Wednesday, April 30, 2014

ಅಂಕಣ ೧೬ : ಸಾಫ್ಟ್ ಕಾಫೀ ಟೈಮ್

ಇದೊಂದೇ ಪ್ಲೇಸ್ ನಮಗಿರುವುದು. ನಮ್ಮ ವಿಚಾರ, ಆಲೋಚನೆ, ಗಳನ್ನು ಹಂಚಿಕೊಳ್ಳುವುದಕ್ಕೆ  ಅದರ ಜೊತೆಗೆ ಸಾಫ್ಟ್ ಲೋಕದ ಜನರಿಗೆ ತಮ್ಮ ಸಿಟ್ಟು, ಆಕ್ರೋಶ, ಹತಾಶೆ, ಖುಷಿ ಹೀಗೆ ಎಲ್ಲ ರೀತಿಯ ಭಾವನೆಗಳನ್ನು ಹೊರಹಾಕುವುದಕ್ಕೆ. ಸಾಮಾನ್ಯವಾಗಿ ಪ್ರತಿಯೊಂದು ಕಂಪನಿ ಯಲ್ಲೂ ಕಾಫಿ ಟೈಮ್  ಅಂತ ಎಲ್ಲ ಸಾಫ್ಟ್ ಲೋಕದವರು ಮಾಡಿಕೊಂಡಿರುತ್ತಾರೆ.  ಅದನ್ನ ಕೆಲವೊಬ್ರು ಬ್ರೇಕ್ ಟೈಮ್ ಅಂದ್ರೆ, ಇನ್ ಕೆಲವೊಬ್ರು ಟೀ ಟೈಮ್ ಅಂತಾನು ಕರೀತಾರೆ. ಇಲ್ಲಿ ಟೀ ಟೈಮ್ ಅಂದ್ರೆ ಟೀ ನೆ ಕುಡಿಬೇಕು ಅಂತಾ ಏನು ಇಲ್ಲ, ಈ ಟೈಮ್ ನಲ್ಲಿ ಬತ್ತಿ ನೂ  ಹೊಡಿಬಹುದು. ಒಟ್ನಲ್ಲಿ ಆ ಟೈಮ್ ನಲ್ಲಿ ಅವರು ಕ್ಯೂಬಿಕ್ ನಲ್ಲಿ ಇರಲ್ಲ.
ಈ ಬ್ರೇಕ್ ಟೈಮ್ ಇಷ್ಟು ಗಂಟೆಗೆ ಹೋಗ್ಬೇಕು ಅಂತ ಏನು ಇಲ್ಲ. ಒಬ್ಬರು ಬೆಳಿಗ್ಗೆ ೧೧ ಗಂಟೆಗೆ ಹೋದರೆ, ಇನ್ನೊಬ್ರು ಮಧ್ಯಾನ ೩ ಗಂಟೆಗೆ ಹೋಗ್ತಾರೆ. ಒಟ್ನಲ್ಲಿ ಹೋಗ್ತಾರೆ. ಅಷ್ಟು ಮಾತ್ರ ನಿಜ!



ಬ್ರೇಕ್ ಟೈಮ್ ನಲ್ಲಿ ಗಂಡಸರ ಟಾಪಿಕ್ :
ಸಾಮಾನ್ಯ ವಾಗಿ ಗಂಡಸರ ಟಾಪಿಕ್ ಪ್ರಾಜೆಕ್ಟ್ ನಿಂದ ಶುರುವಾಗಿ ನಿಧಾನವಾಗಿ ಬೆಂಗಳೂರು ಟ್ರಾಫಿಕ್ ಕಡೆ ತಿರುಗಿ, ಇಲ್ಲಿರೋ ಕಚ್ಚಾ ರೋಡ್ ಗಳ ಕಡೆಗೆ ತಿರುಗಿ, ಕೊನೆಗೆ ಬಂದು ನಿಲ್ಲುವುದು ಪಾಲಿಟಿಕ್ಸ್ ಗೆ. ಒಂದು ಸಲ ಪಾಲಿಟಿಕ್ಸ್ ಅಂತ ಬಂದ  ಮೇಲೆ ಮುಗಿಯಿತು ಲೋಕಲ್ ಲೀಡರ್ ಗಳಿಂದ ಹಿಡಕೊಂಡು ನ್ಯಾಷನಲ್ ಪಾರ್ಟಿ ವರೆಗೆ ಎಲ್ಲರನ್ನು ತೊಳೆದು ಹಾಕ್ತಾರೆ. ಪಾಲಿಟಿಕ್ಸ್ ಮತ್ತು ಪೋಲಿಟಿಸಿಯನ್ ಗಳನ್ನ ಬಯ್ಯುವುದು ಎಪಿಸೋಡ್ ಗಳ ಥರ ಪ್ರತಿ ದಿನ ಬ್ರೇಕ್ ಟೈಮ್ ನಲ್ಲಿ ವಾರಗಟ್ಟಲೆ ನಡೆದರೂ ಅಚ್ಚರಿ ಪಡಬೇಕಿಲ್ಲ !

ಪಾಲಿಟಿಕ್ಸ್ ಟಾಪಿಕ್ ಬಿಟ್ಟರೆ ಎರಡನೇ ಟಾಪಿಕ್ - ಶೇರ್ ಮಾರ್ಕೆಟ್ ಬಗ್ಗೆ. ಯಾವುದು ಎಷ್ಟು ಆಯಿತು, ಏನು ಲೆಕ್ಕಾಚಾರ ಅನ್ನುವ ಮಾತುಗಳು ಇಲ್ಲಿ ಬರುತ್ತವೆ . ಇನ್ನು ಮೂರನೆಯ ಸ್ಥಾನದಲ್ಲಿ ಇರೋದು ಸಾಫ್ಟ್ ಲೋಕದ ಮಾರ್ಕೆಟ್ ಹೊರಗಡೆ ಹೇಗಿದೆ? ಅನ್ನೋದರ ಬಗ್ಗೆ. ಹೊರಗಡೆ ಎಲ್ಲೆಲ್ಲಿ ಒಪೆನಿಂಗ್ಸ್ ಇದೆ, ಎಲ್ಲಿ ಎಷ್ಟು ಕೊಡ್ತಾರೆ, ವಾತಾವರಣ ಹೇಗಿರುತ್ತೆ… ಮುಂತಾದ. ನಾಲ್ಕನೆಯದಾಗಿ ಅವರವರ ಪರ್ಸನಲ್ ವಿಚಾರಗಳು ಅದು ಮನೆ ಕೊಳ್ಳುವುದು, ಕಾರ್ ಕೊಳ್ಳುವುದು, ಬೆಂಗಳೂರಿನಲ್ಲಿರೋ ಸೈಟ್ ಬಗ್ಗೆ ವಿಚಾರಣೆ, ಹೊಸ ಮೊಬೈಲ್ಸ್, ಆಪ್ಸ್ ಹೀಗೆ. ಆದರೆ ಇವೆಲ್ಲವನ್ನೂ ಓವರ್ ರೂಲ್ ಮಾಡೊದು ಒಂದೇ ಒಂದು ಟಾಪಿಕ್ , ಅದು “ ಕ್ರಿಕೆಟ್” . ಅವತ್ತೆನಾದ್ರು ಮ್ಯಾಚ್ ಇದ್ರೆ ಮುಗಿಯಿತು, ಬ್ರೇಕ್ ಟೈಮ್ ನಲ್ಲಿ ಅದರದೇ ಮಾತು ಕಥೆ.
ಒಂದರ್ಥದಲ್ಲಿ ಈ ಬ್ರೇಕ್ ಟೈಮ್ ನಮ್ಮ ಅಕ್ಕ ಪಕ್ಕ ಏನೇನು ಆಗ್ತಾ ಇದೆ ಅಂತ ತಿಳ್ಕೊಳ್ಳೋಕೆ ತುಂಬಾ ಅನುಕೂಲ. ಎಷ್ಟೊಂದು ಸಲ ಕಂಪನಿ ಯಲ್ಲಿ ಮುಂಬರುವ ಅನೇಕ ವಿಷಯಗಳು ಇಲ್ಲಿ ರೂಮರ್ ಆಗಿ ಆವಾಗಲೇ ಹಬ್ಬಿ ಬಿಟ್ಟಿರುತ್ತವೆ.

ಬ್ರೇಕ್ ಟೈಮ್ ನಲ್ಲಿ ಹೆಂಗಸರ ಟಾಪಿಕ್ :
ಇದೀಷ್ಟು  ಸಾಫ್ಟ್ ಲೋಕದ ಗಂಡಸರ ಬ್ರೇಕ್ ಟೈಮ್ ನಲ್ಲಿ ನಡೆಯುವ ಮಾತುಗಳು. ಹೆಂಗಸರ ವಿಷಯಕ್ಕೆ ಬಂದರೆ, ಅವರದು ಬೇರೆ ರೀತಿ ಇರುತ್ತದೆ. ಅದರಲ್ಲೂ ಹೊಸತಾಗಿ ಮದುವೆಯಾದ ಇಬ್ಬರು ಹೆಂಗಸರು ಬ್ರೇಕ್ ಟೈಮ್ ನಲ್ಲಿ ಮಾತಾಡಲು ಶುರು ಮಾಡಿದರೆ, ಸಾಫ್ಟ್ ಲೋಕದವರಿಗೂ ಬೇರೆ ಲೋಕದ ಹೆಂಗಸರಿಗೂ ಅಷ್ಟೊಂದು ವ್ಯತ್ಯಾಸವೇನಿಲ್ಲ ಅನಿಸಿಬಿಡುತ್ತೆ.
ಪ್ರಾಜೆಕ್ಟ್ ಮೂಲಕ ಶುರುವಾಗುವ ಮಾತು ಆಕಡೆ ಈಕಡೆ ಹೊರಳಾಡುತ್ತಾ ಕೊನೆಗೆ ಬಂದು ನಿಲ್ಲುವುದು ಮಾತ್ರ ತಮ್ಮ ತಮ್ಮ “ಅತ್ತೆ” ಯಂದಿರ ಹತ್ತಿರ.  ಇನ್ನು ಮದುವೆಯಾಗಿ ಮಕ್ಕಳಾಗಿದ್ದರೆ  ಅವರ ವಿಷಯಗಳು ಸದಾ ಮಗ ಅಥವಾ ಮಗಳ ಬಗ್ಗೆ ಇರುತ್ತವೆ. ನನ್ನ ಮಗನ ಸ್ಕೂಲ್ ನಲ್ಲಿ ಹೀಗಾಯ್ತು / ಮಗಳಿಗೆ ಫಸ್ಟ್ ಪ್ರೈಸ್ ಬಂತು .. ಹೀಗೆ ನಡೆಯುತ್ತಲೇ ಇರುತ್ತದೆ ಸವಾರಿ.

ಸಾಫ್ಟ್ ಲೋಕದ ಮಾತು ಕತೆ :
ನಾವು ಕೆಲಸ ಮಾಡುವ ಲೋಕ ಸಾಫ್ಟ್ ಲೋಕವಿರಬಹುದು, ಆದರೆ ಕೆಲಸ ಮಾಡುವ ಜನರು ಮಾತ್ರ ಒಂದೇ ದೇಶದವರಾಗಿರುವುದರಿಂದ ನಮ್ಮ ಮೂಲ ಗುಣ ಒಂದೇ ಆಗಿರುತ್ತದೆ ಆನುವುದು ಮಾತ್ರ ಸತ್ಯ. ನಮ್ಮ ಮಾತು ಕಥೆ ಅಪ್ಪಟ ಬೇರೆ ಲೋಕದಲ್ಲಿ ನಡೆಯುವ ವರಂತೆಯೇ ಇರುತ್ತವೆ. ಭಾರತೀಯರೇ ಆದಮೇಲೆ ಇದರಲ್ಲಿ ವ್ಯತ್ಯಾಸ ಎಲ್ಲಿಂದ ಬರಬೇಕು?. ಎಲ್ಲೋ ಒಂದಿಬ್ಬರು ಬ್ರೇಕ್ ಟೈಮ್ ನಲ್ಲೂ ಸಹ ಸಾಫ್ಟ್ ಲೋಕದಲ್ಲಿ ತುಂಬ ಫಾರ್ಮಲ್ ಆಗಿ ಬಿಹೇವ್ ಮಾಡ್ತ ಇರಬಹುದು ಆದರೆ ಎಲ್ಲರು ಸದಾ ಪ್ರೊಫೆಶನಲ್ ಆಗಿಯೇ ಇರ್ತಾರೆ ಅನ್ನೋದು ಮಾತ್ರ ನಂಬಲು ಕಷ್ಟ. ಹಾಗಂತ ಯಾವಾಗಲು ಪ್ರೊಫೆಷನಲಿಸಂ ನ ಬಿಟ್ಟು ಹೆಗಂದರೆ ಹಾಗೆ ಇರುತ್ತಾರೆ ಅನ್ನೋದು ಕೂಡ ತಪ್ಪು . ಅವೆರಡರ ನಡುವಿನ ಒಂದು ತೆಳುವಾದ ಗೆರೆಯಲ್ಲಿ ಸಾಗುತ್ತಿರುತ್ತದೆ ನಮ್ಮ ಸಾಫ್ಟ್ ಲೋಕದ ಬದುಕು.

ಈ ವಾರದ ಬಿಲ್ಡ್ ಲೇಬಲ್:  ಈ ಬ್ರೇಕ್ ಟೈಮ್ ಅನ್ನೋದು ಒಂದು ಥರ ಪರಕಾಯ ಪ್ರವೇಶ ಇದ್ದ ಹಾಗೆ. ಕಾಫಿ / ಟೀ  ಟೈಮ್ ನಲ್ಲಿ ಅಷ್ಟು ಹೊತ್ತು ತೀರ ಹತ್ತಿರದವರಂತೆ ಹರಟೆ ಹೊಡೆಯುತ್ತಿದ್ದವರು, ಗ್ಲಾಸ್ ನಲ್ಲಿರೋ ಟೀ / ಕಾಫಿ  ಖಾಲಿಯಾಗುತ್ತಿದಂತೆಯೇ ತಮ್ಮ ತಮ್ಮ ಕ್ಯೂಬಿಕ್ ಬಂದು ಅಷ್ಟೇ ಸೀರಿಯಸ್ ಆಗಿ ಪುನಃ ಕೆಲಸ ಮಾಡಲು ಕುಳಿತು ಬಿಡುತ್ತಾರೆ. ಸಾಫ್ಟ್ ಲೋಕದ ಆತ್ಮ ನಾವು ಕ್ಯೂಬಿಕ್ ಎಂಟರ್ ಆಗುತ್ತಿದಂತೆಯೇ ನಮ್ಮನ್ನ  ಆವರಿಸಿಕೊಂಡು ಬಿಡುತ್ತದೆ!

Wednesday, April 23, 2014

ಅಂಕಣ ೧೫ : ಸಾಫ್ಟ್ ಲೈಫ್-ಸೈಕಲ್

ಇನ್ನು ಆವಾಗ ಯೌವನಕ್ಕೆ ಕಾಲಿಡುತ್ತಿರುವ ವಯಸ್ಸು. ಒಂದು ಇಂಜಿನೀಯರಿಂಗ್ ಡಿಗ್ರಿ ಇನ್ನು ಸ್ವಲ್ಪ ದಿನದಲ್ಲಿ ಕೈಗೆ ಬರಲು ರೆಡಿ ಆಗಿರುತ್ತೆ.  ಕಾಲೇಜಿನಲ್ಲಿ ಇರಬೇಕಾದರೆ ನೆ ಕೈಯಲ್ಲೊಂದು ಆಫರ್ ಲೆಟರ್ ಇರುತ್ತೆ .ಇಂಜಿನೀಯರಿಂಗ್  ಕಾಲೇಜಿನಿಂದ ಹೊರಗಡೆ ಬಂದ  ತಕ್ಷಣ ವೆ ಹತ್ತು ಇಲ್ಲ ಹದಿನೈದು ದಿನದ ರೆಸ್ಟ್ ನಂತರ ಸಾಫ್ಟ್ ಕಂಪನಿಯ ಬಾಗಿಲಿಗೆ ಹೋಗಿ ನಮ್ಮ ಹಾಜರಿ ಹಾಕಬೇಕು.


ಕೆಲಸಕ್ಕೆ ಸೇರಿದ ಒಂದು ತಿಂಗಳು ಟ್ರೈನಿಂಗ್ , ಹೆಚ್. ಆರ್  ಪ್ರೋಸೆಸ್, ಹೊಸ ಕ್ಯೂಬಿಕ್, ಹೊಸ ಪ್ರಾಜೆಕ್ಟ್ ಟೀಂ, ಹೊಸತಾಗಿ  ತನ್ನ ಹೆಸರಿನಿಂದಲೇ ಶುರುವಾದ ಬ್ಯಾಂಕ್ ಅಕೌಂಟ್, ಬೆಂಗಳೂರಿನಲ್ಲೊಂದು ಚಿಕ್ಕದಾದ ರೂಮು ಅಥವಾ ಪಿ. ಜಿ ಗಾಗಿ  ಹುಡುಕಾಟ, ಕಂಪನಿ ಯಲ್ಲಿನ ಕ್ಯಾಂಟೀನ್ ಊಟ, ಆಫಿಸಿನಲ್ಲಿ ನಮ್ಮ ಅಕ್ಕ - ಪಕ್ಕ ದ ಕ್ಯೂಬಿಕ್ ನಲ್ಲಿ ಕೂತಿರುವ ಮತ್ತು ಸೀನಿಯರ್ ಎನಿಸಿಕೊಂಡಿರುವವರಿಂದ  ಪುಂಖಾನು ಪುಂಖವಾಗಿ ಸಾಫ್ಟ್ ಲೋಕದ ಬಗ್ಗೆ  ಉಪದೇಶ, ನಮ್ಮ ಪಾಲಿಗೆ ಸಾಕ್ಷಾತ್ ರೋಲ್ ಮಾಡೆಲ್ ಆಗಿರುವ ಮ್ಯಾನೇಜರ್, ಯಾವಾಗಲೂ  ಒಂದಿಲ್ಲ ಒಂದು ಕೆಲಸದಲ್ಲಿ ಬ್ಯುಸಿ ಆಗಿರುವ ಟೀಂ ಲೀಡ್, ನಮ್ಮ ಹಾಗಿಯೇ ಹೊಸತಾಗಿ ಕೆಲಸಕ್ಕೆ ಸೇರಿದ ಜನರ ಗುಂಪು, ವಾರಕ್ಕೊಂದು ಸಲ ಕಂಪನಿಯ ಕ್ಯಾಂಟೀನ್ ಊಟ ಬಿಟ್ಟು ಆಚೆ ಕಡೆ ಹೋಟೆಲಿನಲ್ಲಿ ಊಟ, ತಿಂಗಳಿಗೊಂದು ಮೂವಿ, ಕೆಲಸಕ್ಕೆ ಸೇರಿದ ಒಂದೆರಡು ತಿಂಗಳಿನಲ್ಲೇ ಫ್ರೆಷೆರ್ಸ್ ತಂಡದಿಂದ ಹೋಗುವ ಒಂದು ಟ್ರಿಪ್, ಪ್ರತಿ ತಿಂಗಳ ಕೊನೆಗೆ ನಮ್ಮ ಕೈಗೆ ಬಂದೆಟುಕುವ  ಗರಿ ಗರಿ ನೋಟಿನ ಸಾವಿರಾರು ರುಪಾಯಿಯ ಸಂಬಳ,
ಮೊದಲನೆಯ ಸಂಬಳದಲ್ಲಿ ಮನೆಯ ಹಿರಿಯರ ಅಪ್ಪಣೆಯಂತೆ ದೇವರಿಗೆ ಒಂದಿಷ್ಟು, ಮನೆಯ ಮಂದಿಗೆಲ್ಲ ಗಿಫ್ಟ್ ಗಳು, ಕೆಲಸ ಸಿಕ್ಕು ಮೊದಲ ಸಲ ಊರಿಗೆ ಹೋದ ನಂತರ ನಮಗೆ ಮನೆಯಲ್ಲಿ ಸಿಗುವ ರಾಜ ಮಾರ್ಯಾದೆ, ನಮ್ಮ ಬಂಧು ಬಳಗದಲ್ಲಿ ಇನ್ನು  ಎಂಜಿನೀರಿಂಗ್ ಓದುತ್ತಿರುವವರ ಕಣ್ಣಿಗೆ ನಾವೇ ರೋಲೆ ಮಾಡೆಲ್!, ಅವರಿಗೆ ನಮ್ಮಿಂದ ಪುಂಖಾನು  ಪುಂಖವಾಗಿ ಉಪದೇಶ, ನಮ್ಮ ಊರಿನ ಅಕ್ಕ -ಪಕ್ಕದ ಮನೆಯಲ್ಲಿರುವವರಿಗೆ ಯಥಾ ಪ್ರಕಾರ ನಮ್ಮ ಕೆಲಸಕ್ಕಿಂತ ನಮಗೆಷ್ಟು ಸಂಬಳ ಬರುತ್ತಿರಬುಹುದು ಎನ್ನುವ ಲೆಕ್ಕಾಚಾರ.........
ಹೆಚ್ಚು ಕಡಿಮೆ ಪ್ರತಿ ಯೊಬ್ಬ ಸಾಫ್ಟ್ವೇರ್ ಎಂಜಿನೀರ್ ಅನುಭವಿಸಿರುವ ಕ್ಷಣಗಳಿವು ಮತ್ತು ಮರೆಯಲಾರದ ಕ್ಷಣಗಳು ಸಹ!

ಒಂದೆರಡು ವರ್ಷಗಳ ನಂತರ :
ಹೆಚ್ಚು ಕಡಿಮೆ ಎಲ್ಲ ಸಾಫ್ಟ್ ಲೋಕದಲ್ಲಿರುವವರಿಗೆ ಮೊದಲ ಒಂದೆರಡು ವರುಷ ಲರ್ನಿಂಗ್ ಕರ್ವ. ಕೆಲಸಕ್ಕೆ ಸೇರಿದ ಮೊದಲ ಎರಡು ವರ್ಷ ಆಗಿದ್ದೆ ಗೊತ್ತಾಗುವುದಿಲ್ಲ. ಅದರಲ್ಲೂ ಒಂದು ಒಳ್ಳೆ ಪ್ರಾಜೆಕ್ಟ್ ಸಿಕ್ಕರಂತು ಮುಗಿದೇ ಹೋಯ್ತು, ಸಮಯದ ಪರಿವೆ ಇರುವುದಿಲ್ಲ. ಒಂದು ವರ್ಷ ಆಗುತ್ತಿದ್ದಂತೆಯೇ ಕೈಗೆ ಬರುವ ಸಂಬಳ ಸ್ವಲ್ಪ ಜಾಸ್ತಿ ಆಗಿರುತ್ತದೆ. ಇನ್ನು ಬ್ಯಾಚುಲರ್ ಇರುವುದರಿಂದ ಮನೆಯ ಮುಂದೆ ಒಂದು ಟೂ ವೀಲರ್ ಸಹ ಬಂದು ನಿಂತಿರುತ್ತದೆ. ಅಷ್ಟರಲ್ಲಿ ಮನಸ್ಸು ಒಂದೆರಡು ಸಲ “ GRE, TOFEL, GATE “ ಬಗ್ಗೆನು ಒಂದಿಷ್ಟು ಯೋಚಿಸಿರುತ್ತದೆ. ಹಾಗೆ ಯೋಚಿಸುತ್ತಿರಬೇಕಾಗಾದ “ ಆನ್ - ಸೈಟ್” ಆಫರ್ ನ ಕನಸು ನಮ್ಮ ಮ್ಯಾನೇಜರ್ ತೊರಿಸುತ್ತಾರೆ. ಅದಷ್ಟಕ್ಕದೆ  “ GRE, TOFEL, GATE “  ಕನಸು ಪಕ್ಕಕ್ಕೆ ಸರಿದು ಆನ್ - ಸೈಟ್ ಗೆ ದಾರಿ ಮಾಡಿ ಕೊಡುತ್ತವೆ.

ಇಲ್ಲಿ ತಮಾಷೆಯ ವಿಷಯ ವೆಂದರೆ, ನಾನು “ ಆನ್ - ಸೈಟ್”  ಹೋಗಬೇಕು ಅನ್ನುವ ಹಂಬಲಕ್ಕಿಂತ ನನ್ನ ಜೊತೆ  ಕಾಲೇಜಿನಲ್ಲಿ ಓದಿ ಬೇರೆ ಕಂಪನಿ ಯಲ್ಲಿ ಕೆಲಸ ಮಾಡುತ್ತಿರುವ ಗೆಳೆಯ ನನಗಿಂತ ಮುಂಚೆ ಆನ್ - ಸೈಟ್ ಹೋದ ಅಂತ ಕೇಳಿದಾಗ ಮನಸ್ಸು ಅದಾಗದೆ ಚುರ್ ಎನ್ನುತ್ತದೆ. ಅದಕ್ಕೆ ಏನಾದ್ರೂ ಆಗಲಿ ನಾನು ಹೋಗಿ ಬರಬೇಕು ಎನ್ನುವ ಹಂಬಲ ಜಾಸ್ತಿ ಆಗಿರುತ್ತದೆ. ಅದರ ಜೊತೆಗೆ ಮನೆಯ ಅಕ್ಕ - ಪಕ್ಕ ದವರು “ ಏನಪ್ಪಾ, ಇನ್ನು ಯಾವ ದೇಶಕ್ಕೂ ಹೋಗಿಲ್ವಾ?, ನಮ್ಮ ಹುಡುಗ ಆಗ್ಲೇ ಹೋಗಿ ಬಂದಾ.. “ ಅಂದಾಗಂತೂ ಕೇಳೋದೇ ಬೇಡ.

ಒಂದೈದು ವರ್ಷಗಳ ನಂತರ :
ಇಷ್ಟರಲ್ಲಾಗಲೇ ನಾವು ಮಾಡುತ್ತಿರುವ ಸಾಫ್ಟ್ ಕೆಲಸದ ಮೇಲೆ ಒಂದು ಹಿಡಿತ ಬಂದಿರುತ್ತದೆ. ಹಿಡಿತದ ಜೊತೆಗೆ, ಟೀಮ್ ಲೀಡ್, ಟೆಸ್ಟ್ ಮ್ಯಾನೇಜರ್, ಟೆಸ್ಟ್ ಲೀಡ್, ಪ್ರಾಜೆಕ್ಟ್ ಲೀಡ್, ಕ್ವಾಲಿಟಿ ಹೆಡ್, ಡಿಪಾರ್ಟ್ಮೆಂಟ್ ಹೆಡ್, ಮಾಡ್ಯೂಲ್ ಲೀಡ್,  ಹೀಗೆ ಅವರವರ ಕಂಪನಿ ಗೆ ತಕ್ಕಂತೆ ಒಂದು ಗ್ರೇಡ್ ಕೂಡ ಬಂದಿರುತ್ತದೆ. ಕೈಗೆ ಬರುವ ಸಂಬಳದ ತೂಕವೂ ಜಾಸ್ತಿ ಆಗಿರುತ್ತದೆ. ಮನೆಯಲ್ಲಿ ಮದುವೆಗಾಗಿ ಗಂಡು / ಹೆಣ್ಣು  ಹುಡುಕುವುದಕ್ಕೆ ಶುರು ಮಾಡಿರುತ್ತಾರೆ.

ಒಂದತ್ತು ವರ್ಷಗಳ ನಂತರ :
ಇದನ್ನು ಹೇಳುವ ಅವಶ್ಯಕತೆಯೇ ಇಲ್ಲ.  ನಿಮ್ಮೆಲ್ಲರಿಗೂ ಗೊತ್ತು. ಇಷ್ಟು ವರುಷ ಅನುಭವ ಆಗುವ ಹೊತ್ತಿಗೆ ಒಂದು ಒಳ್ಳೆಯ ಜಾಗ ಅಥವಾ ಪೊಸಿಶನ್ ಸಿಕ್ಕಿರುತ್ತದೆ. ಕಂಪನಿಯ ಒಂದೆರಡು ಅವಾರ್ಡ್ ಗಳು ನಮ್ಮ ಕ್ಯೂಬಿಕ್ ನಲ್ಲಿ ಬಂದು ಕೂತಿರುತ್ತವೆ. ಸಂಬಳದ ತೂಕಕ್ಕೆ ತಕ್ಕಂತೆ ಹೊರಗಡೆಯ ಕರ್ಚು ಸಹ ಜಾಸ್ತಿ ಆಗಿರುತ್ತದೆ. ಮದುವೆ  ಆಗಿ ಮಕ್ಕಳು ಸ್ಕೂಲ್ ಗೆ ಹೋಗುತ್ತಿರುತ್ತಾರೆ. ಸಂಬಳ ದ ಜೊತೆಗೆ ಹೋಂ ಲೋನ್ , ಕಾರ್ ಲೋನ್, ಸೈಟ್ ಲೋನ್, ಪರ್ಸನಲ್ ಲೋನ್ ಸಹ ನಮ್ಮ ಬೆನ್ನ ಮೇಲೆ ಬಂದು ಕೂತಿರುತ್ತವೆ. ವರ್ಷಕ್ಕೊಂದು ಸಲ ಫ್ಯಾಮಿಲಿ ಟ್ರಿಪ್, ವೀಕೆಂಡ್ ನಲ್ಲಿ ಮಕ್ಕಳ ಸ್ಕೂಲ್ ನಲ್ಲಿ ಪೇರೆಂಟ್ಸ್ ಮೀಟಿಂಗ್, ಒಂದು ವೇಳೆ  ಯಾವುದೇ ಕಾರ್ಯಕ್ರಮ ಇಲ್ಲ ಅಂದರೆ ಮಾತ್ರ ಮನೆಯಲ್ಲಿ ರೆಸ್ಟ್.  ಇನ್ನು ಹಬ್ಬ ಹರಿದಿನಗಳ ಲಾಂಗ್ ವೀಕೆಂಡ್ ನಲ್ಲಿ ಬೆಂಗಳೂರಿನ ಹೊರಗಿರುವ ಅಪ್ಪ - ಅಮ್ಮ ಅಥವಾ ಅತ್ತೆ ಮಾವ ನ ಮನೆಗೆ ಕುಟುಂಬ ಸಮೇತ  ಹೋಗಿ ಬರುವುದು.  ಹೀಗೆ ನಡೆಯುತ್ತಿರುತ್ತದೆ ನಮ್ಮ ಜೀವನ, ಸಾಫ್ಟ್ ಲೋಕದ ಜೀವನ.

ಈ ವಾರದ ಬಿಲ್ಡ್ ಲೇಬಲ್ : ನೀವು ಇಷ್ಟು ಹೊತ್ತು ಓದಿದ್ದು “ ಕಥೆಯಲ್ಲ !..... ಇದು ಜೀವನ”

Thursday, April 10, 2014

ಅಂಕಣ ೧೪ : ಸಾಫ್ಟ್ ಅಪ್ರೈಸಲ್!!

ಏನಿದು ಅಪ್ರಯೋಜಕ ಟೈಮ್ ಅಂತ ಅನ್ಕೋಬೇಡಿ.  ಇದು ಅಪ್ರೈಸಲ್ ಟೈಮ್ ! ಹಾಗಂದರೆ ಏನು ಅಂತೀರಾ? ಇಲ್ಲಿ ಕೇಳಿ.
ನಮ್ಮ ಸರಕಾರೀ ನೌಕರಿಗಾದರೆ ವರ್ಷಕ್ಕೊಂದು ಸಲ ಪಗಾರ ಇಂತಿಷ್ಟು ಅಂತ ಜಾಸ್ತಿ ಆಗುತ್ತಿರುತ್ತದೆ. ನಮ್ಮ ಸಾಫ್ಟ್ ಲೋಕದಲ್ಲಿ
ಸಹ ಪಗಾರ ಜಾಸ್ತಿ ಆಗುತ್ತದೆ. ಆದರೆ ಎಲ್ಲರಿಗೂ ಒಂದು ರೀತಿ ಅಲ್ಲ. ಅದಕ್ಕೆ ಅಂತಾನೆ ಒಂದು ಪ್ರೋಸೆಸ್ ಇರುತ್ತೆ. ಕೆಲವೊಂದು ಕಂಪನಿ ಯಲ್ಲಿ ಇದನ್ನ  ಅಪ್ರೈಸಲ್ ಅಂತ ಕರೆದರೆ, ಮತ್ತೆ ಕೆಲವೊಂದು ಕಂಪನಿ ಯಲ್ಲಿ ಇದನ್ನ ಎಂಪ್ಲಾಯಿ ಡೈಲಾಗ್ ಅಂತಾನು ಕರೀತಾರೆ.




ಒಂದು ವರ್ಷದಲ್ಲಿ ಒಬ್ಬ ಎಂಪ್ಲಾಯಿ ಮಾಡಿದ ಕೆಲಸ ನೋಡಿ ಅವನಿಗೆ ಇಂತಿಷ್ಟು  ಪಗಾರ ಜಾಸ್ತಿ  ಮಾಡುತ್ತಾರೆ, ಇದನ್ನ ಹೈಕ್ ಅಂತಾನು ಕರೆಯುತ್ತಾರೆ. ಇದು ಎಲ್ಲರಿಗೂ ಒಂದೇ ರೀತಿ ಆಗಿರುವುದಿಲ್ಲ. ಹಾಗಂತ ಪ್ರತಿಯೊಬ್ಬರಿಗೂ ಬೇಕಾ ಬಿಟ್ಟಿಯಾಗಿ  ಕೊಡೋಹಾಗಿಲ್ಲ. ಅವರು ಮಾಡಿದ ಕೆಲಸ, ಅವರ ಪ್ರಾಜೆಕ್ಟ್ ಪೆರ್ಫಾರ್ಮ್ ಮಾಡಿದ ರೀತಿ, ಓವರ್ ಆಲ್ ಅವರ ಡಿಪಾರ್ಟ್ ಮೆಂಟ್ ಆ ವರ್ಷದಲ್ಲಿ ಮಾಡಿದ ಬಿಸಿನೆಸ್ ಎಲ್ಲವನ್ನು ಲೆಕ್ಕಕ್ಕೆ ತೆಗೆದು ಕೊಂದು ಒಂದು ಪ್ರಾಜೆಕ್ಟ್ ಗೆ ಇಷ್ಟು ಹಣ ಕೊಟ್ಟಿರುತ್ತಾರೆ. ಅದರಲ್ಲಿಯೇ ಪ್ರಾಜೆಕ್ಟ್ ನ ಎಲ್ಲ ಸದಸ್ಯರಿಗೆ ಹೈಕ್ ಸಿಗುತ್ತದೆ.   ಪ್ರತಿ ಸಲದ ಅಪ್ರೈಸಲ್ ನಲ್ಲಿ : “ you have only done whatever assigned to you, but you should have taken more responsibility and proactive steps to perform better” ಅನ್ನೋ ಮಾತುಗಳು ಮ್ಯಾನೇಜರ್ ಯಿಂದ ಕೇಳಿ ಕೇಳಿ ಎರಡೂ ಕಿವಿಗಳಿಗೆ ತೂತು ಬಿದ್ದಿರುತ್ತವೆ.


ಕೆಲಸಕ್ಕೆ ಸೇರಿದ ಮೊದಲೆರಡು ವರ್ಷದಲ್ಲಿ ಕಂಪನಿ ಯವರು ಕೊಡುವ ಹೈಕ್ ನ ಬಗ್ಗೆ ಭಾರಿ ಕುತೂಹಲವಿರುತ್ತದೆ. ಅನುಭವ ಅಗ್ತಾ ಅಗ್ತಾ ಇದು ಕುತೂಹಲ ಕಡಿಮೆ ಆಗ್ತಾ ಹೋಗುತ್ತದೆ. ಮೊದಲು ಜಾಸ್ತಿ ಹೈಕ್ ಗಾಗಿ ಬಡಿದಾಡುವ ಜೀವ, ಅನುಭವವಾದ ನಂತರ ಪ್ರಮೋಷನ್ ಗಾಗಿ ಪರಿತಪಿಸುತ್ತೆ. ಇವೆರಡು ತಾವು ಬಯಸುವ ರೀತಿಯಲ್ಲಿ ಸಿಗದಿದ್ದರೆ ಎಂಪ್ಲಾಯಿಗಳು ತಮ್ಮ ಗಂಟು ಮೂಟೆಯನ್ನ  ಕಂಪನಿಯಿಂದ ಕಟ್ಟುತ್ತಾರೆ. ಹಾಗಂತ ಪ್ರತಿವರ್ಷ ಎಲ್ಲ ಎಂಪ್ಲಾಯಿಗಳು ಕಂಪನಿ ಬದಲಿಸುತ್ತಾರೆ ಅಂತ ಅಲ್ಲ.


ಈ ಅಪ್ರೈಸಲ್ ಟೈಮ್ ನ ಮೂರು ರೀತಿಯಲ್ಲಿ ವಿವರಿಸಬಹುದು.

ಮೊದಲನೆಯ ಕೆಟಗರಿ : ಕೆಲಸಕ್ಕೆ ತಕ್ಕಂತೆ ಭಡ್ತಿ ಮತ್ತು ಸಂಬಳದಲ್ಲಿ ಏರಿಕೆ. ಈ ಕೆಟಗರಿಗೆ ಬರುವವರು ತುಂಬಾ ಖುಷಿಯಾಗಿ ಇರುತ್ತಾರೆ. ಏನೇ ಆಗಲಿ ಈ ಕಂಪನಿ ಮಾತ್ರ ಬಿಡುವುದು ಬೇಡ. ಈಡಿ ಜೀವನವನ್ನೇ ಇಲ್ಲೇ ಕಳೆದುಬಿಡೋಣ ಅನ್ನೋವಷ್ಟರ ಮಟ್ಟಿಗೆ ಸೆಂಟಿಮೆಂಟ್ ಬಂದು ಬಿಟ್ಟಿರುತ್ತೆ. ಇವರ ಪಾಲಿಗೆ ಮ್ಯಾನೇಜರ್ ಸಾಕ್ಷಾತ್ ದೇವರು ಆಗಿಬಿಟ್ಟಿರುತ್ತಾರೆ
ಎರಡನೆಯ ಕೆಟಗರಿ : ಕಾರಣಾಂತರ  ಗಳಿಂದ ಅವರ ಪರ್ಫಾರ್ಮೆನ್ಸ್ ಸರಿಯಾಗಿ ಇರೋಲ್ಲ, ಪ್ರಾಜೆಕ್ಟ್ ಕೂಡ ಅಷ್ಟೊಂದು ಸಕ್ಸಸ್ ಆಗಿರೋಲ್ಲ. ಇಂತಹ ಕೆಟಗರಿಯಲ್ಲಿ ಬರುವ ಜನರು ಒಂದು ರೀತಿಯ ಸಮಾಧಾನ ಮಾಡಿಕೊಂಡು ಇರುತ್ತಾರೆ.
ಮೂರನೆಯ ಕೆಟಗರಿ : ಎದ್ದು ಬಿದ್ದು ಕೆಲಸ ಮಾಡಿರುತ್ತಾರೆ. ಆದರೆ ಅಪೇಕ್ಷಿಸಿದ ಮಟ್ಟಿಗಿಂತ  ಸಂಬಳ ಏರಿಕೆ ಆಗಿರುವುದಿಲ್ಲ. ಭಡ್ತಿ ಯಂತು ದೂರದ ಮಾತು. ಇದರ ಮೇಲೆ ಬರೆ ಎಳೆದಂತೆ, ಇವರ ಪಕ್ಕದಲ್ಲೇ ಕೂತಿರುವವರಿಗೆ ಚೆನ್ನಾಗಿ ಹೈಕ್ ಬಂದು ಬಿಟ್ಟಿರುತ್ತೆ.
ಇನ್ನು ಕೇಳ್ತೀರಾ. ಶುರುವಾಗುತ್ತೆ ಬೆಂಕಿ! 
ಈ ಕೆಟಗರಿಗೆ ಸಂಭಂದ ಪಟ್ಟ ಒಂದು ತಮಾಷೆ ಮಾತು ಕಥೆ ನೋಡೋಣ ಬನ್ನಿ .
ಮೊದಲನೆಯವ : ಯಾಕಪ್ಪ ಡಲ್  ಆಗಿದೀಯಾ? ಏನಾಯ್ತು? ಹೆಂಗಾಯ್ತು ಅಪ್ರೈಸಲ್ ?
ಎರಡನೆಯವ : ತೊಥ್, ಸಾಕಾಯ್ತು ಕಣಪ್ಪ.  ಪ್ರತಿ ಸಲಾನು ಇದೆ ಗೋಳು. ಕೆಲಸ ಮಾಡೋರನ್ನ ಯಾರು ಕೇಳೋರೆ ಇಲ್ಲ. ನಾನು ಇನ್ಮೇಲಿಂದ ಕೂಲಾಗಿ ಬಂದು ಕೂಲಾಗಿ ಹೋಗ್ತೀನಿ. ಏನಾದ್ರು ಆಗಲಿ, ಯಾರು ಏನಾದ್ರೂ ಅನ್ಕೊಳ್ಳಿ.
ಮೊದಲನೆಯವ : ನೀನು ಚೂರು ಷೋ ಆಫ್ ಮಾಡೋದು ಕಲಿಯೋ? ಅವಾಗ್ಲೇ ನಿನ್ನ ಮೇಲಗಡೆ ಇರೋರಿಗೆ ನೀನು ಕೆಲಸ ಮಾಡ್ತಾ ಇದ್ದೀಯ ಅಂತ ಗೊತ್ತಾಗುತ್ತೆ.
ಎರಡನೆಯವ : ಹೌದು ಕಣೋ. ಷೋ ಆಫ್ ಗೆ ಬೆಲೆ ಜಾಸ್ತಿ. ಬಟ್ ಏನ್ ಮಾಡ್ಲಿ? ನನಗೆ ಶೋ ಆಫ್ ಮಾಡೋಕೆ ಬರಲ್ವೆ?
ಆದರೂ ಈ ಮೇಲಗಡೆ ಇರೋರಿಗೆ, ಯಾರು ಕೆಲಸ ಮಾಡ್ತಾರೆ, ಯಾರು ಮಾಡಲ್ಲ ಅಂತ ಗೊತ್ತಗೊದಿಲ್ಲವೇನೋ? ಷೋ ಆಫ್ ಮಾಡಲೇಬೇಕಾ?
ಮೊದಲನೆಯವ : ಅವರು ಕೂಡ ಅವರ ಮೇಲಿನವರನ್ನ ಮೆಚ್ಚಿಸೋದ್ರಲ್ಲಿ ಬ್ಯುಸಿ ಇರ್ತಾರೆ. ಹೀಗಾಗಿ ಅವರ ಕೆಳಗೆ ಏನ್ ನಡೀತಾ ಇದೆ ಅಂತ ಹೇಗೆ ಗೊತ್ತಾಗುತ್ತೆ ಹೇಳು?
ಎರಡನೆಯವ : ಹೌದಲ್ವಾ ? ನಿನ ಮಾತಲ್ಲೂ ಪಾಯಿಂಟ್ ಇದೆ. ಅದಿರ್ಲಿ ಬಿಡು, ನಿಂದು ಹೇಗಾಯ್ತು ? ಹೈಕ್ ಚೆನ್ನಾಗಿ ಬಂತಾ?
ಮೊದಲನೆಯವ : ಇಲ್ಲ. ಅದಕ್ಕೆ ನನಗೆ ಇನ್ನೊಬ್ರು ಹೇಳಿದ್ದನ್ನ ನಾನು ನಿನಗೆ ಇಷ್ಟೊತ್ತು ಹೇಳಿದೆ!!

ಈ ವಾರದ ಬಿಲ್ಡ್ ಲೇಬಲ್ : ಸಾಲದ ವಿಚಾರದಲ್ಲಿ  “ಕೊಟ್ಟೋನು ಕೋಡಂಗಿ ಇಸ್ಕೊಂಡೊನು ಈರಭದ್ರ “; ಆದರೆ ಅದು ಹೈಕ್ ವಿಚಾರದಲ್ಲಿ “ಇಸ್ಕೊಂಡೊನು ಕೋಡಂಗಿ, ಕೊಟ್ಟೋನು ಕಾಲಭೈರವ”.

Thursday, April 3, 2014

ಅಂಕಣ ೧೩ : ಸಾಫ್ಟ್ ವೇರ್ ಮತ್ತು ಗೂಗಲ್ಲು !

“ನೀ ಮಾಯೆಯೊಳಗೋ - ಮಾಯೆ ನಿನ್ನೊಳಗೊ” ಎನ್ನುವಂತೆ  “ಸಾಫ್ಟ್ ಲೋಕದಲ್ಲಿ ಗೂಗಲ್ಲೋ ಅಥವಾ ಗೂಗಲ್ ನಲ್ಲಿ ಸಾಫ್ಟ್ ಲೋಕವೋ” ಎನ್ನುವಂತಾಗಿದೆ.  ಈ ಮಾತನ್ನ ಬಹಳಷ್ಟು ಜನ ಸಾಫ್ಟ್ ವೇರ್ ಎಂಜಿನೀಯರ್ಸ್ ಒಪ್ಕೋತಾರೆ ಸಹ. ಹೇಗೆ ಒಬ್ಬ ದಿನಸಿ ಅಂಗಡಿಯ ಮಾಲೀಕ, ಪ್ರತಿದಿನ ಶಟರ್ ಎಳೆದು ತನ್ನ ಅಂಗಡಿಯನ್ನ ತೆಗೆದು ದೇವರ ಫೋಟೋ ಕೆ ಕೈ ಮುಗಿದು ಗಲ್ಲೆದ ಮೇಲೆ ಕೂತ್ಕೊತಾನೋ, ಹಾಗೇನೆ ಸಾಫ್ಟ್ ಲೋಕದಲ್ಲಿ ನಾವು ಪ್ರತಿದಿನ ಸಿಸ್ಟಮ್ ಅನ್ಲಾಕ್ ಮಾಡಿ, ಇಂಟರ್ನೆಟ್ ಓಪನ್ ಮಾಡಿ ಅಲ್ಲಿ ಗೂಗಲ್ ಎನ್ನುವ ಪೇಜ್ ಕಾಣಿಸಿದ ಮೇಲೆಯೇ ಮುಂದಿನ ಕೆಲಸ ಕಾರ್ಯಗಳು ಆರಂಭವಾಗುವುದು.



ಕೋಡಿಂಗ್ ನಲ್ಲಿ ಯಡವಟ್ಟು ಆದಾಗ, ಟೆಸ್ಟಿಂಗ್ ನ ಪ್ರೋಸೆಸ್ ಬಗ್ಗೆ ಡೌಟು ಬಂದಾಗ, ಏನೋ ಒಂದು ಟೆಕ್ನಿಕಲ್ ಆಗಿ ಇನ್ ಪುಟ್ ಬೇಕಾದಾಗ ನಮ್ಮ ಕೈಬೆರಳುಗಳು ಪಟ ಪಟನೆ ಟೈಪ್ ಮಾಡುವ ಅಕ್ಷರ “ ಗೂಗಲ್”.  ಈ ಅರ್ಥದಲ್ಲಿ ಪ್ರಸಿದ್ದವಾದ ಕನ್ನಡ ಚಿತ್ರಗೀತೆಯನ್ನ ಸಾಫ್ಟ್ ಲೋಕದವರು ಗೂಗಲ್ ಗೆ ಬಳಸಿದರೂ ತಪ್ಪಿಲ್ಲ:
ಗೂಗಲ್ ಎಂದರೆ ಏನೋ ಹರುಷವೋ
ನಮ್ಮ ಪಾಲಿಗೆ ಅದುವೇ ದೈವವು .
ಸಾಫ್ಟ್ ಲೋಕದಲ್ಲಿ ಒಂದು ಮಾತು ಚಾಲ್ತಿಯಲ್ಲಿದೆ : ಸಾಫ್ ವೇರ್ ಇಂಜಿನಿಯರ್ ಗೆ ಕೊಡಬಹುದಾದ  ಶಿಕ್ಷೆ ಏನು?
ಏನಿಲ್ಲ, ಅವನ ಕೀ ಬೋರ್ಡ್ ನಿಂದ “Ctrl + C “ ಮತ್ತು “Ctrl + V “ ಬಟನ್ ಗಳನ್ನ ಕಿತ್ತು ಬಿಸಾಡಿ ಬಿಡಿ ಸಾಕು. ಅವನು ತನ್ನ ಆಸ್ತಿ ಹೋದಷ್ಟು ವಿಲ  ವಿಲನೆ ಒದ್ದಾಡಿ ಬಿಡುತ್ತಾನೆ. ಅದಕ್ಕಿಂತಲೂ ದೊಡ್ಡ ಶಿಕ್ಷೆ ಎಂದರೆ ಕಂಪನಿ ಯ ಇಂಟರ್ನೆಟ್ ನಲ್ಲಿ ಗೂಗಲ್ ಪೇಜ್ ಗೆ ಆಕ್ಸೆಸ್ ಕೊಡದೆ ಇದ್ದರಂತೂ ಮುಗಿದೇ ಹೋಯ್ತು ಕಥೆ.

ಗೂಗಲ್ ನಲ್ಲಿ ಏನು ಸಿಗುತ್ತೆ ಅನ್ನೋದಕ್ಕಿಂತ, ಏನು ಸಿಗಲ್ಲ ಅಂತ ಹೇಳಿ?  ಒಂದು ಜಮಾನ ದಲ್ಲಿ ಕಳೆದು ಹೋದ ಬಾಯ್ ಫ್ರೆಂಡ್ ನ ಲೇಟೆಸ್ಟ್ ಪ್ರೊಫೈಲ್ ನಿಂದ ಹಿಡಿದು ಪ್ರತಿಯೊಂದು ಸಿಗುತ್ತದೆ. ಅದರಲ್ಲೂ ಸಾಫ್ಟ್ ಲೋಕದವರಿಗೆ ಕೋಡಿಂಗ್, ಟೆಸ್ಟಿಂಗ್, ಕ್ವಾಲಿಟಿ, ಮ್ಯಾನೇಜ್ಮೆಂಟ್ ಪ್ರೋಸೆಸ್, ಇಂಟರ್ವ್ಯೂ ಕ್ವೆಶನ್ಸ್  ಬಗ್ಗೆ ಮಾಹಿತಿ ಎಲ್ಲವು ಸಿಗುತ್ತವೆ.ಅವತ್ತಿನ ದಿನ ಪತ್ರಿಕೆ ಓದಬೇಕೆಂದರೆ, ಲೈವ್ ಕ್ರಿಕೆಟ್ ಸ್ಕೋರ್ ತಿಳಿಯಬೇಕೆಂದರೆ, ಹೊಸ ಸ್ಕೂಲು, ಕಾಲೇಜು, ಅಷ್ಟೇ ಏಕೆ ನಾವು ಬದಲಾಯಿಸಬೇಕೆನ್ನುವ ಕಂಪನಿ ಯ ಬಗ್ಗೆ ಮಾಹಿತಿ ಕೂಡ ಗೂಗಲ್ ನಲ್ಲಿ ಲಭ್ಯ.  ನೀವು ಯಾವುದೇ ವಿಷಯದ ಕುರಿತು ಸರ್ಚ್ ಕೊಡಿ, ಅದನ್ನಾಗಲೇ ಯಾರೋ ಒಬ್ಬ ಪುಣ್ಯಾತ್ಮ ಹುಡುಕಿಟ್ಟು ರುತ್ತಾನೆ, ಇಲ್ಲಾಂದ್ರೆ  ಅವನು ನಮ್ಮ ಹಾಗೇನೆ ಆ ವಿಷಯದ ಹಿಂದೆ ಬಿದ್ದಿರುತ್ತಾನೆ.
ಟೆಕ್ನಿಕಲ್ ಹೆಲ್ಪ್ ನಿಂದ ಹಿಡಿದು  ಬಿಚ್ಚಿ ಹೋದ ಗುಂಡಿ ಯನ್ನು ತಿರುಗಿ ಅಂಗಿಗೆ ಹಚ್ಚುವುದು ಹೇಗೆ ಎನ್ನುವುದು ಸಹ ನಿಮಗೆ ಗೂಗಲ್ ನಲ್ಲಿ ಲಭ್ಯ. ಸಾಫ್ಟ್ ಲೋಕದವರಿಂದ ಗೂಗಲ್ ನನ ಕಸಿದುಕೊಂಡು ಬಿಟ್ಟರೆ, ಅವರ ಪಾಡು : “ ಮೀನು ನೀರಿನಿಂದ ಹೊರ ಬಿದ್ದಂತಾಗುತ್ತದೆ”.

ಇದು ಬರೆ ಗೂಗಲ್ ಬಗ್ಗೆ ಆಯಿತು, ಇನ್ನು ಗೂಗಲ್ ನ ಒಂದೊಂದು ಅಪ್ಲಿಕೇಶನ್ ಬಗ್ಗೆ ಹೇಳುತ್ತಾ ಹೋದರಂತೂ ಕಥೆ ಮುಗಿದೇ ಹೋಯಿತು. ಬೆಂಗಳೂರಿನಲ್ಲಿ ಯಾವುದಾದರು ಹೊಸ ಏರಿಯ ಗೆ ಹೋಗಬೇಕಾದರೆ ಮೊದಲು ನೆನಪಿಗೆ ಬರುವುದೇ ಗೂಗಲ್ ಮ್ಯಾಪ್ಸ್. ಇಷ್ಟೊಂದು ಒಂದೇ ಅಂಗಡಿಯಲ್ಲಿ ಸಿಗಬೇಕಾರೆ ಸಾಫ್ಟ್ ಲೋಕದವರು ಸುಮ್ಮನೆ ಬಿಡುತ್ತಾರೆಯೇ. ಒಂದು ವೇಳೆ ಹುಡುಕಲಿಕ್ಕೆ ಏನು ವಿಷಯವಿಲ್ಲ ವೆಂದರು ಗೂಗಲ್ ಪೇಜ್ ಓಪನ್ ಮಾಡಿ ಒಂದೊಂದು ಸಲ, “ಏನು ಟೈಪ್ ಮಾಡಲಿ?” ಅಂತ ಕೆಲವರು ಆಲೋಚಿಸುತ್ತಾರೆ.  ಇನ್ನು ಕೆಲವರು, “getting bored “ ಅಂತ ಕೂಡ ಸರ್ಚ್ ಕೊಡ್ತಾರೆ. ಅದಕ್ಕೂ ಕೂಡ ನಿಮಗೆ ಸಾವಿರದ ಎಂಟು ಮಾಹಿತಿಗಳು ಬರುತ್ತವೆ.

“ಗೂಗಲ್ ಬಿಟ್ಟು ಸಾಫ್ಟ್ ಲೋಕ , Ctrl+C ಮತ್ತು Ctrl+V ಕೀ ಗಳನ್ನ ಬಿಟ್ಟು ಸಾಫ್ಟ್ ವೇರ್ ಎಂಜಿನೀಯರ್ ಇರಲು ಸಾಧ್ಯವಿಲ್ಲ ಕಾಂತಾ!” ಅನ್ನುವ ಮಾತು ತುಂಬಾ ದೂರ ಏನು ಇಲ್ಲ.


ಈ ವಾರದ ಬಿಲ್ಡ್ ಲೇಬಲ್ : ನನ್ನ ಸ್ನೇಹಿತನ ಪ್ರಾಕ್ಟಿಕಲ್   ಮಾತು, “ ಗೂಗಲ್ ನಲ್ಲಿ ನಿನಗೆ ಎಲ್ಲ ಹುಡುಕಿ ಕೊಡಬಹುದು, ಆದರೆ ದೇವಸ್ಥಾನದ  ಎದುರುಗಡೆ ಬಿಟ್ಟು ಕಳೆದು ಹೋದ ಚಪ್ಪಲಿ ಮಾತ್ರ ಆ ಗೂಗಲ್ ನಿಂದಲೂ ಹುಡುಕಲೂ ಸಾಧ್ಯವಿಲ್ಲ”, ನನ್ನ ಅನಿಸಿಕೆ : ಯಾವನಿಗ್ಗೊತ್ತು, ಈ ಅಂಕಣ ನೀವು ಓದುವ ಹೊತ್ತಿಗೆ ಗೂಗಲ್ ನೋರು ಅದಕ್ಕೂ ಒಂದು “app“ ಬರದ್ರೂ ಬರ್ದಿರ್ತಾರೆ!