Thursday, February 27, 2014

ಅಂಕಣ ೯ : ಸಾಫ್ಟ್ ಲೋಕ ಮತ್ತು ಫೇಸ್ ಬುಕ್

ಫೇಸ್ ಬುಕ್, ಈ ಪದ ಸಾಫ್ಟ್ ಲೋಕ ಬಿಡಿ, ಬೇರೆ ಎಲ್ಲ ಲೋಕದ ಯುವಕ ಯುವತಿಯರಿಗೆ ಮತ್ತು ಎಲ್ಲ ವಯೋಮಾನದವರಿಗೂ ಚಿರಪರಿಚಿತ. ಬಹುಶ ಇವತ್ತಿನ ಜನರೇಶನ್ ಅಲ್ಲಿ ಯಾರಾದರು ಫೇಸ್ ಬುಕ್  ಅಕೌಂಟ್ ಇಲ್ಲ ಅಂದ್ರೆ ಅವನನ್ನ / ಅವಳನ್ನ ಕೆಕ್ಕರಿಸಿ ನೋಡುವ ಜನರೇ ಜಾಸ್ತಿ. ಸಾಫ್ಟ್ ಲೋಕದಲ್ಲೂ ಸಹ ಇದರ ಬಗ್ಗೆ ಹುಚ್ಚು ಹಿಡಿಸಿಕೊಂಡವರೇನು ಕಡಿಮೆ ಯಿಲ್ಲ. ಕೂತರೂ, ನಿಂತರೂ, ಯಾವಾಗಲು ಇವರಿಗೆ ತಮಗಿಂತ ತಮ್ಮ ಪ್ರೊಫೈಲ್ ಬಗ್ಗೆಯೇ ಚಿಂತೆ ಜಾಸ್ತಿ. ಒಂದು ಕಾಲದಲ್ಲಿ ಮೊಬೈಲ್ ಬಂದು ಎಲ್ಲರನ್ನು ಹುಚ್ಚು ಹಿಡಿಸಿದ ಹಾಗೆ ಇವಾಗ ಇದು ಫೇಸ್ ಬುಕ್ ಬಂದು ಎಲ್ಲರನ್ನು ತಲೆ ಕೆರೆದುಕೊಳ್ಳುವಂತೆ ಮಾಡಿದೆ.



ಸಾಫ್ಟ್ ಲೋಕ ಮತ್ತು ಫೇಸ್ ಬುಕ್ ಇವೆರಡು ಅಷ್ಟು ದೂರದ ಸಂಭಂದಿ ಗಳೆನಲ್ಲ. ಹೆಚ್ಚು ಕಡಿಮೆ ಆನ್-ಲೈನ್ ನಲ್ಲಿ ಇರೋರೆಲ್ಲ ಅವಾಗಾವಾಗ ತಮ್ಮ ಪ್ರೊಫೈಲ್ ನ ಇಣುಕಿ ನೋಡುತ್ತಿರುತ್ತಾರೆ. ಕೆಲವರಂತೂ ಇನ್ನೇನು ಮೀಟಿಂಗ್ ಹೊರಡುವಾಗ, ಮೀಟಿಂಗ್ ಯಿಂದ ಬಂದ  ಮೇಲೆ, ಸೆಮಿನಾರ್ ಗೆ ಹೋಗುವಾಗ, ಸೆಮಿನಾರ್ ಮುಗಿದ ಮೇಲೆ, ಹೀಗೆ ಪ್ರತಿಯೊಂದು ಅಪ್ - ಡೆಟ್  ಅನ್ನು ಮಾಡುತ್ತಲೇ ಇರುತ್ತಾರೆ.  ಫೇಸ್ ಬುಕ್  ನಲ್ಲಿ ಅವರಿಗೆ ತಾವು ಏನು ಅಪ್-ಡೇಟ್  ಮಾಡುತ್ತೀವಿ  ಅನ್ನೋದಕ್ಕಿಂತ ಎಷ್ಟು ಜನ ಅದನ್ನ ಲೈಕ್ ಮಾಡಬಹುದು, ಎಷ್ಟು ಜನ ಅದಕ್ಕೆ ಕಾಮೆಂಟ್ ಬರಿಬಹುದು ಅನ್ನೋ ಲೆಕ್ಕಾಚಾರದಲ್ಲೇ ಮುಳುಗಿರುತ್ತಾರೆ.

ಅದರಲ್ಲೂ ಸಾಫ್ಟ್ ಲೋಕದ ಹುಡುಗಿಯರು ಫೇಸ್ ಬುಕ್  ಅನ್ನು use  ಮಾಡುವಲ್ಲಿ ಕಡಿಮೆ ಏನು ಬಿದ್ದಿಲ್ಲ. ಇನ್ನೊಂದು ಅರ್ಥದಲ್ಲಿ ಹುಡುಗರಿಗಿಂತ ಇವರು ಸ್ವಲ್ಪ ಜಾಸ್ತಿ ಯೆ  ತಮ್ಮ ಪ್ರೊಫೈಲ್ ಬಗ್ಗೆ ಕೇರ್ ತಗೋತಾರೆ. ಆಗ ತಾನೇ ಕಂಪನಿಯ cultural  ಕಾರ್ಯಕ್ರಮದಲ್ಲಿ  ತೆಗೆಸಿಕೊಂಡ ಅವರ ಫೋಟೋ ಕ್ಷಣಾರ್ಧ ದಲ್ಲಿಯೇ ಪ್ರೊಫೈಲ್ ಗೆ ಅಪ್-ಲೋಡ್ ಆಗಿರುತ್ತದೆ. ಮೊನ್ನೆ ನನ್ನ ಸ್ನೇಹಿತ  ತಮಾಷೆಗೆ ಹೇಳುತ್ತಿದ್ದ:
ಒಮ್ಮೆ ಹುಡುಗಿ ಯೊಬ್ಬಳು : “ತಲೆ ನೋವು ….from past 15 mins “ ಅಂತ  ಹಾಕಿದರೆ ಅದಕ್ಕೆ ಉತ್ತರವಾಗಿ  98 ಕಾಮೆಂಟ್ ಗಳು ಬಂದಿದ್ದವು ( ಅದರಲ್ಲಿ ಹೆಚ್ಚಿನವು ಹುಡುಗರಿಂದಲೇ  ಅಂತ ಬಿಡಿಸಿ ಹೇಳಬೇಕಾಗಿಲ್ಲ )
ಅದೇ ಹುಡುಗನೊಬ್ಬ:   “ನನಗೆ ಜೀವನ ಬೇಸರವಾಗಿದೆ..  shall i commit suicide?“  ಅಂತ ಹಾಕಿದರೆ 3 ಜನ ಅದಕ್ಕೂ ಲೈಕ್ ಮಾಡಿದ್ದರಂತೆ!
ಫೇಸ್ ಬುಕ್   ನಲ್ಲಿಯೂ ಸಹ ನಮ್ಮ ಹುಡುಗರನ್ನು ಕೇಳೋರಿಲ್ಲ !

ಸಾಫ್ಟ್ ಲೋಕದ ಜನ ವೀಕೆಂಡ್ ನಲ್ಲಿ ಟ್ರೆಕಿಂಗ್ ಹೋದಾಗ, ಇನ್ನೇನು ಆನ್ - ಸೈಟ್  ಹೊರುಡುವ ಸಮಯದಲ್ಲಿ ವಿಮಾನದಲ್ಲಿ ಕೂತಾಗ, ಬೇರೆ ದೇಶಕ್ಕೆ ಕಾಲಿಟ್ಟಾಗ, ಅಲ್ಲಿರುವ ಹೋಟೆಲಿನಲ್ಲಿ ತಮ್ಮ ಲಗ್ಗೇಜ್ ಇಟ್ಟಾಗ… ಎಲ್ಲವು ಕ್ಷಣಾರ್ಧ ದಲ್ಲೇ ಫೆಸ್ ಬುಕ್ ನಲ್ಲಿ ಅಪ್ - ಡೆಟ್  ಆಗಿರುತ್ತೆ.

ಆದರೆ ಒಂದು ವಿಷಯ, ಸಾಫ್ಟ್ ಲೋಕದ ಜನ ಫೆಸ್ ಬುಕ್ ಅನ್ನು  ಕೇವಲ ಶೋಕಿ ಗಾಗಿ ಮಾತ್ರ ಬಳಸುತ್ತಾರೆ ಅಂದರೆ ಅದು ಶುದ್ದ ತಪ್ಪು. ಅನೇಕ ಒಳ್ಳೆಯ ವಿಚಾರ ವಿನಿಮಯಗಳಿಗೂ ಈ ತಾಣಗಳನ್ನ ಬಳಸಿಕೊಳ್ಳುತ್ತಾರೆ. ಒಂದು ಸಾಮಾಜಿಕ ಕಾರ್ಯಕ್ಕಾಗಿ, ತಮ್ಮ ಕಂಪನಿ ಯ ಪ್ರೊಡಕ್ಟ್ ಗಳ ಮಾರ್ಕೆಟಿಂಗ್ ಗಾಗಿ, ತಾವು ನಡೆಸುವ ಎನ್. ಜಿ. ಓ ಸಂಸ್ಥೆಗಳ ಬಗ್ಗೆ ಬೇರೆಯವರಿಗೆ ತಿಳಿಸುವುದಕ್ಕಾಗಿ, ಅಷ್ಟೇ ಏಕೆ, ಕನ್ನಡ ಪರ ಕಾಳಜಿಗಾಗಿ ಯೂ ಸಹ  ಫೆಸ್ ಬುಕ್ ಅನ್ನು  ಕೆಲವರು ಬಳಸುವುದನ್ನು ನೋಡಿದಾಗ ತುಂಬಾ ಹೆಮ್ಮೆ ಎನಿಸುತ್ತದೆ.

ಫೇಸ್ - ಬುಕ್ ಗೂ ಸಾಫ್ಟ್ ಲೋಕಕ್ಕೂ ತುಂಬಾ ಘಾಡವಾದ ಸಂಭಂದವೇ ಇದೆ. ಅದನ್ನ ಇನ್ನೊಂದು ಅಂಕಣದಲ್ಲಿ ಸವಿಸ್ತಾರವಾಗಿ ಮುಂದೆ ಹೇಳುತ್ತೇನೆ. ಸದ್ಯಕ್ಕೆ ಇಷ್ಟು ಸಾಕು.

ಈ ವಾರದ ಬಿಲ್ಡ್ ಲೇಬಲ್:  
ಪ್ರಶ್ನೆ : ಫೇಸ್ - ಬುಕ್ ಯಾಕೆ ಎಲ್ಲರಿಗೂ ಅಷ್ಟು ಇಷ್ಟ?

ಉತ್ತರ : ಯಾಕಂದ್ರೆ ನಮ್ಮೆಲ್ಲರಿಗೂ ನಮ್ಮ ಜೀವನಕ್ಕಿಂತ ಬೇರೆ ಯವರ ಜೀವನದಲ್ಲಿ ಏನು ನಡೀತಾ ಇದೆ ಅಂತ ತಿಳ್ಕೊಳ್ಳೋ ಆಸಕ್ತಿ ಹೆಚ್ಚು!

Thursday, February 20, 2014

ಅಂಕಣ ೮ : ಸಾಫ್ಟ್ ಲಾಜಿಕ್ ಇದೊಂಥರ ಮ್ಯಾಜಿಕ್


ಕೆಲವರಿರುತ್ತಾರೆ ಅವರಿಗೆ ಕೋಡಿಂಗ್ ಬಿಟ್ಟರೆ ಬೇರೆ ಜೀವನವೇ ಇಲ್ಲ ಎನ್ನುವಂತೆ. ಅವರಿಗೆ ಕೋಡಿಂಗ್ ಮೇಲೆ ಅದೆಷ್ಟು ಪ್ರೀತಿ ಎಂದರೆ, ಸಾಫ್ಟ್ ಲೋಕದ ಇತರ ವಿಭಾಗದ ಜನರೆಲ್ಲಾ (ಉದಾಹರಣೆಗೆ : ಟೆಸ್ಟಿಂಗ್, ಕ್ವಾಲಿಟಿ, ಮ್ಯಾನೇಜ್ಮೆಂಟ್ ) ಇವರಿಗೊಂದು  ಥರ ಅಸಡ್ಡೆ. ಈ ಕೋಡ್ ದಿಗ್ಗಜರಿಗೆ ತಮ್ಮ ಕೆಲಸವೇ  ಯಾವತ್ತಿಗೂ ಶ್ರೇಷ್ಠ ಎನ್ನುವ ಭಾವನೆ.  ಹಾಗೇನೆ ತಮ್ಮ ಕೆಲಸದ ಮೇಲೆ ಅವರಿಗೆ ಅತೀವ ವಾದ ಅಭಿಮಾನ ಸಹ.



ಇವರಲ್ಲಿ ವಿಶೇಷವಾಗಿ ಒಂದಿಷ್ಟು ಜನ ಯಾವಾಗಲೂ ಲಾಜಿಕ್ ನಲ್ಲಿ  ಮುಳುಗಿ ಹೋಗಿರುತ್ತಾರೆ. ಇಂತಹವರು ಪಿಚ್ಚರ್ ಗೆ ಹೋದರೆ ಥಿಯೇಟರ್ ನಲ್ಲಿರೋರೆಲ್ಲರೂ ಸಿನೆಮಾನ ಆನಂದಿಸುತ್ತಿದ್ದಾರೆ ಇವರು ಆ ಕಥೆಯನ್ನ ತಮ್ಮದೇ ಆದ ಲಾಜಿಕ್ ನಿಂದ ಆಲೋಚಿಸುತ್ತಾರೆ. ಅವರ ಪ್ರಕಾರ ಅದು ತಪ್ಪಾದರೆ, ಥಿಯೇಟರ್ ನಿಂದ ಹೊರಕ್ಕೆ ಬಂದೆ ಬಿಡುತ್ತಾರೆ.  ಯಾವನಾದರೂ ಒಂದು ಜೋಕು ಹೇಳಿದರೆ ಅದು ಎಷ್ಟು ಪ್ರಾಕ್ಟಿಕಲ್ ಅಂತ ಆಲೋಚಿಸುತ್ತಾರೆ. ಇವರು ಎಲ್ಲರಲ್ಲಿಯೂ, ಎಲ್ಲದರಲ್ಲಿಯೂ ಏನನ್ನೋ ಹುಡುಕುತ್ತಿರುತ್ತಾರೆ ( ತಮ್ಮ ಲಾಜಿಕ್ ನ ಸಹಾಯ ದಿಂದ). ಇವರಿಗೆ ಪಜಲ್ ಗಳು, ಯಾವಾಗಲು ತಾರ್ಕಿಕವಾಗಿ ಕೊನೆಗೊಳ್ಳುವ ವಿಷಯಗಳು ತುಂಬಾ ಇಷ್ಟ.  ಕೆಲವೊಂದು ಸಲ ಇವರ "ಸೆನ್ಸ್ ಆಫ್ ಹುಮರ್" ಸಹ ಅಷ್ಟೇ ಚೆನ್ನಾಗಿ ಇರುತ್ತದೆ.

ಇವರಿಗೆ ದಿನ ಪತ್ರಿಕೆಯಲ್ಲಿ ಬರುವ ಸುಡೋಕು ಮೇಲೆ ಎಲ್ಲಿಲ್ಲದ ಆಸಕ್ತಿ. ಹಾಗೇನೆ, ತಮ್ಮ ಬಿಡುವಿನ ವೇಳೆಯಲ್ಲೂ ಇವರು .Net, C++, Csharp, PHP, Python ಮುಂತಾದವುಗಳ ಬಗ್ಗೆ ಬಹಳ ಆಸಕ್ತಿಯಿಂದ ಓದುತ್ತಿರುತ್ತಾರೆ. ಇಂಗ್ಲಿಷ್ ಚಿತ್ರಗಳಲ್ಲಿ ತುಂಬಾ ಆಸಕ್ತಿ ಹೊಂದಿರುವ ಇವರು, ಲಾಜಿಕ್ ಇರುವ ಯಾವುದೇ ವಿಷಯಕ್ಕೆ ಇವರು ಸಂಪೂರ್ಣ ಬೆಂಬಲ ಕೊಡುತ್ತಾರೆ. ಇಷ್ಟೆಲ್ಲಾ ಹೇಳಿದ ಮೇಲೆ, ಕೋಡ್ ಮಾಡುವುದರಲ್ಲಿ ಇವರು “ಪಂಟ್ರು” ಅಂತ ಬೇರೆ ಹೇಳಬೇಕಾಗಿಲ್ಲ ತಾನೇ? ಇಂತಹ ಲಾಜಿಕ ಜನರ ತಮಾಷೆಯಾಗಿರುವ ಘಟನೆಗಳನ್ನ ನೋಡೋಣ ಬನ್ನಿ:
ಮೊನ್ನೆ ನನ್ನ ಗೆಳೆಯನೊಬ್ಬ ( ಗೆಳೆಯ ನಂಬರ್ ೧ ಅಂದುಕೊಳ್ಳೋಣ) ಫೇಸ್ ಬುಕ್ ನಲ್ಲಿ ಎಲ್ಲರಿಗೂ ಆಪತ್ತಿನಲ್ಲಿ ಅನುಕೂಲವಾಗಲಿ ಅಂತ ಒಂದು ಮೆಸೇಜು ಹಾಕಿದ್ದ : :
“ ನೀವು ಎ ಟಿ ಎಂ ನಲ್ಲಿ ದುಡ್ಡು ತೆಗೆದುಕೊಳ್ಳುವಾಗ, ಯಾರಾದರು ಕಳ್ಳ ಬಂದು ನಿಮಗೆ ಚಾಕು ತೋರಿಸಿ ಹೆದರಿಸಿದರೆ ನೀವು ತಕ್ಷಣ ನಿಮ್ಮ ಪಿನ್ ಅನ್ನು “ಉಲ್ಟಾ” ಎಂಟರ್ ಮಾಡಿ (ಅಂದರೆ ನಿಮ್ಮ ಪಿನ್ ೧೨೩೪ ಇದ್ದಾರೆ ೪೩೨೧ ಎಂಟರ್ ಮಾಡಿ), ಅವಾಗ ದುಡ್ಡು ಬರುವುದಿಲ್ಲ ಮತ್ತು ಪೊಲೀಸರಿಗೆ ಮೆಸೇಜ್ ಹೋಗುತ್ತದೆ”
ಅದಕ್ಕೆ ನನ್ನ ಇನ್ನೊಬ್ಬ ಗೆಳೆಯ ನಂಬರ್ ೨ ( logic category ಗೆ ಸೇರಿದ) ಕೆಳಗಡೆ ಕಾಮೆಂಟ್ ಬರೆದಿದ್ದ:
“what if my ATM pin is palindrome like 1221? “
ಅದಕ್ಕೆ ಉತ್ತರವಾಗಿ ನನ್ನ ಗೆಳೆಯ ನಂಬರ್ ೧ ಬರೆದಿದ್ದ: “ ಹಾಗಿದ್ರೆ, ಕಳ್ಳನ ಕೈಯಲ್ಲಿ ಚೆನ್ನಾಗಿ ಒದೆ ತಿನ್ನು!” ಅಂತ.
                                
ಎಲ್ಲಾದರೂ ಒಂದು ಕಡೆ : “ Warning: Smoking is not allowed”  ಅಂತ ಬರೆದಿದ್ದರೆ,
ಇವರು ಅಲ್ಲೇ ಸ್ಮೋಕ್ ಮಾಡಿ “I am an engineer, i care about only “ errors” not “warnings”!” ಅಂತ  ಹೇಳಿ ಒಂದು ನಗು ಬೀರುತ್ತಾರೆ.
ಇಂತಹ ಹೇಳಿಕೆಗೆ ಏನು ಉತ್ತರ ಕೊಡುತ್ತೀರಿ?
                               

ಈ ಥರ ಮೀಟಿಂಗ್ ರೂಂ ನಲ್ಲಿ ಸಹ ಪೆದ್ದು - ಪೆದ್ದಾದ ಲಾಜಿಕ್ ನಿಂದ ತಮ್ಮ ಮ್ಯಾನೇಜರ್ ನ್ನೇ ಗಲಿಬಿಲಿಗೊಳಿಸಿ ಬಿಡುತ್ತಾರೆ,
ಆದರೆ ಮ್ಯಾನೇಜರ್ ಮಾತ್ರ ಯಥಾ ಪ್ರಕಾರ “its a very good question, but now lets focus on our actual issue “ ಅಂತ ತಮ್ಮ ಜಾಣ್ಮೆ ಮೆರೆದಿರುತ್ತಾರೆ.  
ಇವರ ಲಾಜಿಕ್ ಪ್ರಕಾರ:
೧.  ಒಂದೇ ಸಲಕ್ಕೆ ಒಂದು ಟೀ ತೆಗೆದುಕೊಳ್ಳುವ ಬದಲಿಗೆ, ಒಬ್ಬರೇ ಇದ್ದರೂ ಟೀ ನ ಬೈ- ಟು ತಗೊಂಡ್ರೆ ಜಾಸ್ತಿ ಬರುತ್ತದಲ್ಲ?
೨.  ಮೂರು ತಾಸು ಸಿನಿಮಾ ವನ್ನ ಒಂದು ಗಂಟೆಗೆ ಇಳಿಸಿ, ಕೇವಲ ಕಥೆಗೆ ಮುಖ್ಯವಾದ ಸನ್ನಿವೇಶವನ್ನೇ ನೋಡಬಹುದಲ್ಲ?
೩. ಬೆಂಗಳೂರಿನಲ್ಲಿ ನಾನೊಂದು ಸೈಟು ತಗೊಂಡು (ಉದಾಹರಣೆಗೆ : ೩೦ x ೪೦) , ಅದಿಷ್ಟು ಜಾಗಕ್ಕೆ ನಾನೇ ಒಡೆಯ ಅಂದರೆ, ಅದೇ ಸ್ಥಾನದಲ್ಲಿ ಭೂಮಿಯ ಇನ್ನೊಂದು ಭಾಗದಲ್ಲಿ (ದುಂಡಗಿರುವ ಭೂಮಿಯನ್ನು ತಿರುಗಿಸಿದಾಗ)  ಬರುವ ಜಾಗವೂ  ನನ್ನದೇ ತಾನೇ?  ಅಂದರೆ ಆ ಭಾಗ ಇನ್ನೊಂದು ದೇಶದಲ್ಲಿದ್ದರೆ ಅದು ಕೂಡ  (೩೦ x ೪೦) ನಂದೇ ತಾನೇ?

ಇಂತಹ ಪ್ರಶ್ನೆಗೆ ಆ ಭಗವಂತ ನೆ ಉತ್ತರ ಕೊಡಬೇಕು.

ಈ ವಾರದ ಬಿಲ್ಡ್ ಲೇಬಲ್ :  ಎಲ್ಲವನ್ನು ಲಾಜಿಕ್ಕಿನಿಂದಲೇ ಅಳೆಯುವ ಇವರು ನಮ್ಮ ತಿಂಗಳ  ಸ್ಯಾಲರಿ ಮತ್ತು ತಿಂಗಳ ಖರ್ಚು ಯಾಕೆ ಯಾವಾಗಲು ಹೊಂದಾಣಿಕೆ ಯಾಗುತ್ತಿಲ್ಲ ಅನ್ನುವ ಎಷ್ಟೋ ಜನರ ಪ್ರಶ್ನೆಗೆ ಲಾಜಿಕ್  ಕಂಡು ಹಿಡಿದರೆ ಜಗತ್ತಿ ಗಾದರೂ ಸ್ವಲ್ಪ ಸಹಾಯ ಮಾಡಿದ ಹಾಗೆ ಇರುತ್ತದೆ.

Thursday, February 13, 2014

ಅಂಕಣ ೭ : ಸಾಫ್ಟ್ ಲೋಕ ಮತ್ತು ಲೋಕ ಜ್ಞಾನ

“ಅವಕ್ಕೇನು ಗೊತ್ತು ಲೋಕಜ್ಞಾನ? ಬರೀ ಮೂರು ಹೊತ್ತು ಕಂಪ್ಯೂಟರ್ ನ ಮುಂದೆ ಕೂತು ಕೆಲಸ ಮಾಡೋದು ಒಂದೇ ಅವರ ಕಾರ್ಯ. ಜಗತ್ತಿನ ಆಗು ಹೋಗು ಗಳ ಬಗ್ಗೆ ಅವರಿಗೇನು ಅಷ್ಟು ಸಂಭಂದ ವಿರುವುದಿಲ್ಲ. ಈ ಸಾಫ್ಟ್ ವೇರ್ ಎಂಜಿನೀಯರ್ಸ್ ಇದಾರಲ್ಲ ಅವರು ಕೇವಲ ತಮ್ಮಷ್ಟಕ್ಕೆ ತಾವು ಮಾತ್ರ…. “  ಈ ತರಹದ ಮಾತುಗಳು ಹಲವಾರು ಬಾರಿ ಹಲವಾರು ಜನರ ಬಾಯಿಂದ ಕೇಳಿರುತ್ತೇವೆ. ನಿಜ, ಅವರು ಹೇಳಿದ ಹಾಗೆ ನಾವು ಮೂರು ಹೊತ್ತು ಕಂಪ್ಯೂಟರ್ ನ ಮುಂದೆ ಕೂತು ಕೆಲಸ ಮಾಡುತ್ತಿರಬಹುದು, ಆದರೆ …. ಜಗತ್ತಿನ ಆಗು ಹೋಗು ಗಳ ಬಗ್ಗೆ ನಮಗೆ ಸಂಭಂದವಿಲ್ಲಾ ಎನ್ನುವ ಮಾತು ಇದೆಯಲ್ಲ ಇದು ಸ್ವಲ್ಪ ಕಷ್ಟದ ವಿಷಯ. ಎಲ್ಲೋ ಕೆಲವೊಬ್ಬರು ಇರಬಹುದು, ಹಾಗಂತ ಇಡೀ ಸಾಫ್ಟ್ ಸಮುದಾಯವೇ ಹೀಗೆ ಇರುತ್ತದೆ ಅಂತ ನಿರ್ಣಯಕ್ಕೆ ಬಂದು ಬಿಡುವುದು ತಪ್ಪು!


ನಮ್ಮಲ್ಲೂ ಬಹಳಷ್ಟು ಜನ ತಮ್ಮ ಬಿಡುವಿನ ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುವವರಿದ್ದಾರೆ. ಪ್ರತಿ ಶನಿವಾರ ತಮ್ಮ ಮನೆಯ ಅಕ್ಕ ಪಕ್ಕ ಇರುವ ಸರಕಾರೀ ಶಾಲೆಗಳಿಗೆ ಹೋಗಿ ಒಂದಿಷ್ಟು ಪಾಠ ಮಾಡಿ ಬರುವವರು, ಎನ್. ಜಿ . ಓ ಅಂತಹ ಸಂಸ್ಥೆ ಗಳನ್ನೂ ಸ್ಥಾಪಿಸಿಕೊಂಡು ವಾರಾಂತ್ಯದಲ್ಲಿ ಹಳ್ಳಿಗಳಿಗೆ ಹೋಗಿ ಒಂದುಷ್ಟು ಸಮಾಜ ಮುಖಿ ಕೆಲಸ ಮಾಡುವವರು, ಕೆಲಸ ಹುಡುಕಿಕೊಂಡು ಬರುವವರಿಗೆ ಅಲ್ಲಿ - ಇಲ್ಲಿ ತಮಗೆ ಗೊತ್ತಿರುವ ಕಡೆಗೆ ಕೆಲಸ ಕೊಡಿಸುವವರು, ವಾರಾಂತ್ಯದಲ್ಲಿ ಕನ್ನಡೇತರರಿಗೆ ಕನ್ನಡ ಪಾಠ ಹೇಳುವವರು, ತಮಗೆ ಬರುವ ಸಂಬಳದ ಒಂದಿಷ್ಟು ಭಾಗ ಅನಾಥಾಶ್ರಮಕ್ಕೋ, ಶಾಲೆ ಗಳಿಗೋ, ಅಥವಾ ಅವಶ್ಯಕತೆ ಇರುವ ವಿಧ್ಯಾರ್ಥಿಗಳಿಗೆ ಕೊಡುವವರು, ಹಲವಾರು ಶಾಲೆಗಳಿಗೆ ಕಂಪ್ಯೂಟರ್ ಮತ್ತು ಇತರ ಉಪಕರಣ ಗಳನ್ನ ಕೊಡಿಸುವವರು, ಕರ ಕುಶಲ ವಸ್ತುಗಳನ್ನು ತಯಾರಿಸುವವರಿಗೆ ತಮ್ಮ ಕಂಪನಿ ಯಲ್ಲಿಯೇ ಒಂದಿಷ್ಟು ದಿನ ಮಾರಾಟ ಮಾಡುವುದಕ್ಕೆ ಒಂದಿಷ್ಟು ಜಾಗ ಕಲ್ಪಿಸಿ ಕೊಡುವವರು, ಭೂಕಂಪ ವಾದಾಗ, ಪ್ರವಾಹ ಬಂದಾಗ, ಬರಗಾಲ ಪೀಡಿತ ಪ್ರದೇಶಕ್ಕೆ ಎಷ್ಟೊಂದು “ಸಾಫ್ಟ್ ಜನರು’ ತಮ್ಮ ಸಂಸ್ಥೆಗಳಿಗೆ ರಜೆ ಹಾಕಿ ಹೋಗಿ ತಮ್ಮ ಕೈಲಾದ ಕೆಲಸವನ್ನು ಮಾಡಿ ಬಂದಿರುತ್ತಾರೆ. ಹೀಗೆ ಹಲವಾರು ರೀತಿಯ ಸಮಾಜ ಮುಖಿ ಕೆಲಸಗಳಲ್ಲಿ ಯಾವುದೇ ಪ್ರಚಾರದ ಆಸೆ ಇಲ್ಲದೆ ಮಾಡುತ್ತಿರುತ್ತಾರೆ.

ಕೆಲವರು ಒಬ್ಬಂಟಿಗ ರಾಗಿಯೇ ತಮ್ಮ ಕೈಲಾದ ಸಮಾಜ ಮುಖಿ ಕೆಲಸವನ್ನು ಮಾಡುತ್ತಿದ್ದರೆ, ಇನ್ನು ಕೆಲವರು ತಮ್ಮದೇ ಆದ ತಂಡಗಳನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿರುತ್ತಾರೆ. ಇಲ್ಲಿ ಒಂದು ವಿಷಯ ಪ್ರಮುಖವಾಗಿ ಹೇಳಲೇಬೇಕು, “ಸಾಫ್ಟ್ ಲೋಕದ” ಜನರು ತಾವು ನಡೆಸುವ ಸಮಾಜ ಮುಖಿ ಕಾರ್ಯಗಳಿಗೆ “ಬೇರೆ ಲೋಕದ” ಜನರಿಂದ “ಆರ್ಥಿಕ ಸಹಾಯ” ಕೇಳುವುದು ತೀರ ಕಡಿಮೆ.  ಆದರೆ ಇಲ್ಲಿ ಒಂದು ವಿಷಯ, ಸಾಫ್ಟ್ ಲೋಕದ  ಯಾವುದೇ ಎಂಜಿನೀಯರ್   ಮಾಡುವ ತನ್ನ ಕೆಲಸದಲ್ಲಿ ಕರಾರುವಾಕ್ಕನ್ನು ಬಯಸುತ್ತಾನೆ. ಸಹಾಯ, ದಾನ  - ಧರ್ಮ ಅಂತ ಸಾಫ್ಟ್ ಲೋಕದ ಜನಗಳು ಟೋಪಿ ಹಾಕಿಸಿ ಕೊಳ್ಳುವುದು ಕಡಿಮೆ. ಯಾವುದೇ ಕೆಲಸಕ್ಕೂ ಮುನ್ನ ಸಾಫ್ಟ್ ಲೋಕದ ಜನ  ತಯಾರಿಸುವ ಡೆಟ, ಮತ್ತು ಅವರ ಕೆಲಸ ಮಾಡುವ ಪ್ಲಾನಿಂಗ್ ಮಾತ್ರ ಎಲ್ಲರು ಮೆಚ್ಚುವಂತದ್ದು.  ಯಾಕಂದ್ರೆ ಸಾಫ್ಟ್ ಲೋಕ ಫೇಮಸ್ ಆಗಿರೋದೆ ಅವರ   ಪ್ಲಾನಿಂಗ್ ನಲ್ಲಿ .  ತಾವು ಮಾಡುತ್ತಿರುವ ಕೆಲಸದ ಸಂಪೂರ್ಣ ಅರಿವಿಲ್ಲದೆ ಅವರು ಕೆಲಸಕ್ಕೆ ಕೈ ಹಾಕುವುದು ತುಂಬಾ ಕಡಿಮೆ.

ಇಂತಹ ಕೆಲಸ ಮಾಡಿದ ಅನೇಕ ಜನರು ಎಷ್ಟೊಂದು ಸಲ ಮಾಧ್ಯಮಗಳಿಂದ ಶಹಬ್ಬಾಶ್ ಗಿರಿಯೂ ಪಡೆದಿದ್ದು ನಮ್ಮ ಕಣ್ಣ ಮುಂದಿದೆ. ಹಾಗಿದ್ದರೆ ಮತ್ಯಾಕೆ ತಡ,
ಕ್ಯುಬಿಕ್ ನಲ್ಲಿ ಕುತ್ಕೊಂಡು,
ಕೋಡಿಂಗ್ ನ್ನು  ಮಾಡ್ಕೊಂಡು,
ಸಮಾಜ ದ ಬಗ್ಗೆ ನೂ ಸ್ವಲ್ಪ ತಲೆ ಕೆಡಿಸ್ಕೊಂಡು,
ಪುನಃ ಸಾಫ್ಟ್ ಲೋಕದಲ್ಲಿ ಮುಳುಗಿ ಹೋಗೋ ಸಾಫ್ಟ್ ಲೋಕದ ಜನರಿಗೊಂದು “ಜೈ” ಅಂದು ಬಿಡಿ.

ವಾರದ ಬಿಲ್ಡ್ ಲೇಬಲ್: ಜಗತ್ತಿನ ಆಗು ಹೋಗು ತಿಳಿಬೇಕಾದ್ರೆ ಸಮಾಜದ ಮಧ್ಯೆನೇ ಇರಬೇಕಾಗಿಲ್ಲ, ೩x೩ ಕ್ಯುಬಿಕ್ ನಲ್ಲಿದ್ದು ಸಮಾಜದ ಬಗ್ಗೆ ತಿಳ್ಕೋಬಹುದು. ಅಷ್ಟಕ್ಕೂ ಸಾಫ್ಟ್ ಲೋಕದ  ಸಿಸ್ಟಮ್ ನ ಇಂಟರ್ನೆಟ್ ನಿಂದ ತಪ್ಪಿಸಿಕೊಂಡು ಹೋಗೋಕೆ ಯಾವ ಸುದ್ದಿಗೆ ತಾನೇ ಧೈರ್ಯ?

Thursday, February 6, 2014

ಅಂಕಣ ೬ : ಸಾಫ್ಟ್ ಪರಪಂಚ

ಇನ್ನೇನು ಆಕಾಶಕ್ಕೆ ಮುತ್ತು ಕೊಟ್ಟವೇನು ಅನ್ನುವಷ್ಟು ಎತ್ತರದ ಕಟ್ಟಡಗಳ ಒಳಗೆ ಇರುವ ವಾತಾವರಣವೇ ಒಂದು ರೀತಿ.  ಹೊರಗಿನ ಜಗತ್ತಲ್ಲಿ  ಚಳಿ ಇದ್ದರೂ, ಬಿಸಿಲು ಇದ್ದರೂ, ಮಳೆ ಬಂದರೂ, ಗಾಳಿ ಬೀಸಿದರೂ  ಏನು ಗೊತ್ತಾಗದ ಹಾಗೆ ಒಳಗಡೆ ಒಂದೇ ರೀತಿಯ ವಾತಾವರಣ ವಿರುತ್ತದೆ. ಬೆಳಿಗ್ಗೆ ಸಾಮಾನ್ಯವಾಗಿ ೯ ಗಂಟೆಯ ಆಸುಪಾಸಿಗೆ ಇಂತಹ ಕಟ್ಟಡಗಳ ಒಳಕ್ಕೆ ಹೋಗುವ ನೂರಾರು ವಾಹನಗಳು, ಇದೆ ಕಚೇರಿಯ  ಸಾವಿರಾರು ಜನರನ್ನ ಪ್ರತಿದಿನವೂ ಹೊತ್ತೊಯ್ಯುವ ಹಲವಾರು ವಾಹನಗಳು- ಕಣ್ಣಿಗೆ ಕಾಣುವ ದೃಶ್ಯ ಸರ್ವೇ ಸಾಮಾನ್ಯ. ಇದು ನಮ್ಮ ಬೆಂಗಳೂರು!.
ಇಲ್ಲಿ ಗಗನ ಚುಂಬಿಸುವ ಕಟ್ಟಡಗಳು ಬಹುತೇಕ ಸಾಫ್ಟ್ ವೇರ್ ಕಂಪನಿಗಳು!.




ಕಂಪನಿಯ ಒಳಗಡೆ ಹೋದ ಉದ್ಯೋಗಿಗಳು ಮೊದಲು ಒಂದಿಷ್ಟು ಉಪಹಾರ ಜ್ಯೂಸು, ಕಾಫಿ, ಟೀ.. ಹೀಗೆ  ಮುಗಿಸಿಕೊಂಡು ತಮ್ಮ ತಮ್ಮ ಕ್ಯೂಬಿಕ್ ಗಳಲ್ಲಿ ಕುಳಿತರೆಂದರೆ  ಸಾಕು, ಸೂರ್ಯ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಬಂದ  ಪರಿವೆ ಬಹಳಷ್ಟು ಜನರಿಗೆ ಇರುವುದಿಲ್ಲ. ಕೆಲಸ ದಲ್ಲಿ ಮುಳುಗಿ ಹೋಗುವ ಪರಿಯೇ ಅಂಥದ್ದು. ಸಾಫ್ಟ್ ಲೋಕದ ಬಹಳಷ್ಟು ಜನರಿಗೆ ಸೂರ್ಯನ ಬಿಸಿಲೆ ಮೈಗೆ ತಾಕುವುದಿಲ್ಲ, ಸಂಜೆಯ ತುಂತುರು ಮಳೆ ಅವರ ಮುಖಕ್ಕೆ ಸಿಡಿಯುವುದಿಲ್ಲ, ಒಂದಿಷ್ಟು ಜೋರಾದ ಗಾಳಿಯು ಅವರ ಹತ್ತಿರ ಬರದ ಹಾಗೆ ಕಟ್ಟಡದ ಎಲ್ಲ ಕಡೆಗೂ ಬಂದೋ ಬಸ್ತು ಮಾಡಲಾಗಿರುತ್ತದೆ.


ಹಾಗಂತ ಸಾಫ್ಟ್ ಲೋಕದ ಒಳಗಡೆ ಎಲ್ಲವೂ ಸಾಫ್ಟ್ ಆಗಿಯೇ ಇರುತ್ತದೆ ಅಂದುಕೊಂಡರೆ ಅದು ಶುದ್ದ ತಪ್ಪು. ಇಲ್ಲಿಯೂ ಒಂದಿಷ್ಟು ಗುದ್ದಾಟಗಲಿರುತ್ತವೆ, ಪರಸ್ಪರ ತಿಕ್ಕಾಟ ಗಳಿರುತ್ತವೆ, ಇಲ್ಲಿ ಕೆಲಸ ಮಾಡುವವರು ಮನುಷ್ಯರೇ ಆಗಿರುವುದರಿಂದ ಅವರಿಗೂ ತಮ್ಮದೇ ಆದ ಕಷ್ಟ - ಸುಖಗಳು ಇರುತ್ತವೆ. ಹೊರಗಿನ ಜಗತ್ತಿಗೆ ಕಾಣಿಸುವುದು ಕೇವಲ ನಮ್ಮ  ಎ. ಸಿ. ರೂಂ, ಮತ್ತು ತಿಂಗಳ ಕೊನೆಯಲ್ಲಿ ನಾವು ಎಣಿಸುವ ಸಂಬಳ. ಒಳಗಡೆ ಇರುವ ನಮಗೆ ಮಾತ್ರ ಗೊತ್ತು ಎ. ಸಿ. ರೂಂ ನಲ್ಲಿರುವ ಬಿಸಿ ಎಂತದ್ದು ಎಂದು.


ಮೊನ್ನೆ ನನ್ನ ಸ್ನೇಹಿತನ ಮನೆಗೆ ಭೇಟಿ ಕೊಟ್ಟಾಗ ಅವರ ತಂದೆ ಜೊತೆ ಒಂದಿಷ್ಟು ಮಾತಾನಾಡಿದೆ.
ನಮ್ಮಿಬ್ಬರ ಮಾತುಕತೆ ಹೀಗಿತ್ತು:
” ಏನಪ್ಪಾ ಹೇಗಿದೀಯಾ ?”
"ಚೆನ್ನಾಗಿದೀನಿ ಅಂಕಲ್”
“ಹೇಗೆ ನಡೀತಾ ಇದೆ ಕೆಲಸ?”
“ಚೆನ್ನಾಗಿ ನಡೀತಾ ಇದೆ ಅಂಕಲ್”
ಅದಕ್ಕೆ ಅವರು ಕೊಟ್ಟ ಉತ್ತರ ಹೇಗಿತ್ತು : “ ನಿಮ ಸಾಫ್ಟವೇರ್ ನೌರದು ಏನು ಕೆಲಸಾನೊ ಏನೋ, ಒಂದು ಗೊತ್ತಾಗೊಲ್ಲ. ನೀವು ಇಪ್ಪತ್ತು ನಾಲಕ್ಕು ಗಂಟೇನೂ computer ಮುಂದೆ ಕೂತಿರ್ತೀರಾ, AC Room ನಲ್ಲಿ ಇರ್ತೀರಾ.  ಒಂಥರಾ ರೆಫ್ರಿಜಿ ರೆಟರ್  ಒಳಗಿರುವ ಹಣ್ಣಿನ ಥರ ನೀವು. ಒಳಗೆ ಇರೋವರ್ಗೂ ಮಾತ್ರ ಆರಾಮಾಗಿ ಇರ್ತೀರಾ, ಹೊರಗಡೆ ಬಂದ ತಕ್ಷಣ ನಿಮ್ಮ ಒದ್ದಾಟ ನೋಡೋಕೆ ಆಗಲ್ಲ”

ಅವರು ಏನು ಆಲೋಚಿಸಿ ಈ ಮಾತು ಹೇಳಿದರೋ ನನಗೆ ಗೊತ್ತಾಗಲಿಲ್ಲ. ಆದರೆ ಅದರಲ್ಲಿ ಏನೋ ಒಂದು ಅರ್ಥ ಇದೆಯಂತ ಅನಿಸ್ತು. ಅದಕ್ಕೆ ನೀವೂ  ಓದ್ಕೊಳ್ಳಿ  ಅಂತ ಹಾಕಿದೆ.

ಇದು ಒಂದು ತರಹ “rat-race“ ಇದ್ದ ಹಾಗೆ. requirements ಅರ್ಥಮಾಡಿಕೊಳ್ಳಲು developer ಹೆಣಗಾಡುತ್ತಿದ್ದರೆ, developer ಬರೆದ ಕೋಡ್ ಹಿಂದೆ tester ಬಿದ್ದಿರುತ್ತಾನೆ, ಇವರಿಬ್ಬರ ಹಿಂದೆ ಪ್ರೋಸೆಸ್ ಎನ್ನುವ ಅಸ್ತ್ರ ಹಿಡಿದು Quality ಎನ್ನುವ ಮನುಷ್ಯ  ಕಾವಲು ಇರುತ್ತಾನೆ. ಇವರೆಲ್ಲರ ಮೇಲೆ ಮ್ಯಾನೇಜರ್ ಕುಳಿತಿದ್ದರೆ, ಮ್ಯಾನೇಜರ್ ತಲೆಯ ಮೇಲೆ ಯಾವಾಗಲು ಒಬ್ಬ ಕ್ಲೈಂಟ್ ಕುಳಿತಿರುತ್ತಾನೆ.

ಒಟ್ನಲ್ಲಿ, ಕಾರ್ಡ್ ಸ್ವೈಪ್  ಮಾಡುವ ಮೂಲಕ ಶುರುವಾಗುವ ನಮ್ಮ ದಿನಚರಿ, ಮತ್ತೆ ಮುಗಿಯುವುದು ಕಾರ್ಡ್ ಸ್ವೈಪ್ ಮಾಡುವ ಮೂಲಕವೇ. ಇದರ ನಡುವೆ ಇರುವ ನಮ್ಮ ಕೆಲಸ, ಒಂದಿಷ್ಟು ಮಾತು ಕಥೆ, ತಲೆ ಕೆಟ್ಟಾಗ ಕುಡಿಯುವ ಒಂದೆರಡು ಸಲದ ಕಾಫಿ-ಟೀ, ಹೆಣಗಾಟ- ಹಾರಾಟ.. ಹೀಗೆ .. ಇರುತ್ತದೆ ನಮ್ಮ ಬದುಕು. ಸಾಫ್ಟ್ ಲೋಕದ ಇನ್ನೊಂದು ವಿಶೇಷ ಎಂದರೆ ಇಲ್ಲಿ ನಮ್ಮ ದೇಹದ ಎಲ್ಲ ಅಂಗಾಂಗ ಗಳಿಗಿಂತ ಜಾಸ್ತಿ ಕೆಲಸ ವಿರುವುದು ತಲೆ ಮತ್ತು ಕಣ್ಣುಗಳಿಗೆ. ಸದಾ ಮುಂದೆಯಿರುವ ಕಂಪ್ಯೂಟರ್ ನೋಡಿ ನೋಡಿ ಕಣ್ಣುಗಳು ಉರಿ ಉರಿ ಯಾಗಿದ್ದಾರೂ ಕೆಲಸ ಮುಂದು ವರಿಯಲೇ ಬೇಕು. ಇನ್ನು ತಲೆಯ ವಿಷಯವಂತೂ  -  ಅದು ಕೆಲಸ ಮಾಡುವುದರಿಂದ  ಹಿಡಿದು, ಹೊರಗಿನಿಂದ ಬರುವ ಎಲ್ಲ ರೀತಿಯ ಒತ್ತಡಗಳನ್ನು ನಿಭಾಯಿಸುವ ವರೆಗೂ ಎಲ್ಲ ಕೆಲಸವೂ ತಲೆಯ ಮೇಲೆಯೇ ಇರುತ್ತದೆ. ಹೆಚ್ಚು - ಕಡೆಮೆ ಟೈಪ್ ಮಾಡುತ್ತೇವೆ ಎನ್ನುವ ಕಾರಣ ದಿಂದ ಕೈ ಬೆರಳುಗಳನ್ನ ಬಿಟ್ಟರೆ ಉಳಿದೆಲ್ಲ ಅಂಗಾಂಗ ಗಳಿಗೂ ಇಲ್ಲಿ ಕಂಪ್ಲೀಟ್ ರೆಸ್ಟ್ !


ಈ ವಾರದ ಬಿಲ್ಡ್ ಲೇಬಲ್ : ಸಾಫ್ಟ್ ವೇರ್ ನಲ್ಲಿ ಕೆಲಸ ಮಾಡೋರ ಮೈ ಕೈ ಎಲ್ಲ ತಣ್ಣಗೆ, ತಲೆ ಮಾತ್ರ ಸದಾ ಬಿಸಿ.