ಈ ತಿಂಗಳ ಪುಸ್ತಕದ ಬಗ್ಗೆ ಬರೆಯುವುದಕ್ಕಿಂತ ಮುಂಚೆ ಒಂದು ಸಲ ಕೆಳಗಿನ ಪ್ರಶ್ನೆಗಳನ್ನು ಓದಿ, ನೀವು ಉತ್ತರ ಕೊಡಬಲ್ಲಿರಾ?
ಒಂದಿಷ್ಟು ಪ್ರಶ್ನೆಗಳು:
೧. ಭೀಷ್ಮ ಯಾಕೆ ಮದುವೆ ಆಗದೆ ಹಾಗೆ ಉಳಿದ?
೨. ದ್ರೌಪದಿ ಏಕೆ ಐದು ಜನ ಪಾಂಡವರನ್ನು ಮದುವೆಯಾಗಲು ಒಪ್ಪಿಕೊಂಡದ್ದು?
೩. ಕೃಷ್ಣ ಕುರುಕ್ಷೇತ್ರದಲ್ಲಿ ಪಾಂಡವರ ಪರವಾಗಿ ನಿಲ್ಲಲು ಕಾರಣ ಏನು?
೪. ಮಂದ್ರ ದೇಶದ ರಾಜ "ಶಲ್ಯ" ತನ್ನ ತಂಗಿಯ ಮಕ್ಕಳಾದ ನಕುಲ ಮತ್ತು ಸಹದೇವ ರ ಪರವಾಗಿ ನಿಲ್ಲುವುದು ಬಿಟ್ಟು ಧುರ್ಯೋಧನನ ಪರವಾಗಿ ನಿಂತದ್ದು ಏಕೆ?
೫. ವಿದುರ ಯಾರು?
೬. ಎಲ್ಲದಕ್ಕಿಂತ ಹೆಚ್ಚಾಗಿ ಕೃಷ್ಣ ನಿಗೂ, ಜರಾಸಂಧನಿಗೂ ಏಕೆ ಹಾವು-ಮುಂಗುಸಿಯ ಸಂಭಂದ?
೭. ದೇವಕಿಯ ಮಗುವಿನಿಂದ ತನ್ನ ಸಾವು ಖಚಿತವೆಂದು ಗೊತ್ತಿದ್ದರೂ ಕಂಸ ದೇವಕಿಯನ್ನ ಏಕೆ ಸಾಯಿಸಲಿಲ್ಲ?
೮. ಕ್ರಿಷ್ಣದ್ವೈಪಾನರು ಯಾರು?
ಅಬ್ಬಾ! ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಹೋಗುತ್ತಾರೆ ನಮ್ಮ ಭೈರಪ್ಪನವರು. " ಪರ್ವ" ಕಾದಂಬರಿಯನ್ನು ಮೆಚ್ಚಲೇ ಬೇಕಾದ ಅಂಶವೆಂದರೆ, ಈ ಕಾದಂಬರಿಯ ಎಲ್ಲ ಪಾತ್ರಗಳನ್ನು ಸಾಮಾನ್ಯ ಮನುಷ್ಯರಂತೆ ಬಿಂಬಿಸಿರುವುದು. ಯಾರನ್ನೂ ವೀಪರೀತವಾಗಿ ವೈಭವಿಕರಿಸಿಲ್ಲ. ನಮ್ಮ ಟಿ.ವಿ ಧಾರಾವಾಹಿಗಳಲ್ಲಿ ತೋರಿಸಿರುವ ಹಾಗೆ ಕಾಲ್ಪನಿಕ ವಾಗಿ ಮಾತ್ರ ಸಾಧ್ಯವಾಗುವಂತಹ ಚಿತ್ರಣ ಗಳಿಲ್ಲ.
ಬದಲಿಗೆ ತುಂಬಾ ಪ್ರಾಕ್ಟಿಕಲ್ ಆಗಿ ಕಾದಂಬರಿ ನಮ್ಮನ್ನು ಓದಿಸಿಕೊಂಡು ಹೊಗುತ್ತದೆ.
ಉದಾಹರಣೆಗೆ : ಕೃಷ್ಣ ಅಂದರೆ ದೇವ್ರು, ಎಲ್ಲಂದರಲ್ಲಿ ಪ್ರತ್ಯಕ್ಷನಾಗುತ್ತಾನೆ. ಹೋರಾಟದಲ್ಲಿ ಶತ್ರುಗಳ ಕಣ್ಣೆದುರಿಗೆ ಚಕ್ಕನೆ ಮಾಯವಾಗಿ ಬಿಡುತ್ತಾನೆ.... ಹೀಗೆ ಮುಂತಾದ ಅತೀ ವೈಭವಿಕರಿಸಿದ ಉತ್ಪ್ರೇಕ್ಷೆ ಎಲ್ಲೂ ಇಲ್ಲ.
ಬದಲಿಗೆ ಕೃಷ್ಣನೂ ಸಹ ನಮ್ಮಂತೆ ಒಬ್ಬ ಸಾಮಾನ್ಯ ಮನುಷ್ಯ ಎನ್ನುವಂತೆ ಬಿಂಬಿಸಲಾಗಿದೆ. ಇದುವೇ ನನ್ನಂತಹ ಓದುಗನಿಗೆ ತುಂಬಾ ಇಷ್ಟವಾಗುವ ಸಂಗತಿ.
ಪರ್ವ ಬರೆಯುವುದಕ್ಕಿಂತ ಮುಂಚೆ ಇದಕ್ಕೆ ಹೇಗೆ ತಯಾರಿ ನಡೆಸಿದ್ದಾರೆ ಅನ್ನುವುದನ್ನ ತಿಳಿದುಕೊಳ್ಳಲು ನೀವು ಭೈರಪ್ಪನವರ " ನಾನೇಕೆ ಬರೆಯುತ್ತೇನೆ?" ಅನ್ನುವ ಪುಸ್ತಕ ಓದಬೇಕು.
ನಿಜವಾಗಲು, "ಪರ್ವ" ತಯಾರಿ ಲೇಖಕರ ಬಗ್ಗೆ ಅಭಿಮಾನವನ್ನು ಮೂಡಿಸುತ್ತದೆ.
ಒಂದು ವೀಕೆಂಡ್ ಯಾರ ತಂಟೆಯೂ ಇಲ್ಲದೆ "ಪರ್ವ" ವನ್ನು ಹಿಡಿದು ಕುಳಿತರೆ, ಎರಡು ದಿನ ಕಳೆದು ಹೋದದ್ದೇ ತಿಳಿಯುವುದಿಲ್ಲ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ನೀವು ಸುಮ್ಮನೆ ಮೊದಲು ಹತ್ತು ಪುಟಗಳನ್ನು ಓದಿ, ಉಳಿದ ೫೯೦ ಪುಟಗಳು ನಿಮ್ಮನ್ನ ಕೂತ ಜಾಗದಿಂದ ಎದ್ದೆಳದಂತೆ ಮಾಡಿಬಿಡುತ್ತವೆ. ಪುಸ್ತಕ ಓದಿದ ಮೇಲೆ, ಒಂದು ದೊಡ್ಡ ನಿಟ್ಟುಸಿರು, ಖುಷಿ ಮತ್ತು ತೃಪ್ತಿ ನಮ್ಮಲ್ಲಿರುತ್ತದೆ.
ಕೊನೆಯ ಮಾತು:
ಪರ್ವ ಓದಿದ ಮೇಲೆ ನನ್ನನ್ನು ಕಾಡಿದ ಮೂರು ಪಾತ್ರ ಗಳೆಂದರೆ : ದ್ರೌಪದಿ, ಭೀಮ ಮತ್ತು ಕೃಷ್ಣ.
ದ್ರೌಪದಿಯ ತ್ಯಾಗ ಮತ್ತು ಸಹನೆ; ಭೀಮನ ಧೈರ್ಯ; ಕೃಷ್ಣ ನ ಚತುರತೆ ಹಾಗು ಸಮಯ ಪ್ರಜ್ಞೆ.
ಹಾಗೇನೆ ಪುಸ್ತಕ ಓದಿದ ಮೇಲೆ ನನಗೆ ಸಿಟ್ಟು ಉಕ್ಕಿ ಬಂದದ್ದು (ಧುರ್ಯೋಧನನಿಗಿಂತಲೂ ಹೆಚ್ಚಿಗೆ): ಧರ್ಮರಾಜನ ಮೇಲೆ.
ಯಾಕೆ ಅಂತ ತಿಳಿಯಬೇಕಾದರೆ ಒಂದು ಸಲ "ಪರ್ವ" ಓದಿ ನೋಡಿ.....
ಹಾಗೇನೆ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ...
ಈ ವರ್ಷ ಮಹಾಭಾರತದ "ಪರ್ವ" ನಿಮ್ಮದಾಗಲಿ!
No comments:
Post a Comment