Monday, May 27, 2013

"ಶಿವ"ನ ಯುಗಾವತಾರ

ಅಷ್ಟಕ್ಕೂ ಆತ  ತೊಡೆ ತಟ್ಟಿ ಸಮರ ಸಾರಿದ್ದು ಯಾರ ಮೇಲೆ?
ಲೆಕ್ಕವಿರದಷ್ಟು  ಆನೆ, ಒಂಟೆ, ಕುದುರೆಗಳ ಜೊತೆಗೆ ಲಕ್ಷೋಪ - ಲಕ್ಷ ಸೈನ್ಯದೊಂದಿಗೆ ದಿಲ್ಲಿ ದರಬಾರಿನಲ್ಲಿ ಆಡಳಿತ ನಡೆಸುತ್ತಿದ್ದ ಮೊಘಲರ ಮೇಲೆ ಮತ್ತು ಅದರ ಜೊತೆಗೆ ದಕ್ಷಿಣದಲ್ಲಿ ಪ್ರಬಲರಾಗಿದ್ದ  ಬಿಜಾಪುರದ ಸುಲ್ತಾನರ ಮೇಲೆ.
ಸಮರ ಸಾರಲು ಆತನ ಉದ್ದೇಶವಾದರೂ ಏನಿತ್ತು?
"ಒಗ್ಗಟ್ಟು" ಎಂಬ ಪದದ ಅರ್ಥವನ್ನು ಇಂದಿಗೂ ಸಹ ತಿಳಿಯದ  ಹಿಂದೂಗಳ ಮೇಲೆ ನಂಬಿಕೆಯಿಟ್ಟು , ಅವರ ಮೇಲಿನ ದೌರ್ಜನ್ಯ ನಿಲ್ಲಿಸಲು "ಹಿಂದವಿ  ಸ್ವರಾಜ್ಯ" ವನ್ನು ಕಟ್ಟಲು.
ಸರಿ, ಮೊಘಲರು ಮತ್ತು ಬಿಜಾಪುರದ ಸುಲ್ತಾನರ ಮೇಲೆ ಕಾಲು ಕೆರೆದುಕೊಂಡು ಯುದ್ಧ ಸಾರಬೇಕೆಂದರೆ ಈತನ ಸೈನ್ಯದ ಪ್ರಮಾಣ ಎಷ್ಟಿತ್ತು ?
ಕೇಳಿದರೆ ನಗು ಬರುವುದು ಮಾತ್ರ ಖಂಡಿತ, ಕಾಡು ಮೇಡಲ್ಲಿ ಲಂಗೋಟಿ ಯನ್ನು ಉಟ್ಟುಕೊಂಡು ಅಲೆಯುತ್ತಿರುವ ಹುಡುಗರ ಗುಂಪೇ ಈತನ ಸೈನ್ಯ.
ಸುಮ್ಮನೆ, ಬೇರೆ ಹಿಂದೂ ರಾಜರ ತರಹ ಈತನು ಮೊಘಲರಿಗೆ, ಸುಲ್ತಾನರಿಗೆ ವಿಧೇಯನಾಗಿ ಇದ್ದುಬಿಡಬಾರದಾಗಿತ್ತೆ ?
ಖಂಡಿತ, ಈತನ ತಂದೆಯು ಸಹ ಬಿಜಾಪುರದ ಸುಲ್ತಾನರ ಅಡಿಯಲ್ಲಿ ಬರುತ್ತಿದ್ದ  ಬೆಂಗಳೂರು ಪ್ರದೇಶವನ್ನು ಸಾಮಂತ ಅರಸರ ತರಹ ನಿರ್ವಹಿಸುತ್ತಿದ್ದರು.
ಹಾಗಿದ್ದರೆ, ಈತನಿಗೆಕೆ ಇಲ್ಲದ ಉಸಾಬರಿ? ಮೊಘಲರ ಸೈನ್ಯವನ್ನು ಎದುರು ಹಾಕಿಕೊಂಡು ಬದುಕಿ ಉಳಿದವರು ಉಂಟೆ?
ನಿಜ,ಬೇರೆ ಯಾರಾದರೂ ಆಗಿದ್ದರೆ ಹಾಗೆ ಮಾಡುತ್ತಿದ್ದರೇನೋ ....  ಆದರೆ ಏನು ಮಾಡುವುದು? ತಲೆ ಬಗ್ಗಿಸುವುದು ಈತನ ಜಾಯಮಾನವಲ್ಲ. ಸ್ವತಂತ್ರವಾಗಿ ಬದುಕಬೇಕೆಂಬ ಹಂಬಲ ಈತನದು. ಯಾಕೆಂದರೆ  ಈತ ಬೇರೆ ಯಾರೋ ಅಲ್ಲ, "ಸ್ವರಾಜ್ಯದ ಸ್ಥಾಪಕ -ಶಿವಾಜಿ"

ಈ ಸಲದ ಪುಸ್ತಕ ಶ್ರೀ ಹೊ.ವೆ. ಶೇಷಾದ್ರಿ ಅವರು ಬರೆದ "ಯುಗಾವತಾರ". ಇದೊಂದು ಕಾಲ್ಪನಿಕ ಕಥೆಯಲ್ಲವಾದ್ದರಿಂದ, ಪುಸ್ತಕದೊಳಗಿನ ವಿಷಯದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ .....

ಅದು ಇಡೀ ಭಾರತಕ್ಕೆ ಗರ ಬಡಿದ ಕಾಲ. ಅತ್ತ ಪುಲಿ - ಇತ್ತ ದಾರಿ ಎಂಬಂತೆ ಆಗಿತ್ತು ಒಂದು ಸಮಾಜದ ಸ್ಥಿತಿ. ಬಹುಶ: ಕರ್ನಾಟಕದ  ವಿಜಯನಗರ ಸಮ್ರಾಜ್ಯದ ಕಾಲದ ನಂತರ ಆ ಒಂದು ಸಮಾಜ ಜೋರಾಗಿ ಉಸಿರಾಡುವು ದಕ್ಕೂ ಹೆದರುವಂತಹ ಸ್ಥಿತಿ. ಕಾಲ್ಪನಿಕ ವೆನಿಸಿದರೂ " ಯಾರಾದರೂ ಒಬ್ಬ ಅವತಾರ ಪುರುಷ ಬರಬಾರದೇ" ಎನ್ನುವಷ್ಟರ ಮಟ್ಟಿಗೆ ಹತಾಶೆ ಜನರ ಮನದಲ್ಲಿತ್ತು.  ಉತ್ತರ ಭಾರತವೆಂಬ ಭಾಗ ಮಾನವೀಯತೆಯ ಎಂಬುದನ್ನೇ ಮರೆತಿದ್ದ, ಅಧಿಕಾರಕ್ಕಾಗಿ ತನ್ನ ತಂದೆ ಹಾಗು ಸಹೋದರರನ್ನೇ ಬಲಿ ತೆಗೆದು ಕೊಂಡ " ಔರಂಗಜೇಬ್" ಎನ್ನುವ ದೊರೆ ಆಳುತ್ತಿದ್ದ . ಅವನ ಕಪಿಮುಷ್ಟಿಯಲ್ಲಿ  ಭಾರತದ ಬಹು ಭಾಗ ನಲುಗಿ ಹೋಗಿತ್ತು. ಇನ್ನುಳಿದ ದಕ್ಷಿಣದ ಭಾಗ - ಬಿಜಾಪುರ ಸುಲ್ತಾನರ ಕೈಯಲ್ಲಿ. ಇವರಿಬ್ಬರ ಮಧ್ಯದಲ್ಲಿ ಪ್ರತಿ ದಿನವೂ ಸತ್ತು ಸತ್ತು ಬದುಕುತ್ತಿದ್ದ ಜನರ ಜೀವನ ಯಾತನೆ. 

ಜನರ ಮನಸ್ಸಿನಲ್ಲಿದ್ದಂತೆಯೇ  ಒಂದು  ದಿನ ನಿಜ ಆಯಿತು.  ಸತ್ತು ಸತ್ತು ಬದುಕುವ, ಸ್ವತಂತ್ರವಾಗಿ ಆಲೋಚನೆ ಮಾಡುವುದನ್ನೇ ಮರೆತಿದ್ದ, ಜನರ ಮಧ್ಯೆ ಸಾಕ್ಷಾತ್ "ಶಿವ" ನ ಅವತಾರ ಬಂದಾಗಿತ್ತು. ಪುರಂದರ ಗಡ ದಿಂದ  ಶುರುವಾದ ಶಿವನ ವಿಜಯ ಯಾತ್ರೆ ದಿಲ್ಲಿಯಲ್ಲಿ ಕುಳಿತಿದ್ದ ದೊರೆ ಯ ಸಿಂಹಾಸನವೂ ಗಡ ಗಡ ನೆ ನಡುಗುವಂತೆ ಮಾಡಿತ್ತು . ಇತ್ತ ಬಿಜಾಪುರದ ಸುಲ್ತಾನನ ಕನಸಲ್ಲೂ ಪ್ರತಿರಾತ್ರಿ  "ಶಿವ" ನ ಪ್ರತ್ಯಕ್ಷವಾಗುತ್ತಿತ್ತು. ಆ ಧೀರ ವ್ಯಕ್ತಿಗೆ ದಿಲ್ಲಿಯ ದೊರೆಗಳು ಇಟ್ಟಿದ ಹೆಸರು "ಬೆಟ್ಟದ ಇಲಿ". ಹೌದು ಮತ್ತೆ, ಯಾರ ಕೈಗೂ ಸಿಗದೇ, ಎಲ್ಲರಿಗ್ಗೋ ಚಳ್ಳೆ ಹಣ್ಣು  ತಿನಿಸುತ್ತಿದ್ದ "ಶಿವ" ಬೆಟ್ಟದ ಇಲಿ ರೂಪದಲ್ಲಿ  ದಿಲ್ಲಿ ಮತ್ತು ಬಿಜಾಪುರ ದ ಸುಲ್ತಾನರನ್ನು ಕೊನೆಯವರೆಗೂ ಕಾಡಿದ್ದು ಮಾತ್ರ ಇಲಿಯಾಣೆಗೂ ಸತ್ಯ!

ಅಫ್ಜಲ್ ಖಾನ್, ಆಯೆಸ್ತಾ ಖಾನ್, ದಿಲೆರ ಖಾನ್, ಸಿದ್ದಿಕಿ ಮುಂತಾದ ಮಹಾನ್ ವೀರರೂ ಸಹ ಶಿವಾಜಿ ಮಹಾರಾಜರ ಖಡ್ಗ "ಭವಾನಿ" ಗೆ ಸಿಕ್ಕು ತುಂಡರಿಸಿ ಹೋದರು....
ಹಾಗಂತ ಶಿವಾಜಿ ಬರೀ  ಖಡ್ಗ ಹಿಡಿದು ಯುದ್ದಮಾಡುವ ಯೋಧರಷ್ಟೇ ಆಗಿರಲಿಲ್ಲ. ಬದಲಿಗೆ ರಾಜ್ಯವನ್ನು ನಡೆಸಿಕೊಂಡು ಹೋಗುವ ಚಾಣಾಕ್ಷತೆ, ಆಡಳಿತದ ನಡೆಸುವ ನಾಯಕತ್ವ ಗುಣ  ಇದರ ಜೊತೆಗೆ ಶತ್ರುವಿಗೆ ಚಳ್ಳೆ ಹಣ್ಣು ತಿನಿಸುವ ಮನೋಭಾವ ಎಲ್ಲವೂ ಜೊತೆ ಗೂಡಿದ್ದವು. 

ಒಂದು ಉದಾಹರಣೆ ಎಂದರೆ:
ಮೊಘಲರ ಸಾಮ್ರಾಜ್ಯವೆಂದು ಗೊತ್ತಿದ್ದೂ ಸಹ, ಅವರ  ವ್ಯಾಪಾರ ಕೇಂದ್ರಕ್ಕೆ ಲಗ್ಗೆ ಇಟ್ಟು ಅಲ್ಲಿರುವ ಎಲ್ಲ ಸರಕುಗಳನ್ನು ಲೂಟಿ ಹೊಡೆಯುತ್ತದೆ ಶಿವಾಜಿಯ ಸೈನ್ಯ. ಇದನ್ನು ಕೇಳಿ ಕೆಂಡಾ ಮಂಡಲವಾದ ಔರಂಗಜೆಬ್ ಇನ್ನೇನು ಶಿವಾಜಿಯ ಚಿಕ್ಕ ಗಾತ್ರದ ಸೈನ್ಯ ವನ್ನು ನುಂಗಿ ನೀರು ಕುಡಿಯಬೇಕು ಅನ್ನುವಷ್ಟರಲ್ಲಿ  ಶಿವಾಜಿಯ ಪತ್ರ ಔರಂಗಜೆಬನ ಕೈ ಸೇರಿರುತ್ತದೆ, ಅದರಲ್ಲಿ ಸ್ವತಃ ಶಿವಾಜಿ ಹೀಗೆ ಬರೆದಿರುತ್ತಾರೆ:
" ನಾವು ಲಗ್ಗೆ ಇಟ್ಟ ಸಾಮ್ರಾಜ್ಯ ತಮ್ಮದೆಂದು ನಮಗೆ ಗೊತ್ತಿರಲಿಲ್ಲ, ತಮ್ಮ ಸೈನ್ಯವನ್ನು ಎದುರು ಹಾಕಿ ಕೊಳ್ಳುವ ಶಕ್ತಿ ನಮಗಿಲ್ಲ, ಬಾದಷ ಅವರು ನಮ್ಮನ್ನು ಮನ್ನಿಸಬೇಕು". ಆದರೆ ಪತ್ರದಲ್ಲಿ ಎಲ್ಲೂ  ದೋಚಿದ ಸರಕುಗಳನ್ನು ವಾಪಾಸು ಕೊಡುತ್ತೇವೆ ಎಂದು ಸೌಜನ್ಯಕ್ಕಾದರೂ ಬರೆದಿರುವುದಿಲ್ಲ. ಇದಲ್ಲವೇ ಚಾಣಾಕ್ಷತೆ!!
ಔರಂಗಜೆಬನಿಗೆ ಪತ್ರ ಓದಿದ ಮೇಲೆ ಏನು ಮಾಡಬೇಕೋ ತಿಳಿಯುವುದಿಲ್ಲ, ಯಾಕಂದರೆ ಸ್ವತಃ ಲೂಟಿ ಮಾಡಿದವನೇ ಕ್ಷಮೆ ಕೇಳಿದ್ದಾನೆ...

ಇನ್ನು ಶಿವಾಜಿ ಮಹಾರಾಜರು ಮತಾಂಧರೆ?
ಖಂಡಿತ ಅಲ್ಲ !! ಅಫ್ಜಲ್ ಖಾನ್ ನನ್ನು  ವಧೆ ಮಾಡಲು ಹೋಗುವಾಗ ಶಿವಾಜಿ ಮಹಾರಾಜರು ಆಯ್ಕೆ ಮಾಡಿಕೊಂಡ ಆಪ್ತ ಸೈನಿಕರಲ್ಲಿ ಬೇರೆ ಧರ್ಮದವರು ಇದ್ದರು.ಯುದ್ಧದಲ್ಲಿ ವಿಜಯಿಯಾದಾಗ, ಅನ್ಯ ಧರ್ಮದ ಹೆಂಗಸರನ್ನು ಸ್ವಂತ ಸಹೋದರಿಯರಂತೆ ಕಂಡು ಅವರನ್ನು ಸಕ್ತರಿಸುತ್ತಿದ್ದವರು.
ಅಂಕಣ ಮುಗಿಸುವ ಮುನ್ನ:
ಅತ್ತ ಮೊಘಲರು, ಇತ್ತ ಬಿಜಾಪುರದ ಸುಲ್ತಾನರು  ಇವರಿಬ್ಬರ ಮಧ್ಯೆ ಆಗತಾನೆ ಬಂದಿದ್ದ ಬ್ರಿಟಿಷರು ಎಲ್ಲರನ್ನು ಸದೆ  ಬಡಿದು, ಅಖಂಡ ಭಾರತದಲ್ಲಿ "ಹಿಂದವಿ ಸ್ವರಾಜ್ಯವನ್ನು" ಸ್ಥಾಪಿಸಬೇಕು ಎನ್ನುವ ಉದಾತ್ತ ಯೋಚನೆ ಹೊತ್ತ ಶಿವಾಜಿ ಮಹಾರಾಜರು ಎಲ್ಲಿ? ಕೇವಲ ರಾಜಕೀಯ ಲಾಭಕ್ಕಾಗಿ ಎಲ್ಲರಿಗೂ ಸಲ್ಲಬೇಕಾಗಿದ್ದ "ಶಿವಾಜಿ ಮಹಾರಾಜರನ್ನು"  ಒಂದು ರಾಜ್ಯ ಕ್ಕಷ್ಟೇ ಸೀಮಿತ ಗೊಳಿಸಿದ ಇಂದಿನ ರಾಜಕೀಯ ಪಕ್ಷದ ಧುರೀಣರ "ಸಣ್ಣ" ಯೋಚನೆ ಎಲ್ಲಿ?

Wednesday, April 24, 2013

"ನನ್ನ ತಮ್ಮ" ಎನ್ನುವ ಆಟೋ "ರಾಜ" ನ ಕುರಿತು

ಆ ವ್ಯಕ್ತಿ ಅದೆಷ್ಟು ಎತ್ತರಕ್ಕೆ ಬೆಳೆದು ಬಿಟ್ಟಾ ?
ನಿಜವಾಗಲು ಅಂತಹವರಿಗೆ ಅಷ್ಟೊಂದು ಆತುರವಾದರೂ ಏನಿರುತ್ತೆ ಅಂತ?
ದೇವರಿಗೆ ಅವರ ಮೇಲೆ ಆ ಪರಿಯ  ಪ್ರೀತಿಯಾದ  ಯಾದರೂ ಏಕಿರಬಹುದು?
ಇನ್ನೊಂದು ಐವತ್ತು ವರ್ಷ  ಆಯುಷ್ಯ ಹಾಕಿದ್ದರೆ ದೇವರ ಗಂಟು ಏನಾದ್ರೂ ಹೋಗುತ್ತಿತ್ತೆ?
ಕೆಲಸಕ್ಕೆ ಬಾರದವರಿಗೆಲ್ಲ ಬೇಕಾದಷ್ಟು ಆಯುಷ್ಯ ಕೊಡುವ ದೇವರು .. ಇಂತಹವರಿಗೆ ಮಾತ್ರ ಯಾಕೆ ರಿಯಾಯತಿ ಕೊಡುವುದಿಲ್ಲ?
ಬಹುಶ ಆ  ವ್ಯಕ್ತಿ ಬೆಳೆಯುವ ಪರಿ ನೋಡಿ ಆ ದೇವರಿಗೂ ಸಹ ಒಂದು ಕ್ಷಣ ಹೊಟ್ಟೆ ಕಿಚ್ಚು ಆಗಿರಬಹುದೇನೋ?


ಆತ ಇರುವುದೇ ಹಾಗೆ.....
ಮುಖದ ಮೇಲೆ ದಾಡಿ ಇಟ್ಟುಕೊಂಡೇ  ಚಿತ್ರ ರಂಗಕ್ಕೆ ಬಂದ. ಮೊದಲ ಚಿತ್ರಕ್ಕೆ ರಾಷ್ಟ್ರ ಮನ್ನಣೆಯೂ ಸಿಕ್ಕಿತು. ಆತ ನಡೆದಾಡುತ್ತಾ ಡೈಲಾಗ್ ಹೇಳುತ್ತಿದ್ದರೆ, ಆತನಿಗೆ ಗೊತ್ತಿಲ್ಲದಂತೆಯೇ ಆತ ಕೈ, ಗೋಡೆ ಗಡಿಯಾರದ ಪೆಂಡುಲಂ ತರಹ ಆಕಡೆ ಈ ಕಡೆ ಚಲಿಸುತ್ತಿತ್ತು.  ಸ್ವಲ್ಪ ತುಟಿ ಬಿಗಿ ಹಿಡಿದು ಮಾತನಾಡುವ ಆತನ ಶೈಲಿಗೆ ಮರುಳಾಗದವರಿಲ್ಲ.....
ಅದರಲ್ಲೂ ಆತನದು ಖಾಕಿ ಪಾತ್ರಕ್ಕೆ ಹೇಳಿ ಮಾಡಿಸಿದ ವ್ಯಕ್ತಿತ್ವ.
ಖಾಕಿ ಖದರಿನ ಪೋಲಿಸು ದಿರಿಸು, ಕಣ್ಣಿಗೆ ಕಪ್ಪಾದ ಕನ್ನಡಕ, ಒಂದು ಕೈಯಲ್ಲಿ ಲಾಠಿ ಹಿಡಿದು, ಮತ್ತೊಂದು ಕೈಯನ್ನು  ಪೆಂಡುಲಂ ಥರ ಚಲಿಸುತ್ತಾ ಆತ ನಡೆದಾಡುವ ಚಿತ್ರ ತೆರೆಯ ಮೇಲೆ ಬಂದರೆ ಸಾಕು,
" ಅಬ್ಬಾ, ಪೋಲಿಸು ಅಂದ್ರೆ ಹಿಂಗಿರಬೇಕ್ರಿ!!" ಅಂತ ಅಂದುಕೊಂಡ ವರೆಷ್ಟೋ?
ಅದೇ ಗಾಂಭಿರ್ಯದಿಂದ ಆತ ಕೇಡಿ ಗಳ ಮುಂದೆ ಬಂದು ನಿಂತು; 
" ನೀವು ಚಾಪೆ ಕೆಳಗೆ ನುಗ್ಗಿದರೆ, ಈ ಸಾಂಗ್ಲಿಯಾನ ರಂಗೋಲಿ ಕೆಳಗಡೆ ನುಗ್ತಾನೆ! ದ್ಯಾಟ್  ಇಸ್ ಸಾಂಗ್ಲಿಯಾನ!!"
ಅನ್ನುವ ಡೈಲಾಗ್ ಹೊಡೆದರೆ, ಚಿಂತ್ರಮಂದಿರದ ಚಾವಣಿಯೆ ಹಾರಿ ಹೋಗುವಷ್ಟು ಸಿಳ್ಳೆ, ಚಪ್ಪಾಳೆ.... 
ಇಷ್ಟು ಹೊತ್ತಿಗಾಗಲೇ ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಅಂತ ನಿಮಗಾಗಲೇ ಗೊತ್ತಾಗಿರುತ್ತದೆ, ಹಾಗೇನೆ ಯಾವ ಪುಸ್ತಕ ಕುರಿತು ಹೇಳಲು ಹೊರಟಿದ್ದೇನೆ ಅನ್ನುವುದು ಸಹ.... 
ಹೌದು, ಎಂದು ಮಾಸದ ಆ ಚೈತನ್ಯ ದ ಹೆಸರು " ಶಂಕರ್ ನಾಗ್!!". 
ಈ ಅಂಕಣ ದಲ್ಲಿ ನಾನು ಹೇಳ ಹೊರಟಿರುವುದು " ನನ್ನ ತಮ್ಮ ಶಂಕರ... " ಪುಸ್ತಕದ ಬಗ್ಗೆ.
ಈ ಪುಸ್ತಕವನ್ನು ಬರೆದಿರುವವರು ಬೇರೆ ಯಾರು ಅಲ್ಲ, ದಕ್ಷಿಣ ಭಾರತದ ಅದ್ಭುತ ನಟ ಹಾಗು ಶಂಕರ್ ನಾಗ್ ಅವರ ಅಣ್ಣ 
"ಅನಂತ್ ನಾಗ್". 

ಈ ಪುಸ್ತಕ ಒಂದು ರೀತಿಯಲ್ಲಿ ಶಂಕರ್ ನಾಗ್ ಅವರ ಬಯಾಗ್ರಫಿ ಅಂದರೆ ತಪ್ಪಿಲ್ಲ.ಓದಬೇಕಾದರೆ ಪುಸ್ತಕದ ಪ್ರತಿ ಪುಟವೂ ಇಷ್ಟು ಬೇಗ ಮುಗಿದು ಹೋಯಿತಾ ಅನಿಸುತ್ತದೆ. ಪ್ರತಿ ಪುಟವನ್ನು ಓದುವಾಗಲು ಕನಿಷ್ಠ ಐದು ಸಲವಾದರೂ ಶಂಕರ್ ನಾಗ್ ಅವರ ಮುಖ ನಮ್ಮ ಕಣ್ಣ ಮುಂದೆ ಬಂದು ಹೋಗುತ್ತದೆ. ಮನಸ್ಸು ತೀರ ಖಾಲಿ ಖಾಲಿ ಅನಿಸುವುದು ಕೊನೆಯ ಐದು ಪುಟಗಳನ್ನು ಓದುತ್ತಿರುವಾಗ.ನಿಜ ಹೇಳಬೇಕೆಂದರೆ ಆ ಐದು ಪುಟಗಳನ್ನು ಓದಲು ಮನಸೇ ಬರುವುದಿಲ್ಲ.ನಮ್ಮ ಅತಿ ಹತ್ತಿರದವರ ಒಬ್ಬರನ್ನು ಕಳೆದು ಕೊಂಡುಬಿಟ್ಟೆವೆನೊ ಅನಿಸುತ್ತದೆ. ಎದೆ ಭಾರವಾಗಿ ಪುಸ್ತಕ ಒಂದು ತೊಟ್ಟು ಕಣ್ಣಿರು ತರಿಸಿದರೂ ಆಶ್ಚರ್ಯವಿಲ್ಲ! 

ನಿಜ, ದೇವರಿಗೆ ಆ ಚೇತನದ ಬಗ್ಗೆ ಅಸೂಯೆಯೇ ಆಗಿರಬೇಕು....ಆ  ಆಯಾಸವಿಲ್ಲದ ಜೀವನ ಕಂಡು .... 
ಚಿಕ್ಕ ವಯಸಿನಲ್ಲೇ ಭಾರತೀಯ ಚಿತ್ರರಂಗದ ಮೇರು ನಟನ ಚಿತ್ರ ವನ್ನು ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತಿದ್ದು ಮತ್ತು ಆ ಚಿತ್ರದ ಕೆಲ ಭಾಗಗಳನ್ನು ಸಮುದ್ರ ದ ಆಳದಲ್ಲಿ ಚಿತ್ರೀಕರಿಸಿದ್ದು, "ಮಾಲ್ಗುಡಿ ಡೇಸ್" ಅನ್ನುವ ಸುಪ್ರಸಿದ್ದ  ಧಾರವಾಹಿ ಯಿಂದ ಕರ್ನಾಟಕದ ಕಲಾವಿದರನ್ನೆಲ್ಲ ಭಾರತಕ್ಕೆ ಪರಿಚಯಿಸಿದ ಹೆಮ್ಮೆ, ಸಂಕೇತ್ ಸ್ಟುಡಿಯೋ ದ ಸ್ಥಾಪನೆ, ಕಂಟ್ರಿ ಕ್ಲಬ್ ನ ಪ್ರಾರಂಭಿಸುವ ಹೊಣೆ, ನಂದಿ ಬೆಟ್ಟಕ್ಕೆ ಪ್ರವಾಸಿಗರನ್ನು ಸೆಳೆಯುವ ಹೊಸ ಯೋಜನೆ, ತಮ್ಮ ಸ್ವಂತ ದುಡ್ಡಿನಲ್ಲೇ ವಿದೇಶಕ್ಕೆ ಹೋಗಿ ಅಲ್ಲಿರುವ ಮೆಟ್ರೋ ರೈಲು ಗಳ ಬಗ್ಗೆ ತಿಳಿದು ಕೊಂಡು ೮೦ ರ ದಶಕದಲ್ಲೇ ಬೆಂಗಳೂರಿನಲ್ಲಿ ಮೆಟ್ರೋ ರೈಲಿನ ಕನಸು... 
ಒಂದೇ ಎರಡೇ... ನಿಜವಾಗಲು ದೇವರಿಗೆ ಹೊಟ್ಟೆ ಕಿಚ್ಚು ಆಗಿರಬೇಕು....

ಶಂಕರ್ ನಾಗ್ ಅವರನ್ನು ಕೇವಲ ಚಿತ್ರದ ಮೂಲಕ ಮಾತ್ರ ತಿಳಿದಿದ್ದ ನಮ್ಮ ಪೀಳಿಗೆ ಯವರಿಗೆ ಅವರನ್ನೊಂದು ಸ್ಪೂರ್ತಿ ಯಾಗಿ ತೆಗೆದು ಕೊಳ್ಳುವಂತೆ ಮಾಡಿದ ಪುಸ್ತಕದ ಕರ್ತೃ ವಾದ ಅನಂತನಾಗ್ ಅವರಿಗೆ ನಮ್ಮ ಧನ್ಯವಾದಗಳನ್ನು ಅರ್ಪಿಸಲೇಬೇಕು... 

ಅಂಕಣ ಮುಗಿಸುವ ಮುನ್ನ
ನೀವು ಬೆಂಗಳೂರಿನ ರಸ್ತೆಯಲ್ಲಿ ವಾಹನವೊಂದರಲ್ಲಿ ಚಲಿಸುವಾಗ ಸಡನ್ ಆಗಿ ನಿಮ್ಮ ವಾಹನ ವನ್ನ ಎಡಗಡೆ ಹಾಗು ಬಲಗಡೆ ಯಿಂದ ಮೂರ್ನಾಲ್ಕು ಆಟೋ ಗಳು ಒಟ್ಟಿಗೆ ಓವರ್ ಟೆಕ್ ಮಾಡುತ್ತವೆ. ನಿಮಗೆ ಸಿಟ್ಟು ನೆತ್ತಿಗೇರುತ್ತದೆ. ತಕ್ಷಣವೇ ನಿಮ್ಮ ತುಟಿಯ ಮೇಲೆ ಒಂದು ಅಭಿಮಾನದ ನಗೆಯು ತೇಲಿ ಬರುತ್ತದೆ, ಯಾಕಂದರೆ " ಆ ನಾಲ್ಕು ಆಟೋದ ಹಿಂದೆ ಶಂಕರ್ ನಾಗ್ ಅವರ ಚಿತ್ರ ಇರುತ್ತದೆ". 

ಅಭಿಮಾನದ ನಿಜವಾದ "ಸಂಕೇತ" ಅಂದರೆ "ಶಂಕ್ರಣ್ಣ" ಅಲ್ಲವೇ? 

Tuesday, March 26, 2013

ಕಲಿಯುಗದಲ್ಲಿ ಮಹಾಭಾರತದ " ಪರ್ವ"

ಈ ತಿಂಗಳ ಪುಸ್ತಕದ ಬಗ್ಗೆ ಬರೆಯುವುದಕ್ಕಿಂತ ಮುಂಚೆ ಒಂದು ಸಲ ಕೆಳಗಿನ ಪ್ರಶ್ನೆಗಳನ್ನು ಓದಿ, ನೀವು ಉತ್ತರ ಕೊಡಬಲ್ಲಿರಾ?
ಒಂದಿಷ್ಟು ಪ್ರಶ್ನೆಗಳು:
೧. ಭೀಷ್ಮ ಯಾಕೆ ಮದುವೆ ಆಗದೆ ಹಾಗೆ ಉಳಿದ? 
೨. ದ್ರೌಪದಿ ಏಕೆ ಐದು ಜನ ಪಾಂಡವರನ್ನು ಮದುವೆಯಾಗಲು ಒಪ್ಪಿಕೊಂಡದ್ದು?
೩. ಕೃಷ್ಣ ಕುರುಕ್ಷೇತ್ರದಲ್ಲಿ ಪಾಂಡವರ ಪರವಾಗಿ ನಿಲ್ಲಲು ಕಾರಣ ಏನು?
೪. ಮಂದ್ರ ದೇಶದ ರಾಜ "ಶಲ್ಯ"  ತನ್ನ ತಂಗಿಯ ಮಕ್ಕಳಾದ ನಕುಲ ಮತ್ತು ಸಹದೇವ ರ ಪರವಾಗಿ ನಿಲ್ಲುವುದು ಬಿಟ್ಟು ಧುರ್ಯೋಧನನ  ಪರವಾಗಿ ನಿಂತದ್ದು ಏಕೆ?
೫. ವಿದುರ ಯಾರು?
೬. ಎಲ್ಲದಕ್ಕಿಂತ ಹೆಚ್ಚಾಗಿ ಕೃಷ್ಣ ನಿಗೂ, ಜರಾಸಂಧನಿಗೂ ಏಕೆ ಹಾವು-ಮುಂಗುಸಿಯ ಸಂಭಂದ?
೭. ದೇವಕಿಯ ಮಗುವಿನಿಂದ ತನ್ನ ಸಾವು ಖಚಿತವೆಂದು ಗೊತ್ತಿದ್ದರೂ ಕಂಸ ದೇವಕಿಯನ್ನ ಏಕೆ ಸಾಯಿಸಲಿಲ್ಲ? 
೮. ಕ್ರಿಷ್ಣದ್ವೈಪಾನರು ಯಾರು? 


ಅಬ್ಬಾ! ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಹೋಗುತ್ತಾರೆ ನಮ್ಮ ಭೈರಪ್ಪನವರು. " ಪರ್ವ" ಕಾದಂಬರಿಯನ್ನು ಮೆಚ್ಚಲೇ ಬೇಕಾದ ಅಂಶವೆಂದರೆ, ಈ ಕಾದಂಬರಿಯ ಎಲ್ಲ ಪಾತ್ರಗಳನ್ನು ಸಾಮಾನ್ಯ ಮನುಷ್ಯರಂತೆ ಬಿಂಬಿಸಿರುವುದು. ಯಾರನ್ನೂ ವೀಪರೀತವಾಗಿ ವೈಭವಿಕರಿಸಿಲ್ಲ. ನಮ್ಮ ಟಿ.ವಿ  ಧಾರಾವಾಹಿಗಳಲ್ಲಿ ತೋರಿಸಿರುವ ಹಾಗೆ ಕಾಲ್ಪನಿಕ ವಾಗಿ ಮಾತ್ರ ಸಾಧ್ಯವಾಗುವಂತಹ ಚಿತ್ರಣ ಗಳಿಲ್ಲ. 
ಬದಲಿಗೆ ತುಂಬಾ ಪ್ರಾಕ್ಟಿಕಲ್ ಆಗಿ ಕಾದಂಬರಿ ನಮ್ಮನ್ನು ಓದಿಸಿಕೊಂಡು  ಹೊಗುತ್ತದೆ.
ಉದಾಹರಣೆಗೆ : ಕೃಷ್ಣ ಅಂದರೆ ದೇವ್ರು, ಎಲ್ಲಂದರಲ್ಲಿ ಪ್ರತ್ಯಕ್ಷನಾಗುತ್ತಾನೆ. ಹೋರಾಟದಲ್ಲಿ ಶತ್ರುಗಳ ಕಣ್ಣೆದುರಿಗೆ ಚಕ್ಕನೆ ಮಾಯವಾಗಿ ಬಿಡುತ್ತಾನೆ.... ಹೀಗೆ ಮುಂತಾದ ಅತೀ ವೈಭವಿಕರಿಸಿದ ಉತ್ಪ್ರೇಕ್ಷೆ ಎಲ್ಲೂ ಇಲ್ಲ. 
ಬದಲಿಗೆ ಕೃಷ್ಣನೂ ಸಹ ನಮ್ಮಂತೆ ಒಬ್ಬ ಸಾಮಾನ್ಯ ಮನುಷ್ಯ ಎನ್ನುವಂತೆ ಬಿಂಬಿಸಲಾಗಿದೆ. ಇದುವೇ ನನ್ನಂತಹ ಓದುಗನಿಗೆ ತುಂಬಾ ಇಷ್ಟವಾಗುವ ಸಂಗತಿ. 

ಪರ್ವ ಬರೆಯುವುದಕ್ಕಿಂತ ಮುಂಚೆ  ಇದಕ್ಕೆ ಹೇಗೆ ತಯಾರಿ ನಡೆಸಿದ್ದಾರೆ  ಅನ್ನುವುದನ್ನ ತಿಳಿದುಕೊಳ್ಳಲು ನೀವು ಭೈರಪ್ಪನವರ  " ನಾನೇಕೆ ಬರೆಯುತ್ತೇನೆ?" ಅನ್ನುವ ಪುಸ್ತಕ ಓದಬೇಕು. 
ನಿಜವಾಗಲು, "ಪರ್ವ" ತಯಾರಿ ಲೇಖಕರ ಬಗ್ಗೆ ಅಭಿಮಾನವನ್ನು ಮೂಡಿಸುತ್ತದೆ. 

ಒಂದು ವೀಕೆಂಡ್ ಯಾರ ತಂಟೆಯೂ ಇಲ್ಲದೆ "ಪರ್ವ" ವನ್ನು ಹಿಡಿದು ಕುಳಿತರೆ, ಎರಡು ದಿನ ಕಳೆದು ಹೋದದ್ದೇ ತಿಳಿಯುವುದಿಲ್ಲ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ನೀವು ಸುಮ್ಮನೆ ಮೊದಲು ಹತ್ತು ಪುಟಗಳನ್ನು ಓದಿ, ಉಳಿದ ೫೯೦ ಪುಟಗಳು ನಿಮ್ಮನ್ನ ಕೂತ  ಜಾಗದಿಂದ ಎದ್ದೆಳದಂತೆ  ಮಾಡಿಬಿಡುತ್ತವೆ. ಪುಸ್ತಕ  ಓದಿದ ಮೇಲೆ, ಒಂದು ದೊಡ್ಡ ನಿಟ್ಟುಸಿರು, ಖುಷಿ ಮತ್ತು ತೃಪ್ತಿ ನಮ್ಮಲ್ಲಿರುತ್ತದೆ. 

ಕೊನೆಯ ಮಾತು: 
ಪರ್ವ ಓದಿದ ಮೇಲೆ ನನ್ನನ್ನು ಕಾಡಿದ ಮೂರು ಪಾತ್ರ ಗಳೆಂದರೆ : ದ್ರೌಪದಿ, ಭೀಮ ಮತ್ತು ಕೃಷ್ಣ. 
ದ್ರೌಪದಿಯ ತ್ಯಾಗ ಮತ್ತು ಸಹನೆ; ಭೀಮನ ಧೈರ್ಯ; ಕೃಷ್ಣ ನ ಚತುರತೆ ಹಾಗು ಸಮಯ ಪ್ರಜ್ಞೆ. 

ಹಾಗೇನೆ ಪುಸ್ತಕ ಓದಿದ ಮೇಲೆ ನನಗೆ ಸಿಟ್ಟು ಉಕ್ಕಿ ಬಂದದ್ದು  (ಧುರ್ಯೋಧನನಿಗಿಂತಲೂ ಹೆಚ್ಚಿಗೆ): ಧರ್ಮರಾಜನ ಮೇಲೆ. 

ಯಾಕೆ ಅಂತ ತಿಳಿಯಬೇಕಾದರೆ ಒಂದು ಸಲ "ಪರ್ವ" ಓದಿ ನೋಡಿ..... 

ಹಾಗೇನೆ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ... 

ಈ ವರ್ಷ ಮಹಾಭಾರತದ "ಪರ್ವ" ನಿಮ್ಮದಾಗಲಿ!

Thursday, February 28, 2013

"ಫೋರ್ಡ್" ಎನ್ನುವ ಕಾರುಗಳ ಮಾಲೀಕ ಈತ

ಹೆನ್ರಿ ಫೋರ್ಡ್. ಹೆಸರೇನು ಅಷ್ಟೊಂದು ಅಪರಿಚಿತ ವಾದುದಲ್ಲ. ಮಾಡೆಲ್ "ಟಿ " ಎನ್ನುವ ಹೆಸರಿನಿಂದ ಪ್ರಸಿದ್ದಿಪಡೆದ ಫೋರ್ಡ್ ಕಾರುಗಳ ಮಾಲೀಕ ಹಾಗು ಫೋರ್ಡ್ ಸಂಸ್ಥೆಯ ಸಂಸ್ಥಾಪಕ. ಹೆನ್ರಿ ಫೋರ್ಡ್ ಅವರ ಆಟೋ ಬಯೋಗ್ರಫಿ  ಪುಸ್ತಕದ ಹೆಸರು " ಮೈ ಲೈಫ್ ಅಂಡ್ ವರ್ಕ್". ಪುಸ್ತಕ ಓದುತ್ತಾ ಹೋಗುತ್ತಿದ್ದಂತೆ ಫೋರ್ಡ್ ಅವರ ಜೀವನದಲ್ಲಿ " ಲೈಫ್ " ಮತ್ತು " ವರ್ಕ್" ಎರಡೂ ಬೇರೆ ಬೇರೆ ಅನ್ನುವುದಕ್ಕಿಂತ, ಒಂದೇ ಎನ್ನುವುದೇ ಸರಿ ಎನಿಸುತ್ತದೆ.

ನೇರವಾಗಿ ಅಮೇರಿಕಾ ಮತ್ತು ರಷ್ಯ  ನಡುವಣ ಹೋಲಿಕೆಯಿಂದ ಶುರುವಾಗುವ ಪುಸ್ತಕ, ಫೋರ್ಡ್ ಅವರು ತಮ್ಮ ಜೀವನದ ಘಟನೆಗಳನ್ನು ಮತ್ತು ತಾವು ಕಂಡ " ರಸ್ತೆಯ ಮೇಲೆ ಮಾನವ ಉಪಯೋಗಿಸ ಬಹುದಾದಂತಹ  ಲಘು ವಾಹನದ" ಕನಸು ಓದುಗನಲ್ಲಿ ಕೂತುಹಲ ಹೆಚ್ಚು ವಂತೆ ಮಾಡುತ್ತದೆ. ಪುಸ್ತಕದ ಬಗ್ಗೆ ಹಾಗಿದೆ ಹೀಗಿದೆ ಅಂತ ಹೇಳುವುದಕ್ಕಿಂತ ಪುಸ್ತಕದಲ್ಲಿನ ಒಂದಿಷ್ಟು ಆಯ್ದ ಬರಹಗಳು ಇಲ್ಲಿವೆ. ಖಂಡಿತ ನಿಮಗೆ ಇಷ್ಟವಾಗುತ್ತದೆ. ಇನ್ನು ನೀವುಂಟು ಫೋರ್ಡ್ ಅವರು ಹೇಳಿದ ಮಾತುಗಳುಂಟು!

1. On Farming: "Lack of knowledge of what is going on and lack of knowledge of what the job really is and the best way of doing it are the reasons why farming is thought not to pay. Nothing could pay the way farming is conducted. The farmer follows luck and his forefathers. He does not know hoe economically to produce and he does not know how to market. A manufacturer who knew how neither to produce nor to market would not long stay in business. That the farmer can stay on shows how wonderfully profitable farming can be".

2. On His first job: " i was offered  a job with Detroit Electric Company as an engineer and machinist at forty-five dollars a month. I took it because that was more money than the farm was bringing me and i was decided to get away from the farm life anyway. The timber had all been cut. We rented a house on bagley avenue, Detroit. The workshop came along and i set it up in a brick shed at the back of the house. During first several month i was in night shift at the electric-light plant. which gave me very little time for experimenting - but after that i was in day shift and every night and all of every saturday night  i worked on the new motor. I cannot say that it was hard work. No work with interest is ever hard. I always am certain of results. They always come if you work hard enough.  But it was very great thing to have my wife even more confident than i was. she has always been that way.

3. On prices : " unduly high prices are always a sign of unsound business, because they are always due to some abnormal condition.  A healthy patient has a normal temperature; A healthy market has normal prices. High prices come about commonly by reason of speculation following the report of shortage.

4. On Profit: " Profit belong in three places: they belong to the business - to keep it steady, progressive and sound. They belong to the men who helped produce them. And they belong also, in part, to the public. A successful business is profitable to all three of these interests - Planner, Producer and Purchaser"

5. On Business:  Principles;
    (1) An absence of fear of the future and veneration for the past. One who fears the future, who fears the failure, limits his activities. Failure is only the opportunity more intelligently to begin again. There is no disgrace in honest failure; there is disgrace in fearing to fail. What is past is useful only as it suggests the way and means for progress.

    (2) A disregard of competition. Whoever does a thing best ought to be the one to do it. It is criminal to try to get business away from the another man - criminal because one is then trying to lower for personal gain the condition of one's fellow man - to rule by force instead of by intelligence.

    (3) The putting service before profit.  Without a profit business cannot extend.  There is nothing inherently wrong about making profit.  Well conducted business enterprise cannot fail to return a profit, but profit must and inevitably will come as a reward for good service. It cannot be the basis - It must be the result of service.

    (4)  Manufacturing is not buying low and selling high. It is the process of buying materials fairly and, with smallest possible addition of cost, transforming those materials in to a consumable product and giving it to the consumer. Gambling, speculating, and sharp dealing, tend to only to clog this progression.

Tuesday, January 29, 2013

ಕಾರಂತಜ್ಜ ನ ಆತ್ಮಕಥೆ


ಒಬ್ಬ ವ್ಯಕ್ತಿ ಇರುವ ಒಂದೇ ಜೀವನದಲ್ಲಿ ಏನೆಲ್ಲಾ ಸಾಧಿಸಬಹುದು, ಒಬ್ಬ ವ್ಯಕ್ತಿ ತನ್ನ ಸಂಸಾರಿಕ, ಆರ್ಥಿಕ, ಸಾಮಾಜಿಕ ಕಷ್ಟ ಕೋಟ ಲೆಗಳನ್ನೆಲ್ಲ ಮೂಲೆಗೆ ತಳ್ಳಿ ತನ್ನ ಇತಿ ಮಿತಿ ಗಳನ್ನು ಮೀರಿ ಹೇಗೆಲ್ಲ ಬೆಳೆಯಬಹುದು,
ಎಲ್ಲಕ್ಕಿಂತ ಹೆಚ್ಚಾಗಿ ಇರುವ ಒಂದೇ ಜನ್ಮದಲ್ಲಿ  ಎಷ್ಟೊಂದು ವಿಷಯಗಳ ಬಗ್ಗೆ ಆಸಕ್ತಿ ಹೊಂದಬಹುದು ಎನ್ನುವುದನ್ನು ತಿಳಿಯಬೇಕಾದರೆ " ಕಾರಂತಜ್ಜನ ಆತ್ಮ ಕಥೆ ಗಿಂತ" ಮತ್ತೊಂದಿಲ್ಲ!.

ಅವರ "ಹುಚ್ಚು ಮನಸು" ಅಚ್ಚರಿಯ ಜೊತೆಗೆ ನಮಗೂ ಹುಚ್ಚು ಹಿಡಿಸುವುದರಲ್ಲಿ ಎರಡು ಮಾತಿಲ್ಲ.
ಹತ್ತನೇ ತರಗತಿ ಮುಗಿಯವ ಹೊತ್ತಿಗೆ ಶಾಸ್ತ್ರೀಯ ಓದಿಗೆ ಬೆನ್ನು ತಿರುಗಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. ಅವರೇ ಹೇಳಿರುವಂತೆ " ಅವರ ಯುವ ಮನಸ್ಸು ಗಾಂಧೀಜಿ ಮತ್ತು ಕಾಂಗ್ರೆಸ್ ನ ಅಂಧಾಭಿಮಾನಿಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ  ಧುಮುಕುತ್ತದೆ". ಹಳ್ಳಿ ಹಳ್ಳಿ ಯಲ್ಲೂ ಗಾಂಧೀಜಿ ಸಂದೇಶ ಹೊತ್ತು ಸಾಗುತ್ತಾರೆ. ಕೊನೆಗೆ ಎಲ್ಲೋ ಒಂದು ಕಡೆ ಭಿನ್ನಾಭಿಪ್ರಾಯದಿಂದಾಗಿ ಗಾಂಧೀಜಿ ಮತ್ತು ಕಾಂಗ್ರೆಸ್ಸ್ ಅನುಯಾಯಿಯಾಗಿ ಎರಡರಿಂದಲೂ ದೂರ ಸರಿಯುತ್ತಾರೆ.  ಆದರೆ ಗಾಂಧೀಜಿ ಬಗ್ಗೆ ಗೌರವಯುತ ಭಾವನೆ (ಕೆಲ ವಿಷಯಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ) ಮಾತ್ರ ಹಾಗೆ ಮುಂದುವರೆಯುತ್ತದೆ.

ಅಲ್ಲಿಂದ ಅವರ ಚಿಂತನೆ ಮತ್ತು  ಜೀವನ ಎರಡೂ ಮುಖಮುಖಿಯಾಗುತ್ತವೆ. ತಮ್ಮ ಸ್ವಂತ ವಿಚಾರ ದಿಂದ, ಚಿಂತನೆಗಳಿಂದ ಜೀವನವನ್ನ, ಜಗತ್ತನ್ನ ನೋಡ ಲಾರಂಭಿ ಸುತ್ತಾರೆ. ಅಲ್ಲಿಂದ ಶುರುವಾಗುತ್ತದೆ "ಕಾರಂತಜ್ಜ ನ ರೋಮಾಂಚನಕಾರಿ ಜೀವನ".

ಪತ್ರಿಯೊಂದರ ಸಂಪಾದಕರಾಗಿ, ಅಂಕಣಕಾರರಾಗಿ, ಮುದ್ರಣಾಲಯದ ಮಾಲೀಕರಾಗಿ, ನಾಟಕಗಳ ಕರ್ತೃವಾಗಿ, ನಿರ್ದೇಶಕರಾಗಿ, ನಟರಾಗಿ, ಪ್ರಯೋಗಾತ್ಮಕ ನಾಟಕಗಳನ್ನು ತೆರೆಯ ಮೇಲೆ ತರುವಲ್ಲಿ ಕೆಲವೊಮ್ಮೆ ಸಫಲರಾಗಿ , ಮತ್ತೊಮ್ಮೆ ವಿಫಲರಾಗಿ, ಬಿಡುವಿನ ಮಧ್ಯೆ "ಮರಳಿ ಮಣ್ಣಿಗೆ' ಎನ್ನುವ ಅದ್ಭುತ ಕಾದಂಬರಿಯ ಸೃಷ್ಟಿಕರ್ತನಾಗಿ, ಜನಪದ ಸಾಹಿತ್ಯದ ಅಧ್ಯಯನಕಾರರಾಗಿ, ವಾಸ್ತು ಶಿಲ್ಪ ದ ಆಸಕ್ತಕಾರರಾಗಿ, ಯಕ್ಷಗಾನ ಕಲೆಯನ್ನು ಪ್ರಪಂಚಕ್ಕೆ ತಿಳಿಯ ಪಡಿಸಿದ ಮೊದಲ ಕನ್ನಡಿಗರಾಗಿ, ಮಕ್ಕಳ ಸಾಹಿತ್ಯ ಕರ್ತೃವಾಗಿ, ವಿಜ್ಞಾನ ಪ್ರಪಂಚ ಮತ್ತು ಬಾಲ ಪ್ರಪಂಚ ಎನ್ನುವ ಬೃಹತ್ ಪುಸ್ತಕಗಳ ಲೇಖಕರಾಗಿ, ಚಲಚಿತ್ರದ ನಟರಾಗಿ, ನಿರ್ದೇಶಕರಾಗಿ,ನಿರ್ಮಾಪಕರಾಗಿ, ಪರಿಸರ ವಾದಿಯಾಗಿ, ಸಾಲದೆಂಬಂತೆ ಚುನಾವಣೆಯಲ್ಲಿ ಕಾಂಗ್ರೆಸ್ಸ್ ನ ಎದುರಾಳಿಯಾಗಿ.... ಅಬ್ಬಾ !!!


ಹುಚ್ಚು ಮನಸಿನ ಹತ್ತು ಮುಖವೆಂದರೆ ಇದೆ ಏನೋ?
೯೦ ರ ಹರೆಯದಲ್ಲೂ ಹುಚ್ಚು ಉತ್ಸಾಹದೊಂದಿಗೆ ಊರೂರು ಸುತ್ತುವ, ತನ್ನ ಕೆಲಸದಲ್ಲಿ ಮೈಮರೆತು ಕೌಟುಂಬಿಕ ಕಷ್ಟಗಳನ್ನೆಲ್ಲ ಮೈ ಮರೆಯುವ ಕಾರಂತಜ್ಜನ ಬದುಕು ನಿಜಕ್ಕೊ ಒಂದು ಅಚ್ಚರಿಯೇ ಸರಿ. 
ಪುಸ್ತಕ ಓದಿ ಮುಗಿಸಿದ ಮೇಲೆ ನಮ್ಮ ಮನ ಕಡಲ ತೀರದ ಭಾರ್ಗವರಿಗೆ ನಮಿಸದೆ ಇರುವುದಿಲ್ಲ ........
 
ಅಂದಹಾಗೆ ಈ ವರ್ಷ ನೀವು ಓದುವ ಪುಸ್ತಕಗಳ ಪಟ್ಟಿಗೆ " ಹುಚ್ಚು ಮನಸಿನ ಹತ್ತು ಮುಖಗಳು" ಪುಸ್ತಕವು ಸೇರಲಿ.