ಸಾಫ್ಟ್ ಲೋಕದಲ್ಲಿನ ಆನ್ ಸೈಟ್ ಬಗ್ಗೆ ಮತ್ತು ಆನ್ ಸೈಟ್ ಗೆ ಹೋದ ಮೇಲೆ ಹೇಗಿರುತ್ತೆ ಅಂತ ಕಳೆದ ಎರಡು ವಾರದ ಅಂಕಣದಲ್ಲಿ ನೋಡಿದ್ದಾಗಿದೆ. ಈಗ ಅಲ್ಲಿಂದ ವಾಪಾಸು ಬಂಡ ಮೇಲೆ ಹೇಗಿರುತ್ತೆ ಅನ್ನೋದನ್ನ ಸ್ವಲ್ಪ ನೋಡೋಣ…
ಒಂದು ವಾರವೋ, ಒಂದು ತಿಂಗಳೋ ಆನ್ ಸೈಟ್ ಗೆ ಹೋಗಿ ಬಂದಿದ್ದರೆ ವೀಪರಿತ ಬದಲಾವಣೆ ಗಳು ಏನೂ ಆಗಲ್ಲ ಬಿಡಿ. ಅದೇ ರೀತಿ ಸಾಫ್ಟ್ ಲೋಕದಲ್ಲಿ ಉನ್ನತ ಹುದ್ದೆಯಲ್ಲಿ ರುವವರು ಸಹ ವರ್ಷಕ್ಕೆ ಒಂದೆರಡು ಸಲ ವಾದರೂ ಆನ್ ಸೈಟ್ ಗೆ ಹೋಗಿ ಬರುವುದು ಸಾಮಾನ್ಯ ವಿರುತ್ತೆ. ಇಲ್ಲೂ ಸಹ ಅಂತಹ ಭಾರಿ ಬದಲಾವಣೆಗಳು ಏನೂ ಇರುವುದಿಲ್ಲ . ಆದರೆ ವರ್ಷಗಟ್ಟಲೆ ಆನ್ ಸೈಟ್ ಗೆ ಹೋಗಿ ಅವಧಿ ಮುಗಿಸಿ ವಾಪಿಸು ಬರಬೇಕಾದರೆ ಮಾತ್ರ ಒಂದಿಷ್ಟು ತೊಳಲಾಟ ಗಳು ಇದ್ದೆ ಇರುತ್ತವೆ.
ಮೊದಲೇ ಹೇಳಿದಂತೆ ಒಬ್ಬರೇ ಆನ್ ಸೈಟ್ ಗೆ ಹೋದರೆ ಸ್ವಲ್ಪ ಒಂಟಿ ತನವಂತು ಕಾಡುವುದು ನಿಜ. ಅಲ್ಲಿಂದ ಬಂದ ಮೇಲೆ ತಿರುಗಾ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಸಹ ಸ್ವಲ್ಪ ಸಮಯ ತೆಗೆದು ಕೊಳ್ಳುತ್ತದೆ. ಬ್ಯಾಚುಲರ್ ಗಳು ಆನ್ ಸೈಟ್ ಗೆ ಹೋಗಿ ಬಂದ ಮೇಲೆ ಕಾಡುವ ಮೊದಲ ಪ್ರಶ್ನೆ : “ ಅಲ್ಲಿ ಕೂಡಿಟ್ಟ ದುಡ್ಡನ್ನೆಲ್ಲ ಎಲ್ಲಿ ಇನ್ವೆಸ್ಟ್ ಮಾಡೋದು? ಬೆಂಗಳೂರಿನಲ್ಲಿ ಒಂದು ಮನೆ ತಗೊಳ್ಲಾ? ಅಥವಾ ಸ್ವಂತ ಊರಿನಲ್ಲಿ ಒಂದಿಷ್ಟು ಹೊಲ ತಗೊಳ್ಲಾ? ಹೀಗೆ ಒಂದಿಷ್ಟು ತೋಳಲಾಟ ಇದ್ದೆ ಇರುತ್ತವೆ .
ಇನ್ನು ಸಂಸಾರಸ್ಥರು ಆನ್ ಸೈಟ್ ಮುಗಿಸಿಕೊಂಡು ವಾಪಿಸು ಬರುವುದು ಅಂದರೆ ಸ್ವಲ್ಪ ಕಷ್ಟದ ಕೆಲಸವೇ ಸರಿ. ಅಲ್ಲಿಂದ ಬಂದ ತಕ್ಷಣ ಅಥವಾ ಬರುವುದಕ್ಕಿಂತಲೂ ಮುಂಚೆ ಕಾಡುವ ಮೊದಲ ಪ್ರಶ್ನೆ ; ಬೆಂಗಳೂರಿನಲ್ಲಿ ಯಾವ ಏರಿಯಾಗೆ ಶಿಫ್ಟ್ ಆಗಬೇಕು, ಮಕ್ಕಳ ಸ್ಕೂಲ್ ಎಲ್ಲಿ, ಇಲ್ಲಿಗೆ ಬಂದ ಮೇಲೆ ಇಬ್ಬರೂ ಕೆಲಸಕ್ಕೆ ಹೋಗಬೇಕಾ ? ಅಥವಾ ಒಬ್ಬರು ಮನೇಲಿ ಇದ್ದು ಒಬ್ಬರಷ್ಟೇ ಹೋದರೆ ಸಾಕಾ ?. ಹೀಗೆ ಹಲವಾರು ಪ್ರಶ್ನೆಗಳು ಇದ್ದೆ ಇರುತ್ತವೆ.
ಇಲ್ಲೊಂದು ತಮಾಷೆ ವಿಷಯ ಅಂದರೆ ವಿದೇಶದಿಂದ ವಾಪಾಸು ಬರುವಾಗ ಮಾಡುವ ಲಗೇಜು ಪ್ಯಾಕಿಂಗ್ ಮಾತ್ರ ಭಾರಿ ತಲೆನೋವಿನ ಕೆಲಸ. ಲಗೇಜು ಇಷ್ಟೇ ಕೆ.ಜಿ ಇರಬೇಕು, ಅದಕ್ಕಿಂತ ಹೆಚ್ಚು ಇರಬಾರದು. ಅಲ್ಲಿ ಚೆನ್ನಾಗಿ ಕಂಡದ್ದನ್ನೆಲ್ಲ ತುರುಕಿಕೊಂಡು ನಮ್ಮ ಊರಿಗೆ ಒಯ್ಯುವಂತಿಲ್ಲ. ಆನ್ ಸೈಟ್ ನಲ್ಲಿ ಇರಬೇಕಾದಾಗ ತಗೊಂಡಿರುವ ಸಾಮಾನುಗಳ ಪೈಕಿ ಅತೀ ಮುಖ್ಯವಾದುವುಗಳಷ್ಟೇ ನಮ್ಮ ಲಗೇಜಿಗೆ ಸೇರಿಕೊಳ್ಳುಬೇಕು. ಆದರೆ ಯಾವ್ಯಾವದನ್ನು ತರಬೇಕು ಯಾವುದನ್ನು ಬಿಡಬೇಕು ಅನ್ನೋದು ಕೂಡ ಒಂದು ತಲೆನೋವು.
ಇದೆಲ್ಲದಕ್ಕಿಂತ ಅಲ್ಲಿಂದ ಬರುವಾಗ: ” ಹೇಯ್ ನನಗೆ ಅಲ್ಲಿಂದ ಇದನ್ನ ತಗೊಂಡು ಬಾ, ಅದನ್ನ ತಗೊಂಡು ಬಾ” ಅಂತ ನಮ್ಮ ಸ್ನೇಹಿತರ ಒಂದು ದೊಡ್ಡ ಲಿಸ್ಟ್ ರೆಡಿ ಇರುತ್ತೆ. ಇದರ ಜೊತೆಗೆ ನಮ್ಮ ಮನೆಯವರಿಗೆ ಒಂದಿಷ್ಟು ಚಾಕೊಲೇಟು ತರೋದು ಬೇಡವಾ ?
ಆನ್ ಸೈಟ್ ಮುಗಿಸಿಕೊಂಡು ಬಂದ ಮೇಲೆ ಸ್ವಲ್ಪ ದಿನ ಅಲ್ಲಿನ ದೇಶದ ಬಗ್ಗೆ ಭಾಷಣ ಬಿಗಿಯುವ ಚಟ ಎಲ್ಲರಿಗೂ ಇದ್ದೆ ಇರುತ್ತದೆ . ಭಾಷಣ ಬಿಗಿಯದೆ ಇದ್ದರೂ ನಮ್ಮ ಮನಸು ಮಾತ್ರ ಸ್ವಲ್ಪ ದಿನಗಳ ಕಾಲ ಅಲ್ಲಿನ ಮತ್ತು ಇಲ್ಲಿನ ವಾತಾವರಣಗಳನ್ನ ಬಗ್ಗೆ ಕಂಪೇರ್ ಮಾಡುತ್ತಲೇ ಇರುತ್ತದೆ.
ಈ ವಾರದ ಬಿಲ್ಡ್ ಲೇಬಲ್ : ನೀವು ಇನ್ನು ಆನ್ ಸೈಟ್ ಗೆ ಹೋಗಿಲ್ಲ ಅಂದ್ರೆ , ಆನ್ ಸೈಟ್ ಹೋಗಿ ಬಂದಿರುವ ನಿಮ್ಮ ಸ್ನೇಹಿತರ ಹತ್ತಿರ ಹೋಗಿ, “ ಹೇಗಿತ್ತು ಅಲ್ಲೆಲ್ಲ!” ಅಂತ ಕೇಳಿ ನೋಡಿ.
ಮುಂದಿನ ಅರ್ಧ ಗಂಟೆ ವರೆಗೂ ನೀವು ಕೇಳುತ್ತಲೇ ಇರುತ್ತೀರಿ.