Wednesday, July 30, 2014

ಅಂಕಣ ೨೭ : ಸಾಫ್ಟ್ ಜನ ಮತ್ತು ದುಡ್ಡು

ಸಾಫ್ಟ್ ಲೋಕದ ಜನರು ದುಡ್ಡು ಗಳಿಸುತ್ತಾರೆ ಎನ್ನುವುದೇನೋ ನಿಜ, ಆದರೆ ಅದರಲ್ಲಿ ಎಷ್ಟು ಉಳಿಸುತ್ತಾರೆ ಎನ್ನುವುದು ಪ್ರಶ್ನೆ. ನೀವು ಯಾವ ಸಾಫ್ಟ್ ವೇರ್ ಎಂಜಿನೀರ್ ಹತ್ತಿರ ಹೋಗಿ ಅವರ ಸಂಬಳದ ಬಗ್ಗೆ ಸ್ವಲ್ಪ ಮಾತಾಡಿ ನೋಡಿ, ಅವರು ಹೇಳುವುದು:
“ ಅಯ್ಯೋ ಸುಮ್ನಿರಪ್ಪ ಸಾಕು, ಎಲ್ಲರ ಕಣ್ಣಲ್ಲೂ ನಾವು ಜಾಸ್ತಿ ದುಡ್ಡು ತಗೊತೀವಿ ಅನ್ನೋದಷ್ಟೇ ಗೊತ್ತು. ಆದರೆ ನಮಗೂ ಖರ್ಚುಗಳೂ ಅಷ್ಟೇ ಇರುತ್ತೆ. ಸಾಫ್ಟ್ ವೇರ್ ಎಂಜಿನೀರ್ ಅಂದ ತಕ್ಷಣ ದುಡ್ದೇನು ಮರದ ಮೇಲಿಂದ ಬೀಳಲ್ಲ” ಅಂತ.



ಬೇರೆ ಲೋಕದ ಜನರಿಗೆ ಮಾತ್ರ ಅಲ್ಲ ನಮಗೂ ಮಾತ್ರ ಈ ಪ್ರಶ್ನೆ ಇದ್ದೆ ಇದೆ. “ಸಂಬಳ ಇಷ್ಟೊಂದು ಬಂದ್ರು ಸಹ ಯಾವ ಕಡೆಯಿಂದಲೋ ಬಂದ  ಎಲ್ಲ ಹಣವೂ ಖರ್ಚಾಗಿ ಹೋಗುತ್ತಲ್ಲ ಅಂತ”. ಮೊನ್ನೆ ನನ್ನ ಸ್ನೇಹಿತ ಹೇಳುತ್ತಿದ್ದ: “ ದುಡ್ಡು ATM ನಲ್ಲಿರೋ ವರೆಗೂ ಮಾತ್ರ ಸೇಫ್, ಅಲ್ಲಿಂದ ಏನಾದ್ರೂ ಡ್ರಾ ಮಾಡಿ ಕೈಗೆ ತಗೊಂಡೆ ಅಂದ್ರೆ ಮುಗೀತು ಕಥೆ. ಅದು ಯಾವಾಗ ಖಾಲಿ ಆಗಿರುತ್ತೋ ಗೊತ್ತೇ ಆಗಿರೋದಿಲ್ಲ”.
ಹಲವಾರು ಕ್ಲಿಷ್ಟಕರವಾದ ಸಮಸ್ಯೆಗಳಿಗೆ ಪರಿಹಾರ  ಗಳನ್ನ ನಮ್ಮ ಲಾಜಿಕ್ ಮುಖಾಂತರ ಅತ್ಯಂತ ಸುಲಭವಾಗಿ ಕೋಡ್ ಬರೆದು ಬಿಸಾಕುವ ನಾವು “ದುಡ್ಡಿನ” ವಿಷಯಕ್ಕೆ ಬಂದಾಗ ಮಾತ್ರ “ದಡ್ಡರಾಗಿ” ಬಿಡುತ್ತೇವೆ, ಮತ್ತು ದಡ್ದರಾಗುತ್ತಲೇ ಇದ್ದೇವೆ (ಪ್ರತಿ ತಿಂಗಳು). “ ದುಡ್ಡು ಎಷ್ಟಿದ್ದರೂ ಸಾಲೋದಿಲ್ಲಾ ರೀ ಈ ಕಾಲದಲ್ಲಿ” ಅನ್ನೋ ಮಾತು ನಮ್ಮ ಸಾಫ್ಟ್ ಲೋಕದವರಿಗೂ ಸಹ ಅನ್ವಯಿಸುತ್ತದೆ ಅನ್ನೋದು ಮಾತ್ರ ಅಷ್ಟೇ ಸತ್ಯ. “ ನೀವು ಬಿಡ್ರಿ ಆರಾಮಾಗಿ ತಿಂಗಳ ಕೊನೆಗೆ AC room ನಲ್ಲಿ ಕೂತು ಲಕ್ಷ ಗಟ್ಟಲೆ ಸಂಬಳ ಎಣಿಸುತ್ತೀರಾ “ ಅನ್ನೋದು ಬಲು ಸುಲಭದ ಮಾತು.


ನೀವು ನಂಬುತ್ತೀರೋ ಬಿಡುತ್ತೀರೋ, ಬಹಳಷ್ಟು ಜನ ಸಾಫ್ಟ್ ಲೋಕದ ಜನರಿಗೆ ದುಡ್ಡು ಮ್ಯಾನೇಜ್ ಮಾಡೋದು ಅವರಿಗೆ ಕಷ್ಟದ ವಿಷಯ. ಈ tax, investment, ಇನ್ನೊಂದು ಮತ್ತೊಂದು ಅಂದ್ರೇನೆ ಬಹಳಷ್ಟು ಜನರಿಗೆ ಇದು ಒಂಥರಾ ತುಂಬಾ ಇರಿಟೆಶನ್ ಕೂಡ. ಇರಿಟೆಶನ್ ಅನ್ನೋದಕ್ಕಿಂತ ಇನ್ನೊಂದು ಅರ್ಥದಲ್ಲಿ ಇದನ್ನ ತಿಳಿದುಕೊಳ್ಳೋದಕ್ಕೆ ಆಸಕ್ತಿ ಇರುವುದಿಲ್ಲ. ಅದಕ್ಕೇನೆ ನಮ್ಮವರು ಮಾಡುವ ಬೆಸ್ಟ್ ಕೆಲಸ ಎಂದರೆ ತಮಗೆ ಗೊತ್ತಿಲ್ಲದ್ದನ್ನು out source  ಮಾಡಿ ತಣ್ಣಗೆ ಕೂತುಬಿಡುತ್ತಾರೆ. ಹಾಗಂತ ಎಲ್ಲ ಸಾಫ್ಟ್ ಲೋಕದ ಜನ ಹೇಗಿರುತ್ತಾರೆ ಅನ್ಕೋಬೇಡಿ ಮತ್ತೆ. ಕೆಲವರಂತೂ ಈ ಮೇಲೆ ಹೇಳಿದ್ದನ್ನೆಲ್ಲ ಅರೆದು ಕುಡಿದು ಬಿಟ್ಟಿರುತ್ತಾರೆ. mutual fund, stock, shares ಹಲವಾರು ರೀತಿಯ ವಿಷಯಗಳನ್ನು ತಿಳಿದು ಕೊಂಡಿರುತ್ತಾರೆ. ಆದರೆ ಇಂಥವರ category ಸಾಫ್ಟ್ ಲೋಕದಲ್ಲಿ ಸ್ವಲ್ಪ ಕಡಿಮೆ ಎನ್ನಬಹುದು.


ಇನ್ನು ತಿಂಗಳ ಸಂಬಳದ ವಿಷಯಕ್ಕೆ ಬರುವುದಾದರೆ ಟ್ಯಾಕ್ಸ್ ಕಟ್ ಆಗಿಯೇ ನಮ್ಮ ಕೈಗೆ ಬಂದಿರುತ್ತೆ. ಬಂದ  ಸಂಬಳದಲ್ಲಿ ಬೃಹತ್ ಮೊತ್ತ ಹೋಗುವುದು ಬೆಂಗಳೂರಿನ ಮನೆಯ ಬಾಡಿಗೆಗೆ ಅಥವಾ ಮನೆ ಖರಿದಿಸಿದ್ದರೆ ಅದರ ಕಂತಿಗೆ. ತದ  ನಂತರ ಹೋಗುವುದು ನಾವೇ ಮಾಡಿಕೊಂಡಿರುವ ಹಲವಾರು ಲೋನ್ ಗಳಿಗೆ, ಆಮೇಲೆ ನಮ್ಮದೇ ಆದ ಒಂದಿಷ್ಟು commitment ಗಳಿಗೆ, ಇನ್ನು ಬೆಂಗಳೂರಿನಂತ ಊರಿನಲ್ಲಿ ಮಕ್ಕಳ ಶಾಲೆಯ admission ಅಥವಾ fees  ಕಥೆ ಕೇಳಿದರೆ ನಾವು ಎರಡೆರಡು ಸಾಫ್ಟ್ ವೇರ್ ಕಂಪನಿ ಗಳಲ್ಲಿ ಕೆಲಸ ಮಾಡಿದರೂ ಕಡಿಮೆಯೇ. ಕೊನೆಗೆ ಉಳಿಯುವುದು ಮಾತ್ರ ಒಂದೇ ಒಂದು : “ ಪುನಃ ಮುಂದಿನ ತಿಂಗಳ ಸಂಬಳದ ದಾರಿ ಎದುರು ನೋಡುತ್ತಾ ಕೂಡುವುದು” .
ಇದನ್ನೆಲ್ಲಾ ನೋಡಿದರೆ, ನಮ್ಮ ತಂದೆ - ತಾಯಿ ಯಂದಿರ  ತಲೆಮಾರು ಎಷ್ಟೋ ವಾಸಿ . ಇರುವ ಸರಕಾರೀ ಸಂಬಳದಲ್ಲಿಯೇ ಅವರು ತಮ್ಮ ಕೆಲಸದಿಂದ ರಿಟೈರ್ ಆಗೋ ಹೊತ್ತಿಗೆ:  ಮಗನ ಓದು, ಮಗಳ ಮದುವೆ, ಜೊತೆಗೆ ತಮಗೊಂದು ಚಿಕ್ಕದಾದ ಚೊಕ್ಕದಾದ ಮನೆ ಎಲ್ಲವನ್ನು ಮಾಡಿಕೊಂಡಿರುತ್ತಾರೆ. ಇಷ್ಟಲ್ಲದೆ ಬಂಧು - ಬಳಗದವರಿಗೂ, ಅಕ್ಕ ಪಕ್ಕ ದವರಿಗೂ ಒಂದಿಷ್ಟು ಆಸರೆ ಆಗಿರುತ್ತಾರೆ. ನಿಜಕ್ಕೂ ಹೆಮ್ಮೆ ಪಡುವ ವಿಷಯವೇ. ಇರುವಷ್ಟರಲ್ಲಿಯೇ ಎಲ್ಲವನ್ನು ಶಾಸ್ತ್ರೋಕ್ತವಾಗಿ ಮಾಡಿ ಮುಗಿಸಿರುತ್ತಾರೆ.
ನಮ್ಮ ಕೈಗೆ ಇಷ್ಟು ದುಡ್ಡು ಬರುತ್ತಿದ್ದರೂ ಅದೆಲ್ಲಿ ಕೈ ಜಾರಿ ಹೋಗುತ್ತೋ ನಮಗೆ ಗೋತ್ತಿರೋದಿಲ್ಲ.


ಈ ವಾರದ ಬಿಲ್ಡ್ ಲೇಬಲ್ :

“ ಮಗಾ, ಮೂರು ವರ್ಷ ಆಯ್ತು ಸಾಫ್ಟ್ ವೇರ್ ಕೆಲಸ ಮಾಡ್ತಾ. Royal enfield ಬೈಕ್ ಒಂದನ್ನ ತಗೊಂಡಿದ್ದು ಬಿಟ್ರೆ ನನ್ನದು ಅಂತ ಏನು ಉಳಿಸೆ ಇಲ್ಲ. ಇಷ್ಟು ದಿನ ದುಡಿದ ದುಡ್ಡು ಎಲ್ಲಿಗೆ ಹೋಯ್ತು ಅಂತ ? ನನ್ನ ಮದುವೆಗೆ ನಮ್ಮಪ್ಪನ ಹತ್ತಿರಾನೇ ದುಡ್ಡು ಕೇಳಿದೀನಿ ಗೊತ್ತಾ?” ಅಂತ ನನ್ನ ಗೆಳೆಯನೊಬ್ಬ full feeling ಅಲ್ಲಿ ಹೇಳ್ತಾ ಇದ್ರೆ, ಉತ್ತರ ಗೊತ್ತಿರದೇ ನಾನು ಕೂಡ  ಸುಮ್ಮನಾಗಿದ್ದೆ!

Wednesday, July 23, 2014

ಅಂಕಣ ೨೬ : ನಿಮಗೆ ಅನಿಸುತ್ತೆ

ಈ ಥರದ ಘಟನೆಗಳು ಪ್ರತಿಯೊಬ್ಬ ಸಾಫ್ಟ್ ಲೋಕದ ಜನರ ಜೀವನದಲ್ಲಿ ಆಗಿರುತ್ತೋ , ಇಲ್ಲವೋ ಗೊತ್ತಿಲ್ಲ. ಆದರೆ, ಈ ಥರ ಆಗಿರುವುದನ್ನು ಮಾತ್ರ ನೀವು ಕೇಳಿರುತ್ತೀರಿ. ಓದಿ ನೋಡಿ, ಮಜಾ ತಾನಾಗಿಯೇ ಬರುತ್ತೆ…




೧. ಪ್ರತಿ ದಿನವೂ ನೀವು ನಿಮ್ಮ ಕೆಲಸವನ್ನು ಅಷ್ಟೇ prompt ಆಗಿ ಮಾಡುತ್ತಿರುತ್ತಿರಿ, ನಿಮ್ಮ ಕ್ಯುಬಿಕ್ಕನ್ನೂ  ಸಹ ಅಷ್ಟೇ ಅಚ್ಚುಕಟ್ಟಾಗಿ ಇಟ್ಟುಕೊಂಡಿರುತ್ತಿರಿ. ನೀವು ಸಿರಿಯಸ್ ಆಗಿ ಕೆಲಸ ಮಾಡುತ್ತಿರಬೇಕಾದರೆ  ನಿಮ್ಮನ್ನ ಯಾರು ಗಮನಿಸಿರುವುದಿಲ್ಲ . ಆದರೆ ಒಂದು ದಿನ ಹೀಗೆ  ಬೇಜಾರಾಗಿ ಫೇಸ್ ಬುಕ್ ಪೇಜ್ ನ್ನು ಓಪನ್ ಮಾಡಿಕೊಂಡು ಕೂತಿರುತ್ತೀರಿ. ಅದೇ ಕ್ಷಣವೇ ನಿಮ್ಮ ಮ್ಯಾನೇಜರ್ ನಿಮ್ಮ ಹತ್ತಿರ ಏನೋ ವಿಚಾರಿಸುವುದಕ್ಕೆ ಬಂದಿರುತ್ತಾರೆ, ನಿಮ್ಮ ಲೀಡ್ ಸಹ ನಿಮ್ಮ ಚೇರ್ ಹಿಂದೆ ಬಂದು ನಿಂತು - ಬಿಟ್ಟಿರುತ್ತಾರೆ. ತಕ್ಷಣ ನೀವು “window+D “ ಪ್ರೆಸ್ ಮಾಡುತ್ತೀರಿ .
ನಿಮಗೆ ಅನಿಸುತ್ತೆ : ಈಗಿನ್ನೂ  ಓಪನ್ ಮಾಡಿದ್ದು, ಇವಾಗ್ಲೆ ಬರಬೇಕಿತ್ತಾ?


೨.  ನಿಮ್ಮ ಪ್ರಾಜೆಕ್ಟ್ ಟೀಂ ನಲ್ಲಿರುವವರನ್ನು ಹೊರಗಡೆ ಟ್ರೀಟ್ ಗೆ ಕರೆದುಕೊಂಡು ಹೋಗುತ್ತೀರಿ. ಅದ್ಭುತವಾದ ಟ್ರೀಟ್ ನ್ನು ಸಹ ಕೊಡಿಸುತ್ತೀರಿ. ಬಿಲ್ ಬಂದಾಗ ಬಿಲ್ ನ ತಟ್ಟೆಯಲ್ಲಿ ನಿಮ್ಮ ಕಾರ್ಡ್ ನ್ನ  ಇಡುತ್ತೀರಿ. ತಕ್ಷಣ ನಿಮಗೆ ಬಿಲ್ ಕೊಟ್ಟ ಹುಡುಗ ಹೇಳುತ್ತಾನೆ, “ ಸರ್, ನಮ್ಮಲ್ಲಿ ಬರೀ ಕ್ಯಾಶ್ ಅಷ್ಟೇ ತಗೋತಿವಿ”.
“ ಒಹ್, ಹೌದಾ ಅನ್ಕೊಂಡು ನಿಮ್ಮ   ಪ್ಯಾಂಟ್ ಜೇಬಿನಿಂದ ಪರ್ಸ್  ತೆಗೆಯುತ್ತಿರಿ, ಅಲ್ಲಿರುವುದು ಬರೀ ೧೦೦ ರೂಪಾಯಿಯ ನೋಟು!”.
“ ಪರವಾಗಿಲ್ಲ ಬಿಡಿ, ನಾನು ಕೊಟ್ಟಿರ್ತೀನಿ, ನೀವು ನನಗೆ ಆಮೇಲೆ ಕೊಡಿ” ಅಂತ ನಿಮ್ಮ ಕೊಲಿಗ್ ಒಬ್ಬರು ಹೇಳುತ್ತಾರೆ.
ನಿಮಗೆ ಅನಿಸುತ್ತೆ : ಬರೋಕಿಂತ  ಮುಂಚೆ ಒಂದಿಷ್ಟು ದುಡ್ಡು ಡ್ರಾ ಮಾಡ್ಕೊಂಡು ಬರಬಾರದಿತ್ತಾ ?


೩. ನೀವೊಂದು “Technical Presentation “  ಕೊಡಬೇಕಾಗಿರುತ್ತೆ. ಎಲ್ಲ ತಯಾರಿಯನ್ನು ಮಾಡಿಕೊಂಡಿರುತ್ತೀರಿ. ಒಂದು ವಾರದ ಮುಂಚಿತವಾಗಿಯೇ ಕಂಪನಿಯಲ್ಲಿರುವ “Meeting Room “ ನ್ನು ಬುಕ್ ಮಾಡಿರುತ್ತೀರಿ. ಎಲ್ಲರಿಗೂ ಮೀಟಿಂಗ್ ರಿಕ್ವೆಸ್ಟ್ ಸಹಿತ ಕಳಿಸಿರುತ್ತೀರಿ. ಮ್ಯಾನೇಜರ್ ಸಹಿತ ನಿಮ್ಮ ಹತ್ತಿರ ಬಂದು,
“ಎಲ್ಲ ರೆಡಿ ನಾ? ಚೆನ್ನಾಗಿ ಪ್ರಿಪೇರ್ ಆಗಿ. ಬೇರೆ ಪ್ರಾಜೆಕ್ಟ್ ಟೀಂ ಮೆಂಬರ್ಸ್  ಸಹಿತ ನಿಮ್ಮ presentation  ಅಟೆಂಡ್ ಮಾಡ್ತಾ ಇದಾರೆ” ಅಂತ ಹೇಳಿ ನಿಮ್ಮ ಬೆನ್ನು ತಟ್ಟಿ  ಹೋಗುತ್ತಾರೆ.
ಆ ದಿನ ಬಂದೆ ಬಿಡುತ್ತೆ. Presentation ದಿನ, ಹೇಳಿದ ಸಮಯಕ್ಕೆ ಮೀಟಿಂಗ್ ರೂಂ ಜನರಿಂದ ತುಂಬಿರುತ್ತೆ, ನೀವು ಸಹ ತಯಾರಿ ಮಾಡಿಕೊಂಡಿರುತ್ತೀರ. ನಿಮ್ಮ ಲ್ಯಾಪ್ಟಾಪ್ ನ್ನು ಮೀಟಿಂಗ್ ರೂಂ ನಲ್ಲಿರುವ ನೆಟ್ವರ್ಕ್ ಕೇಬಲ್ ಗೆ connect ಮಾಡಿ presentation first slide  ಹಾಕುತ್ತೀರಿ. ತಕ್ಷಣ ನಿಮ್ಮ ಲ್ಯಾಪ್ ಟಾಪ್ ನಲ್ಲಿ “BLUE SCREEN “ ಕಾಣಿಸುತ್ತೆ!!
ನಿಮ್ಮ presentation back up ಸಹಿತ ತೆಗೆದುಕೊಂಡಿರುವುದಿಲ್ಲ.
ಎಲ್ಲರ ಎದುರಿಗೆ ನಾಚಿ ನೀರಾಗುತ್ತೀರಿ.
ನಿಮಗೆ ಅನಿಸುತ್ತೆ : ನನಗಿಂತ ಹಣೆಬರಹ ಕೆಟ್ಟೊ ದೌನು ಈ ಜಗತ್ನಲ್ಲಿ ಬೇರೆ ಯಾವಾನಾದ್ರೂ ಇದಾನಾ ?


೪. ಪ್ರಾಜೆಕ್ಟ್ ಟೀಂ ಮೀಟಿಂಗ್ ನಡೀತಾ ಇರುತ್ತೆ. ಯಾವುದೋ ಒಂದು ಪ್ರಾಬ್ಲಮ್ ಗೆ ನೀವು solution ಕೊಡುತ್ತೀರಿ. ನಿಮ್ಮ ಮ್ಯಾನೇಜರ್ ಮತ್ತು ಟೀಂ ಲೀಡ್ ಇಬ್ಬರೂ ನಿಮ್ಮ ಅದಕ್ಕೆ ಅಭಿನಂದಿಸುತ್ತಾರೆ. ಆದರೆ ನಿಮ್ಮ ಮನಸಿನಲ್ಲಿ ಒಂದು ಡೌಟ್ ಬರುತ್ತೆ,
“ ನನಗಿಂತ ಸಿನಿಯರ್ ಗಳಿಗೆ  ಎಲ್ಲರಿಗು ಈ solution ಗೊತ್ತಿದ್ರೂ, ಅವರು ಯಾಕೆ ಪ್ರಸ್ತಾಪ ಮಾಡದೆ ಸುಮ್ಮನೆ ಕೂತಿದ್ರು?” ಮೀಟಿಂಗ್ ಮುಗಿಯುತ್ತೆ. ನೀವು meeting room ನಿಂದ ಅದೇ ಆಲೋಚನೆ ಮಾಡಿಕೊಂಡು ನಿಮ್ಮ ಕ್ಯುಬಿಕ್ ಗೆ ಬಂದು ಕೂಡುತ್ತಿರಿ. ನೀವು ಇನ್ನು ನಿಮ್ಮ ಕ್ಯುಬಿಕ್ ನಲ್ಲಿ ಕುತಿರುತ್ತೀರೋ ಇಲ್ಲವೋ, ನಿಮ್ಮ ಹಿಂದೆಯೇ ನಿಮ್ಮ ಲೀಡ್ ಬಂದು ನಿಮಗೆ ಹೇಳುತ್ತಾರೆ :
" By the way, It was very good solution, I would appreciate if you take this responsibility and start working on it. but make sure that, your current project activity do not get disturbed by it. may be you can add extra one or two hours per day on it apart from your normal working hours" ಅಂತ.


ನಿಮಗೆ ಅನಿಸುತ್ತೆ: ಅದಕ್ಕೆನಾ ಎಲ್ಲ ಸಿನಿಯರ್ ಗಳು solution ಗೊತ್ತಿದ್ರೂ ಬಾಯಿ ಮುಚ್ಕೊಂಡು ಕೂತಿದ್ದು!!
ಅವತ್ತಿನಿಂದ ನೀವು ಸಹ ಸಿನಿಯರ್ ಗಳ ಲಿಸ್ಟ್ ಗೆ ಸೇರ್ಪಡೆ ಯಾಗುತ್ತೀರಿ:)


೫. ನೀವು Technically ತುಂಬಾ ಸ್ಟ್ರಾಂಗ್ ಇರುತ್ತೀರಿ. ಪ್ರಾಜೆಕ್ಟ್ ನಲ್ಲಿ ಏನೆ ಪ್ರಾಬ್ಲಮ್ ಬಂದರೂ “Technical assistance  ಗೆ ನಿಮ್ಮ ಹತ್ತಿರ ಎಲ್ಲರೂ  ಓಡಿ  ಬರುತ್ತಿರುತ್ತಾರೆ. ಅದು ಅಲ್ಲದೆ ಚಿಕ್ಕ ವಯಸ್ಸಿಗೆನೆ ನಿಮಗೆ Tech Lead ರೋಲ್ ಸಹ ಸಿಕ್ಕು ಬಿಟ್ಟಿರುತ್ತೆ. ನಿಮಗೆ ಇನ್ನು ಮದುವೆ  ಸಹ ಆಗಿರುವುದಿಲ್ಲ.  ನಿಮ್ಮ ಪ್ರಾಜೆಕ್ಟ್ ಗೆ ಗೆ ಸುಂದರವಾಗಿರುವ ಒಬ್ಬ fresher ಹುಡುಗಿ join ಆಗ್ತಾಳೆ. ಆಕೆಗೆ ನೀವೇ ಮೆಂಟರ್  ಸಹ ಆಗ್ತೀರ. ನಿಮ್ಮ ಬತ್ತಳಿಕೆಯಲ್ಲಿರುವ ಎಲ್ಲ technical skills nnu ಆಕೆಗೆ ನೀವು ಹೇಳಿಕೊಡುವುದರ ಮೂಲಕ ನಿಮ್ಮ “ಶ್ಯಾಣೆ” ತನ ವನ್ನು ಆಕೆಯ ಮುಂದೆ ಇಡುತ್ತೀರ. ಆಕೆಯೂ ಸಹ ನಿಮ್ಮ ಜ್ಞಾನಕ್ಕೆ ತಲೆದೂಗಿ ನಿಮ್ಮ ಮೇಲೆ ಒಂದು ರೀತಿಯ ಅಭಿಮಾನ ಇಟ್ಟು  ಕೊಂಡಿರುತ್ತಾಳೆ. ಒಂದು ದಿನ ನಿಮ್ಮ ಮನದಾಳದ ಮಾತನ್ನು ಹೇಳಲು ನೀವು ಆಕೆಯನ್ನು ಕಾಫೀ ಡೆ ನಲ್ಲಿ ಕಾಫಿ ಕುಡಿಯಲು ವೀಕೆಂಡ್ ನಲ್ಲಿ  ಆಹ್ವಾನಿಸುತ್ತೀರಿ .  
ಆಕೆ ಹೇಳುತ್ತಾಳೆ, “Thank you for inviting, actually my would be is coming from  hyderbad today, i have to meet him today “
ನಿಮಗೆ ಅನಿಸುತ್ತೆ : ಇನ್ನು ಮೇಲೆ ಮುಚ್ಕೊಂಡು ಪ್ರೊಫೆಶನಲ್ ಆಗಿ ಲೀಡ್ ತರಹ ಬಿಹೇವ್ ಮಾಡಿಕೊಂಡು ಇರೋದು ಒಳ್ಳೆದು!


೬. ಕೆಲಸ ಬದಲಾಯಿಸುವ ಸಲುವಾಗಿ, ನಾಲ್ಕಾರು ಕಡೆ ನಿಮ್ಮ ರೆಸುಮೆ ಯನ್ನು ಕಳಿಸಿರುತ್ತಿರಿ. “HR “ yinda ಕಾಲ್ ಸಹ Expect  ಮಾಡುತ್ತಿರುತ್ತೀರಿ. ಒಂದು ದಿನ ನಿಮ್ಮ ಪ್ರಾಜೆಕ್ಟ್ ಮೀಟಿಂಗ್ ನಲ್ಲಿ ಏನೋ ತುಂಬಾ ಸಿರಿಯಸ್ ಆಗಿ discussion ನಡೀತಾ ಇರುತ್ತೆ.
ತಕ್ಷಣ ನಿಮ್ಮ ಮೊಬೈಲ್  ಭರ್ಜರಿಯಾದ ರಿಂಗ್ ಟೋನ್ ನಿಂದ ರಿಂಗ್ ಆಗೋಕೆ ಶುರು ಆಗುತ್ತೆ. ಮೀಟಿಂಗ್ ರೂಂ ನಲ್ಲಿರೋ ಎಲ್ಲ project team members   ನಿಮ್ಮನ್ನ ಕೆಕ್ಕರಿಸಿ ನೋಡುತ್ತಾರೆ. ನೀವು ಸಹ ಅಷ್ಟೇ ತಪ್ಪಿತಸ್ಥ ಮನೋಭಾವ ದಿಂದ ನಿಮ್ಮ ಮೊಬೈಲ್ ನ್ನು ಜೀನ್ಸ್ ಪ್ಯಾಂಟ್ ಜೇಬಿನಿಂದ ತೆಗೆಯುತ್ತಾ  ಮೀಟಿಂಗ್ ರೂಂ ನಿಂದ ಹೊರಗೋಡಿ ಬರುತ್ತೀರಿ.
ಮೊಬೈಲ್ ನ ನೋಡುತ್ತೀರಿ. ಯಾವುದೋ ಲ್ಯಾಂಡ್ ಲೈನ್ ನಿಂದ ಇನ್ನು ಕರೆ ಬರುತ್ತಲೇ ಇರುತ್ತದೆ. ನಿಮಗೂ ಸಹ ಯಾವುದೋ ಕಂಪನಿಯ HR ಯಿಂದ ಕಾಲ್ ಬಂದಿದೆ ಅಂತ ಖುಷಿ ಆಗುತ್ತೆ. ಫೋನ್ ರಿಸಿವ್ ಮಾಡ್ತೀರ,
“hello sir, we are calling from…. we offer you credit card, we charge very less amount of interest, we dont charge…..  “ ಅಂತ ನಿಮಗೆ ಮಾತಾಡೋಕೆ ಒಂದು ನಿಮಿಷವೂ ಅವಕಾಶ ಕೊಡದೆ ಆ ಕಡೆಯಿಂದ  ಹೇಳುತ್ತಾರೆ ಮತ್ತು ಹೇಳುತ್ತಲೇ ಇರುತ್ತಾರೆ.
ನಿಮ್ಮ ಪಿತ್ತ ನೆತ್ತಿಗೆರುತ್ತೆ. ನೀವು ತಕ್ಷಣವೇ ಫೋನ್ ಕಟ್ ಮಾಡುತ್ತೀರಿ. ಅವಾಗ;
ನಿಮಗೆ ಅನಿಸುತ್ತೆ : ಇವರೂ ಈವಾಗಲೇ ಗಂಟು ಬಿಳಬೇಕಿತ್ತಾ?

ಈ ವಾರದ ಬಿಲ್ಡ್ ಲೇಬಲ್ : ನಿಮಗೆ ಅನಿಸುತ್ತೆ, ಇಷ್ಟು ಬೇಗನೆ ಅಂಕಣ ಮುಗಿದುಹೊಯ್ತಾ? ಅಂತ!

Wednesday, July 16, 2014

ಅಂಕಣ ೨೫ : ಸಾಫ್ಟ್ ಲವ್ವಿ -ಡವ್ವಿ

ಎಲ್ಲ ಹುಡುಗರ ಪ್ರೀತಿ ಶುರು ಆಗುವುದು ಕವಿ ಹೇಳುವ ಹಾಗೆ : ಅವಳ ಮುಂಗುರುಳು ಸೆಳೆಯಿತು  ಯನ್ನನು ಅನ್ನೋ ಥರ ಅಂದುಕೊಂಡರೂ, ಸಾಫ್ಟ್ ಲೋಕದಲ್ಲಿಯೂ ಸಹ ಪ್ರೀತಿ-ಗೀತಿ ಗೇನೂ ಕಡಿಮೆ ಯಿಲ್ಲ. ಇಲ್ಲಿನ ಪ್ರೀತಿಯ ರೀತಿಯೇ ಒಂಥರಾ ಬೇರೆ. ಅವತ್ತು ಕ್ಲಾಸ್ ಗೆ ಲೇಟ್ ಆಗಿತ್ತು, ಗಾಡಿ ಬೇರೆ ಸ್ಪೀಡ್ ಆಗಿ ಹೊಡ್ಕೊಂಡು ಹೋಗ್ತಿದ್ದೆ.  ದಾರೀಲಿ ಅಡ್ಡ ಬಂದ್ಲು, ಸಡನ್ ಆಗಿ ಕಂಟ್ರೋಲ್ ಆಗದೆ ಗುದ್ದಿಬಿಟ್ಟೆ. ಹಾಗೆ ಲವ್ ಶುರು ಆಗೋಯ್ತು ಮಗ ಅನ್ನೋ ಕಾಲೇಜು ಲವ್ ಸ್ಟೋರಿ ಗಿಂತ ಇಲ್ಲಿ ಬೇರೆ ಥರ.  ಇಲ್ಲಿನದು ಸ್ವಲ್ಪ ಭಿನ್ನ ರಾಗ ಭಿನ್ನ ತಾಳ.



ಸಾಫ್ಟ್ ಲೋಕ ದಲ್ಲಿ ಪ್ರೀತಿ ಹುಟ್ಟೋ ರೀತಿ ಬೇರೆ ಆಗಿರಬಹುದು, ಕಾಲೇಜಿನ ಥರ ಚೆಲ್ಲು ಚೆಲ್ಲಾಗಿ ಆಡದೆ ಇರಬಹುದು, ಆದರೆ ಸಾಫ್ಟ್ ಲೋಕದ ಪ್ರೀತಿಯಲ್ಲಿ ಪ್ರೊಫೆಷನಲಿಸಂ ಅನ್ನೋದು ಕೂಡ ಇರುತ್ತೆ. ಇಲ್ಲಿನ ಪ್ರೀತಿ ಸಾಫ್ಟ್ ಆಗಿ ಹುಟ್ಟುತ್ತೆ, ತದ  ನಂತರ ಮದುವೇನೂ ಆಗುತ್ತೆ. ಆದರೆ ಆದರೆ ಆ ಪ್ರೀತಿ ಮಾಡುವೆ ಆದಮೇಲೂ ಸಹ ಸಾಫ್ಟ್ ಆಗಿರುತ್ತೆ ಅಂತ ಮಾತ್ರ ಗ್ಯಾರಂಟಿ ಕೊಡಲು ಬರುವುದಿಲ್ಲ!

ಸಾಫ್ಟ್ ಲೋಕ ದಲ್ಲಿ ಪ್ರೀತಿ ಹುಟ್ಟೋ ರೀತಿ ಬೇರೆ ಆಗಿರಬಹುದು, ಕಾಲೇಜಿನ ಥರ ಚೆಲ್ಲು ಚೆಲ್ಲಾಗಿ ಆಡದೆ ಇರಬಹುದು, ಆದರೆ ಸಾಫ್ಟ್ ಲೋಕದ ಪ್ರೀತಿಯಲ್ಲಿ ಪ್ರೊಫೆಷನಲಿಸಂ ಅನ್ನೋದು ಕೂಡ ಇರುತ್ತೆ. ಇಲ್ಲಿನ ಪ್ರೀತಿ ಸಾಫ್ಟ್ ಆಗಿ ಹುಟ್ಟುತ್ತೆ, ತದ  ನಂತರ ಮದುವೇನೂ ಆಗುತ್ತೆ. ಆದರೆ ಆದರೆ ಆ ಪ್ರೀತಿ ಮಾಡುವೆ ಆದಮೇಲೂ ಸಹ ಸಾಫ್ಟ್ ಆಗಿರುತ್ತೆ ಅಂತ ಮಾತ್ರ ಗ್ಯಾರಂಟಿ ಕೊಡಲು ಬರುವುದಿಲ್ಲ!

ಸಾಫ್ಟ್ ಲೋಕದಲ್ಲಿ ಒಬ್ಬರನ್ನೊಬ್ಬರು ಇಷ್ಟ ಪಡಲು ಕಾರಣಗಳು ನಾರ್ಮಲ್ ಗಿಂತ ಸ್ವಲ್ಪ ಬೇರೆ ಥರನಾದುವೆ ಇರುತ್ತವೆ.
ಅವಳ ಮುಂಗುರುಳ ನೋಡಿ ಮನಸೋತೆ ಅಂತ ಕವಿ ಮೆಚ್ಚಿಕೊಂಡರೆ,
“Her level of confidence was good while presenting that presentation ಅಂತ ಸಾಫ್ಟ್ ಹುಡುಗ ನಿಧಾನವಾಗಿ ಲವ್ ಬಲೆಯಲ್ಲಿ ಬಿದ್ದಿರುತ್ತಾನೆ.
ಮೀನಿನಂತಹ ಕಣ್ಣುಗಳು ಅಂತ ಕವಿ ಒಂದು ಹೆಜ್ಜೆ ಮುಂದೆ ಹೋದರೆ,
she seems to be very effective in her work ಅಂತ ಪ್ರೊಫೆಷನಲಿಸಂ ನ ತನ್ನ ಪ್ರೀತಿಗೆ ಅಳತೆಗೊಳಾಗಿ  ಹಾಕಿ ಕೊಂಡಿರುತ್ತಾನೆ ಸಾಫ್ಟ್ ಪ್ರೇಮಿ.

Cafeteria ನಲ್ಲಿ ನೋಡಿದೆ,
Conference room ನಲ್ಲಿ ಅವಳ presentation  ಕೇಳಿದೆ,
ಹಾಗೋ ಹೀಗೋ propose ಮಾಡಿದೆ,
ಕೊನೆಗೆ ಹೆಂಡತಿಯಾಗಿ ಅವಳನ್ನೇ ಪಡೆದೆ,

ಅನ್ನೋದು ಸಾಫ್ಟ್ ಲೋಕದ ಸಾಫ್ಟ್ ಕವಿಗಳ ಕವನ ವಿರಬಹುದು . ಆದರೆ ಪ್ರೀತಿ ಅಂದ ಮೇಲೆ ಬರೀ ಹುಡುಗರ ಹುಡುಗರ ಕಡೆಯಿಂದ ಮಾತ್ರ ಅಲ್ಲ, ಸಾಫ್ಟ್  ಲೋಕದ ಹುಡುಗೀರ ದೃಷ್ಟಿ ಯಿಂದಲೂ ನೋಡಬೇಕಲ್ಲ.  ಸಾಫ್ಟ್ ಲೋಕದಲ್ಲಿ ಹುಡುಗೀಯರು ಏನೂ ಕಡಿಮೆಯಿಲ್ಲ, ತಾವು  ಇಷ್ಟ ಪಡುವವರ ಬಗ್ಗೆ :
ಸಕತ್ ಆಗಿದಾನೆ. ಲೀಡ್ ರೋಲ್ ಅಂತೆ. ಆದರೆ ಯಾವಾಗಲು ಫಾರ್ಮಲ್ ನಲ್ಲೆ ಡ್ರೆಸ್ ಮಾಡಿಕೊಂಡು ಬರ್ತಾನೆ ಗೂಬೆ ನನ್ ಮಗ,, ಟೆಕ್ನಿಕಲ್ ಆಗಿ ಸಿಕ್ಕಾಪಟ್ಟೆ ಸ್ಟ್ರಾಂಗ್ ಅಂತೆ, ಮಾತು ಕಡಿಮೆ ಅಂತೆ  ಅನ್ನೋ ವಿಷಯನೆಲ್ಲ ಹೇಳೋವರೆಗೂ ಹೇಳಿ ಕೊನೆಗೆ ಒಂದು ಲೈನ್ , ನನಗೂ ಏನು ಅಷ್ಟೊಂದು ಗೊತ್ತಿಲ್ಲ, ನನ್ನ ಫ್ರೆಂಡ್ ಅದೇ ಪ್ರಾಜೆಕ್ಟ್ ನಲ್ಲಿ ಇದ್ದಾಳಲ್ಲ  ಹೀಗಾಗಿ ಅವಳೇ ಎಲ್ಲ ಹೇಳ್ತಾ ಇರ್ತಾಳೆ ಸೇರಿಸಿ ಬಿಟ್ಟಿರುತ್ತಾರೆ .
ಸಾಫ್ಟ್ ಲೋಕದಲ್ಲಿ ಪ್ರೇಮ ಹುಟ್ಟುವುದು ಎಲ್ಲಿಂದ ಅಂದರೆ ಅದಕ್ಕೆ ಒಂದೇ ಉತ್ತರ ಇಲ್ಲ. ಇಷ್ಟ ಪಡುವವರ ಬಗ್ಗೆ ಮಾಹಿತಿ ಕಲೆ ಹಾಕಿ ಆಮೇಲೆ ಪ್ರೀತಿ ಮಾಡೋರನ್ನು analytical ಪ್ರೇಮಿಗಳುಎನ್ನಬಹುದು. Curiosity ಹುಟ್ಟಿ ಆಮೇಲೆ information ಕಲೆ ಹಾಕಿ ತದನಂತರ ಲವ್ ಆಗಿ ಬದಲಾಗೊದನ್ನ Cure ಪ್ರೇಮ ಅನ್ನಬಹುದು.
ಒಂದು ಸಲ ಈ ಸಾಫ್ಟ್ ಜೋಡಿಗಳು ಪ್ರೇಮದಲ್ಲಿ ಬಿದ್ದರೆಂದರೆ ಮುಗಿಯಿತು ಅವರ ಜಗತ್ತು ನಿಧಾನವಾಗಿ “Main line version   ನಿಂದ PCP version“ ಥರ ಎಲ್ಲರಿಂದ ಮತ್ತು ಎಲ್ಲದರಿಂದಲೂ ದೂರ  ಸರಿದು ಸೈಡ್ ಲೈನ್ ನಲ್ಲಿ ಇದ್ದು ಬಿಡುತ್ತಾರೆ. ಕಾಲೇಜು ಲೋಕದಲ್ಲಿ ಪ್ರೀತಿ ಆಯಿತೆಂದು ಹೇಳಿಕೊಳ್ಳುವುದು ಗರ್ವ ದ ವಿಷಯವಾದರೆ, ಸಾಫ್ಟ್ ಲೋಕದಲ್ಲಿ ಇದೊಂಥರ ಪ್ರೊಫೆಷನಲಿಸಂ. ಆದರೂ ಈ ಸಾಫ್ಟ್ ಜೋಡಿಗಳು ತಮ್ಮ ಪ್ರೀತಿಯ ವಿಷಯವನ್ನು ಅದೆಷ್ಟೇ ಗೌಪ್ಯವಾಗಿ ಇಟ್ಟರು, ಎಲ್ಲರಿಗೂ ಗೊತ್ತಾಗಿಯೇ ಬಿಟ್ಟಿರುತ್ತೆ.
ಮದುವೆ ಪತ್ರ ಕೊಡೊ ಸಮಯದಲ್ಲಿ ಸಹೋದ್ಯೋಗಿಗಳು, ಮುಗುಳುನಗೆ ಬೀರಿ ವಿಶ್ ಮಾಡಿದರೆ; ಮ್ಯಾನೇಜರ್ ಮಾತ್ರ ,
Hey, what a surprise! ನನಗೆ ಗೊತ್ತೇ ಇರಲಿಲ್ಲ,  ಯಾವಾಗ್ರಿ ಇದೆಲ್ಲ ಆಗಿದ್ದು? ಅಂತ ಸ್ವಲ್ಪ ಕಿಚಾಯಿಸಿ “Anyways good luck. hey, by the way both of you are taking only one week leave right? ಅಂತ ಪ್ರೊಫೆಶನಲ್ ಮತ್ತು ಪರ್ಸನಲ್ ಆಗಿ  ಕಾರ್ಡ್ ನ ಒಟ್ಟಿಗೆ ಪ್ಲೇ ಮಾಡ್ತಾರೆ.
ಸಾಫ್ಟ್ ಜೋಡಿಯ ಮದುವೆ ಮುಗಿದ ಮೇಲೆ ಯಥಾ ಪ್ರಕಾರ ಎಲ್ಲರಂತೆ ಅವರ ಜೀವನವೂ ಕೂಡ ಮುಂದುವರಿಯುತ್ತೆ.
ಅವರು ಸಹ ಮುಂಬರುವ  ಯುವ ಸಾಫ್ಟ್ ಜೋಡಿಗಳಿಗೆ ತಮ್ಮ ತಮ್ಮ ಕೈಲಾದ ಮಟ್ಟಿಗೆ ಭೋದನೆ ಕೊಡಲು ಶುರು ಮಾಡುತ್ತಾರೆ. ಸಾಫ್ಟ್ ಲೋಕವೂ ಸಹ ಇಂತಹ ಹಲವಾರು ಜೋಡಿಗಳನ್ನು ಕಂಡು ಮುಂದುವರಿಯುತ್ತದೆ.
ಈ ವಾರದ ಬಿಲ್ಡ್ ಲೇಬಲ್ : ಅಲ್ಲಿಗೆ ಪಿಕ್ಚರ್ ನಲ್ಲಿ ತೋರಿಸುವಂತೆ : ಶುಭಂ!.

Thursday, July 10, 2014

ಅಂಕಣ ೨೪ : ಸಾಫ್ಟ್ ಮೀಟಿಂಗ್

ಸಾಫ್ಟ್ ವೇರ್ ಅನ್ನುವ ರಂಗ ತುಂಬ ಪ್ರಸಿದ್ದಿ ಪಡೆದಿರುವುದು ಎರಡು ಕಾರಣಕ್ಕಾಗಿ:
೧. ಪ್ಲಾನಿಂಗ್
೨. ಮೀಟಿಂಗ್ ಗಳು.

ಹಾಗೆ ಸುಮ್ಮನೆ,
ಪ್ರಶ್ನೆ ೧: " I have  queries related to that component, before i start implementation i need to understand them"
ಉತ್ತರ ಬರುತ್ತದೆ : "then do one thing, let us call for a meeting, we will discuss in the meeting "

ಪ್ರಶ್ನೆ ೨ : " I need to talk to you "
ಉತ್ತರ ಬರುತ್ತದೆ : " Do one thing, see my calendar and send me a meeting request "
ಪ್ರಶ್ನೆ ೩ : " Its time for party, where shall we go? "
ಉತ್ತರ ಬರುತ್ತದೆ : " Let us call all project team members for a meeting"


ಸಾಫ್ಟ್ ಲೋಕ ಮೀಟಿಂಗ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ  ಆಗಿ ಹೋಗಿದೆ .ಅದರಲ್ಲೂ  ನೀವು ಸ್ವಲ್ಪ "higher level position " ಅಲ್ಲಿ ಇರೋರನ್ನ ಒಂಚೂರು observe  ಮಾಡಿ. ದಿನ ಪೂರ್ತಿ ಲ್ಯಾಪ್ ಟಾಪ್ ಹಿಡಿದುಕೊಂಡು ಒಂದು ಮೀಟಿಂಗ್ ರೂಂ ನಿಂದ ಇನ್ನೊಂದು ಮೀಟಿಂಗ್ ರೂಂ ಗೆ ಓಡಾಡುತ್ತಲೇ ಇರುತ್ತಾರೆ.  ಕೆಲವೊಬ್ಬರಿಗೆ ಮೀಟಿಂಗ್ ಗಳು ತುಂಬಾ ಇಷ್ಟ ಆದರೆ,  ಕೆಲವೊಬ್ಬರಿಗೆ ( ಅವರು ಸಹ "higher level position  " ಇದ್ದರೂ)   ಮೀಟಿಂಗ್  ಅನ್ನೋದು ಅವರಿಗೆ ಶುಧ್ಧ time waste . "ಸುಮ್ನೆ ಹೋಗಿ ಕೂತ್ಕೋ ಬೇಕುರಿ, ಗಂಟೆ ಗಟ್ಟಲೆ. ನನಗಂತೂ ಮೀಟಿಂಗ್ ಅಂದ್ರೇನೆ ಇರಿಟೇಟ್  ಆಗಿ ಹೋಗಿದೆ " ಅಂತ ಹೇಳುತ್ತಾರೆ.
ಮೀಟಿಂಗ್ ಗಳಲ್ಲಿ ಸ್ವಲ್ಪ ವಿಶೇಷವಾದದ್ದು ನಮ್ಮ "project status " ಬಗ್ಗೆ ನಡೆಯುವ ಮೀಟಿಂಗ್ ಗಳು.  ಪ್ರಾಜೆಕ್ಟ್ ಟೀಂ ನ ಎಲ್ಲ ಮೆಂಬರ್ಸ್ ಮೀಟಿಂಗ್ ರೂಂ ಗೆ ಬಂದು ಕುಳಿತಿರುತ್ತಾರೆ. ಪ್ರಾಜೆಕ್ಟ್ ಮ್ಯಾನೇಜರ್  " project status ನ  Excel sheet ಮೂಲಕ ಟೀಂ ಗೆ explain ಮಾಡುತ್ತಾ ಇರುತ್ತಾರೆ. ಪ್ರತಿಯೊಬ್ಬನ ಕಣ್ಣಿಗೂ ಅಲ್ಲಿ ಕಾಣಿಸುವುದು " ಕೆಂಪು, ಹಳದಿ, ಹಸಿರು ಬಣ್ಣದಿಂದ ಕೂಡಿದ excel sheet! "

ಒಂದು ವೇಳೆ ಯಾರಾದರೂ ಮೀಟಿಂಗ್ ನಲ್ಲಿ ಕೆಲಸಕ್ಕೆ ಬಾರದ ಅಥವಾ ಅಲ್ಲಿರುವ topic ಗೆ related ಇಲ್ಲದ question ಕೇಳಿದಾಗ, “can we take it off line?“ ಅಂತ ಹೇಳಿ ಪುನಃ ತಮ್ಮ "ಮುದ್ದಾದ" excel sheet ಕಡೆಗೆ ಗಮನ ಹರಿಸಿರುತ್ತಾರೆ.  ಇಂತಹ ಸಮಯದಲ್ಲಿ  ಮ್ಯಾನೇಜರ್ ಗಳ ಸಮಯ ಪ್ರಜ್ಞೆ ಮೆಚ್ಚಲೇ ಬೇಕು!!

ಎಲ್ಲ ಸಮಯದ ಮೀಟಿಂಗ್ ಗಳಿಗಿಂತಲೂ ಈ ಮಧ್ಯಾನದ ಹೊತ್ತು ನಡೆಯುವ ಮೀಟಿಂಗ್ ನ್ನು  attend ಮಾಡುವುದು ಕೊಂಚ ಕಷ್ಟ ದ ಕೆಲಸ . ಕೇವಲ ೧೫ ನಿಮಿಷ ಅಥವಾ ಅರ್ಧ ಗಂಟೆಯ ಮೀಟಿಂಗ್ ಗಳನ್ನೂ ಹೇಗೋ attend ಮಾಡಿಬಿಡಬಹುದು. ಆದರೆ ಗಂಟೆ ಗಟ್ಟಲೆ ನಡೆಯುವ requirement discussion ಮೀಟಿಂಗ್ ಮಾತ್ರ ಮಧ್ಯಾನದ ಹೊತ್ತು ಇದ್ರಂತೂ ಮುಗಿದೇ ಹೋಯ್ತು ಕಥೆ . ಅವಾಗ ತಾನೇ ಊಟ ವಾಗಿರುತ್ತೆ, ಎಲ್ಲರೂ ತಮ್ಮ ತಮ್ಮ ಕುರ್ಚಿಗಳಿಗೆ ಆರಾಮಾಗಿ ಆನಿಕೊಂಡು ಕೂತಿರುತ್ತಾರೆ, ಮೀಟಿಂಗ್ ರೂಂ ನಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಇರುತ್ತೆ, ಹೊರಗಡೆ  ಮಧ್ಯಾನದ ಬಿಸಿಲು, ಒಳಗಡೆ ಎ ಸಿ ಯಿಂದ ಬರುತ್ತಿರುವ ತಣ್ಣನೆಯ ಗಾಳಿ, ಮಧ್ಯಾನದ ಹೊತ್ತು ಆಗಿರುವುದರಿಂದ ಯಾರ ಮೊಬೈಲ್ ಕೂಡ ಅಷ್ಟೊಂದು ಸದ್ದು ಮಾಡುತ್ತಿರುವುದಿಲ್ಲ , ಮೀಟಿಂಗ್ ರೂಂ ನಲ್ಲಿರುವ ಅಷ್ಟು ಜನರ ಮಧ್ಯೆ ಒಬ್ಬರು ಮಾತ್ರ requirement explain  ಮಾಡುತ್ತಾ ಇರುತ್ತಾರೆ. ಕೂತಿರುವ ಕುರ್ಚಿಯಲ್ಲಿ ನಮಗೆ ಗೊತ್ತಿಲ್ಲ ದಂತೆಯೇ ನಮ್ಮ ಕಣ್ಣುಗಳು ಮುಚ್ಚಲು ಶುರು ಮಾಡುತ್ತವೆ.
ಆದರೆ ಮೀಟಿಂಗ್ ನಲ್ಲಿರೋರು ಬಿಡಬೇಕಲ್ಲ, "What do you think about this solution, Mr......"  ಅಂತ ಕೇಳಿಯೇ  ಬಿಡುತ್ತಾರೆ.
ನೀವು ನಿಧಾನವಾಗಿ ಸಾವರಿಸಿಕೊಂಡು ಜಾಗೃತರಾಗಿ , " actually........." ಅಂತ ಶುರು ಮಾಡುತ್ತೀರ.
ಹಾಗಂತ ಎಲ್ಲ ಮೀಟಿಂಗ್ ಗಳು ಬೋರ್ ಹೊಡೆಯುತ್ತವೆ ಅಂತ ಅಲ್ಲ. ಕೆಲವೊಂದು ಮೀಟಿಂಗ್ ಗಳು ಇಷ್ಟು ಬೇಗನೆ ಮುಗಿದು ಹೋಯ್ತಾ ಅಂತ ಅನಿಸಿಬಿಡುತ್ತೆ !
ಅದೇನೇ ಇರಲಿ, ಸಾಫ್ಟ್ ಲೋಕದಲ್ಲಿ ಮೀಟಿಂಗ್ ಗೆ ತನ್ನದೇ ಆದ ಒಂದು ಗಾಂಭೀರ್ಯತೆ ಇದೆ. ಹಲವಾರು ಉತ್ತಮ ನಿರ್ಧಾರಗಳು ಬರುವುದು ನಾಲ್ಕಾರು ಜನ ಸೇರಿ ಚರ್ಚೆ ಮಾಡಿದಾಗ ಮಾತ್ರ !
ವಾರದ ಬಿಲ್ಡ್ ಲೇಬಲ್ : ಒಂದು ಸಲ ನೀವು ನಿಮ್ಮ "engineering days " ನೆನಪಿಸಿಕೊಳ್ಳಿ. ತುಂಬಾ ಕೊರೆಯುವ ಯಾವುದಾದರು ಒಬ್ಬರು "Lecturer " ನ ೪೦ ನಿಮಿಷದ ಒಂದು ಕ್ಲಾಸ್  ೪೦ ಗಂಟೆ ಯಷ್ಟು ದೊಡ್ಡದಾಗಿ ಕಾಣಿಸುತ್ತೆ. ಇನ್ನೇನು "period " ಮುಗಿಯಿತು ಅನ್ನೋವಷ್ಟರಲ್ಲಿ, ಮುಂದಿನ ಬೆಂಚ್ ನಲ್ಲಿ ಕೂತಿರುವ ಒಬ್ಬ ಪುಣ್ಯಾತ್ಮ ನೊಬ್ಬ ಆ "Lecturer" ಗೆ ಒಂದು "Question " ಕೇಳಿ ಬಿಡುತ್ತಾನೆ. ಅವಾಗ ಮತ್ತೆ ಅವರು ೧೫-೨೦ ನಿಮಿಷ ಏನೇನೊ ಹೇಳುತ್ತಾ ಹೋಗುತ್ತಾರೆ. ಆ ಸಮಯದಲ್ಲಿ ನೀವು ಹಿಂದಿ ನ ಬೆಂಚ್ ನಲ್ಲಿ ಕುಳಿತಿರುವ ವರನ್ನು ಒಂದು ಸಲ ನೋಡಬೇಕು ; " ಅವರ ಮೈಯೆಲ್ಲಾ ಉರಿದು ಹೋಗಿರುತ್ತೆ, " Lecturer class ಮುಗಿಸಿಕೊಂಡು ಹೊರಗಡೆ ಹೋದ ತಕ್ಷಣವೇ ಎಲ್ಲರೂ ಸೇರಿ ಅನಾಮತ್ತಾಗಿ "Question ಕೇಳಿದವನನ್ನು  ಹಿಡಿದು ತದುಕಿ ಬಿಡುತ್ತಾರೆ”.

ಆದರೆ ಸಾಫ್ಟ್ ಲೋಕದ ಮೀಟಿಂಗ್ ರೂಂನಲ್ಲಿ ಯಾರೂ ಆ ಥರ ಕೊರೆಯೋ ದಿಲ್ಲ ಬಿಡಿ. ಒಂದು ವೇಳೆ ಕೊರೆದರೂ ನೀವು ಬಾಯಿ ಮುಚ್ಚಿಕೊಂಡು ಕೂತಿರಲೇಬೇಕು. ಬೇರೆ ದಾರಿನೇ ಇಲ್ಲ !