Wednesday, November 26, 2014

ಅಂಕಣ ೩೯ : ಸಾಫ್ಟ್ ಲೋಕ ಮತ್ತು ಬೆಂಗಳೂರು

ಕಳೆದೆರಡು ವಾರದ ಅಂಕಣಗಳಲ್ಲಿ ಕನ್ನಡಕ್ಕೆ ಸಂಭಂದಿಸಿದ ವಿಷಯಗಳನ್ನ ನೋಡಿದೆವು. ಈಗ  ಪುನಃ ನಮ್ಮ ಸಾಫ್ಟ್ ಲೋಕ ಕ್ಕೆ ಹೊರಡೋಣ.   ಬೆಂಗಳೂರಿಗೂ ಸಾಫ್ಟ್ ಲೋಕಕ್ಕೂ ಇರುವ ನಂಟು ಹೇಗಿದೆ ಅಂದ್ರೆ........

ಮೊದಲಿಗೆ ನೀವೊಬ್ಬರೇ ಬರುತ್ತೀರಿ.
ನಿಮ್ಮ ಥರಾನೇ ಸಾಫ್ಟ್ ಲೋಕದ ಕೆಲಸವನ್ನು ಅರಸಿಕೊಂಡು ಹಲವಾರು ಜನ ಬಂದಿರುತ್ತಾರೆ. ಕೆಲವರಿಗೆ ಕೆಲಸ ಸಿಕ್ಕಿರುತ್ತದೆ, ಇನ್ನು ಕೆಲವರು ಕೆಲಸದ ಹುಡುಕಾಟದಲ್ಲಿ ಇರುತ್ತಾರೆ.
ಕೆಲಸ ಸಿಕ್ಕವರು, ಕೆಲಸ ಸಿಗದವರು, ಸಿಕ್ಕವರು ಮತ್ತು ಸಿಗದವರು ಒಂದು ನಾಲ್ಕೈದು ಜನ ಸೇರಿಕೊಂಡು ಒಂದು ಕಡೆ ಇರುತ್ತೀರಿ. ದಿನ ಕಳೆದಂತೆ ಎಲ್ಲರಿಗೂ ಒಂದೊಂದು ಕಂಪನಿಯಲ್ಲಿ ಕೆಲಸ ಸಿಗುತ್ತದೆ.
ಕೆಲಸ, ರೂಂ, ವೀಕ್ ಡೇ ಮತ್ತು ವೀಕ್ ಎಂಡ್ ಹೀಗೆಯೇ ಸಾಗುತ್ತಿರುತ್ತದೆ ಜೀವನ.
Phase 1 : ಒಂದು ಮನೆ, ನಾಲ್ಕು ಜನ.


ನಿಧಾನವಾಗಿ ದಿನ, ವರುಷ ಉರುಳಿದಂತೆ ಆ ನಾಲ್ಕೈದು ಜನರಲ್ಲಿ ಒಬ್ಬನಿಗೆ ಮದುವೆ ಫಿಕ್ಸ್ ಆಗುವ ಕಾಲ ಹತ್ತಿರ ಬರುತ್ತದೆ." ಮದುವೆ ಆದ ಮೇಲೆ ನಾನು ಬೇರೆ ಕಡೆಗೆ ಶಿಫ್ಟ್ ಆಗುತ್ತೀನಿ" ಅಂತ ಅವನು ಉಳಿದವರಿಗೆ ಒಂದು ಸಣ್ಣ hint ಕೊಡುತ್ತಾನೆ. ಅವನ ಮದುವೆ ಆಗುತ್ತದೆ. 2BHK ಇರುವ ಮನೆಗೆ ಅವನ ಸಂಸಾರ ದ ಸ್ಥಾನ ಪಲ್ಲಟ ಆಗುತ್ತದೆ. ಅಷ್ಟು ಹೊತ್ತಿಗಾಗಲೇ ಒಂದು Two wheeler ಸಹ ಅವನ ಮನೆಯ ಮುಂದೆ ಬಂದು ನಿಂತಿರುತ್ತದೆ.
Phase 2:  ಒಂದು 2 BHK ಮನೆ, ಒಂದು two wheeler, ಇಬ್ಬರು ಜನ ( ಹೊಸತಾಗಿ ಮದುವೆಯಾದ ಗಂಡ - ಹೆಂಡತಿ )
ಸ್ವಲ್ಪ ದಿನ ಗಳ ಮತ್ತಿ ಹಾಗೆಯೇ ಸಾಗುತ್ತದೆ ನವ ಜೋಡಿಗಳ ಸಂಸಾರ. ವೀಕೆಂಡ್ ನಲ್ಲಿ ಆಫೀಸಿನ ಕೆಲಸ ಮತ್ತು ವೀಕೆಂಡ್ ನಲ್ಲಿ ಟ್ರಿಪ್ ಅಥವಾ ಮೂವಿ ಅಥವಾ ನೆಂಟರ ಮನೆ ಗೆ ಭೇಟಿ ಹೀಗೆ ಸಾಗುತ್ತಿರುತ್ತದೆ... ಒಂದೆರಡು ವರ್ಷಗಳ ಬಳಿಕ ಮನೆಯ ಮುಂದೆ Two wheeler ನ ಜೊತೆಗೆ ಒಂದು Four wheeler ಸಹ ಬಂದು ನಿಂತಿರುತ್ತದೆ.
Phase 3: ಒಂದು ಮನೆ, ಇಬ್ಬರು ಜನ, ಒಂದು Two wheeler , ಒಂದು Four wheeler
ಒಂದೆರಡು ವರ್ಷಗಳ ಬಳಿಕ ಮಕ್ಕಳಾಗುತ್ತೆ , ಅಲ್ಲಿಂದ ನಿಜವಾದ ಸಮಸ್ಯೆ ಶುರು ಆಗುತ್ತೆ. ತಂದೆ ತಾಯಿ ಇಬ್ಬರು ಕೆಲಸಕ್ಕೆ ಹೋದರೆ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳೋರು ಯಾರು? ಅದರಲ್ಲೂ ಬೆಂಗಳೂರಿನಂತ ನಗರದಲ್ಲಿ ಒಬ್ಬರೇ ದುಡಿದರೆ ಬದುಕು ಸಾಗಿಸುವುದು ಕಷ್ಟ, ಅದೂ ಸಾಫ್ಟ್ ಲೈಫ್ ಗೆ ಹೊಂದಿ ಕೊಂಡ ಮೇಲೆ! ಅವಾಗ ಶುರು ಆಗುತ್ತೆ ಹಗ್ಗ ಜಗ್ಗಾಟ .  ಊರಿನಲ್ಲಿರುವ ಅಪ್ಪ - ಅಮ್ಮ ನನ್ನು ಬೆಂಗಳೂರಿಗೆ ಕರೆತರುವುದು.
ಅವರಿಗೆ ಬೆಂಗಳೂರಿನ ವಾತಾವರಣ ಇಷ್ಟ ಇಲ್ಲ ದಿದ್ದರೂ ಮಕ್ಕಳು ಮತ್ತು ಮೊಮ್ಮಕ್ಕಳ ಸಲುವಾಗಿ ಆದರೂ ಬರುತ್ತಾರೆ.
Phase 4: ಒಂದು ಮನೆ, ಒಂದು Two wheeler , ಒಂದು Four wheeler , ಆರು ಜನ ( ಗಂಡ - ಹೆಂಡತಿ, ಅಪ್ಪ - ಅಮ್ಮ , ಇಬ್ಬರು ಮಕ್ಕಳು ).
ಈಗ ಸ್ವಲ್ಪ ಮೊದಲನೇ ಪ್ಯಾರ ಓದಿ. ಇದೆ ಥರ ಪ್ರತಿಯೊಬ್ಬರೂ ಸಹ ಒಂದರಿಂದ ಆರು ಜನರಾಗುತ್ತಾರೆ. ಇನ್ನು ಒಂದು ಸಲ ಮಕ್ಕಳ ಓದು ಶುರು ಆಯಿತು ಅಂದ್ರೆ ಯಾರು ಬೆಂಗಳೂರಿನಿಂದ ಕಾಲು ಕಿತ್ತುವುದಿಲ್ಲ. ಅಲ್ಲಿಗೆ ಅವರೆಲ್ಲರೂ ಸಹ ಬೆಂಗಳೂರಿನವರಾಗಿ ಬಿಡುತ್ತಾರೆ. ಇದೆ ರೀತಿ ಪ್ರತಿ ವರ್ಷವೂ ಸಾವಿರಾರು ಜನರ ಆಗಮನ ಬೆಂಗಳೂರಿನ ಕಡೆಗೆ ನಡೆಯುತ್ತದೆ. ಬೆಂಗಳೂರಿನಲ್ಲಿ ಮೂಲ ಬೆಂಗಳೂರಿ ನವರಿಗಿಂತ ವಲಸೆ ಬಂದವರೇ ಹೆಚ್ಚು .
ಇದೆ ಕೇವಲ ಬೆಂಗಳೂರಿನ ಕಥೆ ಮಾತ್ರ ಅಲ್ಲ , ದೇಶದಲ್ಲಿ ತುಂಬಾ ಸ್ಪೀಡ್ ಆಗಿ ಬೆಳೆಯುತ್ತಿರುವ ಎಲ್ಲ ನಗರ ಗಳ ಕಥೆ ಸಹ ಇದೆ.
ಈ ವಾರದ ಬಿಲ್ಡ್ ಲೇಬಲ್ : ನಾವು ಈ ಥರ ಬಂದು ಬಂದೆ ಬೆಂಗಳೂರಿನ ಜನಸಂಖ್ಯೆ ಇವತ್ತು ೧ ಕೋಟಿ ಮುಟ್ಟಿದೆ.

Thursday, November 13, 2014

ಅಂಕಣ ೩೮ : ಕನ್ನಡ ಕಟ್ಟುವ ಸಣ್ಣ - ಪುಟ್ಟ ಕೆಲಸ

ಭಾಷೆ ಬಲಗೊಳ್ಳಬೆಕಾದರೆ, ಭಾಷೆ ಆರ್ಥಿಕ ಸದೃಡ ವಾಗಬೇಕು ಅನ್ನೋದನ್ನ ಕಳೆದ ವಾರದ ಅಂಕಣದಲ್ಲಿ ನೋಡಿದೆವು. ಆದರೆ ಹಾಗಾಗಬೇಕಂದರೆ ನಾವೇನು ಬೆಟ್ಟ ಕುಟ್ಟಿ ಪುಡಿ ಮಾಡಬೇಕಾಗಿಲ್ಲ. ನಮ್ಮ ದಿನ ಜೀವನದಲ್ಲಿ ಒಂದಿಷ್ಟು ಬದಲಾವಣೆ ತಂದರೆ ಸಾಕು. ಅಂತಹ ಬದಲಾವಣೆಗಳು ಯಾವವು ಅನ್ನೋದನ್ನ ಈ ಅಂಕಣದಲ್ಲಿ ನೋಡೋಣ:

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೧ : ಭಾಷೆ ಬಲಗೊಳ್ಳಬೆಕಾದರೆ ಅದರಿಂದ “ಅನ್ನ” ಹುಟ್ಟಬೇಕು.“ಅನ್ನ” ಹುಟ್ಟಬೇಕಾದರೆ ಭಾಷೆ ಆರ್ಥಿಕವಾಗಿ ಬಳಕೆಯಲ್ಲಿರಬೇಕು.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೨ :ನೀವು ಬೆಂಗಳೂರಿನಲ್ಲಿದೀರಿ ಅಂದರೆ ದಿನಕ್ಕೆ ಕನಿಷ್ಠ ಪಕ್ಷ ಎರಡಾದರೂ " ಜಾಹಿರಾತಿನ ಕರೆಗಳು" ನಿಮ್ಮ ಮೊಬೈಲ್ ಗೆ ಬರುತ್ತವೆ. ಅವುಗಳಿಗೆ ಉತ್ತರಿಸಿ. " ನನಗೆ ಇಂಗ್ಲಿಷ್ ಬರುವುದಿಲ್ಲ, ದಯವಿಟ್ಟು ನನ್ನ ಜೊತೆ ಕನ್ನಡ ದಲ್ಲಿ ಮಾತಾಡ್ತೀರ ಅಂತ ಕೇಳಿ". ನಿಮ್ಮ ಈ ಮಾತಿನಿಂದ ಆ ಕಂಪನಿಯ ಕಾಲ್ ಸೆಂಟರ್ ನಲ್ಲಿ ಒಬ್ಬ ಕನ್ನಡಿಗ ನಿಗೆ ಕೆಲಸ ದೊರೆಯುತ್ತದೆ.



ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೩ : ನೀವು ಓದುತ್ತೀರೋ - ಬಿಡುತ್ತೀರೋ, ನೀವು ಪ್ರಯಾಣ ಮಾಡುವಾಗ ಕನ್ನಡ ಒಂದು ಪುಸ್ತಕ ( ಕಥೆ - ಕಾದಂಬರಿ) , ಅಥವಾ ಕನಿಷ್ಠ ಪಕ್ಷ ಕನ್ನಡ ದಿನಪತ್ರಿಕೆ ನಿಮ್ಮ ಕೈಯಲ್ಲಿರಲಿ. ನಾಚಿಕೆ ಬೇಡ. ಒಂದು ಹೊಸ ಟ್ರೆಂಡ್ ಸೃಷ್ಟಿ ಮಾಡೋಕೆ ಯಾರ ದಾರಿಯು ಕಾಯಬೇಕಾಗಿಲ್ಲ. ನಾವೇ ಶುರು ಮಾಡಬಹುದು.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೪:  ಕನ್ನಡ ಭಾಷೆ ಗೊತ್ತಿಲ್ಲ ದಿರುವವರು, ಕನ್ನಡ ದಲ್ಲಿ ಮಾತಾನಾಡಲು ಪ್ರಯತ್ನ ಪಟ್ಟಾಗ ಅವರನ್ನ ನೋಡಿ ನಗುವುದು ಬೇಡ. ಅವರನ್ನ ಪ್ರೋತ್ಸಾಹಿಸಿ. ಚಿಕ್ಕ ಮಗುವಾಗಿದ್ದಾಗ ನೀವು ಸಹ ಮೊದಲನೆಯ ಸಲವೇ ಎಲ್ಲವನ್ನು ಸರಿಯಾಗಿ ಮಾತಾಡಿರಲಿಲ್ಲ. ನೆನಪಿರಲಿ.


ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೫: ಕನ್ನಡ ಕಟ್ಟುವ ಕೆಲಸದಲ್ಲಿ ನಮ್ಮ ಅನೇಕ ಹಿರಿಯರ ಕೊಡುಗೆ ಅವಿಸ್ಮರಣೀಯ ಆದರೆ ಇವತ್ತು ನಾವು ಕೇಳಿಕೊಳ್ಳಬೇಕಾದ ಬಹು ಮುಖ್ಯ ಪ್ರಶ್ನೆ : ನಾವು ಬರೀ ನಮ್ಮ ಹಿರಿಯರ ನ್ನು ಸ್ಮರಿಸುತ್ತ ಕುಳಿತು ಬಿಟ್ಟಿದ್ದೆವಾ ಅಥವಾ ಇವತ್ತು ಕನ್ನಡ ಕಟ್ಟುವ ಕೆಲಸ ದಲ್ಲಿ ನಾವೂ ನಮ್ಮ ಪಾಲಿನ ಕೆಲಸ ಮಾಡ್ತಾ ಇದ್ದೀವಾ? ಅನ್ನೋದು.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೬: "ಅಭಿಮಾನ"ಕ್ಕಿಂತ "ಅನ್ನ" ದೊಡ್ಡದು. ಅಭಿಮಾನ ಮನಸ್ಸಿನಲ್ಲಿರಲಿ, ಆದರೆ ಕನ್ನಡ ದಿಂದ "ಅನ್ನ" ಹುಟ್ಟು ಹಾಕುವುದು ಹೇಗೆ? ಅನ್ನುವ ಪ್ರಶ್ನೆಗೆ ಉತ್ತರ ನಮ್ಮ ತಲೆ ಸದಾ ಆಲೋಚಿಸುತ್ತಿರಲಿ.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೭ : ಬೆಂಗಳೂರಿನಲ್ಲಿ ಆದಷ್ಟು ನಿಮ್ಮ ಮಾತು "ಕನ್ನಡ ದಲ್ಲಿರಲಿ" ( ಬೇರೆ ಭಾಷೆ ಬರುತ್ತಿದ್ದರೂ) ಇದರಿಂದ ವಲಸಿಗರೂ ಕನ್ನಡ ಕಲಿಯುತ್ತಾರೆ.ನಾವು ಕನ್ನಡ ದಲ್ಲಿ ಮಾತಾಡದೆ ಹೋದರೆ, ಕನ್ನಡ ಭಾಷೆ ಕಲಿಯಲು ಇಷ್ಟ ಪಡುವವರಿಗೆ  ನೀವು ವಂಚಿಸಿ ದಂತಾಗುತ್ತದೆ . ಭಾಷೆಯನ್ನೇ ನಮ್ಮಲ್ಲೇ ಹಿಡಿದಿಟ್ಟು ಸ್ವಾರ್ಥಿಗಳಾಗೊದು ಬೇಡ. ಬೇರೆಯವರೂ  ಕಲಿಯಲಿ. ನಾಲ್ಕಾರು ಜನ ಕಲಿಯಲಿ. ಹರಿಯಲು ಬಿಡಿ.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೮ : ಮಾಲ್ ಇರಲಿ,ಏರ್ಪೋರ್ಟ್ ಇರಲಿ, ಬಸ್ ಸ್ಟಾಂಡ್ ಇರಲಿ, ಮಲ್ಟಿಪ್ಲೆಕ್ಸ್ ಥೇಟರ್ ಇರಲಿ... ಕನ್ನಡ ದಲ್ಲಿ ಮಾತಾಡ್ತಾ ಹೋಗಿ, ಮಾತಾಡೋದಕ್ಕೆ ಹಿಂಜರಿಕೆ ಅಥವಾ ಕೀಳರಿಮೆ ಬೇಡ.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೯:
"ನನ್ನೊಬ್ಬನಿಂದ ಮಾತ್ರ ಕನ್ನಡ ಕಟ್ಟುವ ಕೆಲಸ ಹೇಗೆ ಸಾಧ್ಯ?" ಅನ್ನೋ ಮಾತು ಬೇಡ. ಒಂದು ಸಲ ಕೆಳಗಿನ ಪುಸ್ತಕ ಗಳನ್ನು ಓದಿ, ಒಬ್ಬರೇ ಕನ್ನಡ ಕಟ್ಟುವ ಕೆಲಸವನ್ನು ಹೇಗೆ ಮಾಡಿದ್ದಾರೆ ಅಂತ ಗೊತ್ತಾಗುತ್ತೆ.  
೦೧. ಸರ್. ಎಂ. ವಿಶ್ವೇಶ್ವರಯ್ಯ ನವರ " ನನ್ನ ವೃತ್ತಿ ಜೀವನದ ನೆನಪುಗಳು ( ಅನುವಾದಿತ ಕೃತಿ )"
೦೨. ಚಿತ್ರ ನಟ ಅನಂತನಾಗ್ ಅವರು ಬರೆದ "ನನ್ನ ತಮ್ಮ ಶಂಕರ "
೦೩. ಶಿವರಾಮ ಕಾರಂತಜ್ಜರ " ಹುಚ್ಚು ಮನಸಿನ ಹತ್ತು ಮುಖಗಳು "
೦೪. ಎಲ್ಲದಕ್ಕಿಂತ ಹೆಚ್ಚಾಗಿ ಆಲೂರು ವೆಂಕಟರಾಯರ " ನನ್ನ ಜೀವನದ ಸ್ಮೃತಿಗಳು" . ಮೊದಲು ನಿಮ್ಮೆರಡು ಕೈಗಳು ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗಲಿ, ನಂತರ ಹಲವಾರು ಕೈಗಳು ನಿಮ್ಮ ಜೊತೆ ಸೇರುತ್ತವೆ.
ಅಂದಹಾಗೆ " ಮಾಲ್ಗುಡಿಯ ಮಹಾನ್ ನಿರ್ದೇಶಕ : ಶಂಕ್ರಣ್ಣ ನಿಗೆ ಹುಟ್ಟು ಹಬ್ಬದ ಶುಭಾಶಯಗಳು".

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೦: ಕನ್ನಡ "ಅನ್ನ" ದ ಭಾಷೆ ಯಾಗಬೇಕಾದರೆ ಪ್ರತಿ ವರ್ಷ " ಸಾಹಿತ್ಯ ಸಮ್ಮೇಳನಗಳು" ನಡೆದಂತೆ, " ಉದ್ಯೋಗ ಸಮ್ಮೇಳನ" ಗಳು ನಡೆಯಬೇಕು. ಇದರಲ್ಲಿ ಜಗತ್ತಿನ ಎಲ್ಲ ಕಡೆಗಿರುವ " ಕನ್ನಡ ಉದ್ಯಮಿಗಳನ್ನು" ಆಹ್ವಾನಿಸಬೇಕು. ಭಾಷೆಯಿಂದ "ಅನ್ನ" ಹುಟ್ಟು ಹಾಕುವ ಬಗ್ಗೆ ಚರ್ಚೆಗಳಾಗಬೇಕು. 
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೧: ನೀವು ಪಕ್ಕದ ರಾಜ್ಯಕ್ಕೆ ಹೋದಾಗ, ಬಸ್ ಸ್ಟಾಂಡ್ ನಲ್ಲಿ , ರೈಲ್ವೆ ಸ್ಟೇಷನ್ ನಲ್ಲಿ ಕನ್ನಡ ಪತ್ರಿಕೆ ಸಿಗುತ್ತವೆಯೋ ಅಂತ ಕೇಳಿ ನೋಡಿ. ಇವತ್ತು ಸಿಗದೇ ಇರಬಹುದು, ಹತ್ತು ಜನ ಪ್ರತಿ ಸಲ ಕೇಳಲು  ಶುರು ಮಾಡಿದಾಗ, ಬೇಡಿಕೆ ಹೆಚ್ಚಾದಂತೆ ಅಲ್ಲಿಯೂ ಕನ್ನಡ ಪತ್ರಿಕೆ ಗಳು ಸಿಗುವಂತಾಗುತ್ತವೆ.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೨: ಒಂದು ಕನ್ನಡ ಸಿನಿಮಾ ನೋಡಿದೀರಾ? ಇಷ್ಟವಾಯಿತಾ ?. ನಾಲ್ಕು ಜನಕ್ಕೆ ತಿಳಿಸಿ. ಫೇಸ್ ಬುಕ್ ನಲ್ಲಿ ಬರೆಯಿರಿ. ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ. ಇಷ್ಟವಾಗಲಿಲ್ಲವಾ? ಸುಮ್ಮನಿದ್ದುಬಿಡಿ.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೩: ಪ್ರವಾಸಕ್ಕೆ ಬೇರೆ ಊರುಗಳಿಗೆ ಹೋಗುವುದಕ್ಕಿಂತ ನಮ್ಮ ರಾಜ್ಯ ಮೊದಲು ನಮಗೆಷ್ಟು ಗೊತ್ತು ಅಂತ ಪ್ರಶ್ನೆ ಹಾಕಿ ಕೊಳ್ಳುವುದು ಉಚಿತ.
ನಮ್ಮಲ್ಲಿ ಎಷ್ಟು ಜನ, ಮೈಸೂರಿನವರು ಬಾಗಲಕೋಟೆಗೆ, ಚಾಮರಾಜ ನಗರದವರು ಗುಲ್ಬರ್ಗಾಕ್ಕೆ, ಬೀದರಿನವರು ಕೊಡಗಿಗೆ, ಬೆಂಗಳೂರಿನವರು ರಾಯಚೂರಿಗೆ, ಕೊಪ್ಪಳ ದವರು ಮಂಗಳೂರಿಗೆ ಹೋಗಿದ್ದೇವೆ?. ಮೊದಲು ನಮ್ಮ ಮನೆ ಯನ್ನ  ನಾವು ಸರಿಯಾಗಿ ತಿಳಿದು ಕೊಳ್ಳುವುದು ಉಚಿತ ಅನಿಸುತ್ತೆ.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೪:ನೀವು ಕರ್ನಾಟಕದಿಂದ ಆಚೆ ಇದ್ದೀರಾ ಅಂದರೆ ನಿಮ್ಮ ಮನೆಯ ಭಾಷೆ ಕನ್ನಡ ವಾಗಿರಲಿ.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೫:ನೀವು ಬೇರೆ ರಾಜ್ಯದಲ್ಲಿ ಇರುತ್ತಿದ್ದೀರಿ ಅಂದರೆ ನಿಮ್ಮ ಮಕ್ಕಳಿಗೆ ಕನ್ನಡ ಓದು ಮತ್ತು ಬರಹ ಹೇಳಿ ಕೊಡಬಹುದು.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೬: ಕನ್ನಡ ಪರ ಹೋರಾಟ ಗಾರರನ್ನು ಗೌರವಿಸಿ. ಅವರಿಗೂ ಮನೆ ಮಟ ಎಲ್ಲ ಇರುತ್ತದೆ. ಅವರ ಪ್ರತಿಭಟನೆಗಳನ್ನ ಮನೆಯಲ್ಲಿ ಆರಾಮಾಗಿ  ಟಿ ವಿ  ಮುಂದೆ ಕುಳಿತು ನೋಡಿ, ಹೀಯಾಳಿಸುವುದು ಬೇಡ.

ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ  ೧೭: ನಾಲ್ಕು ಜನ ಸ್ನೇಹಿತರೊಟ್ಟಿಗೆ ಬೆರೆತಾಗ " ಇವತ್ತಿನ ದಿನದಲ್ಲಿ ಕನ್ನಡ ಕ್ಕೆ ಮಾರ್ಕೆಟ್ ವ್ಯಾಲ್ಯೂ" ತರುವುದು ಹೇಗೆ ಎನುವುದನ್ನು ಚರ್ಚಿಸಿ.ಕನ್ನಡ - ಭಾಷೆ - ನೆಲ - ಜಲ ಅನ್ನೋದನ್ನ ಬಹಳಷ್ಟು ಕೇಳಿದ್ದೇವೆ . ಆದರೀಗ ಕನ್ನಡ ದಿಂದ "ಅನ್ನ" ಹುಟ್ಟು ಹಾಕುವ ಬಗೆ ಹೇಗೆ ಅನ್ನುವುದನ್ನ ಚಿಂತನೆ ಮಾಡವುದು ಬಹಳ ಮುಖ್ಯ.

ವಾರದ ಬಿಲ್ಡ್ ಲೇಬಲ್ : ಮೇಲೆ ಹೇಳಿದುದರಲ್ಲಿ ಕನಿಷ್ಠ ಒಂದನ್ನಾದರೂ ನಾವು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಅದಕ್ಕಿಂತ ದೊಡ್ಡ ಕನ್ನಡದ ಕೆಲಸ ಬೇರೊಂದಿಲ್ಲ.

Thursday, November 6, 2014

ಅಂಕಣ ೩೭ : ಸಾಫ್ಟ್ ಲೋಕದಲ್ಲಿ ಕನ್ನಡ

ಹೌದು ನೀವು ನೀರಿಕ್ಷಿಸಿದಂತೆಯೇ, ನವೆಂಬರ್ ತಿಂಗಳಲ್ಲಿನ ಅಂಕಣಗಳು “ ಕನ್ನಡ” ದ ಕುರಿತಾಗಿ ಇರುತ್ತವೆ. ವಿಶೇಷವಾಗಿ “ಸಾಫ್ಟ್ ಲೋಕ ಮತ್ತು ಕನ್ನಡ” ದ ನಡುವಿನ ವಿಷಯದ ಬಗ್ಗೆ. ಭಾಷೆ ಎನ್ನುವುದು ಹುಟ್ಟಿದ್ದು ನಮ್ಮ ಭಾವನೆಗಳನ್ನ ವ್ಯಕ್ತ ಪಡಿಸಲು. ಆದರೆ ಇತ್ತೀಚಿನ ದಿನಗಳಲ್ಲಿ ಭಾಷೆ ಎನ್ನುವುದು ಒಂದು ಜನಾಂಗದ ಅಸ್ತಿತ್ವದ ಪ್ರಶ್ನೆ ಆಗಿರುವುದು ಮಾತ್ರ ಸುಳ್ಳಲ್ಲ. ಜಾಗತೀಕರಣದ ಸಂದರ್ಭದಲ್ಲಿ ಪ್ರಬಲವಾದ ಭಾಷೆಯಿಂದ ದುರ್ಬಲವಾದ ಭಾಷೆ ಮೇಲೆ ದಾಳಿ ನಡೆಯುತ್ತಲೇ ಇದೆ. ಆದರೆ ಒಂದು ಭಾಷೆ ಪ್ರಬಲ ಅಥವಾ ದುರ್ಬಲ ಆಗುವುದಾದರೂ ಹೇಗೆ? ತೀರ ಸರಳವಾಗಿ ಹೇಳಬೇಕೆಂದರೆ : ಯಾವುದು ಹೆಚ್ಚು ಹೆಚ್ಚು ಬಳಕೆಯಲ್ಲಿ ಇರುತ್ತದೆಯೋ ಅದು ದಿನೇ  ದಿನೇ  ಬೆಳೆಯುತ್ತಾ ಹೊಗುತ್ತದೆ. ಯಾವುದು ಬಳಕೆಯಲ್ಲಿ ಇಲ್ಲದೆ ಮೂಲೆಯಲ್ಲಿ ಬಿದ್ದಿರುತ್ತದೋ ಅದು ದಿನೇ  ದಿನೇ  ಕೊಳೆಯುತ್ತಾ ಹೋಗುತ್ತದೆ.


ಇನ್ನು ಕನ್ನಡ ದ ವಿಷಯಕ್ಕೆ ಬರುವುದಾದರೆ:
“ ನಮ್ಮದು ಅಷ್ಟು ವರ್ಷಗಳ ಭಾಷೆ, ಒಂದು ಕಾಲದಲ್ಲಿ ಹೀಗಿತ್ತು, ಒಂದು ಕಾಲದಲ್ಲಿ ಹಾಗಿತ್ತು, ನಮ್ಮ ಭಾಷೆಗೆ ಅಷ್ಟು ಪ್ರಶಸ್ತಿ ಗಳು ಬಂದಿವೆ, ಹಾಗಾಯ್ತು, ಹೀಗಾಯ್ತು” ಅಂತ ಬರೀ ಮಾತಾಡುತ್ತ ಹೋಗುವ ಬದಲು ಇವತ್ತು ನನ್ನ ಭಾಷೆಯ ಉಳಿವಿಗೆ, ಬೆಳೆಸುವಿಕೆಗೆ ನಾನೇನು ಮಾಡ್ತಾ ಇದ್ದೀನಿ? ಅಥವಾ ಮಾಡಬೇಕು ಎನ್ನುವುದು ತುಂಬಾ ಮುಖ್ಯ. ಯಾರೋ ಬಂದು ಏನೋ ಮಾಡುತ್ತಾರೆ ಎನ್ನುವುದಕ್ಕಿಂತ, ಪ್ರತಿಯೊಬ್ಬರೂ ಸಹ ಭಾಷೆಯ ಏಳ್ಗೆಗೆ ಏನು “ ನಾನೇನು ಮಾಡಬಹುದು?” ಅಂತ ಯೋಚಿಸುವುದು ತುಂಬಾ ಸೂಕ್ತ. ನಿಜ ನಮ್ಮ ಪೂರ್ವಿಕರೆಲ್ಲರೂ ಕನ್ನಡಕ್ಕೆ ಅಗಾಧವಾದ ಸಾಧನೆ, ಹೋರಾಟ  ಗಳನ್ನ ಮಾಡಿ ನಮಗೆ ಆ ಕೀರ್ತಿಯನ್ನ ಬಿಟ್ಟುಹೋಗಿದ್ದಾರೆ. ಆದರೆ ನಾವು ಬರೀ ಅದೇ ಜಪ ಮಾಡುವ ಬದಲು ನಮ್ಮಿಂದ ಏನಾಗುತ್ತದೋ ಅದನ್ನ ಮಾಡುವುದು ಚೊಲೊ.

ಹೀಗಂದ ತಕ್ಷಣ ನಮ್ಮ ಇರುವ ಕೆಲಸವನ್ನ ಬಿಟ್ಟು ಬರೀ ಭಾಷೆ ಕೆಲಸಕ್ಕೆ ನಿಂತುಬಿಡಬೇಕು ಅಂತ ಅಲ್ಲ. ಅದು ವಾಸ್ತವತೆಯೂ ಅಲ್ಲ. ಆದರೆ ನಮ್ಮ ದಿನ ನಿತ್ಯದ ಕೆಲಸಗಳ ಮಧ್ಯೆಯೇ ನಾವು ಹೇಗೆ ನಮ್ಮ ಕೈಲಾದ ಪ್ರಯತ್ನವನ್ನ ಮಾಡಬಹುದು ಅನ್ನೋದು ತುಂಬಾ ಮುಖ್ಯ. ಅಷ್ಟಕ್ಕೂ ಹನಿ ಹನಿ ಕೂಡಿದರೆ ಹಳ್ಳ ಎನ್ನುವ ಮಾತನ್ನ ನಮ್ಮ ಹಿರಿಯರಿಂದ ಕೇಳಿದ್ದೇವೆ. ಈಗೇನಿದ್ದರೂ ಅದನ್ನ ಕಾರ್ಯ ರೂಪಕ್ಕೆ ತರುವ ಪ್ರಯತ್ನ ಮಾಡಬೇಕು .
ಇವತ್ತು ನಮ್ಮ ಮುಂದಿರುವ ಅತೀ ಮುಖ್ಯವಾದ ಪ್ರಶ್ನೆ: ಭಾಷೆಯಿಂದ “ಅನ್ನ”  ಹುಟ್ಟು ಹಾಕುವ ಬಗೆ ಹೇಗೆ?
ಈ ಪ್ರಶ್ನೆ ಯಾಕೆ ಮುಖ್ಯ ಆಗುತ್ತದೆ ಅಂದರೆ ಒಂದು ಸಲ ಭಾಷೆಗೆ “ಅನ್ನ”  ಹುಟ್ಟು ಹಾಕೋ ಶಕ್ತಿ ಬಂದರೆ ಉಳಿದೆಲ್ಲ ವಿಷಯಗಳು ತನ್ನ ಪಾಡಿಗೆ ತಾನೇ ದಾರಿಗೆ ಬರಲು ಶುರು ಆಗುತ್ತವೆ. ನಮ್ಮ ನಮ್ಮ ಭಾವನೆಗಳು ಏನೇ ಇರಲಿ, ಭಾವನೆಗಳಿಗಿಂತ “ಬದುಕು” ಎಷ್ಟೋ ಸಲ  ಮುಖ್ಯವಾಗುತ್ತದೆ. “ಬದುಕು” ಅಂದ ಕೂಡಲೇ “ ಅನ್ನ” ದ ಪ್ರಶ್ನೆ ಬರುತ್ತದೆ. ಅದಕ್ಕೆ ಮೊದಲು ನಾವು ಕನ್ನಡ ದಿಂದ “ಅನ್ನ” ಹುಟ್ಟು ಹಾಕುವ ಬಗೆ ಹೇಗೆ ಎನ್ನುವ ವಿಷಯದ ಮೇಲೆ ಆಲೋಚನೆ, ಚರ್ಚೆಗಳು ನಡೆಯಬೇಕಾಗಿದೆ.

ಭಾಷೆಯಿಂದ ಅನ್ನ ಹುಟ್ಟು ಹಾಕಬೇಕಾದರೆ, ಮೊದಲು ಭಾಷೆ ಆರ್ಥಿಕವಾಗಿ ಬಲಿಷ್ಠ ಗೊಳ್ಳಬೇಕು. ಭಾಷೆ ಆರ್ಥಿಕವಾಗಿ ಬಲಗೊಳ್ಳಬೆಕಾದರೆ “ ಆರ್ಥಿಕವಾಗಿ ಭಾಷೆ ಹೆಚ್ಚು ಹೆಚ್ಚು ಬಳಕೆಯಲ್ಲಿರಬೇಕು” . ಹಾಗಾಗಬೇಕೆಂದರೆ ನಾವೆಲ್ಲಾ ಬೆಟ್ಟ ಕಡಿದು ಪುಡಿ ಮಾಡಬೇಕಾಗಿಲ್ಲ, ಬದಲಿಗೆ ನಮ್ಮ ದಿನ ನಿತ್ಯದ ಜೀವನದಲ್ಲಿ “ ಅರ್ಥಿಕ ವಾಗಿ ಕನ್ನಡಕ್ಕೆ ಮೊದಲ ಸ್ಥಾನ ಕೊಟ್ಟರೆ ಸಾಕು”
ಈ ನಿಟ್ಟಿನಲ್ಲಿ ಸಾಫ್ಟ್ ಲೋಕದ ಜನ ಸ್ವಲ್ಪ ಗಮನ ಹರಿಸಬೇಕಾಗಿದೆ. ಇನ್ನು ಸಾಫ್ಟ್ ಲೋಕದ ವಿಷಯಕ್ಕೆ ಬಂದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಸ್ವಲ್ಪ ಮೈ ಜಾಡಿಸಿಕೊಂಡು ಮೇಲೆಳುತ್ತಿದೆ ಅನ್ನೋದು ಸಂತೋಷದ ವಿಷಯ ವಾದರೂ ಇದು ಇನ್ನು ಹೆಚ್ಚಾಗಬೇಕು. . ಕನ್ನಡ ದ ಕಡೆಗೆ ಯುವ ಪೀಳಿಗೆ ನಿಧಾನವಾಗಿ ವಾಲುತ್ತಿದ್ದಾರೆ. ಎಲ್ಲ ಕಡೆಗೂ ಕನ್ನಡದ ಗಾಳಿ ಬೀಸಲು ಶುರು ಆಗಿದೆ. ಆದರೆ ಇಷ್ಟಕ್ಕೆ ಖುಷಿ ಪಟ್ಟು ಸುಮ್ಮನೆ ಕೂಡುವ ಹಾಗಿಲ್ಲ. ಯಾಕಂದರೆ ಇದೊಂದು ನಿರಂತರ ಪ್ರಯತ್ನ. ಸಾಗುತ್ತಲೇ ಇರಬೇಕು.


ವಾರದ ಬಿಲ್ಡ್ ಲೇಬಲ್ :
ನಿಮ್ಮ ಪ್ರಶ್ನೆ : ಇದೆಲ್ಲ ಸರಿ, ಅಂಕಣ ವೇನೋ ಚೆನ್ನಾಗಿದೆ ಅನಿಸುತ್ತೆ. ಆದರೆ ನಾವು ನಾವಿದ್ದಲ್ಲಿಯೇ, ನಮ್ಮ ದಿನನಿತ್ಯದ ಜೀವನದಲ್ಲಿ , ನಮ್ಮ ಕೈಲಾದಷ್ಟು ಕನ್ನಡಕ್ಕಾಗಿ ಏನು ಮಾಡಬಹುದು?
ಉತ್ತರ : ಈ ಪ್ರಶ್ನೆ ನಿಮ್ಮ ಮನದಲ್ಲಿ ಈಗಾಗಲೇ ಬಂದಿದ್ದಾರೆ ಮೊದಲು ನಿಮಗೆ ಅಭಿನಂದಿಸುತ್ತೇನೆ. ಹೌದು  ನಾವೆಲ್ಲರೂ ಒಂದಿಷ್ಟು ಕೆಲಸಗಳನ್ನು ಮಾಡಬುಹುದು. ಅತ್ಯಂತ ಚಿಕ್ಕ ಚಿಕ್ಕ ಕೆಲಸಗಳನ್ನು  ಕಡಿಮೆ ಸಮಯದಲ್ಲಿ ಮಾಡ ಬಹುದು. ಇದರ ಬಗ್ಗೆ ಮುಂದಿನ ವಾರ ನೋಡೋಣ.