Tuesday, January 29, 2013

ಕಾರಂತಜ್ಜ ನ ಆತ್ಮಕಥೆ


ಒಬ್ಬ ವ್ಯಕ್ತಿ ಇರುವ ಒಂದೇ ಜೀವನದಲ್ಲಿ ಏನೆಲ್ಲಾ ಸಾಧಿಸಬಹುದು, ಒಬ್ಬ ವ್ಯಕ್ತಿ ತನ್ನ ಸಂಸಾರಿಕ, ಆರ್ಥಿಕ, ಸಾಮಾಜಿಕ ಕಷ್ಟ ಕೋಟ ಲೆಗಳನ್ನೆಲ್ಲ ಮೂಲೆಗೆ ತಳ್ಳಿ ತನ್ನ ಇತಿ ಮಿತಿ ಗಳನ್ನು ಮೀರಿ ಹೇಗೆಲ್ಲ ಬೆಳೆಯಬಹುದು,
ಎಲ್ಲಕ್ಕಿಂತ ಹೆಚ್ಚಾಗಿ ಇರುವ ಒಂದೇ ಜನ್ಮದಲ್ಲಿ  ಎಷ್ಟೊಂದು ವಿಷಯಗಳ ಬಗ್ಗೆ ಆಸಕ್ತಿ ಹೊಂದಬಹುದು ಎನ್ನುವುದನ್ನು ತಿಳಿಯಬೇಕಾದರೆ " ಕಾರಂತಜ್ಜನ ಆತ್ಮ ಕಥೆ ಗಿಂತ" ಮತ್ತೊಂದಿಲ್ಲ!.

ಅವರ "ಹುಚ್ಚು ಮನಸು" ಅಚ್ಚರಿಯ ಜೊತೆಗೆ ನಮಗೂ ಹುಚ್ಚು ಹಿಡಿಸುವುದರಲ್ಲಿ ಎರಡು ಮಾತಿಲ್ಲ.
ಹತ್ತನೇ ತರಗತಿ ಮುಗಿಯವ ಹೊತ್ತಿಗೆ ಶಾಸ್ತ್ರೀಯ ಓದಿಗೆ ಬೆನ್ನು ತಿರುಗಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. ಅವರೇ ಹೇಳಿರುವಂತೆ " ಅವರ ಯುವ ಮನಸ್ಸು ಗಾಂಧೀಜಿ ಮತ್ತು ಕಾಂಗ್ರೆಸ್ ನ ಅಂಧಾಭಿಮಾನಿಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ  ಧುಮುಕುತ್ತದೆ". ಹಳ್ಳಿ ಹಳ್ಳಿ ಯಲ್ಲೂ ಗಾಂಧೀಜಿ ಸಂದೇಶ ಹೊತ್ತು ಸಾಗುತ್ತಾರೆ. ಕೊನೆಗೆ ಎಲ್ಲೋ ಒಂದು ಕಡೆ ಭಿನ್ನಾಭಿಪ್ರಾಯದಿಂದಾಗಿ ಗಾಂಧೀಜಿ ಮತ್ತು ಕಾಂಗ್ರೆಸ್ಸ್ ಅನುಯಾಯಿಯಾಗಿ ಎರಡರಿಂದಲೂ ದೂರ ಸರಿಯುತ್ತಾರೆ.  ಆದರೆ ಗಾಂಧೀಜಿ ಬಗ್ಗೆ ಗೌರವಯುತ ಭಾವನೆ (ಕೆಲ ವಿಷಯಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ) ಮಾತ್ರ ಹಾಗೆ ಮುಂದುವರೆಯುತ್ತದೆ.

ಅಲ್ಲಿಂದ ಅವರ ಚಿಂತನೆ ಮತ್ತು  ಜೀವನ ಎರಡೂ ಮುಖಮುಖಿಯಾಗುತ್ತವೆ. ತಮ್ಮ ಸ್ವಂತ ವಿಚಾರ ದಿಂದ, ಚಿಂತನೆಗಳಿಂದ ಜೀವನವನ್ನ, ಜಗತ್ತನ್ನ ನೋಡ ಲಾರಂಭಿ ಸುತ್ತಾರೆ. ಅಲ್ಲಿಂದ ಶುರುವಾಗುತ್ತದೆ "ಕಾರಂತಜ್ಜ ನ ರೋಮಾಂಚನಕಾರಿ ಜೀವನ".

ಪತ್ರಿಯೊಂದರ ಸಂಪಾದಕರಾಗಿ, ಅಂಕಣಕಾರರಾಗಿ, ಮುದ್ರಣಾಲಯದ ಮಾಲೀಕರಾಗಿ, ನಾಟಕಗಳ ಕರ್ತೃವಾಗಿ, ನಿರ್ದೇಶಕರಾಗಿ, ನಟರಾಗಿ, ಪ್ರಯೋಗಾತ್ಮಕ ನಾಟಕಗಳನ್ನು ತೆರೆಯ ಮೇಲೆ ತರುವಲ್ಲಿ ಕೆಲವೊಮ್ಮೆ ಸಫಲರಾಗಿ , ಮತ್ತೊಮ್ಮೆ ವಿಫಲರಾಗಿ, ಬಿಡುವಿನ ಮಧ್ಯೆ "ಮರಳಿ ಮಣ್ಣಿಗೆ' ಎನ್ನುವ ಅದ್ಭುತ ಕಾದಂಬರಿಯ ಸೃಷ್ಟಿಕರ್ತನಾಗಿ, ಜನಪದ ಸಾಹಿತ್ಯದ ಅಧ್ಯಯನಕಾರರಾಗಿ, ವಾಸ್ತು ಶಿಲ್ಪ ದ ಆಸಕ್ತಕಾರರಾಗಿ, ಯಕ್ಷಗಾನ ಕಲೆಯನ್ನು ಪ್ರಪಂಚಕ್ಕೆ ತಿಳಿಯ ಪಡಿಸಿದ ಮೊದಲ ಕನ್ನಡಿಗರಾಗಿ, ಮಕ್ಕಳ ಸಾಹಿತ್ಯ ಕರ್ತೃವಾಗಿ, ವಿಜ್ಞಾನ ಪ್ರಪಂಚ ಮತ್ತು ಬಾಲ ಪ್ರಪಂಚ ಎನ್ನುವ ಬೃಹತ್ ಪುಸ್ತಕಗಳ ಲೇಖಕರಾಗಿ, ಚಲಚಿತ್ರದ ನಟರಾಗಿ, ನಿರ್ದೇಶಕರಾಗಿ,ನಿರ್ಮಾಪಕರಾಗಿ, ಪರಿಸರ ವಾದಿಯಾಗಿ, ಸಾಲದೆಂಬಂತೆ ಚುನಾವಣೆಯಲ್ಲಿ ಕಾಂಗ್ರೆಸ್ಸ್ ನ ಎದುರಾಳಿಯಾಗಿ.... ಅಬ್ಬಾ !!!


ಹುಚ್ಚು ಮನಸಿನ ಹತ್ತು ಮುಖವೆಂದರೆ ಇದೆ ಏನೋ?
೯೦ ರ ಹರೆಯದಲ್ಲೂ ಹುಚ್ಚು ಉತ್ಸಾಹದೊಂದಿಗೆ ಊರೂರು ಸುತ್ತುವ, ತನ್ನ ಕೆಲಸದಲ್ಲಿ ಮೈಮರೆತು ಕೌಟುಂಬಿಕ ಕಷ್ಟಗಳನ್ನೆಲ್ಲ ಮೈ ಮರೆಯುವ ಕಾರಂತಜ್ಜನ ಬದುಕು ನಿಜಕ್ಕೊ ಒಂದು ಅಚ್ಚರಿಯೇ ಸರಿ. 
ಪುಸ್ತಕ ಓದಿ ಮುಗಿಸಿದ ಮೇಲೆ ನಮ್ಮ ಮನ ಕಡಲ ತೀರದ ಭಾರ್ಗವರಿಗೆ ನಮಿಸದೆ ಇರುವುದಿಲ್ಲ ........
 
ಅಂದಹಾಗೆ ಈ ವರ್ಷ ನೀವು ಓದುವ ಪುಸ್ತಕಗಳ ಪಟ್ಟಿಗೆ " ಹುಚ್ಚು ಮನಸಿನ ಹತ್ತು ಮುಖಗಳು" ಪುಸ್ತಕವು ಸೇರಲಿ.

1 comment:

  1. ಚೆಂದನೆಯ ಬರಹ ಆರ್ಪಿ :) "ಹುಚ್ಚು ಮನಸಿನ ಹತ್ತು ಮುಖಗಳು" ಓದಿದ ಮೇಲೆ ನಮಗೂ ಹುಚ್ಚು ಹಿಡಿದುಬಿಡತ್ತೆ! ಆ ಹುಚ್ಚೇನೆಂದರೆ ಕಾರಂತರು ತಮ್ಮ ಜೀವನದಾವಧಿಯಲ್ಲಿ ಏನೆಲ್ಲಾ ಪ್ರಯೋಗಗಳನ್ನ ಮಾಡಿದ್ರು, ನಾನು ಕೂಡಾ ನನ್ನ ಜೀವನವನ್ನ ಪೂರ್ತಿಯಾಗಿ ಬದುಕಿಬಿಡಬೇಕೆಂಬ ಹುಚ್ಚು ಮತ್ತು ಜೀವನದ ಬಗ್ಗೆ ಬೆರಗು ಮೂಡುವುದನ್ನನುಭವಿಸಿಯೇ ಆನಂದಿಸಬೇಕು :) ಕಾರಂತರೇ ನಿಮಗೊಂದು ನಮನ!
    ಧನ್ಯವಾದಗಳು
    ಸವಿತ ಎಸ್ ಆರ್

    ReplyDelete