರಿ ತೊಗೊಳ್ಳುತ್ತಾರೆ.


ಸಾಧಾರಣ ವಾಗಿ ವೀಕೆಂಡ್ ಬಂತೆಂದರೆ ಸಾಫ್ಟ್ ಲೋಕದಲ್ಲಿ ಬೆಂಗಳೂರಿನಿಂದ ಶುಕ್ರವಾರ ಸಂಜೆ ಮೈಸೂರು, ತುಮಕೂರು, ಚೆನ್ನೈ, ಚಿತ್ತೂರು, ಹೋಗುವವರ ಸಂಖ್ಯೆ ಜಾಸ್ತಿ. ಒಂದು ವೇಳೆ ಮೂರು ದಿನ ರಜದ ಲಾಂಗ್ ವೀಕೆಂಡ್  ಬಂತೆಂದರೆ ಇವರ ಜೊತೆ ರಾಯಚೂರು, ಗುಲ್ಬರ್ಗ, ಬಿಜಾಪುರು, ಕರ್ನೂಲು, ಕೊಯಿಮ್ಬತ್ತುರು ಜನರು ಸಹ ತಮ್ಮ ತಮ್ಮ ಊರಿಗೆ ಹೋಗಲು ಎದ್ದು ಕುಳಿತು ಬಿಡುತ್ತಾರೆ. ಇನ್ನೇನಾದರೂ ನಾಲ್ಕು ದಿನದ ರಜ ಸಿಕ್ಕಿತೆಂದರೆ ಸಾಕು, ಇರುವ ಇಷ್ಟು ಜನರ ಜೊತೆಗೆ ಉತ್ತರ ಭಾರತದವರು
(ಬೆಂಗಳೂರಿನಲ್ಲಿರುವವರು) ತಮ್ಮ ಫ್ಯಾಮಿಲಿ ಜೊತೆ ಕರ್ನಾಟಕದ ದಲ್ಲಿರುವ ಮತ್ತು ಅಕ್ಕ ಪಕ್ಕ ರಾಜ್ಯದಲ್ಲಿರುವ ಊರುಗಳನ್ನ ನೋಡಲು ಹೊರಟುಬಿಡುತ್ತಾರೆ. ಅದಕ್ಕೆನೆ ಲಾಂಗ್ ವೀಕೆಂಡ್ ನ ಹಿಂದಿನ ದಿನ ರಾತ್ರಿ ಮತ್ತು ಮರುದಿನ ಬೆಳಿಗ್ಗೆ ಅಷ್ಟೊಂದು ಟ್ರಾಫಿಕ್ ಇರುತ್ತೆ.


ಸಾಮಾನ್ಯವಾಗಿ ಉತ್ತರ ಭಾರತದವರು ದಸರಾ ಮತ್ತು ದೀಪಾವಳಿಗೆ ಹೋಗುವುದರಿಂದ ಅವರು ಆ ಸಮಯದಲ್ಲಿ  ೨ ವಾರ ರಜೆ ತಗೊಂಡು  ಬಿಡುತ್ತಾರೆ. ಒಂದು ವೇಳೆ ಉತ್ತರ ಭಾರತದವರು ಮೂರು ವಾರಗಳ ರಜೆ ತಗೊಂಡಿದಾರೆ ಅಂದರೆ ಒಂದು ತನ್ನದೇ ಮದುವೆಗೆ ಹೋಗಿದಾನೆ ಅಂತ ಅರ್ಥ, ಇಲ್ಲ ಅಂದ್ರೆ ತನ್ನ ಊರಿನಲ್ಲಿ ಕೆಲಸ ಹುಡುಕೋಕೆ ಹೋಗಿದಾನೆ ಮತ್ತು ವಾಪಸು ಬಂದ ತಕ್ಷಣ ರಿಸೈನ್ ಮಾಡ್ತಾನೆ ಅಂತ ಸಾಫ್ಟ್ ಲೋಕದಲ್ಲಿ ಮಾತು ಚಾಲ್ತಿಯಲ್ಲಿದೆ.


ವಾರ ಪೂರ್ತಿ ಕಂಪ್ಯೂಟರ್ ನ ಒಳಗೆ ತಲೆಯಿಟ್ಟು ಕೂತಿರುವ ದೇಹಕ್ಕೆ ಒಂದು ಮೂರ್ನಾಕು ದಿನವಾದರೂ ಹಾಯಾಗಿ ಬೆಂಗಳೂರಿಂದ ಹೊರಗೆ ಹೋಗಿ ಬರುವ ಅಭ್ಯಾಸ ಒಳ್ಳೆಯದೇ. ಪ್ರತಿ ದಿನವೂ ಒಂದು ಕೋಟಿಯಷ್ಟು ಜನರ ಭಾರ ಹೊರುವ ಬೆಂಗಳೂರಿಗೂ ಸಹ ಈ ಥರದ ಲಾಂಗ್ ವೀಕೆಂಡ್ ನಲ್ಲಿ ಒಂದಿಷ್ಟು ಸಾವಿರ ಜನರ ಭಾರ ಕಡಿಮೆಯಾಗಿ ಅದು ಕೂಡ ನಿಟ್ಟುಸಿರು ಬಿಡುತ್ತೆ ( ಆದರೆ ಆ ಭಾರ ಅಕ್ಕ - ಪಕ್ಕ ದ ನಗರಗಳಾದ ತುಮಕೂರು, ಮೈಸೂರು , ಚೆನ್ನೈ , ಮುಂತಾದ ಕಡೆ ಹೋಗಿರುತ್ತೆ )
ಲಾಂಗ್ ವೀಕೆಂಡ್ ನಲ್ಲಿ ಒಂದು ಸಲ ನೀವು ಬೆಂಗಳೂರನ್ನ ನಿಮ್ಮ ವೆಹಿಕಲ್ ನಲ್ಲಿ ಸುತ್ತು ಹಾಕಿ. ಟ್ರಾಫಿಕ್ ತಲೆ ಬಿಸಿಯೇ ಇರುವುದಿಲ್ಲ. ಎಲ್ಲೆಂದರಲ್ಲಿ ಅಡ್ಡಾಡಬಹುದು. ಬೆಂಗಳೂರು ಹಗುರ ವಾಗಿರುತ್ತೆ,  ಒಂದು ಥರ ಮನಸಿನ ಭಾರ ಕಡಿಮೆಯಾದಂತೆ.

ಈ ವಾರದ ಬಿಲ್ಡ್ ಲೇಬಲ್ : ವೀಕೆಂಡ್ ಲಾಂಗ್ ಇರಲಿ ಶಾರ್ಟ್ ಇರಲಿ, ಸಾಫ್ಟ್ ಲೋಕದ ಜನ ಬೆಂಗಳೂರಿನ ಹೊರಗಿರಲಿ, ಒಳಗಿರಲಿ. ಅವರ ಬ್ಯಾಗ ನಲ್ಲಿ ಮಾತ್ರ ಒಂದು ಲ್ಯಾಪ್-ಟಾಪ್, ಕ್ಯಾಮೆರಾ, ತ್ರೀ ಜಿ ಇಂಟರ್ನೆಟ್ ಸೌಲಭ್ಯದ ಮೊಬೈಲ್, ಹ್ಯಾಂಡ್ ಫ್ರೀ ಇದ್ದೆ ಇರುತ್ತೆ. ಇಷ್ಟು ಇಲ್ಲ ದಿದ್ದರೆ ಅದು ಸಾಫ್ಟ್ ಲೋಕಕ್ಕೆ ಅವಮಾನ!

Tuesday, May 6, 2014

ಅಂಕಣ ೧೭: ಸಾಫ್ಟ್ ಇಂಗ್ಲಿಷ್

ಖಂಡಿತವಾಗಲೂ ಸಾಫ್ಟ್ ವೇರ್ ಅಂದ್ರೇನೆ ಇಂಗ್ಲಿಷ್. ಸಾಫ್ಟ್ ಲೋಕದಲ್ಲಿ ಎಂಟ್ರಿ ಕೊಡಬೇಕು ಅಂದರೆ ಮೊದಲು ಇಂಗ್ಲಿಷ್ ಬರೆಬೇಕು,  ಮತ್ತು ಅದನ್ನು ಅಷ್ಟೇ ಚೆನ್ನಾಗಿ ಕಮ್ಯುನಿಕೇಟ್  ಮಾಡಲು ಬರಬೇಕು ಸಹ. ಇಲ್ಲ ಅಂದ್ರೆ ಸಾಫ್ಟ್ ಲೋಕದ ಒಳಗೆ ಎಂಟ್ರಿ ಕೊಡುವುದು ಕಷ್ಟ. ಅದಕ್ಕೆ ತಾನೇ ನಾವೆಲ್ಲರೂ ಎದ್ದು - ಬಿದ್ದು ಇಂಗ್ಲಿಷಿನ ಕಡೆಗೆ ಓಡು ತ್ತಿರುವುದು?

ಜಾಗತಿಕ ಮಟ್ಟದಲ್ಲಿ ನಡೆಯುವ ದೊಡ್ಡ ದೊಡ್ಡ ಬಿಸಿನೆಸ್ ಗಳು, ಅಲ್ಲಿರುವ ಸ್ಸೋತು ಬೂಟಿನ ಜನ.  ಇಂತಹ ಕಂಪನಿ ಯೊಳಗೆ ಯಾವಾಗಲು ಕಂಪ್ಯೂಟರ್ ನ ಮುಂದೆ ಕುಳಿತು ಕೆಲಸ ಮಾಡುವ ಜನರಿಗೆ ಇಂಗ್ಲಿಷ್ ಬರದಿದ್ದರೆ ಹ್ಯಾಗೆ?  ಇಂಗ್ಲಿಷ್ ಅನ್ನೋ ಭಾಷೆ ಇವರೆಲ್ಲರ ನಾಲಗೆಯ ತುದಿ ಮೇಲೆ ಇರುತ್ತೆ. ಇವೆಲ್ಲ ಕಲ್ಪನೆಗಳು ಹೊರಗಿನ ಲೋಕದವರಿಗೆ ನಮ್ಮ ಲೋಕದ ಬಗ್ಗೆ ಇರುತ್ತವೆ.
ಈ ಸಾಫ್ಟ್ ಲೋಕ ಮತ್ತು ಇಂಗ್ಲಿಷ್ ಇವೆರಡನ್ನೂ ನಾವು ಒಳಗಿನಿಂದ ನೋಡಿದಾಗೆ ಹೇಗಿರುತ್ತೆ? ಅನ್ನೋದೇ ಈ ವಾರದ ಅಂಕಣ.



ಸಾಮಾನ್ಯವಾಗಿ ನಾವು ಎಷ್ಟೇ ಚೆನ್ನಾಗಿ ಇಂಗ್ಲಿಷ್ ನಲ್ಲಿ ಮಾತಾಡುತ್ತಿದ್ದರೂ ನಮ್ಮ ಮಾತೃ ಭಾಷೆಯ ಪ್ರಭಾವ ನಾವು ಮಾತಾಡುವ ಇಂಗ್ಲಿಷಿನ ಮೇಲೆ ಇರುತ್ತೆ ಅನ್ನೋದನ್ನ ನಾವು ಮರೆಯ ಬಾರದು. ಅದಿರಲಿ ಒಂದಿಷ್ಟು ನಮ್ಮ ಸಾಫ್ಟ್ ಲೋಕದ “ ದಿನ ಬಳಕೆಯ” ಇಂಗ್ಲಿಷನ್ನ ನೋಡೋಣ!

" hey that machine is to be formatted right? it is donnaa?"
" e v v a r i time this is only problem, evvari deadline we missu, evvari time this is the area slippage will occru"
" what work yaa.. just going on"
" where, wheru, where it is haapening?"
" oh.. that bug is fixedaa?"
" why rohit is still not in today, he is on leavaa?"

ಇದರಿಂದ ಏನು ಅರ್ಥ ಆಗುತ್ತೆ ? 
ಸ್ವಾಮಿ ನಾವು ಎಷ್ಟೇ ಪ್ರಯತ್ನ ಪಟ್ಟರು ನಮ್ಮ ಮಾತೃ ಭಾಷೆಯ ಪರಿಧಿ ಮತ್ತು ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಕಷ್ಟ . ಅದು ಬೈ ಡೀಫಾಲ್ಟ್ ಬಂದು ಬಿಡುತ್ತೆ.  ಸಾಮಾನ್ಯವಾಗಿ ಸಾಫ್ಟ್ ಲೋಕದ ಬಹಳಷ್ಟು ಜನ ಮಾತಾಡೋದು ಇಂಡಿಯನ್ ಇಂಗ್ಲಿಷ್ ವರ್ಷನ್. ನಾವು ಮಾತಾಡೋ ರೀತಿಯಲ್ಲೇ, “ ಮಾತಾಡೊ ವ್ಯಕ್ತಿ, ಕನ್ನಡಿಗ, ತೆಲುಗು ಭಾಷಿಕ, ತಮಿಳು ಭಾಷಿಕ, ಬಿಹಾರಿ ಭಾಷಿಕ, ಉತ್ತರ ಭಾರತೀಯ, ದಕ್ಷಿಣ ಭಾರತೀಯ ಅಂತೆಲ್ಲ ಹೇಳಿ ಬಿಡಬಹುದು”.

ಪ್ರಾಜೆಕ್ಟ್ ಮೀಟಿಂಗ್  ಇಂಗ್ಲಿಷ್ ನಲ್ಲಿ ನಡೆದರೂ ಸಹ ಮಾತಿನ ಮಧ್ಯೆ ಮಧ್ಯೆ ; “ ಅಚ್ಚಾ, ಟೀಕ್ ಹೈ , ಹೈ  ಕಿ ನೈ” ಅಂತ ಉತ್ತರ ಭಾರತೀಯರು ಹೇಳಿದರೆ, “ ಆಮ, ವಾ, ಚುಮ್ಮಾ.. “ ಅಂತ ತಮಿಳು ಭಾಷಿಕರು ಹೇಳುತ್ತಾರೆ. ಇನ್ನು ಆಂಧ್ರ ದವರು “ ಅಂಟೆ, ಅನಿ” ಅನ್ನುವ ಶಬ್ದವನ್ನು  ಬಳಸುತ್ತಾರೆ. ಬಳಸುತ್ತಾರೆ ಅನ್ನೋದಕ್ಕಿಂತ ಆ ಪದಗಳು ತಾವಾಗಿಯೇ ಬಾಯಿಂದ ಬಂದು ಬಿಡುತ್ತವೆ.
ಇನ್ನು ಕನ್ನಡ ಪದಗಳು ಮಧ್ಯೆ ಮಧ್ಯೆ ತೋರುತ್ತಿದ್ದರೂ ಅವುಗಳನ್ನು ಮಾತಾನಾಡುವುದನ್ನು  ಅವಮಾನವೆಂದು ಭಾವಿಸಿ, ನಾಲಗೆಯಲ್ಲಿಯೇ ಅದುಮಿ  ಹಿಡಿದು ಇಂಗ್ಲಿಷ್ ಪದಕ್ಕಾಗಿ ಹುಡುಕಾಟ ಶುರು ಮಾಡಿ ಬಿಡುತ್ತಾರೆ ನಮ್ಮ ಕನ್ನಡಿಗರು.
ಹಾಗಂತ ಈ ಮಾತು ಎಲ್ಲ ಕನ್ನಡಿಗರಿಗೂ ಅನ್ವಯಿಸುತ್ತದೆ ಅಂತ ಅಲ್ಲ, ಎಷ್ಟೊಂದು ಜನ ತಮ್ಮ ದಿನ ನಿತ್ಯದ ಸಾಫ್ಟ್  ಲೋಕದ ಕೆಲಸದಲ್ಲಿ, “ ಅಂದ್ರೆ, ಬೇಡ, ಇಲ್ಲ , ಹೌದು, ಸರಿ “ ಪದಗಳನ್ನ ಬಳಸುತ್ತಾರೆ. ನಾನು ತುಂಬಾ ಕೇಳಿರುವ ಇಂಗ್ಲಿಷ್ ಮಧ್ಯೆ ಮಧ್ಯೆ ತೂರಿ ಕೊಂಡು ಬರುವ ಕನ್ನಡ ಪದವೆಂದರೆ: “ಎಂಥದದು”.
ಅಫ್ ಕೋರ್ಸ್  ಮಂಗಳೂರು ಕಡೆಯವರು!!

ನಾವೆಷ್ಟೇ ಇಂಗ್ಲಿಷ್ ನಲ್ಲಿ ಪಳಗಿದರೂ ನಮ್ಮ ಮಾತೃ ಭಾಷೆಯ ಪ್ರಭಾವ ಇಂಗ್ಲಿಷ್ ನ ಮೇಲೆ ಇದ್ದೆ ಇರುತ್ತದೆ. ನನ್ನ ವೃತ್ತಿ
ಜೀವನದಲ್ಲಿ ಒಂದು ಸಲ ಹೀಗಾಯ್ತು : ಹೆಸರು ರಾಜೇಶ್ ಅಂದು ಕೊಳ್ಳೋಣ.
Test Manager : " Raajesh yesterday we sent few machines for formating right? what is the status? do you know any thing? "
Raajesh : " i don know status Ganesh"
Test Manager: " were you in the lab yesterday?"
Raajesh : " yes, i was in the lab but..., i don know who who did what what"

“ಯಾರ್ಯಾರು ಏನೇನು ಮಾಡಿದರು ಅನ್ನೋದು ನನಗೆ ಗೊತ್ತಿಲ್ಲ” ಅನ್ನೋದನ್ನೇ ಯಥಾವತ್ತಾಗಿ ಇಂಗ್ಲಿಷ್ ಗೆ ಕನ್ವರ್ಟ್ ಮಾಡಿದ್ದ ನಮ್ಮ ರಾಜೇಶ್. ಹಾಗಂತ ಇದು ತಪ್ಪು ಅಂತ ನಾನು ಇಲ್ಲ ಹೇಳುತ್ತಿಲ್ಲ. ಸಾಫ್ಟ್ ಲೋಕದಲ್ಲಿ ನಾವು ಹೇಳುವ ಮಾತನ್ನು ಕರೆಕ್ಟ್ ಆಗಿ ಹೇಳಿದರೆ ಸಾಕು, ಭಾಷೆ ಕಟ್ಕೊಂಡು ಮಾಡೋದಾದ್ರೂ ಏನಿದೆ ಹೇಳಿ ? ಅನ್ನೋ ಮಂದಿಗೇನು ಕಡಿಮೆ ಯಿಲ್ಲ.
ಎಷ್ಟೊಂದು ಸಲ ನಡೆಯುವ ಮೀಟಿಂಗ್ ನಲ್ಲಿ ನಮ್ಮ ಇಂಗ್ಲಿಷ್ ನಲ್ಲಿ ಗ್ರಾಮರ್ ತಪ್ಪಿದ್ದರೂ ಸಹ ಒಬ್ಬರಿಗೊಬ್ಬರು ಅಡ್ಜಸ್ಟ್ ಮಾಡಿಕೊಂಡು ಬಿಡುತ್ತಾರೆ. ಒಂದೊಂದು ಸಲ ನಮ್ಮ ನೇಟಿವಿಟಿ ಧಾಟಿಯಲ್ಲೇ ನಮ್ಮ ಮಾತನ್ನ ಕಮ್ಯುನಿಕೇಟ್  ಮಾಡಿಬಿಡುತ್ತೇವೆ.

ಒಮ್ಮೊಮ್ಮೆ ಈ ಥರದ ತಮಾಷೆ ಸಂಗತಿಗಳು ಸಹ ನಡೆಯುತ್ತವೆ. ಒಂದು ಪ್ರಾಜೆಕ್ಟ್ ಟೀಂ ನಲ್ಲಿ ಏನಾದ್ರೂ ಒಂದೇ ರಾಜ್ಯದವರು ಇದ್ದರೆ, ಮೀಟಿಂಗ್ ಪೂರ ಅವರ ಮಾತೃ ಭಾಷೆಯಲ್ಲಿಯೇ ಮುಗಿದು ಹೋಗಿ ಬಿಟ್ಟಿರುತ್ತದೆ. ಮೀಟಿಂಗ್ ಸಂಮರಿಯನ್ನ ಕ್ಲೈಂಟ್ ಗೆ ಅಪ್ - ಡೆಟ್  ಕೊಡಬೇಕಾದಾಗ ಮಾತ್ರ ಇಂಗ್ಲಿಷ್ ನ್ನು ಬಳಸುತ್ತಾರೆ. ಆದರೆ ಇದಕ್ಕೆ ನಮ್ಮ ಕನ್ನಡದವರು ಮಾತ್ರ ಒಂದು ಅಪವಾದ. ಈಡಿ ಪ್ರಾಜೆಕ್ಟ್ ಟೀಂ ನಲ್ಲಿ ಕನ್ನಡದವರೇ ಇದ್ದರೂ meeting ನಡೆಯುವುದು ಮಾತ್ರ ಅಪ್ಪಟ ಇಂಗ್ಲಿಷ್ ನಲ್ಲಿ !

ಒಂದೊಂದು ಸಲ ಟೆಕ್ನಿಕಲ್ ಆಗಿ ತುಂಬಾ ಸ್ಟ್ರಾಂಗ್ ಆಗಿರೋರು ಇಂಗ್ಲಿಷ್ ನಲ್ಲಿ ಮುಗ್ಗರಿಸಿರುತ್ತಾರೆ, ಆ ಸಮಯದಲ್ಲಿ  ಮ್ಯಾನೇಜರ್ ಗಳು ಅವರ ಸಹಾಯಕ್ಕೆ ಧಾವಿಸಿ, ಕ್ಲೈಂಟ್ ಗೆ ಅವರ ಅಪ್ ಡೆಟ್  ಅಣ್ಣ ಅರ್ಥ ಆಗೋ ರೀತಿಯಲ್ಲಿ ಕೊಟ್ಟಿರುತ್ತಾರೆ. ಇಂತಹ ವಿಷಯ ದಲ್ಲಿ ಮ್ಯಾನೇಜರ್ ಗಳ ಸಮಯ ಪ್ರಜ್ಞೆ ಮೆಚ್ಚಿಕೊಳ್ಳಲೇಬೇಕು!

ಈ ವಾರದ ಬಿಲ್ಡ್ ಲೇಬಲ್ : ನಿಮಗಿದು ಗೊತ್ತಾ ? ಮಾತೃ ಭಾಷೆಯ ಪ್ರಭಾವದಿಂದ 
“ಸುಮ್ - ಸುಮ್ನೆ” ಪದ ಇಂಗ್ಲಿಷ್ ನಲ್ಲಿ “sim-simply “; “ಬೇರೆ ಬೇರೆ” ಪದ ಇಂಗ್ಲಿಷ್ ನಲ್ಲಿ “sep-separately “ ಆಗಿ ಹೋಗಿದೆ!